ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರ ಪ್ರಭುವಿನ ಓಲೈಕೆಗೆ ಯತ್ನ

ಮತದಾರರ ಮನೆ ಬಾಗಿಲಿಗೆ ಅಭ್ಯರ್ಥಿಗಳು
Last Updated 20 ಏಪ್ರಿಲ್ 2013, 12:37 IST
ಅಕ್ಷರ ಗಾತ್ರ

ತುಮಕೂರು: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮುಕ್ತಾಯ ಕಂಡಿದೆ. ಈಗೇನಿದ್ದರೂ ಮತದಾರ ಪ್ರಭುವನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ಮುಂದಾಗಿದ್ದಾರೆ.

ನಾಮಪತ್ರ ಸಲ್ಲಿಕೆ ಮುಗಿಯುತ್ತಿದ್ದಂತೆ ಪ್ರಚಾರ ಬಿರುಸು ಪಡೆದುಕೊಂಡಿದೆ. ನಗರ ಪ್ರದೇಶದಲ್ಲಿ ಅಭ್ಯರ್ಥಿಗಳು ಮನೆ-ಮನೆಗೆ ತೆರಳಿ ಕೈಮುಗಿದು ಮತ ಕೇಳುತ್ತಿರುವುದು ಕಂಡುಬರುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಹಳ್ಳಿಗಳಿಗೆ ಭೇಟಿನೀಡಿ ಸಭೆ ನಡೆಸಿ ಓಟು ಕೇಳುವ ಕೆಲಸ ಆರಂಭವಾಗಿದೆ. ಎಲ್ಲೂ ಅಬ್ಬರದ ಪ್ರಚಾರ ಕಾಣಸಿಗುತ್ತಿಲ್ಲ. ಜಿಲ್ಲೆಯಲ್ಲಿ ಮಳೆಯ ಸೂಚನೆ ಕಾಣದಾಗಿದ್ದು, ಬಿರು ಬಿಸಲು ಕಾವು ಪಡೆದುಕೊಂಡಂತೆ ಪ್ರಚಾರದ ಭರಾಟೆ ಹೆಚ್ಚುತ್ತಿದೆ.

ನಾಯಕರ ಪ್ರಚಾರ: ಚುನಾವಣೆ ಚಟುವಟಿಕೆ ಆರಂಭವಾದ ನಂತರ ಯಾವ ಪಕ್ಷದ ನಾಯಕರೂ ಜಿಲ್ಲೆಯಲ್ಲಿ ಪ್ರಚಾರಕ್ಕೆ ಕಾಲಿಟ್ಟಿಲ್ಲ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಶನಿವಾರ ಜಿಲ್ಲೆಯ ವಿವಿಧೆಡೆ ಪ್ರಚಾರ ನಡೆಸಲಿದ್ದಾರೆ.

ಕಾಂಗ್ರೆಸ್ ಸಹ `ಸ್ಟಾರ್' ಮುಖಂಡರನ್ನು ಪ್ರಚಾರಕ್ಕೆ ಕರೆಸಲು ಮುಂದಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಪ್ರಚಾರಕ್ಕೆ ಆಗಮಿಸುವ ಸಾಧ್ಯತೆಗಳಿವೆ.

ಬಿಜೆಪಿ, ಕೆಜೆಪಿ ಮುಖಂಡರೂ ಸಹ ಪ್ರಚಾರಕ್ಕೆ ಆಗಮಿಸಲಿದ್ದು, ಮುಂದಿನ ದಿನಗಳಲ್ಲಿ ಪ್ರಚಾರ ಕಣ ಮತ್ತಷ್ಟು ರಂಗೇರಲಿದೆ.
ತುಮಕೂರು ನಗರದಲ್ಲಿ ಕೆಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಈಗಾಗಲೇ ಒಂದು ಸುತ್ತು ಪ್ರಚಾರ ಪೂರ್ಣಗೊಳಿಸಿದ್ದಾರೆ. ಮನೆ-ಮನೆ ಪ್ರಚಾರದ ಜತೆಗೆ ಎಪಿಎಂಸಿ ಮಾರುಕಟ್ಟೆ, ಸಿದ್ಧಿವಿನಾಯಕ ಮಾರುಕಟ್ಟೆ ಮತ್ತಿತರ ಕಡೆಗಳಿಗೆ ಭೇಟಿನೀಡಿ ಮತ ಯಾಚಿಸಿದ್ದಾರೆ.
ಕಾಂಗ್ರೆಸ್ ಟಿಕೆಟ್ ಖಚಿತವಾದ ನಂತರ ಡಾ.ರಫಿಕ್ ಅಹಮದ್ ಮನೆಗಳಿಗೆ ಭೇಟಿನೀಡಿ ಕೈಮುಗಿದು ಜನರ ಮನವೊಲಿಸಿಕೊಳ್ಳುವಲ್ಲಿ ತೊಡಗಿಸಿಕೊಂಡಿದ್ದಾರೆ.

ಸತತವಾಗಿ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಎಸ್.ಶಿವಣ್ಣ ಕಳೆದ ಒಂದೆರಡು ದಿನದಿಂದ ರಸ್ತೆಗೆ ಇಳಿದಿದ್ದಾರೆ. ಜೆಡಿಎಸ್‌ಗೆ ಇನ್ನೂ ಗೊಂದಲ ನಿವಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಪ್ರಯತ್ನಿಸಿ ಕೊನೆಗೆ ಜೆಡಿಎಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಗೋವಿಂದರಾಜು, ನಂತರದ ಬೆಳವಣಿಗೆಯಲ್ಲಿ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಸರಿಪಡಿಸುವಷ್ಟರಲ್ಲಿ ಸುಸ್ತಾಗಿದ್ದಾರೆ.
ಇನ್ನೂ ಪ್ರಚಾರಕ್ಕೆ ಈಗಷ್ಟೇ ಸಿದ್ಧರಾಗುತ್ತಿದ್ದಾರೆ. ಬಂಡಾಯವಾಗಿ ಸ್ಪರ್ಧಿಸಿದವರ ನಾಮಪತ್ರ ವಾಪಸ್ ತೆಗೆಸುವ ಕಸರತ್ತು ಮುಂದುವರಿದಿದೆ.

ಗ್ರಾಮಾಂತರ ಕ್ಷೇತ್ರದಲ್ಲೂ ಪ್ರಚಾರ ಜೋರಾಗುತ್ತಿದೆ. ಬಿಜೆಪಿಯ ಸುರೇಶ್‌ಗೌಡ, ಜೆಡಿಎಸ್‌ನ ಗೌರಿಶಂಕರ್, ಕಾಂಗ್ರೆಸ್‌ನ ಆಡಿಟರ್ ನಾಗರಾಜು, ಕೆಜೆಪಿಯ ಎಚ್.ನಿಂಗಪ್ಪ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

ಪ್ರತಿಷ್ಠಿತ ಕ್ಷೇತ್ರವೆನಿಸಿರುವ ಕೊರಟಗೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಒಂದು ಸುತ್ತು ಕ್ಷೇತ್ರ ಸುತ್ತಿ ಬಂದಿದ್ದಾರೆ. ಜೆಡಿಎಸ್‌ನ ಸುಧಾಕರ್‌ಲಾಲ್ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದರೆ, ಕೆಜೆಪಿಯ ಚಂದ್ರಯ್ಯ ಕ್ಷೇತ್ರದಲ್ಲಿ ಓಡಾಟ ಹೆಚ್ಚಿಸಿದ್ದಾರೆ.

ಮಧುಗಿರಿಗೆ ಕಾಲಿಟ್ಟಿರುವ ನಿವೃತ್ತ ಐಎಎಸ್ ಅಧಿಕಾರಿ, ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯ ನಾಮಪತ್ರ ಸಲ್ಲಿಸಿದ ದಿನದಿಂದ ಪ್ರಚಾರ ಜೋರು ಪಡೆದುಕೊಂಡಿದೆ. ಕಾಂಗ್ರೆಸ್‌ನ ಕೆ.ಎನ್.ರಾಜಣ್ಣ ಈಗಾಗಲೆ ಒಂದೆರಡು ಸುತ್ತು ಪ್ರಚಾರ ಮುಗಿಸಿದ್ದಾರೆ.

ಪಾವಗಡದಲ್ಲಿ ಕಾಂಗ್ರೆಸ್‌ನ ಎಚ್.ವಿ.ವೆಂಕಟೇಶ್ ಹಾಗೂ ಜೆಡಿಎಸ್‌ನ ಕೆ.ಎಂ.ತಿಮ್ಮರಾಯಪ್ಪ ಕ್ಷೇತ್ರ ಸುತ್ತಾಡಿದ್ದಾರೆ. ಕೆಜೆಪಿಯ ಪಾವಗಡ ಶ್ರೀರಾಮ್ ಪ್ರಚಾರದಲ್ಲಿ ನಿರತರಾಗಿದ್ದಾರೆ.

ತಿಪಟೂರು ಭಾಗದಲ್ಲಿ ಪ್ರಚಾರ ಬಿರಿಸು ಪಡೆದುಕೊಂಡಿದ್ದು, ಬಿಜೆಪಿ ಅಭ್ಯರ್ಥಿ ಬಿ.ಸಿ.ನಾಗೇಶ್ ಗುಪ್ತಗಾಮಿನಿಯಂತೆ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್‌ನ ಕೆ.ಷಡಕ್ಷರಿ, ಕೆಜೆಪಿಯ ಲೋಕೇಶ್ವರ್, ಜೆಡಿಎಸ್‌ನ ಲಿಂಗರಾಜು ಪ್ರಚಾರದಲ್ಲಿ ನಿರತರಾಗಿದ್ದಾರೆ.

ಆದರೆ ಜೆಡಿಎಸ್ ಬಂಡಾಯವಾಗಿ ಮೈಲಾರಪ್ಪ ಸ್ಪರ್ಧಿಸಿರುವುದು ತಲೆ ಬಿಸಿಯಾಗಿದೆ. ತುರುವೇಕೆರೆಯಲ್ಲಿ ಜೆಡಿಎಸ್ ಎಂ.ಟಿ.ಕೃಷ್ಣಪ್ಪ, ಕೆಜೆಪಿ ಮಸಲಾ ಜಯರಾಮ್ ಪ್ರಚಾರ ಜೋರಾಗಿದೆ. ಕಾಂಗ್ರೆಸ್‌ನ ಗೀತಾ ರಾಜಣ್ಣ ಈಗಷ್ಟೇ ಅಖಾಡಕ್ಕೆ ಇಳಿದಿದ್ದಾರೆ.

ನೇರ ಹಣಾಹಣಿ ಕಂಡುಬಂದಿರುವ ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ, ಜೆಡಿಎಸ್‌ನ ಸತ್ಯನಾರಾಯಣ ಬೆವರು ಹರಿಸಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಎಸ್‌ನ ಸುರೇಶ್‌ಬಾಬು, ಕೆಜೆಪಿ ಜೆ.ಸಿ.ಮಾಧುಸ್ವಾಮಿ, ಬಿಜೆಪಿ ಕಿರಣ್ ಕುಮಾರ್ ಪ್ರಚಾರ ನಿರತರಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ಸತೀಶ್ ಈಗ ಮತದಾರರ ಮಡಿಲಿಗೆ ಹೆಜ್ಜೆ ಹಾಕಿದ್ದಾರೆ. ರೈತ ಸಂಘದಿಂದ ಕಣಕ್ಕಿಳಿದಿರುವ ಕೆಂಕೆರೆ ಸತೀಶ್ ರೈತಪರ ಅಭ್ಯರ್ಥಿ ಗೆಲ್ಲಿಸುವಂತೆ ಕೋರಿ ಪ್ರಚಾರ ನಡೆಸಿದ್ದಾರೆ.

ಕುಣಿಗಲ್ ಕ್ಷೇತ್ರದಲ್ಲಿ ಜೆಡಿಎಸ್ ಗೊಂದಲ ಒಂದು ಹಂತಕ್ಕೆ ಬಂದು ನಿಂತಿದ್ದು, ಡಿ.ನಾಗರಾಜಯ್ಯ ಮತದಾರರನ್ನು ಒಲಿಸಿಕೊಳ್ಳುವ ದಾರಿಯಲ್ಲಿ ಸಾಗಿದ್ದಾರೆ. ಕಾಂಗ್ರೆಸ್ ಸಹ ಬಂಡಾಯ ಎದುರಿಸುತ್ತಿದ್ದರೂ ರಾಮಸ್ವಾಮಿಗೌಡ ಹಾಗೂ ಬಿಜೆಪಿ ಡಿ.ಕೃಷ್ಣಕುಮಾರ್ ಒಂದು ಸುತ್ತು ಪ್ರಚಾರ ಮುಗಿಸಿದ್ದಾರೆ.

ಗುಬ್ಬಿ ಕ್ಷೇತ್ರದಲ್ಲಿ ಎಸ್.ಆರ್.ಶ್ರೀನಿವಾಸ್ ಪ್ರಚಾರ ಜೋರಾಗಿದೆ. ಕಾಂಗ್ರೆಸ್‌ನ ಹೊನ್ನಗಿರಿಗೌಡ ಸಹ ಮತದಾರರ ಮನ ಮುಟ್ಟುತ್ತಿದ್ದಾರೆ. ಕೆಜೆಪಿಯ ಜಿ.ಎನ್.ಬೆಟ್ಟಸ್ವಾಮಿ, ಬಿಜೆಪಿಯ ಸಾಗರನಹಳ್ಳಿ ರೇವಣ್ಣ ಪುತ್ರ ಎಸ್.ಆರ್.ನಟರಾಜ್ ಪ್ರಚಾರಕ್ಕೆ ಇಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT