ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ವಾಗ್ದಾನ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಚುನಾವಣೆ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ ಅಸಮರ್ಥ ಅಭ್ಯರ್ಥಿ ಆಯ್ಕೆಯಾದರೆ ಎದುರಾಗಬಹುದಾದ ಚುನಾವಣೋತ್ತರ ಪರಿಣಾಮಗಳನ್ನು ಸರಿಯಾಗಿಯೇ ಊಹಿಸಿರುವ ಒಂದಿಷ್ಟು ಸಮಾಜಮುಖಿ ಮನಸ್ಸುಗಳು ನಗರದಲ್ಲಿ ಅಭಿಯಾನವೊಂದನ್ನು ಶುರು ಮಾಡಿವೆ. ನೀವೂ ಮತ ಚಲಾಯಿಸಿ ಎಂಬ ಹಕ್ಕೊತ್ತಾಯವದು.

‘ನಿಮ್ಮಂತಹ ಒಳ್ಳೆಯವರು ವೋಟ್ ಮಾಡದಿರುವುದಕ್ಕೇ ಕೆಟ್ಟ ಜನನಾಯಕರು ಆಳ್ವಿಕೆ ಮಾಡುತ್ತಿದ್ದಾರೆ ಮತ್ತು ಭ್ರಷ್ಟಾಚಾರ ನಡೆಸುತ್ತಿದ್ದಾರೆ’ ಎಂಬ ಒಕ್ಕಣೆಯಿರುವ ಕರಪತ್ರಗಳು ಬೆಳ್ಳಂಬೆಳಗ್ಗೆ ದಿನಪತ್ರಿಕೆಗಳ ಒಡಲಲ್ಲಿ ಬಚ್ಚಿಟ್ಟುಕೊಂಡು ನಗರದ ಮನೆಗಳಿಗೆ ತಲುಪುತ್ತಿವೆ; ಜೊತೆಗೆ ಮನಸ್ಸುಗಳನ್ನೂ ತಟ್ಟುತ್ತಿವೆ.

ಕರಪತ್ರ ಓದಿದ ಪ್ರತಿ ಮತದಾರನೂ ಮರುಕ್ಷಣವೇ ಆತ್ಮಾವಲೋಕನ ಮಾಡಿಕೊಳ್ಳುವುದಂತೂ ನಿಜ. ವೋಟ್ ಮಾಡದವರಿಗೂ ಅದು ಆತ್ಮನಿರೀಕ್ಷಣೆಯ ಹೊತ್ತು ಮಾತ್ರವಲ್ಲ, ತಮ್ಮ ಮನೆ ಬಳಿಯ ಮೋರಿ ದುರಸ್ತಿಯಲ್ಲಿ ಜನನಾಯಕರು ವಂಚನೆ ಮಾಡಿರುವುದರಲ್ಲಿ ಪರೋಕ್ಷವಾಗಿ ತನ್ನ ಪಾಲೂ ಇದೆ; ಒಳ್ಳೆಯವರನ್ನು ಆರಿಸದ್ದಿದ್ದರೆ ಇಂತಹ ಅಚಾತುರ್ಯಗಳಿಗೆ ಎಡೆ ಇರುತ್ತಿರಲಿಲ್ಲವಲ್ಲ ಎಂಬ ಪಶ್ಚಾತ್ತಾಪ ಆಗದೇ ಇರದು. ಈ ಭಾವವೇ ಮುಂದಿನ ಬಾರಿ ಅವರನ್ನು ಮತ ಚಲಾಯಿಸುವಂತೆ ಪ್ರೇರೇಪಿಸುತ್ತದೆ.

ಪ್ಲೆಜ್‌ 2 ವೋಟ್
ಈ ಬಾರಿ ನಾನೂ ಮತ ಚಲಾಯಿಸುತ್ತೇನೆ ಎಂಬ ವಾಗ್ದಾನ ನೀಡುವಂತೆ ಆಹ್ವಾನ ನೀಡಿರುವುದು ‘ಐ ಪ್ರೆಜ್ ಟು ವೋಟ್’ ಎಂಬ ವೇದಿಕೆ. ಇದರ ಸ್ಥಾಪಕ ವಿಜಯ್ ಗ್ರೋವರ್ ಅವರು. ಜೊತೆಯಲ್ಲಿರೋದು ವಿಕ್ರಮ್ ಶೆಟ್ಟಿ, ರಾಜೇಶ್ ಪಾಂಡೆ, ವಿಜಯಲಕ್ಷ್ಮಿ ಪಾಂಡೆ ಮುಂತಾದ ಸಮಾನಮನಸ್ಕರು.

‘ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕು ಪಡೆದವರಿಗೆ ಮತದಾನ ಮಾಡುವ ಬೆರಗನ್ನು ಅನುಭವಿಸುವ ಕಾತರವಿರುತ್ತದೆ. ಮತ ಚಲಾಯಿಸುವ ಪ್ರಕ್ರಿಯೆಯನ್ನು ಒಂದು ಬಾರಿ ಅನುಭವಿಸುವ ಖುಷಿ ಅದು. ಹೀಗಾಗಿ ಮೊದಲ ಮತದಾನಕ್ಕೆ ಟೀನೇಜರ್‍ಸ್ ಸದಾ ಮುಂದೆ ಇರುತ್ತಾರೆ. ಇದು ಆ ವಯಸ್ಸಿನ ಬಹುತೇಕ ಮತದಾರರ ಮನಸ್ಥಿತಿ.

ಆದರೆ ಮುಂದಿನ ಚುನಾವಣೆಗೆ ಅದೇ ಉತ್ಸಾಹ ಅವರಲ್ಲಿರುತ್ತದೆ ಎಂದು ಹೇಳಲಾಗದು. ಇದು ಹೊಸಬರ ವಿಚಾರವಾದರೆ, ಯುವಕರು ವೋಟ್ ಮಾಡಿ ಏನು ಮಾಡಬೇಕಾಗಿದೆ, ನಾನೊಬ್ಬ ವೋಟ್ ಹಾಕದಿದ್ದರೆ ಏನೂ ನಷ್ಟವಾಗುವುದಿಲ್ಲ ಎಂಬ ಉದಾಸೀನದಿಂದ ಮತಗಟ್ಟೆ ಕಡೆ ತಲೆಹಾಕುವುದಿಲ್ಲ. ಆದರೆ ಯಾವುದೇ ದೇಶ ಉದ್ಧಾರವಾಗಬೇಕಾದರೆ ಯುವಶಕ್ತಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ಉದ್ಧಾರವೆಂದರೇನು? ಸದ್ಯದ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರದಿಂದ ಮುಕ್ತವಾಗುವುದು. ಇದಕ್ಕೆ ಉತ್ತಮ ಆಡಳಿತ ಬೇಕು. ಸನ್ನಡತೆಯ, ಸಮಾಜಮುಖಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡದ ಹೊರತು ಉತ್ತಮ ಆಡಳಿತ ಹೇಗೆ ನಿರೀಕ್ಷಿಸೋದು? ಅಂತಹ ವ್ಯಕ್ತಿಯ ಗೆಲುವಿಗೆ ನಮ್ಮ ಒಂದೊಂದು ಮತವೂ ಅಮೂಲ್ಯವಾಗುತ್ತದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದೇ ನಮ್ಮ ಉದ್ದೇಶ’ ಎಂದು ಅಭಿಯಾನದ ಬಗ್ಗೆ ವಿವರಿಸುತ್ತಾರೆ, ವಿಜಯ್ ಗ್ರೋವರ್.

ಮಿಸ್ ಕಾಲ್‌ ಕೊಡಿ
ವೇದಿಕೆ ಕಳೆದ ಬಾರಿ ಬ್ರಿಗೇಡ್ ರಸ್ತೆ, ಕೋರಮಂಗಲ ಮುಂತಾದೆಡೆ ರಸ್ತೆ ಬದಿಗಳಲ್ಲಿ, ಜಂಕ್ಷನ್ ಹಾಗೂ ಮಾಲ್‌ಗಳಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ಕೈಗೊಂಡಿತ್ತು. ೩8ಸಾವಿರ ಮಂದಿ ಸಹಿ ಹಾಕುವ ಮೂಲಕ ಮತದಾನದ ವಾಗ್ದಾನ ನೀಡಿದ್ದರು. ಫೇಸ್‌ಬುಕ್, ಯೂಟ್ಯೂಬ್, ಲಿಂಕ್ಡ್ ಇನ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕವೂ ಅಭಿಯಾನದ ಬಗ್ಗೆ ಸಂದೇಶ ರವಾನಿಸಲಾಗಿತ್ತು.


‘ಈ ಬಾರಿ ಕರಪತ್ರ ಹಾಗೂ ಮಿಸ್ ಕಾಲ್ (080 6726 4726) ಕೊಟ್ಟು ನಿಮ್ಮ ಬದ್ಧತೆಯನ್ನು ವ್ಯಕ್ತಪಡಿಸಿ ಎಂಬ ವಿಶಿಷ್ಟ ಅಭಿಯಾನವನ್ನು ಶುರು ಮಾಡಿದ್ದೇವೆ. ಈಗಾಗಲೇ ಕರಪತ್ರಗಳಲ್ಲಿ ಸೂಚಿಸಿರುವ ಸಂಖ್ಯೆಗೆ ಒಂದೇ ದಿನದಲ್ಲಿ ೭೦೦ಕ್ಕೂ ಮಿಕ್ಕಿ ಮಿಸ್ ಕಾಲ್ ಬಂದಿವೆ. ನಮ್ಮ ತಂಡದ ಸದಸ್ಯರು ಆ ಸಂಖ್ಯೆಗಳಿಗೆ ಕರೆ ಮಾಡಿ ಅವರ ಅಭಿಪ್ರಾಯ, ಅನುಭವಗಳನ್ನು ಸಂಗ್ರಹಿಸುತ್ತಾರೆ’ ಎಂದು ಮಾಹಿತಿ ನೀಡುತ್ತಾರೆ, ರಾಜೇಶ್ ಪಾಂಡೆ.

ಮಿಸ್ ಕಾಲ್ ಯಾಕೆ ಎಂದು ಕೇಳಿದರೆ, ಕರೆ ಮಾಡಿ ಹಣ ವ್ಯರ್ಥ ಮಾಡುವುದೇಕೆ ಎಂದು ಭಾವಿಸುವವರು ನಾವು. ಅದಕ್ಕಾಗಿ ನೀವು ಮಿಸ್ ಕಾಲ್ ಕೊಡಿ ನಾವು ಕರೆ ಮಾಡುತ್ತೇವೆ ಎಂಬ ‘ಕೊಡುಗೆ’ಯನ್ನು ಮತದಾರರ ಮುಂದಿಟ್ಟಿದ್ದೇವೆ ಎಂದು ನಗುತ್ತಾರೆ ವಿಜಯ್.
ಕೊನೆಯಲ್ಲಿ ಒಂದು ಮಾತು; ನೀವು ವೋಟ್ ಮಾಡಿಲ್ಲವೇ? ಹಾಗಿದ್ದರೆ ತಪ್ಪುಗಳನ್ನು ಎತ್ತಿತೋರುವ, ಭ್ರಷ್ಟಾಚಾರ ರಹಿತ ಆಡಳಿತದ ಬಗ್ಗೆ ಮಾತನಾಡಲು ನಿಮಗ್ಯಾವುದೇ ಹಕ್ಕು ಇಲ್ಲ’ ಎಂಬ ಮರ್ಮಾಘಾತದ ಮಾತನ್ನು ಈ ವೇದಿಕೆ ಹೇಳುತ್ತಿದೆ. ಈಗ ನೀವು ಹೇಳಿ... ಕಳೆದ ಬಾರಿ ವೋಟ್ ಮಾಡದ ನೀವು ಮುಂದಿನ ಬಾರಿಯೂ ಅದೇ ತಪ್ಪು ಮಾಡುತ್ತೀರಾ? ಅಥವಾ ಉತ್ತಮ ಅಭ್ಯರ್ಥಿಯ ಆಯ್ಕೆಗಾಗಿ ವೋಟ್ ಮಾಡಿ ಹೆಮ್ಮೆಯಿಂದ ತಲೆಯೆತ್ತಿ ನಡೆಯುತ್ತೀರಾ?

ಹಾಗಿದ್ದರೆ, 080 6726 4726ಗೆ ಮಿಸ್ ಕಾಲ್ ಕೊಡಿ! ಇನ್ನಷ್ಟು ಮಾಹಿತಿ ಬೇಕಿದ್ದರೆ ಲಾಗಾನ್ ಆಗಿ: www.pledge2vote.org

ಟೆಕ್ಕಿಗಳ ಉಮೇದು
ಐಟಿ ನಗರವಾಗಿರುವ ಬೆಂಗಳೂರಿನಲ್ಲಿ ಆರಂಭಿಸಿರುವ ಮತ ಜಾಗೃತಿ ಅಭಿಯಾನಕ್ಕೆ ಟೆಕ್ಕಿಗಳಿಂದ ಅತ್ಯುತ್ತಮ ಸ್ಪಂದನ ದೊರಕಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ‘ಪ್ಲೆಜ್ ಟು ವೋಟ್’ ವೇದಿಕೆಯವರು.

ವಿದ್ಯಾವಂತರು, ಯುವಜನರು ಮತ ಚಲಾಯಿಸಬೇಕು ಎಂಬುದು ಈ ಮತ ಜಾಗೃತಿಯ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ನಾವು ಕೈಗೊಂಡಿರುವ ಅಭಿಯಾನಕ್ಕೆ ಸಾಫ್ಟ್‌ವೇರ್ ಕ್ಷೇತ್ರದಿಂದ ದೊರೆತಿರುವ ಪ್ರತಿಕ್ರಿಯೆ ನಮ್ಮ ಕಲ್ಪನೆಗೂ ಮೀರಿದ್ದು. ಮಾತ್ರವಲ್ಲ, ಹಣಕಾಸಿನ ನೆರವು ನೀಡಲೂ ಅವರು ಮುಂದಾಗುತ್ತಿದ್ದಾರೆ. ಐಟಿಪಿಎಲ್ ವ್ಯಾಪ್ತಿಯಲ್ಲಿ ನಡೆಸಿರುವ ಜಾಗೃತಿ ಕಾರ್ಯಕ್ರಮಗಳೂ ಯಶಸ್ವಿಯಾಗಿವೆ. ಜನವರಿ ಆರರಂದು ಮತ ಜಾಗೃತಿಗಾಗಿ ಸೈಕಲ್ ಜಾಥಾ ಕೂಡಾ ನಡೆಯಲಿದೆ. ಅಖಿಲ ಭಾರತ ಐಟಿ ಉದ್ಯೋಗಿಗಳ ಸಂಘದ ಬೆಂಗಳೂರು ಶಾಖೆ ಇದಕ್ಕೆ ನಮ್ಮೊಂದಿಗೆ ಕೈಜೋಡಿಸಿದೆ ಎನ್ನುತ್ತಾರೆ, ವಿಜಯ್ ಗ್ರೋವರ್.

‘ಪ್ಲೆಜ್ ಟು ವೋಟ್’ ವೇದಿಕೆಯ ಸಿದ್ಧಾಂತದಲ್ಲಿ ಮತ್ತೊಂದು ವಿಶೇಷವಿದೆ. ಅದು, ‘ನಮಗೆ ನಗದು ಕೊಡಬೇಡಿ. ನೀವು ಒಂದಿಷ್ಟು ಕರಪತ್ರಗಳನ್ನು ಮುದ್ರಿಸಿಕೊಡಿ’ ಅಂತಾರೆ ಅವರು. ಎಂ.ಎಸ್. ರಾಮಯ್ಯ ಕಾಲೇಜು, ಕಾರ್ಮೆಲ್ ಕಾಲೇಜೂ ಸೇರಿದಂತೆ ಒಂದಷ್ಟು ಕಾಲೇಜುಗಳಲ್ಲಿಯೂ ಮತ ವಾಗ್ದಾನ ಅಭಿಯಾನ ನಡೆದಿದೆ. ಅಲ್ಲಿ ಸಿಕ್ಕಿದ ಪ್ರತಿಕ್ರಿಯೆಯೂ ಉತ್ತಮವಾಗಿತ್ತು ಎನ್ನುತ್ತದೆ ಈ ತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT