ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಳ ವಿಭಜನೆ ಲಾಭ ರಾಜನಾಥ್‌ಗೆ?

Last Updated 27 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಲಖನೌ: ಲಖನೌ, ಉತ್ತರ ಪ್ರದೇಶದ ರಾಜಧಾನಿ. ಹೆಸರಿಗೆ ದೊಡ್ಡ ನಗರವಾ­ದರೂ ಸಮಸ್ಯೆಗಳು ಹತ್ತಾರು. ಉತ್ತರ­ದಲ್ಲಿ ದೆಹಲಿಯ ನಂತರದ ಸ್ಥಾನದಲ್ಲಿ­ರುವ ಈ ಮಹಾನಗರ ಯಾವ ಪ್ರಮಾ­ಣ­­ದಲ್ಲಿ ಬೆಳವಣಿಗೆ ಆಗಬೇಕಿತ್ತೊ ಅಷ್ಟು ಆಗಿಲ್ಲ. ರಾಜಧಾನಿ ಜೀವನದಿ ಗೋಮತಿ ಮಾಲಿನ್ಯ, ಅನಧಿಕೃತವಾಗಿ ತಲೆ ಎತ್ತಿ­ರುವ ಬಡಾ­ವಣೆಗಳು, ಕಿರಿದಾದ ರಸ್ತೆ­­ಗ­ಳಿಂ­ದಾಗಿ ಪದೇ ಪದೇ ಅಸ್ತವ್ಯಸ್ತ­ಗೊಳ್ಳುವ ಸಂಚಾರ, ನಿರಂತರವಾಗಿ ಕಾಡುವ ವಿದ್ಯುತ್‌ ಸಮಸ್ಯೆ, ಕಿತ್ತುತಿನ್ನುವ ನಿರು­­ದ್ಯೋಗದ ಸುಳಿಯಲ್ಲಿ ಗಿರಕಿ ಹೊಡೆ­ಯುತ್ತಿದೆ.

ರಾಜ್ಯದ ರಾಜಧಾನಿ ಮೂಲಸೌಲಭ್ಯ­ಗಳ ಕೊರತೆಯಿಂದ ಸೊರಗಿದೆ. ಹೊಸ ಉದ್ಯಮಗಳು ಬರುವುದು ಹೋಗಲಿ, ಇರುವ ಹಳೇ ಉದ್ಯಮಗಳು ಬಾಗಿಲು ಮುಚ್ಚಿವೆ. ವಾಹನಗಳ ಬಿಡಿ ಭಾಗ ತಯಾರಿಸುತ್ತಿದ್ದ ‘ಟೆಲ್ಕೊ’ ಬಂದ್‌ ಆಗಿದೆ. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸೇರಿದಂತೆ ಕೆಲವು ಘಟಾ­ನುಘಟಿಗಳು ಅನೇಕ ಸಲ ಆಯ್ಕೆ­ಯಾಗಿದ್ದರೂ ಲಖನೌದ ಸಾಮಾಜಿಕ­– ಆರ್ಥಿಕ ಚಿತ್ರಣ ಬದಲಾಗಿಲ್ಲ. ಆದರೆ, ಲಖನೌ ಏನಾದರೂ ಅಲ್ಪಸ್ವಲ್ಪ ಅಭಿ­ವೃದ್ಧಿ ಆಗಿದ್ದರೆ, ವಾಜಪೇಯಿ ಅವರ ಕಾಲ­ದಲ್ಲಿ ಎಂದು ಜನ ಸ್ಮರಿಸುತ್ತಾರೆ.

ವಾಜಪೇಯಿ ಅವರಿಗೆ ಲಖನೌ ಹೆಚ್ಚು­ಕಡಿಮೆ ಎರಡು ದಶಕ ರಾಜಕೀಯ ಆಶ್ರಯ ನೀಡಿತ್ತು. 2009ರ ಚುನಾವಣೆ­ಯಲ್ಲಿ ಲಾಲ್‌ಜಿ ಟಂಡನ್‌ ಆಯ್ಕೆಯಾ­ಗಿ­ದ್ದರು. ಆಗ  ಚುನಾವಣೆ ಪ್ರಚಾರಕ್ಕೆ ವಾಜ­­ಪೇಯಿ ಅವರ ಪಾದರಕ್ಷೆ ಬಳಸಿ­ಕೊಂಡು ಲಾಲ್‌ಜಿ ಇತಿಹಾಸ ಸೃಷ್ಟಿಸಿ­ದರು. ಈಗ ರಾಜಧಾನಿಯಿಂದ ಅಖಾ­ಡ­ಕ್ಕಿಳಿದಿರುವ ಬಿಜೆಪಿ ಅಧ್ಯಕ್ಷ ರಾಜ­ನಾಥ್‌ ಸಿಂಗ್‌ ಶಾಲೊಂದನ್ನು ಪ್ರಚಾ­ರಕ್ಕೆ ಬಳಸು­ತ್ತಿದ್ದಾರೆ.

‘ಲಖನೌದಿಂದ ಚುನಾವಣೆಗೆ ಸ್ಪರ್ಧಿ­ಸುವಂತೆ ವಾಜಪೇಯಿ ಅವರೇ ನನಗೆ ಸಲಹೆ ಮಾಡಿದ್ದಾರೆ. ಅವರನ್ನು ಕಾಣಲು ಹೋಗಿದ್ದ ನನ್ನನ್ನು ಆಶೀರ್ವ­ದಿಸಿ, ಶಾಲೊಂದನ್ನು ಪ್ರೀತಿಯ ಸಂಕೇತ­ವಾಗಿ ಕೊಟ್ಟಿದ್ದಾರೆ’ ಎಂದು ರಾಜನಾಥ್‌ ಪ್ರಚಾರ ಸಭೆಗಳಲ್ಲಿ ಹೇಳುತ್ತಿದ್ದಾರೆ. ಹೆಗಲ ಮೇಲಿನ ಶಾಲನ್ನು ತೋರಿಸುತ್ತಿ­ದ್ದಾರೆ. ವಾಜ­ಪೇಯಿ ಅವರ ಜನಪ್ರಿಯತೆ  ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿ­ಸು­­ತ್ತಿ­ದ್ದಾರೆ. ಅಪೂರ್ಣಗೊಂಡಿರುವ ಮಾಜಿ ಪ್ರಧಾನಿಯ ಕನಸನ್ನು ಪೂರ್ಣ­ಗೊಳಿಸು­ವುದಾಗಿ ಭರವಸೆ ನೀಡುತ್ತಿ­ದ್ದಾರೆ.  ಆದರೆ, ವಾಜಪೇಯಿ ಅವರ ಆರೋಗ್ಯ ಪರಿಸ್ಥಿತಿ ಬಗ್ಗೆ ಗೊತ್ತಿರುವ ಅನೇಕ ಪ್ರಜ್ಞಾವಂತರು ರಾಜನಾಥ್‌ ಅವರ ಬಗ್ಗೆ ಗೇಲಿ ಮಾಡುತ್ತಿದ್ದಾರೆ.

ಠಾಕೂರ್‌ ಸಮುದಾಯಕ್ಕೆ ಸೇರಿದ ರಾಜನಾಥ್‌ ಸಿಂಗ್‌ ತಮ್ಮ ಪಕ್ಷದೊಳಗಿ­ರುವ ವಿರೋಧಿಗಳ ಬಾಯಿ ಮುಚ್ಚಿಸಲು ವಾಜಪೇಯಿ ಹೆಸರನ್ನು ಬಳಸಿಕೊಳ್ಳುವ ತಂತ್ರ ಮಾಡಿದ್ದಾರೆ. ಕ್ಷೇತ್ರ ಕಳೆದು­ಕೊಂಡು ಒಳಗೊಳಗೆ ಕುದಿಯುತ್ತಿರುವ ಲಾಲ್‌ಜಿ ಮಾಜಿ ಪ್ರಧಾನಿ ನಿಕಟವರ್ತಿ. ಈಗ ಪಕ್ಷದೊಳಗೆ ನರೇಂದ್ರ ಮೋದಿ ಅವರ ಪ್ರಾಬಲ್ಯ ಇರುವುದರಿಂದ ಅಸ­ಹಾ­­ಯಕರಾಗಿ ಕುಳಿತಿದ್ದಾರೆ. ಪಕ್ಷದ ಮುಖಂಡರು ಲಾಲ್‌ಜಿ ಅವರಿಗೆ ಪಕ್ಷ ಅಧಿಕಾರಕ್ಕೆ ಬಂದರೆ ರಾಜಕೀಯ ಪುನರ್ವಸತಿ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರಂತೆ.

ರಾಜ್‌ನಾಥ್‌, 2009ರ ಲೋಕ­ಸಭಾ ಚುನಾವಣೆಯಲ್ಲಿ ಘಾಜಿಯಾ­ಬಾದ್‌­ನಿಂದ ಆಯ್ಕೆಯಾ­ಗಿದ್ದರು. ಈ ಸಲ ಕ್ಷೇತ್ರ ಬದಲಾವಣೆ ಮಾಡಿದ್ದಾರೆ. ಘಾಜಿ­ಯಾ­ಬಾದ್‌ ಜನ ಮತ್ತೆ ತಮ್ಮನ್ನು ಬೆಂಬಲಿಸುವುದಿಲ್ಲ ಎನ್ನುವ ಕಾರಣಕ್ಕೆ ಲಖನೌಗೆ ಬಂದಿದ್ದಾರೆ. ರಾಜನಾಥ್‌ ಇಲ್ಲಿಂದ ಸ್ಪರ್ಧಿಸಬೇಕು ಎನ್ನುವುದು ಅವರೊಬ್ಬರ ತೀರ್ಮಾನವಲ್ಲ. ಇಡೀ ಪಕ್ಷದ್ದು ಎಂದು ಚುನಾವಣೆ ಮೇಲ್ವಿಚಾ­ರಕರು ಹೇಳುತ್ತಿದ್ದಾರೆ. ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್‌ ಹಾಗೂ ರಾಜ­ನಾಥ್‌ ಸಿಂಗ್‌ ಆತ್ಮೀಯ ಸ್ನೇಹಿತರು. ಅದೇ ಕಾರಣಕ್ಕೆ 2009ರ ಚುನಾವಣೆ­ಯಲ್ಲಿ ರಾಜನಾಥ್‌ ಅವರ ವಿರುದ್ಧ ಎಸ್‌ಪಿ ಅಭ್ಯರ್ಥಿಯನ್ನೇ ಹಾಕಿರಲಿಲ್ಲ.
ಈ ಚುನಾವಣೆಯಲ್ಲಿಯೂ ಅಭ್ಯರ್ಥಿ ಕಣಕ್ಕಿ­ಳಿ­ಸಿ­ದ್ದರೂ, ಪರೋಕ್ಷವಾಗಿ ರಾಜನಾಥ್‌ ಗೆಲು­ವಿಗೆ ಸಹಕರಿಸುತ್ತಿದೆ. ರಾಜನಾಥ್‌ ಅವರೂ ಮುಲಾಯಂ ಋಣ ತೀರಿಸಲು ಮೈನ್‌­ಪುರಿಯಲ್ಲಿ ಹೊಸಬರಿಗೆ ಟಿಕೆಟ್‌ ನೀಡಿದ್ದಾರೆ ಎಂಬ ಮಾತುಗಳು ರಾಜ­ಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಕಾಂಗ್ರೆಸ್‌ ಲಖನೌದಿಂದ ರೀಟಾ ಬಹು­ಗುಣ ಅವರಿಗೆ ಟಿಕೆಟ್‌ ನೀಡಿದೆ. ಹಿರಿಯ ರಾಜಕಾರಣಿ ಎಚ್‌.ಎನ್‌. ಬಹು­­ಗುಣ ಅವರ ಮಗಳಾದ ರೀಟಾ ಬಹುಗುಣ 2009ರ ಚುನಾವಣೆಯಲ್ಲಿ ಲಾಲ್‌ಜಿ ಅವರ ವಿರುದ್ಧ 35 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಈಗ ಅವರು ‘ಕಂಟೋನ್‌ಮೆಂಟ್‌ ಕ್ಷೇತ್ರ’­ದಿಂದ ವಿಧಾನಸಭೆಗೆ ಆಯ್ಕೆ ಆಗಿ­ದ್ದಾರೆ. ಸಮಾಜವಾದಿ ಪಕ್ಷ ಅಭಿಷೇಕ್‌ ಮಿಶ್ರಾ ಬಿಎಸ್‌ಪಿ ನಕುಲ್‌ ದುಬೆ ಅವ­ರನ್ನು ಕಣಕ್ಕಿಳಿಸಿವೆ. ಸಿನಿಮಾ ನಟ ಜಾವಿದ್‌ ಜಾಫ್ರಿ ಎಎಪಿಯಿಂದ ಸ್ಪರ್ಧಿಸಿದ್ದಾರೆ.

ಲಖನೌ ಕ್ಷೇತ್ರದ ‘ಸಾಮಾಜಿಕ ಸಂರ­ಚನೆ’ ರಾಜ್‌ನಾಥ್‌ ಅವರಿಗೆ ಅನುಕೂಲ­ವಾ­ಗ­ದಿದ್ದರೂ, ಮೋದಿ ಜನಪ್ರಿ­ಯತೆ ನೆರವಿಗೆ ಬರಲಿದೆ ಎನ್ನುವುದು ಸ್ಥಳೀಯ ಬಿಜೆಪಿ ಮುಖಂಡರ ಲೆಕ್ಕಾಚಾರ. ರಾಜಧಾನಿಯಲ್ಲಿ ಐದು ಲಕ್ಷ ವೈಶ್ಯರು, ನಾಲ್ಕು ಲಕ್ಷ ಮುಸ್ಲಿಮರು, 3.5 ಲಕ್ಷ ಬ್ರಾಹ್ಮಣರು, 2.5 ಲಕ್ಷ ಹಿಂದುಳಿದ ವರ್ಗಗಳು, ಉತ್ತರಾಖಂಡ­ದಿಂದ ವಲಸೆ ಬಂದಿರುವ 1.5 ಲಕ್ಷ ಮತದಾರರಿದ್ದಾರೆ. ಮುಸ್ಲಿಮರ ಬೆಂಬಲ ಪಡೆಯಲು ರಾಜನಾಥ್‌ ಪ್ರಯ­­ತ್ನಿ­ಸು­ತ್ತಿದ್ದಾರೆ. ಷಿಯಾ ಸಮುದಾ­ಯದ ಮುಖಂಡ ಮೌಲಾನ ಕಲ್ಬೆ ಜಾವೇದ್‌ ಅವರನ್ನು ಭೇಟಿ ಮಾಡಿ­ದ್ದರು. ಷಿಯಾ ಮುಸ್ಲಿಮರು ಹಿಂದೆ ವಾಜ­­ಪೇಯಿ ಅವರನ್ನು ಬೆಂಬಲಿಸಿ­ದ್ದಾರೆ. ಆಗಿನ ರಾಜಕೀಯ ಪರಿಸ್ಥಿತಿ ಬೇರೆ­ಯಾಗಿತ್ತು. ಇದು ಮೋದಿ  ಕಾಲ. ಮೋದಿ ಅವರನ್ನು ಪ್ರಧಾನಿ ಮಾಡಲು ಹೊರ­ಟಿರುವ ಪಕ್ಷವನ್ನು ಬೆಂಬಲಿಸುವ ಸಾಧ್ಯ­ವಿಲ್ಲ ಎಂದು ಜಾವೇದ್‌ ಹೇಳಿದ್ದಾರೆ.

ಮೋದಿ ಅವರನ್ನು ಸೋಲಿಸಬೇಕು ಎನ್ನು­ವುದು ಅಲ್ಪಸಂಖ್ಯಾತರ ಒಂದಂಶದ ಕಾರ್ಯ­ಕ್ರಮ. ಬ್ರಾಹ್ಮಣರ ಮತಗಳು ಕಾಂಗ್ರೆಸ್‌, ಬಿಎಸ್‌ಪಿ ಹಾಗೂ ಎಸ್‌ಪಿ ನಡುವೆ ಹಂಚಿಕೆ ಆಗಲಿದೆ. ಈ ವಿಭಜನೆ­ಯಿಂದ ರಾಜನಾಥ್‌ ಅವರಿಗೆ ಲಾಭ­ವಾ­ಗ­­ಲಿ­ದೆ. ಉಳಿದಂತೆ ಬಿಜೆಪಿಗೆ ನಿಷ್ಠವಾ­ಗಿ­ರುವ ಮತಗಳು ರಾಜನಾಥ್‌ ಅವರಿಗೆ ಹೋಗಲಿದೆ.

ಹೊಸ ಮತದಾರರು ಮೋದಿ ಅವ­ರತ್ತ ನೋಡುತ್ತಿದ್ದಾರೆ. ಮೋದಿ ಬದಲಾ­ವಣೆ ತರಬಲ್ಲರು ಎಂದು ಲಖನೌ ಸ್ನಾತ­ಕೋತ್ತರ ವಿದ್ಯಾರ್ಥಿ ರಿತೀಕ ಶುಕ್ಲಾ ಹೇಳುತ್ತಾರೆ. ರಿತೀಕ ಅವರ ಮಾತನ್ನು ಲಖನೌ ವಿವಿ ಉಪನ್ಯಾಸಕ ಡಾ. ಪುನಿತ್‌ ಕುಮಾರ್‌ ಅನುಮೋದಿಸುತ್ತಾರೆ. ಮೋದಿ ಹಣ­ದುಬ್ಬರ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಲ್ಲರು ಎಂದು ಸ್ಥಳೀಯ ನಿವಾಸಿ ಎಂ. ಶ್ರೀವಾತ್ಸವ ನಿರೀಕ್ಷಿಸುತ್ತಾರೆ.

ವಾಜಪೇಯಿ ಜನಪ್ರಿಯತೆಗೆ ಜೋತು ಬೀಳಲು ಪ್ರಯತ್ನಿಸುತ್ತಿರುವ ರಾಜ­ನಾಥ್‌ ಅವರಿಗೆ ಲಖನೌ ಒಲಿಯ­ಲಿ­ದೆಯೇ ಎನ್ನುವ ಪ್ರಶ್ನೆ ಈ ತಿಂಗಳ 30ರಂದು ನಡೆಯುವ ಚುನಾವಣೆ­ಯಲ್ಲಿ ನಿರ್ಧಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT