ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಸೆಳೆಯಲು ಪುನೀತ್, ಸೈನಾ, ಕಲಾಂ!

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ನನ್ನದು ಜಾಣ್ಮೆಯ ಆಟ... ನೀವೂ ಮತ ಚಲಾಯಿಸಿ ಜಾಣರಾಗಿ'
-ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ
`ತೋರಿಸಿ ನಿಮ್ಮ ಪವರ್... ಮತದಾನದ ಹಕ್ಕು, ಜನಸಾಮಾನ್ಯರ ಶಕ್ತಿ'
- `ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್

`ನನ್ನದು ನಿರ್ಭೀತ ಆಟ... ನೀವೂ ನಿರ್ಭಯರಾಗಿ ಮತ ಚಲಾಯಿಸಿ'
-ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್

`ಆಮಿಷಕ್ಕೆ ಒಳಗಾಗದಿರಿ... ನಿಮ್ಮ ಆಯ್ಕೆ ಸೂಕ್ತವಾಗಿರಲಿ. ಯೋಚಿಸಿ ಮತ ಚಲಾಯಿಸಿ'
-ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ.

ಅರ್ಹ ಮತದಾರರನ್ನು ಮತಗಟ್ಟೆಗೆ ಸೆಳೆಯುವ ಉದ್ದೇಶದಿಂದ ರಾಜ್ಯ ಚುನಾವಣಾ ಆಯೋಗ ವಿವಿಧ ಕ್ಷೇತ್ರಗಳ `ಖ್ಯಾತನಾಮ'ರನ್ನು ಬಳಸಿ ಸಿದ್ಧಪಡಿಸಿದ ಕಟೌಟ್- ಭಿತ್ತಿಚಿತ್ರಗಳ ಮಾದರಿಗಳಿವು!

ಅಭ್ಯರ್ಥಿಗಳ `ಭರ್ಜರಿ' ಪ್ರಚಾರಕ್ಕೆ ಕಡಿವಾಣ ಹಾಕಿರುವ ಆಯೋಗ, ಮತದಾರರನ್ನು ಮತದಾನದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು `ಭರ್ಜರಿ' ಪ್ರಯೋಗಕ್ಕೆ ಮುಂದಾಗಿದೆ!!

ಮೊದಲ ಹಂತದಲ್ಲಿ(ಏ.7ರ ವರೆಗೆ) ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಹೆಚ್ಚು ಒತ್ತುಕೊಟ್ಟಿರುವ ಚುನಾವಣಾ ಆಯೋಗ, ಇದೀಗ ಎರಡನೇ ಹಂತದಲ್ಲಿ (ಏ. 20ರಿಂದ ಮೇ 5ರವರೆಗೆ) ಮತಗಟ್ಟೆಯತ್ತ ಮತದಾರರನ್ನು ಬರುವಂತೆ ಮಾಡಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಮುಂಬರುವ ಚುನಾವಣೆಯಲ್ಲಿ ಚುನಾವಣಾ ಆಯೋಗ ನಿರ್ವಹಿಸಲಿರುವ ಪಾತ್ರ, ಆ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಯಾವ ರೀತಿ ನೆರವು ನೀಡಬೇಕು ಎಂದು ಮುಖ್ಯ ಚುನಾವಣಾ ಅಧಿಕಾರಿ ಅನಿಲ್‌ಕುಮಾರ್ ಝಾ ಈಗಾಗಲೇ ವಿಡಿಯೊ ಸಂವಾದ ನಡೆಸಿದ್ದಾರೆ. ಆ ಸಂವಾದದ ವೇಳೆ ಪಾರದರ್ಶಕ ಮತದಾನ ಮತ್ತು ಮತದಾನದ ಹಕ್ಕು ಕುರಿತು ಜಾಗೃತಿ ಮೂಡಿಸಲು `ಮೈಕ್ರೊ  ಪ್ಲಾನ್' ಸಿದ್ಧಪಡಿಸಲು ಸೂಚಿಸಲಾಗಿದೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳಲ್ಲಿ ಶೇ 50ಕ್ಕಿಂತ ಕಡಿಮೆ ಮತದಾನ ನಡೆದ ವಾರ್ಡ್‌ಗಳನ್ನು ಕೇಂದ್ರೀಕರಿಸಿ, ಅಂತಹ ವಾರ್ಡ್‌ಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ವಿಶೇಷ ಆದ್ಯತೆ ನೀಡಲು ಆಯೋಗ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮತದಾರರ ಜಾಗೃತಿಗಾಗಿ ಹಮ್ಮಿಕೊಳ್ಳುವ ಸೂಕ್ಷ್ಮ ಕಾರ್ಯಕ್ರಮಗಳ (ಮೈಕ್ರೊ  ಪ್ಲಾನ್) ಬಗ್ಗೆ ಕಾರ್ಯಸೂಚಿ ಸಿದ್ಧಪಡಿಸಿ ನೀಡುವಂತೆ ತಿಳಿಸಿದೆ.

`ಹುಬ್ಬಳ್ಳಿ- ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಏ. 20ರಿಂದ ಮೇ 5ರ ವರೆಗೆ ವಾಕ್‌ಥಾನ್, ಮ್ಯಾರಥಾನ್, ಪಾಲಿಕೆ ಸಂಚಾರಿ ವಾಹನಗಳ ಎರಡೂ ಬದಿಗಳಲ್ಲಿ ಪ್ರದರ್ಶನ ಫಲಕ, ಜನದಟ್ಟಣೆ ಇರುವ ಮಾಲ್ ಮತ್ತಿತರ ಪ್ರದೇಶಗಳಲ್ಲಿ ಬೀದಿನಾಟಕ, ನಾಲ್ಕು ನಿಮಿಷ ಅವಧಿಯ ವಿಡಿಯೊ  ಪ್ರದರ್ಶನ ಏರ್ಪಡಿಸುವ ಉದ್ದೇಶದಿಂದ ಸುಮಾರು ರೂ. 8.51 ಲಕ್ಷ ವೆಚ್ಚದಲ್ಲಿ `ಮೈಕ್ರೊ  ಪ್ಲಾನ್' ಸಿದ್ಧಪಡಿಸಿ ಚುನಾವಣಾ ಆಯೋಗದ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಆಯೋಗ ನಿಗದಿಪಡಿಸಿದ ಹಣಕ್ಕಿಂತ (ರೂ. 2.50 ಲಕ್ಷ) ಖರ್ಚು ಹೆಚ್ಚಾದರೆ ಪಾಲಿಕೆಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ನಿಧಿಯಿಂದ ಭರಿಸಲು ತೀರ್ಮಾನಿಸಲಾಗಿದೆ' ಎಂದು ಪಾಲಿಕೆ ವಿಶೇಷ ಅಧಿಕಾರಿ ಎಸ್.ಎಚ್. ನರೇಗಲ್ `ಪ್ರಜಾವಾಣಿ'ಗೆ ತಿಳಿಸಿದರು.

`ನೀವೂ ಮತದಾನ ಮಾಡಿ... ನಿಮ್ಮವರನ್ನೂ ಕರೆ ತನ್ನಿ' ಎಂಬ ಘೋಷಣೆಯೊಂದಿಗೆ ಸಾರ್ವಜನಿಕವಾಗಿ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಎಲ್ಲ ಸರ್ಕಾರಿ ಇಲಾಖೆಗಳಿಗೆ ಆಯೋಗ ನಿರ್ದೇಶಿಸಿದೆ.

ಅದರಲ್ಲೂ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂಬ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ವಿವಿಧ ಕ್ಷೇತ್ರಗಳ ಖ್ಯಾತನಾಮರ ಬ್ಯಾನರ್, ಕಟೌಟ್, ಭಿತ್ತಿಪತ್ರಗಳಲ್ಲಿ ಬಳಸಿದೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯ್ದ ಕಾಲೇಜುಗಳಲ್ಲಿ ಚರ್ಚಾಕೂಟ, ವಿಚಾರ ಸಂಕಿರಣಗಳನ್ನೂ ಸಂಘಟಿಸಲು ಸೂಚಿಸಿದೆ.

ವಿಶೇಷವಾಗಿ, `ಸಿಸ್ಟಮೆಟಿಕ್ ವೋಟರ್ಸ್‌ ಎಜುಕೇಶನ್ ಅಂಡ್ ಎಲೆಕ್ಟೋರಲ್ ಪಾರ್ಟಿಸಿಪೇಶನ್ ಪ್ಲಾನ್' (ಎಸ್‌ವಿಇಇಪಿ) ಕಾರ್ಯಕ್ರಮದಡಿ ಉದ್ಯೋಗ ಖಾತ್ರಿ ಕೆಲಸ ನಡೆಯುವ ಪ್ರದೇಶ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಗಳ ಅಡಿಯಲ್ಲಿರುವ ಪದವಿ ವಿದ್ಯಾರ್ಥಿಗಳ ಹಾಸ್ಟೆಲ್‌ಗಳನ್ನು ಕೇಂದ್ರೀಕರಿಸಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಹೆಚ್ಚಿನ ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳುವಂತೆಯೂ ತಿಳಿಸಲಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಗರಿಷ್ಠ ಮಟ್ಟಕ್ಕೆ ಏರಿಸುವ ಮೂಲಕ ಗೆಲ್ಲುವ ಮತ್ತು ಪ್ರತಿಸ್ಪರ್ಧಿ ಅಭ್ಯರ್ಥಿಯ ನಡುವಿನ ಮತಗಳ ಅಂತರದಲ್ಲಿ ಹೆಚ್ಚಿನ ಅಂತರ ಕಾಯ್ದಕೊಳ್ಳಲು ಚುನಾವಣಾ ಆಯೋಗ ನವನವೀನ ಪ್ರಯೋಗಗಳನ್ನು ಕಾರ್ಯರೂಪಕ್ಕೆ ತರಲು ಉದ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT