ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮತ ಗಳಿಕೆ ಏರಿಲ್ಲ, ಉತ್ಸಾಹ ಕುಗ್ಗಿಲ್ಲ'

ನರಸಪ್ಪ ಮುತ್ತಂಗಿ ದಾಖಲೆಗೆ ಇನ್ನೊಂದು ಚುನಾವಣೆ!
Last Updated 23 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೀದರ್:  ಇವರು ನರಸಪ್ಪ ಮುತ್ತಂಗಿ. ಚುನಾವಣೆ `ಪ್ರಿಯ' ಕೃಷಿಕರು. ಹುಮನಾಬಾದ್ ತಾಲ್ಲೂಕು ಪೋಲಕಪಳ್ಳಿ ಗ್ರಾಮದವರು. ಹುಮನಾಬಾದ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ. ಇದು ಅವರಿಗೆ 10ನೇ ಚುನಾವಣೆ. ಗಡಿ ಜಿಲ್ಲೆಯ ಮಟ್ಟಿಗೆ ಪ್ರತಿ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿರುವ ಖಚಿತ ಹೆಸರು!

ಶಪಥ ಮಾಡಿದಂತೆ ಪ್ರತಿ ಚುನಾವಣೆಯಲ್ಲೂ ಸ್ಪರ್ಧಿಸುವ ಇವರದು ವಿಭಿನ್ನ ಶೈಲಿಯ ಪ್ರಚಾರ. ಹುಮನಾಬಾದ್ ತಾಲ್ಲೂಕು ಮನ್ನಾಏಖೇಳ್ಳಿ ಬಳಿ ಭಾನುವಾರ ಬಿಜೆಪಿ ಏರ್ಪಡಿಸಿದ್ದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಪ್ರಚಾರ ಸಭೆ ಸ್ಥಳದ ಬಳಿಯೂ ಇವರು ಮತ ಯಾಚನೆ ಕಾಯಕ ಕೈಗೊಂಡಿದ್ದರು!

ಓದಿರುವುದು ಐದನೇ ತರಗತಿ. ಪಿತ್ರಾರ್ಜಿತವಾಗಿ ಬಂದಿರುವ ಸ್ವಲ್ಪ ಜಮೀನಿದೆ. ಉಳಿದಂತೆ ಬ್ಯಾಂಕ್ ಬ್ಯಾಲೆನ್ಸ್, ಬಂಗಲೆ, ವಾಹನ ಇತ್ಯಾದಿ ಪದಗಳ ಅರಿವಿಲ್ಲ. ಅವರ ಸ್ಪರ್ಧೆಯನ್ನು ಹತ್ತಿರದಿಂದ ನೋಡಿದವರ ಪ್ರಕಾರ, ಈ ಹಿಂದಿನ ಚುನಾವಣೆಗಳಲ್ಲಿ ನಾಮಪತ್ರದ ಜತೆ ಕಟ್ಟುವ ಠೇವಣಿ ಮೊತ್ತಕ್ಕಾಗಿ ಒಮ್ಮೆ ಅವರು ಕೃಷಿ ಭೂಮಿಯ ಮೇಲೆ ಸಾಲ ಪಡೆದಿದ್ದರೆ, ಇನ್ನೊಮ್ಮೆ ತಮ್ಮ ಬಳಿ ಇದ್ದ ರಾಸುಗಳನ್ನೇ ಮಾರಾಟ ಮಾಡಿದ್ದರಂತೆ.

ಈಗ ಮತ್ತೆ ಚುನಾವಣೆ ಬಂದಿದೆ. ನರಸಪ್ಪ ಕೂಡ ಚುನಾವಣಾ ಕಣದಲ್ಲಿದ್ದಾರೆ. ಪ್ರಚಾರವೂ ಆರಂಭವಾಗಿದೆ. ಹಿಂದೆ ಅವರಿಗೆ ಚಿಹ್ನೆಯಾಗಿ ಕೊಡಲಿ ಸಿಕ್ಕಿತ್ತು. ಅಸಲಿ ಕೊಡಲಿಯನ್ನೇ (ಚಿಹ್ನೆ) ತೋರಿಸಿ ಮತ ಕೋರುತ್ತಿದ್ದರು. ಈಗ ಚಿಹ್ನೆಯಾಗಿ ಕೊಡ (ಬಿಂದಿಗೆ) ಸಿಕ್ಕಿದೆ. ಉದ್ದನೆ ಕೋಲಿಗೆ ಖಾಲಿ ಬಿಂದಿಗೆ ಕಟ್ಟಿ, ಅದನ್ನು ಹೆಗಲ ಮೇಲೆ ಹೊತ್ತು ಮತ ಕೋರಿಕೆ ಜಾಥಾ ಆರಂಭಿಸಿದ್ದಾರೆ. ಜನರ ಗುಂಪು ಕಂಡರೆ ಭಾಷಣ ಮಾಡುತ್ತಾರೆ. ಅವರದು  `ಓಟು ಕೊಡಿ, ನೀರು ಸಮಸ್ಯೆ ಬಗೆಹರಿಸುತ್ತೇನೆ' ಎಂಬ ಒಂದು ಸಾಲಿನ ಭರವಸೆ.

ಇವರ ಪ್ರಚಾರ ವೈಖರಿಯನ್ನು ಹತ್ತಿರದಿಂದ ನೋಡಿದವರ ಪ್ರಕಾರ, ಜನರು ಇರುವ ಕಡೆ ಸ್ವಲ್ಪ ಎತ್ತರದ ಸ್ಥಳದಲ್ಲಿ ನಿಂತು `ಬನ್ನಿ ಬನ್ನಿ ಮಾತು ಕೇಳಿ' ಎಂದು ಕರೆದು ಗುಂಪು ಸೇರಿಸಿ, ಭಾಷಣ ಮಾಡುತ್ತಾರೆ. ಕೊನೆಗೆ `ನಾನು ಹೇಳಬೇಕಾದ್ದನ್ನು ಹೇಳಿದೀನಿ. ನೀವೂ ಕೇಳಿದ್ದೀರಿ. ಓಟು ಕೊಡೋದಿದ್ರೆ ಕೊಡಿ, ಇಲ್ಲಾಂದ್ರೆ ಬಿಡ್ರಿ' ಎಂದು ಮುಗಿಸುತ್ತಾರೆ!

ಬಿಳಿ ಬಣ್ಣದ ಬನಿಯನ್ ಮಾದರಿಯ ಷರಟು, ಕಚ್ಚೆ ತೊಟ್ಟು, ಬಿಂದಿಗೆ ಕಟ್ಟಿರುವ ಉದ್ದನೆ ಕೋಲು ಹಿಡಿದು ಮತ ಕೋರುವ ಅಭಿಯಾನ ಕೈಗೊಂಡಿರುವ ಮುತ್ತಂಗಿ ಅವರು ಕಣದಲ್ಲಿರುವ ಭಿನ್ನ ಅಭ್ಯರ್ಥಿ.

ಹುಮನಾಬಾದ್ ಕ್ಷೇತ್ರದಲ್ಲಿ 1972ರಿಂದ 2004ರವರೆಗೆ ನಡೆದಿರುವ 9 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. 1978ರಲ್ಲಿ ಪಡೆದ 2,084 ಅವರು ಪಡೆದಿರುವ ಗರಿಷ್ಠ ಮತವಾಗಿದ್ದರೆ,  1999ರಲ್ಲಿ ಗಳಿಸಿದ 263 ಕನಿಷ್ಠ ಸಂಖ್ಯೆಯ ಮತ. ಗಳಿಸುವ ಮತಗಳಲ್ಲಿ ವ್ಯತ್ಯಾಸವಾದರೂ ಸ್ಪರ್ಧಿಸುವ ಉತ್ಸಾಹ ಮಾತ್ರ  ಏರುಪೇರಾಗಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT