ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ನಿಮ್ಮ ಹಕ್ಕು ಮತ್ತು ಕರ್ತವ್ಯ

Last Updated 3 ಏಪ್ರಿಲ್ 2013, 9:29 IST
ಅಕ್ಷರ ಗಾತ್ರ

ಹಾಸನ: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಂಗಳವಾರ ನಗರದಲ್ಲಿ ಕಾಲ್ನಡಿಗೆ ಜಾಥಾ ಆಯೋಜಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ, ಅಲ್ಲಿಂದ ವಿವಿಧ ಜಾಗೃತಿ ಫಲಕಗಳನ್ನು ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.

ಜಾಥಾದಲ್ಲಿ ಮತದಾನ ಕುರಿತು ಕಲಾವಿದರು ಪ್ರದರ್ಶಿಸಿದ ಬೀದಿ ನಾಟಕ ಮತ್ತು ಜಾನಪದ ವಾದ್ಯ ಮೇಳ ಗಮನ ಸೆಳೆಯಿತು.ಕಾಲೇಜು ವಿದ್ಯಾರ್ಥಿಗಳು, ಸ್ತ್ರೀಶಕ್ತಿ ಸಂಘಗಳ ಸದಸ್ಯರು ಘೋಷಣಾ ಫಲಕಗಳನ್ನು ಹಿಡಿದು ಸಾಗಿದರೆ ವಾರ್ತಾ ಇಲಾಖೆಯವರು ವಾಹನಕ್ಕೆ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಪತ್ರಗಳನ್ನು ಅಳವಡಿಸಿ ಮೆರವಣಿಗೆ ನಡೆಸಿದರು.

`ಕಡ್ಡಾಯವಾಗಿ ಮತ ಹಾಕಿ'
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡೋಲು ಬಾರಿಸುವ  ಮೂಲಕ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್, `ಮೇ 5ರಂದು ನಡೆಯುವ ಸಾರ್ವತ್ರಿಕ ಚುನಾವಣೆ ಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಹಾಕುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು' ಎಂದರು.

`ಯಾವ ಮತದಾರನೂ ಮತದಾನದ ಹಕ್ಕಿನಿಂದ ವಂಚಿತನಾಗದಂತೆ ಎಚ್ಚರ ವಹಿಸಲಾಗು ತ್ತಿದೆ. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಬಯಸುವವರು ಏಪ್ರಿಲ್ 7ರೊಳಗೆ ಸಂಬಂಧಪಟ್ಟ ತಹಶೀಲ್ದಾರರ ಕಚೇರಿಗೆ ನಮೂನೆ 6ರಲ್ಲಿ ಅರ್ಜಿ ಸಲ್ಲಿಸಬಹುದು. ಈಗಾ ಗಲೇ ನೋಂದಣಿ ಮಾಡಿಸಿರುವವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು'  ಎಂದು ತಿಳಿಸಿದರು.

`ಸ್ವೀಪ್' ಕಾರ್ಯಕ್ರಮದಡಿ ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ವಾರ್ತಾ ಇಲಾಖೆ ಸಂಚಾರಿ ವಾಹನವು ಬೀದಿ ನಾಟಕದ ತಂಡದೊಂದಿಗೆ ಸಂಚರಿಸಿ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿದೆ.

ಮಂಗಳವಾರವೂ ನಗರದಲ್ಲಿ ಒಂದು ಬೀದಿ ನಾಟಕ ಪ್ರದರ್ಶನ ಮಾಡಲಾಯಿತು. ಮತದಾರರ ಜಾಗೃತಿಗಾಗಿ ಏರ್ಪಡಿಸಿದ್ದ ಸ್ತಬ್ಧಚಿತ್ರ ಆಕರ್ಷಣೆಯ ಕೇಂದ್ರವಾಗಿತ್ತು.

ಇದೇ ವೇಳೆ ಮತದಾರರ ಪಟ್ಟಿಗೆ ಸೇರ್ಪಡೆ ಗೊಳ್ಳದ 18 ವರ್ಷ ತುಂಬಿದ ಯುವಕ/ಯುವತಿ ಯರಿಗೆ ನಮೂನೆ 6ನ್ನು ವಿತರಿಸಿ ಭರ್ತಿ ಮಾಡಿ ಸ್ವೀಕರಿಸುವ ಕಾರ್ಯವೂ ನಡೆಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎನ್. ಗೋಪಾಲ ಕೃಷ್ಣ, ಉಪವಿಭಾಗಾಧಿಕಾರಿ ಜಗದೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ಯಾಮಲಾದೇವಿ, ತಹಶೀಲ್ದಾರ ಮಂಜುನಾಥ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಹಾಗೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT