ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಕ್ಕಾಗಿ ಸ್ವಸಹಾಯ ಸಂಘಗಳಿಗೆ ಗಾಳ

ಜಿಲ್ಲಾ ವ್ಯಾಪ್ತಿ 15,600 ಸಂಘ: 1.10 ಲಕ್ಷಕ್ಕೂ ಹೆಚ್ಚು ಸದಸ್ಯರು
Last Updated 15 ಏಪ್ರಿಲ್ 2013, 9:55 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಚುನಾವಣಾ ಪ್ರಚಾರ ರಂಗೇರಿದ್ದು, ಅಖಾಡಕ್ಕೆ ಇಳಿದಿರುವ ಅಭ್ಯರ್ಥಿಗಳು ಮತಕ್ಕಾಗಿ ಸ್ವಸಹಾಯ ಸಂಘದ ಸದಸ್ಯರಿಗೆ ಗಾಳ ಹಾಕಲು ತಂತ್ರಗಾರಿಕೆಯಲ್ಲಿ ಮುಳುಗಿದ್ದಾರೆ.

ನಗರ, ಪಟ್ಟಣ ಪ್ರದೇಶದಲ್ಲೂ ಚುನಾವಣಾ ಪ್ರಚಾರ ನಡೆಯುತ್ತಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಇರುವಷ್ಟು ರಂಗು ಇಲ್ಲಿಲ್ಲ. ನಿತ್ಯವೂ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರ ವಾಹನಗಳು ಹಳ್ಳಿಯ ರಸ್ತೆಯಲ್ಲಿ ದೂಳೆಬ್ಬಿಸುತ್ತಿವೆ. ಗ್ರಾಮಕ್ಕೆ ಭೇಟಿ ನೀಡುವ ಅಭ್ಯರ್ಥಿ ಆ ಊರಿನಲ್ಲಿರುವ ತನ್ನ ಶಿಷ್ಯಪಡೆಯೊಂದಿಗೆ ಪ್ರತಿಯೊಂದು ಬೀದಿಗಳಲ್ಲೂ ಪ್ರಚಾರ ನಡೆಸುತ್ತಾನೆ.

ಪ್ರಚಾರ ಮುಗಿದ ನಂತರ ಅಭ್ಯರ್ಥಿಯ ಬೆಂಬಲಿಗರು, ಅವರ ಶಿಷ್ಯರು `ಕತ್ತಲ ಕಾರ್ಯಾಚರಣೆ' ಆರಂಭಿಸುತ್ತಾರೆ. ರಾತ್ರಿವೇಳೆ ಸ್ವಸಹಾಯ ಸಂಘದ ಪ್ರತಿನಿಧಿಗಳು, ಸದಸ್ಯರ ಮನೆಗಳಿಗೆ ಎಡತಾಕುತ್ತಾರೆ. ನಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಅವರ ಮೇಲೆ ಪ್ರಭಾವ ಬೀರುತ್ತಾರೆ. ಸಂಘದ ಅಭಿವೃದ್ಧಿಗೆ ಹಣ ನೀಡುವ ಆಮಿಷ ಒಡ್ಡುವುದು ಗುಟ್ಟಾಗಿ ನಡೆದಿದೆ. ಹೀಗಾಗಿ, ಹಳ್ಳಿಗಳಲ್ಲಿ ಸ್ವಾವಲಂಬನೆಗೆ ಮುನ್ನುಡಿ ಬರೆದಿದ್ದ ಸ್ವಸಹಾಯ ಸಂಘಗಳು ರಾಜಕೀಯ ಪಕ್ಷಗಳ ಆಮಿಷದ ಅಡಕತ್ತರಿಗೆ ಸಿಲುಕಿವೆ.

ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಹಾಗೂ ಲೀಡ್ ಬ್ಯಾಂಕ್‌ನಿಂದ ಪ್ರಕಟಿಸಿದ ವಾರ್ಷಿಕ ಸಾಲ ಯೋಜನೆಯ ಅನ್ವಯ ಜಿಲ್ಲೆಯಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿವೆ. ಪುರುಷರು ಮತ್ತು ಮಹಿಳೆಯರು ಸಂಘ ರಚಿಸಿಕೊಂಡು ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ. ಒಂದು ಸಂಘದಲ್ಲಿ ಕನಿಷ್ಠ 10 ಸದಸ್ಯರು ಇರುತ್ತಾರೆ. ಕೆಲವು ಸಂಘಗಳಲ್ಲಿ ಈ ಸಂಖ್ಯೆ 20 ದಾಟುತ್ತದೆ.

ಇನ್ನೊಂದೆಡೆ ಜಿಲ್ಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾರಿಗೊಂಡಿದೆ. ಈ ಯೋಜನೆಯಡಿ ಜಿಲ್ಲಾ ವ್ಯಾಪ್ತಿ 7,600 ಸ್ವಸಹಾಯ ಸಂಘ ರಚಿಸಲಾಗಿದೆ. ಮಹಿಳಾ ಸಂಘವೊಂದರಲ್ಲಿ ಕನಿಷ್ಠ 10 ಸದಸ್ಯರು ಇರುತ್ತಾರೆ. `ಪ್ರಗತಿ ಬಂಧು' ಹೆಸರಿನಡಿ ಪುರುಷರ ಸ್ವಸಹಾಯ ಸಂಘ ರಚಿಸಲಾಗಿದೆ. 5ರಿಂದ 8 ಮಂದಿ ಸದಸ್ಯರು ಈ ಸಂಘದಲ್ಲಿ ಇರುತ್ತಾರೆ. ಕೃಷಿ ಸೇರಿದಂತೆ ಇತರೇ ಅಭಿವೃದ್ಧಿ ಚಟುವಟಿಕೆಗಳಿಗೆ ಯೋಜನೆಯಡಿ ಈ ಸಂಘಕ್ಕೆ ನೆರವು ಲಭಿಸಲಿದೆ.

ಒಟ್ಟಾರೆ ಜಿಲ್ಲೆಯಲ್ಲಿ ಸ್ವಸಹಾಯ ಸಂಘಗಳ ಸಂಖ್ಯೆ 15,600ಕ್ಕೂ ಹೆಚ್ಚಿದೆ. 18ವರ್ಷ ಮೇಲ್ಪಟ್ಟವರು ಮಾತ್ರವೇ ಸಂಘ ರಚಿಸಲು ಅರ್ಹರು. ಹಳ್ಳಿಯೊಂದರಲ್ಲಿ ಒಬ್ಬ ಮಹಿಳೆ ಅಥವಾ ಪುರುಷ ಒಂದಕ್ಕಿಂತ ಹೆಚ್ಚು ಸಂಘಕ್ಕೆ ಸದಸ್ಯರಾಗಿರುತ್ತಾರೆ. ಸೌಲಭ್ಯ ಪಡೆಯಲು ಈ ಹಾದಿ ತುಳಿಯುವುದು ಸಹಜ.

ಸಂಘವೊಂದರಲ್ಲಿ 10 ಸದಸ್ಯರಿದ್ದಾರೆಂದು ಲೆಕ್ಕಕ್ಕೆ ತೆಗೆದುಕೊಂಡರೂ ಸದಸ್ಯರ ಸಂಖ್ಯೆ ಸುಮಾರು 1.56 ಲಕ್ಷ ದಾಟುತ್ತದೆ.

ಜಿಲ್ಲೆಯಲ್ಲಿರುವ ಒಟ್ಟು ಸಂಘಗಳಲ್ಲಿ ಶೇ. 30ರಷ್ಟು ಸದಸ್ಯರು ಒಂದಕ್ಕಿಂತ ಹೆಚ್ಚು ಸಂಘಗಳಲ್ಲಿ ಸದಸ್ಯರಾಗಿರುವ ಅಂದಾಜಿದೆ.

ಪ್ರಸ್ತುತ ಜಿಲ್ಲಾಡಳಿತ ಪ್ರಕಟಿಸಿರುವ ಮಾಹಿತಿ ಅನ್ವಯ ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 7,30,184. ಇಷ್ಟು ಮತದಾರರಲ್ಲಿ ಸುಮಾರು 1.10 ಲಕ್ಷಕ್ಕೂ ಹೆಚ್ಚು ಮತದಾರರು ಸ್ವಸಹಾಯ ಸಂಘಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ಈ ಸದಸ್ಯರಿಗೆ ಹಣದ ಆಮಿಷವೊಡ್ಡಿ ಮತ ಪಡೆಯಲು ರಾಜಕೀಯ ಪಕ್ಷದ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಮುಂದಾಗಿದ್ದಾರೆ.

ಪ್ರತಿಯೊಂದು ಸಂಘದಲ್ಲೂ ಇಬ್ಬರು ಪ್ರತಿನಿಧಿಗಳು ಇರುತ್ತಾರೆ. ಎಲ್ಲ ಸಂಘಗಳು ಬ್ಯಾಂಕ್‌ಗಳಿಂದ ಸಾಲ ಪಡೆದಿವೆ. ಇದನ್ನೇ ರಾಜಕೀಯ ಲಾಭವಾಗಿ ಪರಿವರ್ತಿಸಿಕೊಳ್ಳಲು ಮುಂದಾಗಿರುವ ಅಭ್ಯರ್ಥಿಗಳು ಸಂಘದ ಸಾಲ ತೀರಿಸಲು ಹಣ ನೀಡುತ್ತೇವೆ. ಸಂಘದ ಸದಸ್ಯರು ಹಾಗೂ ಕುಟುಂಬದವರು ನಮಗೆ ಮತ ನೀಡಬೇಕು ಎಂಬ ಬೇಡಿಕೆ ಮುಂದಿಡುವುದು ಸದ್ದಿಲ್ಲದೆ ನಡೆದಿದೆ.

ಕಳೆದ ಚುನಾವಣೆಯಲ್ಲಿ ಕೆಲವು ಸ್ವಸಹಾಯ ಸಂಘಗಳ ಸದಸ್ಯರ ಬ್ಯಾಂಕ್ ಖಾತೆಗೆ ರಾಜಕೀಯ ಪಕ್ಷದ ಅಭ್ಯರ್ಥಿಗಳು ಗುಟ್ಟಾಗಿ ಹಣ ಸಂದಾಯ ಮಾಡಿರುವ ನಿದರ್ಶನವಿದೆ. ಆದರೆ, ಈ ಪ್ರಕ್ರಿಯೆ ಪ್ರತ್ಯಕ್ಷವಾಗಿ ನಡೆಯುವುದಿಲ್ಲ. ಸಂಘದ ಪ್ರತಿನಿಧಿಗಳಿಗೆ ನೇರವಾಗಿ ಹಣ ನೀಡಿ ಬಾಕಿ ಉಳಿದಿರುವ ಸಂಘದ ಸಾಲ ತೀರಿಸಿದ್ದಾರೆ. ಕೆಲವು ಸಂಘದ ಸದಸ್ಯರಿಗೆ ಕುರಿ, ಮೇಕೆ, ಹಸು ಕೊಡಿಸಿರುವ ಉದಾಹರಣೆಯೂ ಇದೆ.

ಮತ್ತೊಂದೆಡೆ ಗ್ರಾಮೀಣ ಪ್ರದೇಶದ ಯುವಕ, ಯುವತಿಯರ ಸಂಘ, ಭಜನಾ ಸಂಘ, ಕ್ರೀಡಾ ಸಂಘಗಳನ್ನು ಆಮಿಷದ ಬಲೆಗೆ ಬೀಳಿಸಲು ರಾಜಕೀಯ ಪಕ್ಷಗಳು ಯಶಸ್ವಿ ಯಾಗಿವೆ. ಕ್ರೀಡಾ ಸಾಮಗ್ರಿ, ಭಜನಾ ಪರಿಕರ ಸೇರಿದಂತೆ ಸಂಘದ ಸದಸ್ಯರು ಕೇಳುವ ಸಾಮಗ್ರಿ ಖರೀದಿಸಿ ಗುಟ್ಟಾಗಿ ನೀಡುವುದು ನಡೆದಿದೆ. ಚುನಾವಣಾ ಆಯೋಗದ ಹದ್ದಿನಕಣ್ಣು ತಪ್ಪಿಸಿ ಸ್ವಸಹಾಯ ಸಂಘಗಳನ್ನು ಆಮಿಷದ ಬಲೆಗೆ ಬೀಳಿಸಲು ಅಭ್ಯರ್ಥಿಗಳು ಮುಂದಾಗಿದ್ದಾರೆ.

ಬ್ಯಾಂಕ್ ಖಾತೆ ಮೇಲೆ ಹದ್ದಿನ ಕಣ್ಣು
ಚಾಮರಾಜನಗರ:
ಜಿಲ್ಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘ ಹಾಗೂ ಪುರುಷರ ಪ್ರಗತಿ ಬಂಧು ಸಂಘ ರಚಿಸಲಾಗಿದೆ.

ಎಲ್ಲ ಸಂಘಗಳಿಗೂ ಆರ್ಥಿಕ ನೆರವು ನೀಡಲಾಗಿದೆ. ಸ್ವಾವಲಂಬನೆಯ ಪಾಠ ಹೇಳಿಕೊಡಲಾಗಿದೆ. ಜತೆಗೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಮಹತ್ವ ಕುರಿತು ಸದಸ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗಿದೆ. ಆಮಿಷಕ್ಕೆ ಬಲಿಯಾಗದಂತೆ ತಿಳಿವಳಿಕೆ ನೀಡಲಾಗಿದೆ.

`ಈ ಹಿಂದಿನ ಚುನಾವಣೆಯಲ್ಲಿ ಸ್ವಸಹಾಯ ಸಂಘಗಳ ಬ್ಯಾಂಕ್ ಖಾತೆಗೆ ಅಭ್ಯರ್ಥಿಗಳು ಹಣ ಸಂದಾಯ ಮಾಡಿದ್ದ ಪ್ರಕರಣಗಳ ಬಗ್ಗೆ ನಮಗೆ ಅರಿವು ಇದೆ. ಜಿಲ್ಲೆಯಲ್ಲಿ ಯೋಜನೆಯಡಿ ಸಂಘಗಳನ್ನು ರಚಿಸಿದ್ದೇವೆ. ಯಾವುದೇ, ಸಂಘದ ಬ್ಯಾಂಕ್ ಖಾತೆಗೆ ಅಭ್ಯರ್ಥಿಗಳಿಂದ ಹಣ ಸಂದಾಯವಾದರೆ ಅಂತಹ ಸಂಘದ ಸದಸ್ಯರ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಈಗಾಗಲೇ ಸೂಚಿಸಲಾಗಿದೆ.

ಅಕ್ರಮ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ' ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಿ. ಗಣೇಶ್ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT