ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಜಾಗೃತಿಗೆ ನಂದಿನಿ ಹಾಲು...

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ನಿಮ್ಮ ಮನೆಗೆ ಬರುವ ಅಥವಾ ನೀವು ತರುವ `ನಂದಿನಿ' ಹಾಲಿನ ಪ್ಯಾಕೆಟ್ ಕೆಲವೇ ದಿನಗಳಲ್ಲಿ ಎಂದಿನಂತೆ ಇರುವುದಿಲ್ಲ. ಆ ಪ್ಯಾಕೆಟ್‌ಗಳ ಮೇಲೆ ಮತದಾನದ ಅರಿವು ಮೂಡಿಸುವ `ಸಂದೇಶ'ಗಳು ಅಚ್ಚಾಗಿರುತ್ತವೆ!
- ಹೌದು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ವಿನೂತನ ರೀತಿಯಲ್ಲಿ ಪ್ರಚಾರ ನಡೆಸಿ, ಅರಿವು ಮೂಡಿಸಲು ಚುನಾವಣಾ ಆಯೋಗ ಕೈಗೊಂಡಿರುವ ಪ್ರಯೋಗವಿದು.

ರಾಜ್ಯ ಸರ್ಕಾರದ ಅಂಗಸಂಸ್ಥೆಯಾದ ಕೆಎಂಎಫ್ (ಕರ್ನಾಟಕ ಹಾಲು ಒಕ್ಕೂಟ) ಸಿದ್ಧಪಡಿಸಿ ಮಾರುಕಟ್ಟೆಗೆ ನೀಡುವ ವಿವಿಧ ಗುಣಮಟ್ಟದ ಹಾಗೂ ಮಾದರಿಯ ಹಾಲಿನ ಪಾಕೆಟ್‌ಗಳ ಮೇಲೆ ಮತದಾನದ ಸಂದೇಶಗಳನ್ನು ಮುದ್ರಿಸುವುದಕ್ಕೆ ಸಿದ್ಧತೆಗಳು ನಡೆದಿವೆ. ಚುನಾವಣಾ ಆಯೋಗದ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ನಗರ ಪ್ರದೇಶಗಳಲ್ಲಿ ಬಹುತೇಕ ಮಂದಿ `ನಂದಿನಿ' ಹಾಲನ್ನು ಖರೀದಿಸುತ್ತಾರೆ. ಹೀಗೆ ಖರೀದಿಸಿದ ಪಾಕೆಟ್‌ಗಳ ಮೇಲೆ ಮತದಾನದ ಸಂದೇಶವಿದ್ದರೆ ಹೊಸ ರೀತಿಯಲ್ಲಿ ಪ್ರಚಾರ ಮಾಡಿದಂತಾಗುತ್ತದೆ. ಮತದಾರರನ್ನು ಮತಗಟ್ಟೆಗೆ ಬರುವಂತೆ ಪ್ರೇರೇಪಿಸಲಾಗುತ್ತದೆ. `ನಂದಿನಿ ಹಾಲಿನಷ್ಟೇ ಶುದ್ಧವಾಗಿ ಪ್ರಜಾಪ್ರಭುತ್ವ ಇರಬೇಕಾದರೆ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು' ಎಂಬ ಘೋಷವಾಕ್ಯದೊಂದಿಗೆ ಜನರ ಗಮನಸೆಳೆಯಲು ಆಯೋಗ ಉದ್ದೇಶಿಸಿದೆ.

ಇದಲ್ಲದೇ, `ಮತ ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ', `ನಿರ್ಭೀತವಾಗಿ ಮತ ಚಲಾಯಿಸಿ...', `ನೀವೂ ಮತದಾನ ಮಾಡಿ; ನಿಮ್ಮವರನ್ನೂ ಕರೆ ತನ್ನಿ...' ಎಂಬಿತ್ಯಾದಿ ಸಂದೇಶಗಳು ಪಾಕೆಟ್‌ನಲ್ಲಿ ರಾರಾಜಿಸಲಿವೆ. ಸಾಧ್ಯವಾದರೆ, ಸಿನಿಮಾ ಸೇರಿದಂತೆ ವಿವಿಧ ರಂಗದ ಖ್ಯಾತನಾಮರ ಭಾವಚಿತ್ರದೊಂದಿಗೆ ಸಂದೇಶ ಅಚ್ಚಾಗಲಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ಕಿರು ಸಂದೇಶಗಳಲ್ಲಿ...: ಚುನಾವಣಾ ಆಯೋಗ ಆರಂಭಿಸಿರುವ `ವ್ಯವಸ್ಥಿತ ಮತದಾರ ಶಿಕ್ಷಣ ಹಾಗೂ ಮತದಾನದಲ್ಲಿ ಭಾಗವಹಿಸುವಿಕೆಯ ಯೋಜನೆ (ಎಸ್‌ವಿಇಇಪಿ)' ಕಾರ್ಯಕ್ರಮದ ಅಡಿ, ಆಂದೋಲನದ ರೀತಿಯಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. `ನಂದಿನಿ' ಹಾಲಿನ ಪಾಕೆಟ್ ಮೇಲೆ ಮತದಾನ ಸಂದೇಶದ ಪ್ರಚಾರ, ಮೊಬೈಲ್‌ಗಳಿಗೆ `ಎಸ್‌ಎಂಎಸ್' ಕಳುಹಿಸುವ ಮೂಲಕ ಅರಿವು ಮೂಡಿಸಲು ಸರ್ಕಾರದ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು `ಸ್ವೀಪ್' ಜಿಲ್ಲಾ ಸಮಿತಿಯ ಅಧ್ಯಕ್ಷ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಬಿ. ಹೇಮಚಂದ್ರ `ಪ್ರಜಾವಾಣಿ'ಗೆ ತಿಳಿಸಿದರು.

`ಸ್ವೀಪ್' ಅನುಷ್ಠಾನಕ್ಕೆ ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರನ್ನು `ಮಾಸ್ಟರ್ ಟ್ರೇನರ್ಸ್‌' ಎಂದು ನೇಮಿಸಲಾಗಿದೆ. ಅವರು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು, ಸ್ವಸಹಾಯ ಗುಂಪುಗಳು, ಮತಗಟ್ಟೆ ಅಧಿಕಾರಿಗಳು, ನಾಗರಿಕ ಹಿತರಕ್ಷಣಾ ಸಮಿತಿ, ಕಾಲೇಜುಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡುವರು. ಆಯೋಗದ ಸೂಚನೆಯಂತೆ, `ಮೆಗಾ ಈವೆಂಟ್ಸ್' ಕಾರ್ಯಕ್ರಮದ ಅಡಿ, ಮೋಟಾರ್ ಬೈಕ್, ಬೈಸಿಕಲ್  ರ‍್ಯಾಲಿ ಆಯೋಜಿಸಲಾಗುವುದು.

ಹಳ್ಳಿಗಳಲ್ಲಿ ಕಲಾತಂಡಗಳ ಕಾರ್ಯಕ್ರಮಗಳ ಮೂಲಕ ಆಂದೋಲನ ನಡೆಸಲಾಗುವುದು. ಅರ್ಹ ಮತದಾರರಿಗೆ `ಪ್ರಮಾಣವಚನ' ಬೋಧಿಸಲಾಗುವುದು ಎಂದು ತಿಳಿಸಿದರು.

ಮನೆಗೊಂದು ಸ್ಟಿಕ್ಕರ್...
ಮೇ 5ರಂದು ಕಡ್ಡಾಯವಾಗಿ ಮತ ಹಾಕಬೇಕು ಎಂಬ ಮಾಹಿತಿ ಇರುವ ಹಾಗೂ ಮತದಾನದ ಮಹತ್ವ ಸಾರುವ ವಿವಿಧ ಘೋಷಣೆ ಒಳಗೊಂಡ ಸ್ಟಿಕ್ಕರ್‌ಗಳನ್ನು ಪ್ರತಿ ಮನೆಗೂ ಅಂಟಿಸಬೇಕು ಎಂದು ಗ್ರಾಮ ಪಂಚಾಯ್ತಿಗಳಿಗೆ ಜವಾಬ್ದಾರಿ ನೀಡಲಾಗಿದೆ.

2008ರ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿರುವ ಪ್ರದೇಶಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮತದಾನ ಪ್ರಮಾಣ ಕಡಿಮೆಯಾಗುವುದಕ್ಕೆ ಏನು ಕಾರಣ? ಯಾವುದಾದರೂ ರಾಜಕೀಯ ಪಕ್ಷದ ಒತ್ತಡ ಕಾರಣವೇ? ಭಯ ಕಾರಣವೇ? ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ನಿರ್ಭೀತವಾಗಿ ಮತ ಚಲಾಯಿಸಬೇಕು; ಇದಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಅಲ್ಲಿನ ನಿವಾಸಿಗಳಲ್ಲಿ ಧೈರ್ಯ ತುಂಬಲಾಗುವುದು. ಇದಕ್ಕಾಗಿ ಮತಗಟ್ಟೆವಾರು ಮತದಾರರ ಪಟ್ಟಿಯನ್ನು `ಅರಿವು ಕಾರ್ಯಕ್ರಮ'ದ ನಿಯೋಜಿತ ಸಿಬ್ಬಂದಿಗೆ ನೀಡಲಾಗುವುದು ಎಂದು ಹೇಮಚಂದ್ರ ವಿವರಿಸಿದರು.

ಹಳ್ಳಿಗಳಿಗೆ ಹೋಲಿಸಿದರೆ, ನಗರದಲ್ಲೇ ಮತದಾನ ಪ್ರಮಾಣ ಕಡಿಮೆಯಾಗುವುದು ಕಂಡುಬಂದಿದೆ. ಹೀಗಾಗಿ, ಆಯಾ ಭಾಗದ ಸಾಹಿತಿಗಳು, ಪ್ರಜ್ಞಾವಂತ ನಾಗರಿಕರ ವೇದಿಕೆ, ರಾಜಕೀಯೇತರ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT