ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಯಾದಿ ಗೊಂದಲ: ಆಯೋಗಕ್ಕೆ ದೂರು

Last Updated 20 ಅಕ್ಟೋಬರ್ 2012, 3:30 IST
ಅಕ್ಷರ ಗಾತ್ರ

ವಿಜಾಪುರ: `ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಹಮ್ಮಿಕೊಂಡಿರುವ ವಿಶೇಷ ಆಂದೋಲನ ಅವ್ಯವಸ್ಥೆಯ ಆಗರವಾಗಿದೆ. ಜಿಲ್ಲಾ ಆಡಳಿತ ಜನಜಾಗೃತಿ ನಡೆಸಿಲ್ಲ. ಸಂಬಂಧಿಸಿದ ಅಧಿಕಾರಿಗಳು-ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ~ ಎಂದು ವಿವಿಧ ಪಕ್ಷಗಳ ಮುಖಂಡರು ಹೇಳಿದರು.

`ವಿಜಾಪುರ ಮತದಾರರ ವೇದಿಕೆ~ ಹೆಸರಿನಲ್ಲಿ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ, ಬಿಎಸ್‌ಪಿ ಮುಖಂಡ ಬಿ.ಎಚ್. ಮಹಾಬರಿ ಇತರರು ಈ ಆಂದೋಲನದ ಅವಧಿ ವಿಸ್ತರಿಸಲು ಆಗ್ರಹಿಸಿದರು.

`ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ನಿರಂತರ ಪ್ರಕ್ರಿಯೆ. ಇದೇ 31ರೊಳಗಾಗಿ ಹೆಸರು ಸೇರ್ಪಡೆ ಮಾಡಬೇಕು ಎಂದು ಜಿಲ್ಲಾ ಆಡಳಿತ ಗಡುವು ವಿಧಿಸಿರುವುದು ಜನತೆಯಲ್ಲಿ ಗೊಂದಲ ಮೂಡಿಸಿದೆ~ ಎಂದು ದೂರಿದರು.

`ಕಳೆದ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಇದ್ದವು. ಆದರೆ, ಹೊಸ ಮತದಾರರ ಪಟ್ಟಿಯಲ್ಲಿ ಅವರ ಭಾವಚಿತ್ರಗಳು ಇಲ್ಲ. ಹೆಸರು ತಿದ್ದುಪಡಿಗೂ ಭಾವಚಿತ್ರ ಕೊಡಿ ಎಂದು ಕೇಳುತ್ತಿದ್ದಾರೆ. ಇದು ಹೀಗೇಕೆ~ ಎಂದು ಎಸ್.ಎಂ. ಪಾಟೀಲ ಪ್ರಶ್ನಿಸಿದರು.

`ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪದೋಷವಿದೆ. ವಿಜಾಪುರ ನಗರ ಮತಕ್ಷೇತ್ರದಲ್ಲಿ ಮತಗಟ್ಟೆಗಳ ಸಂಖ್ಯೆಯನ್ನು 174ರಿಂದ 210ಕ್ಕೆ ಹೆಚ್ಚಿಸಲಾಗಿದೆ. ಮತಗಟ್ಟೆ ಸಂಖ್ಯೆ ಹೆಚ್ಚಿಸಿದರೂ ಮತದಾರರು ಹಿಂದಿನ ಮತಕೇಂದ್ರಗಳಲ್ಲಿಯೇ ಮತ ಚಲಾಯಿಸಲು ಅನುಕೂಲವಾಗುವಂತೆ ಅದೇ ಮತಕ್ಷೇತ್ರಗಳಲ್ಲಿ ಹೆಚ್ಚಿನ ಮತಗಟ್ಟೆ ಆರಂಭಿಸಿ ಎಂದು ರಾಜಕೀಯ ಪಕ್ಷಗಳವರು ಸಲಹೆ ನೀಡಿದ್ದೆವು. ಜಿಲ್ಲಾ ಆಡಳಿತ ಅದನ್ನು ಧಿಕ್ಕರಿಸಿ ಗೊಂದಲ ಸೃಷ್ಟಿಸಿದೆ~ ಎಂದು ಮಹಾಬರಿ ದೂರಿದರು.

`ಸೋಲಾಪುರ ರಸ್ತೆಯ ಐಟಿಐ ಕಾಲೇಜಿನ ಮತಗಟ್ಟೆಯಲ್ಲಿ ಹೆಸರು ಇದ್ದವರನ್ನು ತಂದು ಬಾಗಲಕೋಟೆ ಕ್ರಾಸ್‌ನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಮತಗಟ್ಟೆಗೆ ಸೇರಿಸಲಾಗಿದೆ. ಹೀಗೆ ಮತದಾರರನ್ನು ಒಂದು ಬೂತ್‌ನಿಂದ ದೂರದ ಮತ್ತೊಂದು ಬೂತ್‌ಗೆ ಸ್ಥಳಾಂತರಿಸಿದ್ದಾರೆ. 25 ಸಾವಿರಕ್ಕೂ ಹೆಚ್ಚು ಮತದಾರರಿಗೆ ಈ ರೀತಿ ಸಮಸ್ಯೆ ಮಾಡಿದ್ದಾರೆ~ ಎಂದು ಆಪಾದಿಸಿದರು.

`ಕೆ.ಕೆ. ನಗರದಲ್ಲಿ ನಮ್ಮ ಮನೆ ಇದೆ. ಆರ್‌ಟಿಒ ಕಚೇರಿಯ ಮತಗಟ್ಟೆಯಲ್ಲಿ ಮತದಾನ ಮಾಡುತ್ತಿದ್ದೆವು. ಈಗ ಜಮಖಂಡಿ ರಸ್ತೆಯ ಶಾಲೆಯ ಮತಗಟ್ಟೆಯಲ್ಲಿ ನಮ್ಮ ಹೆಸರು ಸೇರ್ಪಡೆ ಮಾಡಿದ್ದಾರೆ. ಈ ಕುರಿತು ವಿಚಾರಿಸಿದರೆ ಮತಗಟ್ಟೆ, ತಹಶೀಲ್ದಾರ ಕಚೇರಿಯಲ್ಲಿ ಸರಿಯಾದ ಮಾಹಿತಿ ನೀಡುತ್ತಿಲ್ಲ~ ಎಂದು ವಕೀಲ ಮೆಹಮೂದ್ ಖಾಜಿ ದೂರಿದರು.

`ಬೂತ್ ಮಟ್ಟದಲ್ಲಿ ಸಿಬ್ಬಂದಿಯೇ ಇರುವುದಿಲ್ಲ. ಇದ್ದರೂ ಅವರಿಗೆ ಹಾಗೂ ತಹಶೀಲ್ದಾರ ಕಚೇರಿಯ ಸಿಬ್ಬಂದಿಗೇ ಸರಿಯಾದ ಮಾಹಿತಿ ಇಲ್ಲ. ಕಚೇರಿಗೆ ಹೋದರೂ ಸ್ಪಂದಿಸುವುದಿಲ್ಲ~ ಎಂದು ಜೈ ಭೀಮ ದಳದ ಅಧ್ಯಕ್ಷ ನಾಗರಾಜ ಲಂಬು ಆಪಾದಿಸಿದರು.

`ನಮ್ಮ ಕುಟುಂಬದವರ ಹೆಸರು ನಮ್ಮ ವಾರ್ಡ್‌ನ ಮತಗಟ್ಟೆಯ ಮತದಾರರ ಯಾದಿಯಲ್ಲಿ ಇಲ್ಲವೇ ಇಲ್ಲ. ಕೇಳಿದರೆ ಅರ್ಜಿ ಕೊಡಿ ಪರಿಶೀಲುಸುತ್ತೇವೆ ಎನ್ನುತ್ತಾರೆ. ಅವರಲ್ಲಿ ಅರ್ಜಿ ನಮೂನೆಯೂ ಇಲ್ಲ~ ಎಂದು ಸ್ಲಂ ಅಭಿವೃದ್ಧಿ ಸಮಿತಿಯ ಅಕ್ರಂ ಮಾಶ್ಯಾಳಕರ ದೂರಿದರು.

`ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ನೀಡಿದ ನಿರ್ದೇಶನಗಳನ್ನು ಜಿಲ್ಲಾ ಆಡಳಿತ ಪಾಲಿಸಿಲ್ಲ. ಮತದಾರರನ್ನು ಒಂದು ಮತಗಟ್ಟೆಯಿಂದ ದೂರದ ಮತ್ತೊಂದು ಮತಗಟ್ಟೆಗೆ ವರ್ಗಾಯಿಸುವ ಮೂಲಕ ಗೊಂದಲ ಸೃಷ್ಟಿಸಿದೆ.
 
ಈ ಅವ್ಯವಸ್ಥೆಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು~ ಎಂದು ಅವರೆಲ್ಲ ಹೇಳಿದರು.
ಜೆಡಿಎಸ್ ಜಿಲ್ಲಾ ವಕ್ತಾರ ಎಂ.ಸಿ. ಮುಲ್ಲಾ, ಕಾಂಗ್ರೆಸ್ ಮುಖಂಡ ಕಾಮೇಶ ಉಕ್ಕಲಿ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ: ಡಿಸಿ ಸೂಚನೆ
ವಿಜಾಪುರ:
ಜನವರಿ 1, 2013ಕ್ಕೆ 18 ವರ್ಷ ಪೂರ್ಣಗೊಳ್ಳುವ ಹಾಗೂ ಅದಕ್ಕಿಂತಲೂ ಮೇಲ್ಪಟ್ಟ ಅರ್ಹ ಮತದಾರರ ಹೆಸರನ್ನು ಯಾದಿಯಲ್ಲಿ ಸೇರಿಸಲು, ಅನರ್ಹರನ್ನು ತೆಗೆದುಹಾಕಲು, ತಪ್ಪುಗಳ ತಿದ್ದುಪಡಿ ಹಾಗೂ ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ಹೆಸರು ಬದಲಾಯಿಸಿಕೊಳ್ಳಲು  ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮವನ್ನು ಇದೇ 31ರ ವರೆಗೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ತಿಳಿಸಿದ್ದಾರೆ.

ಮತಗಟ್ಟೆ ಮಟ್ಟದ ಅಧಿಕಾರಿಗಳು ನಿಗದಿ ಪಡಿಸಿದ ಸ್ಥಳಗಳಲ್ಲಿ ಕೆಲಸದ ಅವಧಿಯಲ್ಲಿ ಮತ್ತು ವಿಶೇಷ ಪರಿಷ್ಕರಣೆ ದಿನಾಂಕಗಳಂದು ಹಾಜರಿದ್ದು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಬೇಕು ಎಂದು ಅವರು ತಿಳಿಸಿದ್ದಾರೆ.

ಬಹಳಷ್ಟು ಕಡೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ನಿಗದಿಪಡಿಸಿದ ಅವಧಿಯಲ್ಲಿ ಹಾಜರಿರುವುದಿಲ್ಲ ಎಂಬ ದೂರುಗಳು ಬಂದಿವೆ. ನೇಮಕಾತಿಗೊಂಡ ಅಧಿಕಾರಿಗಳು ಕಡ್ಡಾಯವಾಗಿ ನಿಗದಿಪಡಿಸಿದ ಮತಗಟ್ಟೆಗಳಲ್ಲಿ ಹಾಜರಿದ್ದು, ಚುನಾವಣಾ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕರ್ತವ್ಯ ಲೋಪ ವೆಸಗಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT