ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಹಾಕದೇ ಮರಳಬಹುದು!

ಚುನಾವಣೆಯಿಂದ ದೂರ ಉಳಿಯುವ ವಿಶೇಷ ಹಕ್ಕು
Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕೊಪ್ಪಳ: ವಿಧಾನಸಭೆಗೆ ಮೇ 5ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವವರ ಪೈಕಿ ಯಾವೊಬ್ಬ ಅಭ್ಯರ್ಥಿಗೂ ಮತ ಹಾಕಬಾರದು ಎಂದು ನಿರ್ಧರಿಸುವ ಅವಕಾಶ ಮತದಾರರಿಗೆ ಇದೆ.

ಪ್ರಜಾಪ್ರತಿನಿಧಿ ಕಾಯ್ದೆಯ ನಿಯಮ 49-ಒ ಅಡಿ ಮತದಾರರಿಗೆ ಈ ಅವಕಾಶ ಇದೆ. ಮತದಾರರು  ವಿದ್ಯುನ್ಮಾನ ಮತ ಯಂತ್ರದಲ್ಲಿ ಗುಂಡಿ ಒತ್ತದೇ ದೂರ ಉಳಿದು ಈ ವಿಶೇಷ ಹಕ್ಕನ್ನು ಚಲಾಯಿಸಬಹುದಾಗಿದೆ. ಆದರೆ, ಮತದಾನಕ್ಕೆ ಮೊದಲಿನ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಬೇಕಾದುದು ಮಾತ್ರ ಕಡ್ಡಾಯ.`ಯಾವುದೇ ಅಭ್ಯರ್ಥಿಗೂ ಮತ ಹಾಕುವುದಿಲ್ಲ ಎಂಬುದಾಗಿ ಮತದಾರ ನಿರ್ಧರಿಸಬಹುದಾಗಿದೆ. ಇಂತಹ ನಿರ್ಧಾರ ಕೈಗೊಳ್ಳಲು ಪ್ರಜಾಪ್ರತಿನಿಧಿ ಕಾಯ್ದೆಯಡಿ ಅವಕಾಶ ಇದೆ' ಎನ್ನುವ ಇಲ್ಲಿನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ತುಳಸಿ ಮದ್ದಿನೇನಿ, `ಮತದಾರರು ಈ ನಿರ್ಧಾರವನ್ನು ಲಿಖಿತವಾಗಿ ನೀಡಬೇಕಾಗುತ್ತದೆ' ಎಂದು ಹೇಳುತ್ತಾರೆ.

ಮತದಾರರ ಪಟ್ಟಿಯಲ್ಲಿ ಹೆಸರು ಹಾಗೂ ಇತರ ವಿವರಗಳನ್ನು ಪರಿಶೀಲಿಸುವ ಚುನಾವಣಾ ಕರ್ತವ್ಯದ ಅಧಿಕಾರಿಗಳು, ನಮೂನೆ 17-ಎ ನಲ್ಲಿ ನೋಂದಾಯಿಸಿ, ಮತದಾರರ ಸಹಿ ಪಡೆಯುತ್ತಾರೆ. ನಂತರ ಬೆರಳಿಗೆ ಅಳಿಸಲಾಗದ ಶಾಯಿಯನ್ನೂ ಹಾಕುತ್ತಾರೆ. ಈ ಪ್ರಕ್ರಿಯೆ ನಂತರ ಮತದಾರ ಮತಯಂತ್ರದ ಗುಂಡಿಯನ್ನು ಒತ್ತದೇ `ಮತ ಚಲಾಯಿಸದೇ ಇರುವ ನಿರ್ಧಾರ'ವನ್ನು ಅಧಿಕಾರಿಗಳಿಗೆ ತಿಳಿಸಬೇಕು ಎಂದು ಹೇಳುತ್ತಾರೆ.

ನಂತರ, ಚುನಾವಣಾ ಕರ್ತವ್ಯದ ಮೇಲಿರುವ ಅಧಿಕಾರಿಗಳು ನೀಡುವ ಬಿಳಿ ಹಾಳೆಯ ಮೇಲೆ, ಹೆಸರು, ಗುರುತಿಗಾಗಿ ತಂದ ದಾಖಲೆ ಮತ್ತಿತರ ವೈಯಕ್ತಿಕ ವಿವರಗಳನ್ನು ದಾಖಲಿಸುವ ಜೊತೆಗೆ ಮತ ಚಲಾವಣೆ ಮಾಡದೇ ಇರುವ ತನ್ನ ನಿರ್ಧಾರವನ್ನು ಬರೆದು, ಸಹಿ ಹಾಕಿ ನೀಡಬೇಕು ಎನ್ನುತ್ತಾರೆ.

ಅಂತಿಮ ಕಣದಲ್ಲಿ ಇರುವ ಅಭ್ಯರ್ಥಿಗಳು ಯಾರು ಎಂಬುದು ಮೊದಲೇ ಗೊತ್ತಾಗಿರುತ್ತದೆ. ಹೀಗಾಗಿ ಮತಗಟ್ಟೆಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಈ ರೀತಿ ಬರೆದು ಕೊಡಬೇಕು ಎಂದೇನಿಲ್ಲ. ಮುಂಚಿತವಾಗಿಯೇ `ಮತ ಚಲಾವಣೆ ಮಾಡುವುದಿಲ್ಲ' ಎಂಬ ನಿರ್ಧಾರದ ಬಗ್ಗೆ ಅರ್ಜಿ ಬರೆದುಕೊಂಡು, ಮೇಲೆ ತಿಳಿಸಿದ ಪ್ರಕ್ರಿಯೆ ಪೂರೈಸಿದ ನಂತರ ಸದರಿ ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಗೆ ನೀಡಲೂ ಅವಕಾಶ ಇದೆ ಎಂದು ವಿವರಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಮತದಾನ ಪ್ರಮಾಣವೇ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಾಗ ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ಪೆಟ್ಟು ಬೀಳಲಿದೆ ಎನ್ನುವ ಮಾತಿಗೆ ದನಿಗೂಡಿಸುವ ಅವರು, ಎಲ್ಲರೂ ಮತ ಚಲಾವಣೆ ಮಾಡಬೇಕು ಎಂಬ ಉದ್ದೇಶದಿಂದಲೇ ಮತದಾರರ ಜಾಗೃತಿಗಾಗಿ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT