ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮತದಾನ ವಂಚಿತರತ್ತ' ಆಯೋಗದ ಕೃಪೆ

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ದೇಶ ರಕ್ಷಣೆ ಸಲುವಾಗಿ ವಿವಿಧ ಕಡೆ ನಿಯೋಜನೆಗೊಂಡಿರುವ ರಾಜ್ಯದ ಸೈನಿಕರು, ಅರೆಸೇನಾ ಪಡೆಯ ಸಿಬ್ಬಂದಿ (ಸೇವಾ ಮತದಾರರು) ಹಾಗೂ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಯ ಮತದಾನಕ್ಕೆ ಚುನಾವಣಾ ಆಯೋಗ ಈ ಸಲ ವಿಶೇಷ ಕಾಳಜಿ ವಹಿಸಿದೆ.

ದೇಶ ಸೇವೆಯಲ್ಲಿ ತೊಡಗಿರುವ ಸೈನಿಕರು ಚುನಾವಣೆ ಸಲುವಾಗಿ ರಜೆ ಹಾಕಿ ಬರುವುದು ಕಷ್ಟ.  ಈ ಕಾರಣಕ್ಕೆ ಅವರಿಗೆ ಇದ್ದ ಸ್ಥಳದಿಂದಲೇ ಅಂಚೆ ಮೂಲಕ ಮತದಾನ ಮಾಡುವ ಅವಕಾಶವನ್ನು ಆಯೋಗ ಕಲ್ಪಿಸಿದೆ.

ಈ ನಿಯಮ ಹೊಸದೇನೂ ಅಲ್ಲ. ಆದರೆ, ಸಮರ್ಪಕವಾಗಿ ಜಾರಿ ಆಗುತ್ತಿರಲಿಲ್ಲ ಎನ್ನುವ ಕೊರಗು ಮೊದಲಿನಿಂದಲೂ ಇದೆ. ಸಮಯಕ್ಕೆ ಸರಿಯಾಗಿ ಅಂಚೆ ತಲುಪದಿರುವುದು, ತಲುಪಿದರೂ ನಿಯಮ ಪ್ರಕಾರ ಮತದಾನ ಮಾಡದಿರುವುದು... ಹೀಗೆ ನೂರೆಂಟು ಸಮಸ್ಯೆಗಳಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ಆಗುತ್ತಿರಲಿಲ್ಲ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಬಹುತೇಕ ಸಿಬ್ಬಂದಿ ಕೂಡ ಇದೇ ಸಮಸ್ಯೆ ಎದುರಿಸುತ್ತಿದ್ದರು.

ಇದಕ್ಕೆ ಪರಿಹಾರ ಕಲ್ಪಿಸಬೇಕು ಎನ್ನುವ ಕಾರಣಕ್ಕೆ ಈ ಸಲ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ ಮತಪತ್ರ ಸಿದ್ಧಪಡಿಸಿ, ಅದನ್ನು ತ್ವರಿತವಾಗಿ ಸೇವಾ ಮತದಾರರಿಗೆ ತಲುಪಿಸುವ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಅಂಚೆ ಇಲಾಖೆ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ `ಪ್ರಜಾವಾಣಿ'ಗೆ ತಿಳಿಸಿದರು.


ವಿಶೇಷ ಕ್ರಮದಿಂದಾಗಿ ಅಂಚೆ ಮೂಲಕ ಮತದಾನ ಮಾಡಿದವರ ಸಂಖ್ಯೆ ಗುಜರಾತ್ ಚುನಾವಣೆಯಲ್ಲಿ ಶೇ 90ರಷ್ಟು ದಾಟಿತ್ತು. ಇದೇ ವ್ಯವಸ್ಥೆ ರಾಜ್ಯದಲ್ಲೂ ಜಾರಿ ಮಾಡಲಾಗುವುದು ಎಂದು ಆಯೋಗದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಒಟ್ಟು 36,726 (ಪುರುಷರು 27,944, ಮಹಿಳೆಯರು 8,782) ಸೇವಾ ಮತದಾರರು ಇದ್ದಾರೆ. ಚುನಾವಣಾ ಕರ್ತವ್ಯಕ್ಕೆ ಸ್ಥಳೀಯ ಮಟ್ಟದಲ್ಲಿ ಸುಮಾರು ಮೂರು ಲಕ್ಷ ಮಂದಿ ನಿಯೋಜನೆಗೊಳ್ಳುವ ಸಾಧ್ಯತೆ ಇದೆ. ಚುನಾವಣೆ ಸಲುವಾಗಿ ದುಡಿಯುವ ಪೊಲೀಸ್ ಸಿಬ್ಬಂದಿ, ಖಾಸಗಿ ವಾಹನಗಳ ಚಾಲಕರು ಮತ್ತು ಸಿಬ್ಬಂದಿ ಕೂಡ ಇದರಲ್ಲಿ ಸೇರಿದ್ದಾರೆ ಎನ್ನುವುದು ವಿಶೇಷ. ಮತದಾನದಿಂದ ಯಾರೂ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಎಲ್ಲ ರೀತಿಯ ಮುಂಜಾಗ್ರತೆ ವಹಿಸಲಾಗಿದೆ ಎನ್ನುತ್ತಾರೆ ಝಾ.
ಅಂಚೆ ಮೂಲಕ ಹೇಗೆ?: ಸೇವಾ ಮತದಾರರು ಇದ್ದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪ್ರತ್ಯೇಕ ಮತದಾರರ ಪಟ್ಟಿ ಇರುತ್ತದೆ. ಅವರು ಎಲ್ಲಿ? ಯಾವ ವಿಭಾಗ/ ಕೇಂದ್ರದಡಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಕೂಡ ಇರುತ್ತದೆ. ಅಂತಹ ಜಾಗಕ್ಕೆ ಅಂಚೆ ಮೂಲಕ ಮತಪತ್ರ ಕಳುಹಿಸುವುದು ಆಯೋಗದ ಕರ್ತವ್ಯ.

ನಾಮಪತ್ರಗಳ ಪರಿಶೀಲನೆ ಮತ್ತು ಅವುಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ನಂತರ 48 ಗಂಟೆಗಳ ಒಳಗೆ ಚಿಹ್ನೆ ಇಲ್ಲದ ಮತ ಪತ್ರವನ್ನು ಸಂಬಂಧಪಟ್ಟ ಮತದಾರನಿಗೆ ಅಂಚೆ ಮೂಲಕ ಕಳುಹಿಸಬೇಕು. ಮತಪತ್ರದ ಜತೆಗೇ ಒಂದು ಪ್ರಮಾಣ ಪತ್ರ ಕೂಡ ಇರುತ್ತದೆ. ಪ್ರಮಾಣ ಪತ್ರದಲ್ಲಿ `ನಾನೇ ಆ ಮತದಾರ' ಎಂಬುದನ್ನು ಖಾತರಿಪಡಿಸಬೇಕು. ಮೇಲಧಿಕಾರಿಯ ಸಹಿಯನ್ನೂ ಅದಕ್ಕೆ ಹಾಕಿಸಬೇಕು (ಸಹಿ ಇಲ್ಲದಿದ್ದರೆ ಅದಕ್ಕೆ ಮಾನ್ಯತೆ ಇರುವುದಿಲ್ಲ).

ಚಿಹ್ನೆ ಇಲ್ಲದ ಮತಪತ್ರದಲ್ಲಿ ಅಭ್ಯರ್ಥಿಯ ಹೆಸರು ಮತ್ತು ಪಕ್ಷದ ಹೆಸರು ಮಾತ್ರ ಇರುತ್ತದೆ. ಪಕ್ಷೇತರರಾಗಿದ್ದಲ್ಲಿ `ಪಕ್ಷೇತರ' ಎಂದು ಇರುತ್ತದೆ. ಅಭ್ಯರ್ಥಿಯ ಹೆಸರಿನ ಮುಂದೆ  ರೈಟ್ ಮಾರ್ಕ್' ಹಾಕುವುದರ ಮೂಲಕ ಮತದಾನ ಮಾಡಬೇಕು. ಬಳಿಕ ಮತಪತ್ರವನ್ನು ಗುಲಾಬಿ ಬಣ್ಣದ ಕವರ್‌ಗೆ ಹಾಕಿ ಪ್ಯಾಕ್ ಮಾಡಬೇಕು. ಬಿಳಿ ಬಣ್ಣದ ಕವರ್‌ಗೆ ಪ್ರಮಾಣ ಪತ್ರ ಹಾಕಬೇಕು. ಈ ಎರಡೂ ಕವರ್‌ಗಳನ್ನು ಮತ್ತೊಂದು ದೊಡ್ಡ ಕವರ್‌ಗೆ ಹಾಕಿ, ಸಂಬಂಧಪಟ್ಟ ವಿಧಾನಸಭೆಯ ಚುನಾವಣಾಧಿಕಾರಿಗೆ ಕಳುಹಿಸಬೇಕು. ಮತ ಎಣಿಕೆ ದಿನ ಇವೆಲ್ಲವೂ ತೆರೆದು, ಎಣಿಕೆ ಮಾಡಲಾಗುತ್ತದೆ. ಎಣಿಕೆ ಸಂದರ್ಭದಲ್ಲಿ ಅಂಚೆ ಬಂದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎನ್ನುವುದು ನಿಯಮ.

ಚುನಾವಣಾ ಸಿಬ್ಬಂದಿಗೂ ಅಂಚೆ ಮೂಲಕ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ. ವಿವಿಧ ಹಂತದ ತರಬೇತಿ ಸಂದರ್ಭದಲ್ಲೇ ಮತ ಪತ್ರ ನೀಡಲಾಗುತ್ತದೆ. ತರಬೇತಿ ನಡೆಯುವ ಜಾಗದಲ್ಲೇ ಮತ ಪತ್ರ ಸಂಗ್ರಹಿಸುವ ವ್ಯವಸ್ಥೆ ಕೂಡ ಇರುತ್ತದೆ. ಇದರಿಂದ ಯಾರೂ ಮತದಾನದಿಂದ ವಂಚಿತರಾಗುವುದಿಲ್ಲ ಎನ್ನುತ್ತಾರೆ ಝಾ.

ರೌಡಿಗಳಿಗೂ ಮತದಾನದ ಅವಕಾಶ

ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡಿರುವ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳಿಗೂ ಈ ಸಲ ಮತದಾನಕ್ಕೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಅವರು ಇರುವ ಜೈಲುಗಳಿಗೇ ಮತಪತ್ರ ತಲುಪಿಸಿ, ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇದು ಕೂಡ ಒಂದು ರೀತಿ ಅಂಚೆ ಮೂಲಕ ನಡೆಯುವ ಮತದಾನ ಎಂದು ಆಯೋಗದ ಮೂಲಗಳು ತಿಳಿಸಿವೆ.

ಸೇವಾ ಮತದಾರರು

ರಾಜ್ಯದಲ್ಲಿ ಒಟ್ಟು 36,726 ಮಂದಿ ಸೇವಾ ಮತದಾರರು ಇದ್ದಾರೆ. ಅತಿ ಹೆಚ್ಚು ಅಂದರೆ 14,728 ಮಂದಿ ಬೆಳಗಾವಿ ಜಿಲ್ಲೆ ಒಂದರಲ್ಲೇ ಇದ್ದು, ಎಲ್ಲರಿಗೂ ಮತಪತ್ರ ತಲುಪಿಸುವುದಕ್ಕೆ ಆಯೋಗ ವ್ಯವಸ್ಥೆ ಮಾಡಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 2,203, ಕೋಲಾರ ಜಿಲ್ಲೆಯಲ್ಲಿ 2,007 ಮತದಾರರು ಇದ್ದಾರೆ. ಅತಿ ಕಡಿಮೆ ಅಂದರೆ 75 ಮಂದಿ ಮತದಾರರು ಇರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಂದು ಆಯೋಗದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT