ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಸಗಟು ಖರೀದಿ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಅವರು ಇಡೀ ಕ್ಷೇತ್ರದ ಎಲ್ಲ ಮತದಾರರಿಗೆ ಉಚಿತ ಪಡಿತರ ವಿತರಣೆ ಆರಂಭಿಸಿರುವುದು ಈಗ ವಿವಾದದ ಕೇಂದ್ರವಾಗಿದೆ.  ಸರ್ಕಾರಿ ವ್ಯವಸ್ಥೆ ನ್ಯಾಯಬೆಲೆ ಅಂಗಡಿಗಳ ಮೂಲಕವೇ ಶಾಸಕರೊಬ್ಬರು ಉಚಿತ ಪಡಿತರ ವಿತರಣೆ ನಡೆಸುತ್ತಿರುವುದು ಬಹುತೇಕ ರಾಜ್ಯದಲ್ಲಿ ಇದೇ ಮೊದಲು ಇರಬೇಕು.

ನ್ಯಾಯ ಬೆಲೆ ಅಂಗಡಿಗಳ ಮೂಲಕ ಉಚಿತ ಅಕ್ಕಿ ವಿತರಣೆ ಬಗ್ಗೆ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಹೇಳಿದರೆ ಎಲ್ಲ ಪಡಿತರ ಅಕ್ಕಿಯನ್ನೂ ಸಗಟಾಗಿ ಖರೀದಿ ಮಾಡಿ ಉಚಿತವಾಗಿ ಹಂಚುತ್ತಿರುವುದರ ಬಗ್ಗೆ ಮಾಧ್ಯಮಗಳಿಂದ ತಿಳಿದಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ.

ಸಾ.ರಾ.ಮಹೇಶ್ ಅವರು ಮೂಲತಃ ರಿಯಲ್ ಎಸ್ಟೇಟ್ ಉದ್ಯಮಿ. ಉಚಿತ ಆ್ಯಂಬುಲೆನ್ಸ್ ಸೇವೆ, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯ ಪುಸ್ತಕ ನೀಡುವುದು, ವಿದ್ಯಾರ್ಥಿ ಬಸ್ ಪಾಸ್ ಹಣ ಭರ್ತಿ ಮಾಡುವುದು ಮುಂತಾದ ಕೆಲಸವನ್ನು ಅವರು ಮಾಡುತ್ತಲೇ ಬಂದಿದ್ದಾರೆ. ಅಕ್ಕಿ ವಿತರಣೆ ಮಾತ್ರ ಈಗ ವಿವಾದಕ್ಕೆ ಈಡಾಗಿದೆ.

 ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಕ್ಷೇತ್ರವಾದ ಮೈಸೂರಿನ ಕೃಷ್ಣರಾಜದಲ್ಲಿಯೂ ಇಂತಹ `ಜನೋಪಯೋಗಿ~ ಕೆಲಸಗಳು ನಡೆಯುತ್ತಲೇ ಇವೆ. ಆಸರೆ ಎಂಬ ಸಂಸ್ಥೆಯ ಮೂಲಕ ಇಂತಹ ಕೆಲಸವನ್ನು ಮಾಡಲಾಗುತ್ತಿದೆ. ಕೆ.ಆರ್. ಕ್ಷೇತ್ರದ ಬಹುತೇಕ ಎಲ್ಲ ಮತದಾರರ ಜನ್ಮದಿನ ಸಚಿವರ ಬೆಂಬಲಿಗರಿಗೆ ಗೊತ್ತಿದೆ.

ಮತದಾರರ ಜನ್ಮದಿನ ಅವರ ಮನೆಗೆ ಆಸರೆ ಹುಡುಗರು ಬಂದು ಗ್ರೀಟಿಂಗ್ ನೀಡುತ್ತಾರೆ. ಜೊತೆಗೆ ಒಂದು ಸಸಿಯನ್ನೂ ಕೊಟ್ಟು ಹೋಗುತ್ತಾರೆ. ಸಸಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮತದಾರರಿಗೆ ಇದೆ. ಹುಟ್ಟುಹಬ್ಬ, ರಾಷ್ಟ್ರೀಯ ಹಬ್ಬ, ವಿವಾಹ ವಾರ್ಷಿಕೋತ್ಸವ ಮುಂತಾದ ಸಂದರ್ಭದಲ್ಲಿಯೂ ಕ್ಷೇತ್ರದ ಮತದಾರರಿಗೆ ಸಚಿವರು ಇಂತಹ ಶಾಕ್ ನೀಡುತ್ತಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲಿಯೂ ಹಣ ಅಂತರಗಂಗೆಯಾಗಿ ಹರಿಯುತ್ತಿದೆ. ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧಿಸಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಕಾ.ಪು.ಸಿದ್ದಲಿಂಗಸ್ವಾಮಿ ಅವರೂ ಕೂಡ ಇಂತಹ ಕೆಲಸದಲ್ಲಿ ತೊಡಗಿದ್ದಾರೆ.
 
ಸಂಘ ಸಂಸ್ಥೆ, ದೇವಾಲಯಗಳು, ಮಹಿಳಾ ಸಂಘಟನೆಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಇತ್ತೀಚೆಗೆ ರಂಜಾನ್ ಹಬ್ಬದ ಸಂದರ್ಭದಲ್ಲಿ ತಿ.ನರಸೀಪುರ ತಾಲ್ಲೂಕು ಗರ್ಗೇಶ್ವರಿಯಲ್ಲಿ ಮುಸ್ಲಿಂ ಸಮುದಾಯದವರಿಗೆ ಅಕ್ಕಿ ಮತ್ತು ಸಕ್ಕರೆ ವಿತರಣೆಯಲ್ಲಿ ಪೈಪೋಟಿಯೇ ನಡೆದು ಹೋಯಿತು. ಸಿದ್ದಲಿಂಗಸ್ವಾಮಿ ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ಇಲ್ಲಿ ಸಾಕಷ್ಟು ಶ್ರಮ, ಹಣ ವ್ಯಯ ಮಾಡಿದರು.

ಅಂದ ಹಾಗೆ ಸಾ.ರಾ.ಮಹೇಶ್ ಅವರು ಕೊಡಿಸಿದ ಅಕ್ಕಿಯನ್ನು ಹೇರಿಕೊಂಡು ಹೋಗುತ್ತಿದ್ದ ಆಟೋದ ಹಿಂಭಾಗದಲ್ಲಿರುವ ಬರಹ ಹೀಗಿತ್ತು. “ಮಾನವ ಕೊಟ್ಟಿದ್ದು ಮನೆ ತನಕ, ದೇವರು ಕೊಟ್ಟಿದ್ದು ಕೊನೆ ತನಕ”. ಇದು ಎಲ್ಲ ಮತದಾರರನ್ನು ಅಣಕಿಸುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT