ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಬೇಡುವ ಧಣಿಗಳಿಗೆ ಮೆಲುದನಿ ಪ್ರಶ್ನೆ

Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಾನ್ಯ ಉಮೇದುವಾರರೆ,
ನಿಮ್ಮ ಪಕ್ಷದ ಕಾರ್ಯಕರ್ತರು ನಮ್ಮನ್ನು ಹುಡುಕಿಕೊಂಡು ಸಾಲುಗಟ್ಟಿ ಬರತೊಡಗಿದ್ದಾರೆ. ನಗದುಹಣ, ವಸ್ತ್ರ, ಶಾಂಪೂ, ಎಣ್ಣೆ, ಮೊಬೈಲ್ ಕರೆನ್ಸಿ, ಏನೆಲ್ಲ ಆಮಿಷ ಒಡ್ಡುತ್ತಿದ್ದಾರೆ. ತಮ್ಮ ಪಕ್ಷದ್ದೇ ಸರಕಾರ ರಚನೆಯಾದರೆ ಇನ್ನೂ ಏನೆಲ್ಲವನ್ನು ಕೊಡುವುದಾಗಿ ಹೇಳುತ್ತಾರೆ.  ನೀರು ಕೊಡುತ್ತೇವೆ, ಕರೆಂಟ್ ಕೊಡುತ್ತೇವೆ, ರಸ್ತೆ ಕೊಡುತ್ತೇವೆ, ಮೊಬೈಲ್ ಟವರ್ ಕೊಡುತ್ತೇವೆ, ದೇವಸ್ಥಾನ ಕೊಡುತ್ತೇವೆ, ದೇವಲೋಕವನ್ನೇ ತರುತ್ತೇವೆ  ಎಂದೆಲ್ಲ ಹೇಳುತ್ತಾರೆ. ನೀವೂ ನಾಳೆ ನಮ್ಮಲ್ಲಿಗೆ ಬಂದೇ ಬರುತ್ತೀರಿ. ಈ ನಮ್ಮ ಕೆಲವು  ಸರಳ ಪ್ರಶ್ನೆಗಳಿಗೆ ಉತ್ತರ ನೀಡುವ ಸಿದ್ಧತೆಯೊಂದಿಗೆ ಬರಬಲ್ಲಿರಾ?

1. ಬೇರೆ ದೇಶಗಳಲ್ಲಿ ಸರ್ಕಾರಿ ಆಸ್ಪತ್ರೆ ಎಂದರೆ ಅಲ್ಲಿ ಅತ್ಯುತ್ತಮ ವ್ಯವಸ್ಥೆ ಇರುತ್ತದೆ. ಎಲ್ಲೂ ಹಣ ಕಟ್ಟಬೇಕಾಗಿರುವುದಿಲ್ಲ. ಸ್ಕ್ಯಾನಿಂಗು, ಎಕ್ಸ್ ರೇ, ಔಷಧ ಎಲ್ಲಕ್ಕೂ ಸರ್ಕಾರವೇ ಎಲ್ಲ ಹಣವನ್ನೂ ಭರಿಸುತ್ತದೆ. ಡಾಕ್ಟರರು, ವಾರ್ಡ್‌ಬಾಯ್‌ಗಳು, ನರ್ಸ್‌ಗಳು ಎಲ್ಲರೂ ವಿನಯದಿಂದ, ನಮಗೆ ಗೌರವ ಕೊಟ್ಟು ಮಾತನಾಡುತ್ತಾರೆ. ಕೊಬ್ಬು ತೋರಿಸುವ, ಹಣ ಕೀಳುವ ಕೆಲಸಗಾರರನ್ನು, ದೊಡ್ಡ ಡಾಕ್ಟರ್‌ಗಳನ್ನೂ ಮುಲಾಜಿಲ್ಲದೆ ಕೆಲಸದಿಂದ ತೆಗೆದು ಹಾಕಲಾಗುತ್ತದೆ. ನಮ್ಮಲ್ಲಿ ಏಕೆ ಈ ವ್ಯವಸ್ಥೆ ಇಲ್ಲ? ಯಾಕೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಅದಿಲ್ಲ, ಇದಿಲ್ಲ ಎಂದು ಖಾಸಗಿ ಆಸ್ಪತ್ರೆಗೆ ನಮ್ಮನ್ನು ಅಟ್ಟುತ್ತಾರೆ?

2. ಬೇರೆ ದೇಶಗಳಲ್ಲಿ ಸರ್ಕಾರಿ ಶಾಲೆಗಳೆಂದರೆ ಖಾಸಗಿ ಶಾಲೆಗಳಿಗಿಂತ ಚೆನ್ನಾಗಿರುತ್ತವೆ. ದುಬಾರಿ ಶುಲ್ಕ ತೆರಬೇಕಾಗಿಲ್ಲ. ಮುಖ್ಯಸ್ಥರು, ಶಿಕ್ಷಕ-ಶಿಕ್ಷಕಿಯರು ವಿನಯವಂತರಾಗಿರುತ್ತಾರೆ. ಮಕ್ಕಳ ಸೌಕರ್ಯ ಒದಗಿಸುವ ಹೆಸರಿನಲ್ಲಿ ಯಾರೂ ಪಾಲಕರನ್ನು ದೋಚುವುದಿಲ್ಲ. ನಮ್ಮಲ್ಲಿ ಸರ್ಕಾರಿ ಶಾಲೆಗಳು ದಿನದಿನಕ್ಕೆ ಸೊರಗುತ್ತಿವೆ ಏಕೆ? ಅವು ದೊಡ್ಡಿಗಳಂತಾಗುತ್ತಿವೆ. ಶಿಕ್ಷಕರಿಗೆ ಸಂಬಳ ಜಾಸ್ತಿ ಆದಷ್ಟೂ ಅವರು ಮೈಗಳ್ಳರಾಗುತ್ತಿದ್ದಾರೆ ಏಕೆ? ನಮ್ಮನ್ನು ಖಾಸಗಿ ಶಾಲೆಗಳಿಗೆ ಹೋಗುವಂತೆ ಮಾಡುತ್ತಿದ್ದಾರೆ ಏಕೆ?

3. ಬೇರೆ ದೇಶಗಳಲ್ಲಿ ನೀರು, ವಿದ್ಯುತ್ತು, ಶೌಚ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿರುತ್ತವೆ. ಊರೂರಲ್ಲಿ ರಸ್ತೆಗಳು ಚೊಕ್ಕಟ ಇರುತ್ತವೆ. ಕಸ ವಿಲೇವಾರಿ ವ್ಯವಸ್ಥೆ ಚೆನ್ನಾಗಿರುತ್ತದೆ. ಉದ್ಯಾನ, ಈಜುಗೊಳ, ಆಟದ ಮೈದಾನ ಎಲ್ಲವೂ ತುಂಬ ಅಚ್ಚುಕಟ್ಟಾಗಿರುತ್ತವೆ. ನಮ್ಮಲ್ಲಿ ಏಕೆ ಇವೆಲ್ಲ ಅಧ್ವಾನವಾಗಿರುತ್ತವೆ? ಕಸ ಎತ್ತುವವರ ಕಿರಿಕಿರಿ, ನೀರು ಸರಿಯಾಗಿ ಬರುವುದಿಲ್ಲ. ವಿದ್ಯುತ್ ಪದೇ ಪದೇ ಕೈಕೊಡುತ್ತದೆ. ರಸ್ತೆಗಳೋ ಅವ್ಯವಸ್ಥೆ. ಉತ್ತಮ ರಸ್ತೆಗಳಲ್ಲಿ ಖಾಸಗಿ ಕಂಪನಿಗಳಿಗೆ ದುಬಾರಿ ಹಣ ತೆರಬೇಕಾಗುತ್ತಿದೆ ಏಕೆ? ಸರ್ಕಾರ ಇವನ್ನೆಲ್ಲ ಏಕೆ ಕಣ್ಮುಚ್ಚಿ ನೋಡುತ್ತಿದೆ? ನಾವೆಲ್ಲ ಡೀಸೆಲ್ ಜನರೇಟರುಗಳನ್ನೊ ಬಾಟಲಿ ನೀರನ್ನೊ ಖಾಸಗಿ ಟ್ಯಾಂಕರ್‌ಗಳನ್ನೋ ತರಿಸಿ ಬದುಕು ನಡೆಸುವ ಅವಸ್ಥೆ ಏಕೆ ಬಂತು?

4. ಬೇರೆ ದೇಶಗಳಲ್ಲಿ ಪೊಲೀಸ್ ಠಾಣೆ ಎಂದರೆ ಉತ್ತಮ ಸ್ವಾಗತ ಕಚೇರಿ ಇರುತ್ತದೆ. ಪೊಲೀಸರು ವಿನಯವಂತರಾಗಿ, ನಮಗೆ ಸಹಾಯ ಮಾಡುತ್ತಾರೆ. ನಮ್ಮ ಪೊಲೀಸ್ ಠಾಣೆ ಎಂದರೆ ಬರೀ ಧಿಮಾಕು ಜಾಸ್ತಿ ಏಕೆ? ನಮ್ಮಂಥ ನಿರಪರಾಧಿ ಪ್ರಜೆಗಳಿಗೂ ಬೈಗುಳ, ಕಿರಿಕಿರಿ, ಅನೇಕರಿಗೆ ನಿಷ್ಕಾರಣ ಶಿಕ್ಷೆ ಏಕೆ? ಠಾಣೆಗಳು ನರಕದಂತಿರುತ್ತವೆ ಏಕೆ?

5. ಬೇರೆ ದೇಶಗಳಲ್ಲಿ ನ್ಯಾಯಾಲಯ ಎಂದರೆ ಚುರುಕಿನ, ಸುಂದರ ಕಚೇರಿಗಳಾಗಿರುತ್ತವೆ. ಒಂದೆರಡು ತಿಂಗಳಲ್ಲಿ ನ್ಯಾಯ ಸಿಗುತ್ತದೆ. ತೀರಾ ಕ್ಲಿಷ್ಟ ಪ್ರಕರಣಗಳಲ್ಲೂ ಹೆಚ್ಚೆಂದರೆ ಒಂದೆರಡು ವರ್ಷಗಳಲ್ಲಿ ನ್ಯಾಯನಿರ್ಣಯವಾಗಿರುತ್ತದೆ. ಬಡವರಿಗೆ ಸರ್ಕಾರಿ ವಕೀಲರ ನೆರವು ತುರ್ತಾಗಿ ಸಿಗುತ್ತದೆ. ನಮ್ಮಲ್ಲಿ ಏಕೆ ಇದು ಸಾಧ್ಯ ಇಲ್ಲ? ಹತ್ತಿಪ್ಪತ್ತು ವರ್ಷಗಳಾದರೂ ನ್ಯಾಯ ಸಿಗುವುದಿಲ್ಲ, ವಿಚಾರಣಾಧೀನ ಕೈದಿಗಳಿಗೆ ಬಿಡುಗಡೆ ಇರುವುದಿಲ್ಲ. ಕೋರ್ಟು ಕಚೇರಿ ಅಂದರೆ `ಅಲೆಯುವ ಕೆಲಸ' ವೇ ಆಗಿರುತ್ತದೆ ಏಕೆ?

6. ಬೇರೆ ದೇಶಗಳಲ್ಲಿ ಸರ್ಕಾರಿ ಕಚೇರಿ ಅಂದರೆ ಅಚ್ಚುಕಟ್ಟಾದ, ಚುರುಕಿನ ಕೆಲಸದ, ವಿನಯವಂತರ, ಪ್ರಾಮಾಣಿಕರ ತಾಣವಾಗಿರುತ್ತದೆ. ನಮ್ಮಲ್ಲಿ ಏಕೆ ಸರ್ಕಾರಿ ಕಚೇರಿಗಳು ಭಯ ಹುಟ್ಟಿಸುವ ತಾಣಗಳಾಗಿವೆ? ಗುಮಾಸ್ತರು, ಅಧಿಕಾರಿಗಳು ಏಕೆ ಹಸಿದ ತೋಳಗಳಂತೆ, ನಮ್ಮನ್ನು ಕುರಿಗಳಂತೆ ನೋಡುತ್ತಾರೆ. ಅಥವಾ ತಮ್ಮ ನಿದ್ದೆಗೆ, ಹರಟೆಗೆ ಭಂಗ ಬಂದಂತೆ ನಮ್ಮನ್ನು ಕೆಕ್ಕರಿಸಿ ನೋಡುತ್ತಾರೆ? ಏಕೆ ಪ್ರತಿ ಕೆಲಸಕ್ಕೂ ನಮ್ಮಿಂದ ಲಂಚ ನಿರೀಕ್ಷೆ ಮಾಡುತ್ತಾರೆ?

7. ಸರ್ಕಾರಿ ಸೌಕರ್ಯಗಳೆಲ್ಲವೂ ದಿನದಿಂದ ದಿನಕ್ಕೆ ಅಧ್ವಾನವಾಗುತ್ತಿವೆ ಏಕೆ? ಸರ್ಕಾರಿ ಪಠ್ಯಪುಸ್ತಕ, ಸರ್ಕಾರಿ ಬಿತ್ತನೆ ಬೀಜಗಳು, ಸರ್ಕಾರಿ ಮೊಬೈಲ್, ಪ್ರವಾಸಿ ಧಾಮಗಳಲ್ಲಿ ಸರ್ಕಾರಿ ಹೊಟೆಲ್, ನಂದಿಬೆಟ್ಟ- ಬನ್ನೇರುಘಟ್ಟಗಳ  ಸರ್ಕಾರಿ ಉದ್ಯಾನಗಳು, ರೇಡಿಯೊ- ಟಿವಿಗಳಲ್ಲಿ  ಸರ್ಕಾರಿ ಜಾಹೀರಾತು,  ಸರ್ಕಾರಿ ಗ್ರಂಥಾಲಯಗಳು ಎಲ್ಲವೂ ಏಕೆ ಅಷ್ಟೊಂದು ಕಳಪೆಯಾಗಿರುತ್ತವೆ? 

8. ನಮ್ಮ ಸುತ್ತಲಿನ ಅರಣ್ಯ, ನದಿ, ಕೆರೆಕುಂಟೆ, ಅಂತರ್ಜಲ, ಕಡಲ ತೀರಗಳೇ ಮುಂತಾದ ಸಾರ್ವಜನಿಕ ಸೊತ್ತುಗಳೆಲ್ಲ ದಿನದಿನಕ್ಕೆ ಮಲಿನವಾಗುತ್ತಿವೆ ಅಥವಾ ಧ್ವಂಸವಾಗುತ್ತಿವೆ, ಅಥವಾ ಪರಭಾರೆ ಆಗುತ್ತಿವೆ ಏಕೆ? ಅದರ ವಿರುದ್ಧ ದನಿ ಎತ್ತಿದವರ ಮೇಲೆಲ್ಲ ದಮನಕಾರಿ ಕಾರ್ಯಾಚರಣೆಗಳಾಗುತ್ತಿವೆ ಏಕೆ?

9.  ಸಾಬೂನು, ಬಟ್ಟೆ, ಚಪ್ಪಲಿ, ಅಕ್ಕಿ, ಬೇಳೆ ಏನನ್ನೇ ನಾವು ಖರೀದಿಸಿದರೂ ಅದರಿಂದ ಒಂದಿಷ್ಟು ಹಣ ಸರ್ಕಾರಕ್ಕೆ ಹೋಗುತ್ತದೆ. ನಾವು ಗಳಿಸಿದ ಹಣವನ್ನು ಯಾವುದಕ್ಕೆ ಖರ್ಚು ಮಾಡಿದರೂ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಅದರ ತುಸು ಪಾಲು ಹೋಗುತ್ತದೆ. ನಮ್ಮಿಂದ ಸಂಗ್ರಹವಾಗುವ ಹಣದ ಮೊತ್ತ ವರ್ಷವರ್ಷವೂ ಅಪಾರವಾಗಿ ಹೆಚ್ಚುತ್ತಿದೆ. ಈ ಹಣವನ್ನು ಸರ್ಕಾರ ನಮ್ಮೆಲ್ಲರ ಕಲ್ಯಾಣಕ್ಕೇ ಬಳಸಬೇಕು. ಆದರೂ ಏಕೆ ನಮಗೆ ದಿನೇದಿನೇ ಸರ್ಕಾರಿ ಸೌಕರ್ಯಗಳು ಕಡಿಮೆಯಾಗುತ್ತಿವೆ, ಕಳಪೆಯಾಗುತ್ತಿವೆ? ಹಣ ಸಾಲದೆಂದು ದೇಶವಿದೇಶಗಳ ಸಾಲದ ಹೊರೆಯನ್ನು ನಮ್ಮ ಮುಂದಿನ ಪೀಳಿಗೆಗೆ ಹೇರುತ್ತಿರುವುದೇಕೆ? ನಮ್ಮನ್ನೆಲ್ಲ ಅನಿವಾರ್ಯ ಸಾಲಗಾರರನ್ನಾಗಿ ಮಾಡಿದ್ದೇಕೆ?

10. ಹಿಂದೆಲ್ಲ ಜನಪ್ರತಿನಿಧಿಗಳು ನಮ್ಮಂತೆಯೇ, ನಮ್ಮಂದಿಗೇ ಇರುತ್ತಿದ್ದರು. ಈಗ ಚುನಾವಣೆಗಳಲ್ಲಿ ಗೆದ್ದವರ ಸುತ್ತ ಹತ್ತೆಂಟು ಲಕ್ಷುರಿ ಕಾರುಗಳು, ವಂದಿ ಮಾಗಧರು, ಸಮವಸ್ತ್ರದ ಅಂಗರಕ್ಷಕರು, ಸಮವಸ್ತ್ರಗಳಿಲ್ಲದ ಗೂನ್-ಡಾಗಳು ಸುತ್ತುವರೆದು ನಮ್ಮಂಥವರು ಯಾರೂ ಹತ್ತಿರ ಸುಳಿಯದಂತೆ ಠಳಾಯಿಸುವುದೇಕೆ? ಗಾಂಧೀಜಿಯವರ ಆಶಯದಂತೆ ಪಂಚಾಯತ್‌ಗಳೆಂಬ ನಮ್ಮದೇ ಸ್ಥಾನೀಯ ಸರ್ಕಾರ ರಚಿಸಿಕೊಂಡರೂ ಇ್ಲ್ಲಲೂ ಅವರ ಹಸ್ತಕ್ಷೇಪ ಏಕೆ? ಅವರ ಚೇಲಾಗಳದ್ದೇ ಕಾರುಬಾರು ಏಕೆ? ಸರ್ಕಾರದ ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ವಿಧಾನ ಸಭೆಯಲ್ಲಿ ಪ್ರಶ್ನೆ ಎತ್ತುವ ಬದಲು ಕೇವಲ ಸ್ವಹಿತಾಸಕ್ತಿ, ಸ್ವಕಾರ್ಯ, ಸ್ವಜನ ಪಕ್ಷಪಾತದ ಕೆಲಸಗಳಲ್ಲೇ ತಲ್ಲೀನರಾಗಿರುವುದೇಕೆ? ನಮ್ಮನ್ನೆಲ್ಲ ಒಗ್ಗೂಡಿಸಿ ಸುಭದ್ರ ದೇಶವನ್ನು ಕಟ್ಟುವ ಬದಲು ಜಾತಿ, ಧರ್ಮದ ಹೆಸರಿನಲ್ಲಿ ನಮ್ಮನಮ್ಮಲ್ಲಿ ಒಡಕು ಹುಟ್ಟಿಸಿ, ಆಸೆ ಹುಟ್ಟಿಸಿ ಮತಭಿಕ್ಷೆಗೆ ಬರುತ್ತೀರಿ ಏಕೆ?

ಯಾರನ್ನು ಬಲಪಡಿಸಲಿಕ್ಕಾಗಿ, ಯಾರ ಸುಂದರ ಭವಿಷ್ಯಕ್ಕಾಗಿ ನಾವು ನಿಮ್ಮ ಪಕ್ಷಕ್ಕೆ, ನಿಮಗೆ ಮತ ಹಾಕಬೇಕು ಹೇಳಬಲ್ಲಿರಾ?


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT