ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರಪಟ್ಟಿಗೆ ಸೇರ್ಪಡೆ: ವಿಶೇಷ ಆಂದೋಲನ

Last Updated 1 ಅಕ್ಟೋಬರ್ 2012, 8:35 IST
ಅಕ್ಷರ ಗಾತ್ರ

ಚಾಮರಾಜನಗರ: ಮತದಾರರಪಟ್ಟಿಗೆ ಹೆಸರು ಸೇರ್ಪಡೆ ಮಾಡುವ ಸಂಬಂಧ ನಾಗರಿಕರಲ್ಲಿ ಅರಿವು ಮೂಡಿಸಲು ಅವಶ್ಯವಿರುವ ಕಾರ್ಯಕ್ರಮಗಳ ರೂಪರೇಷೆ ಸಿದ್ಧಪಡಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಟಿ. ಚಂದ್ರಶೇಖರ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಹಾಗೂ ಸೇರ್ಪಡೆ ಕಾರ್ಯಕ್ರಮದ ಯಶಸ್ವಿಗಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣಾ ಆಯೋಗದ ನಿರ್ದೇಶನದನ್ವಯ ಜಿಲ್ಲೆಯ ಎಲ್ಲ ಅರ್ಹರು ಮತದಾನ ಮಾಡಲು ಸಹಾಯವಾಗುವಂತೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಕಾರ್ಯಕ್ರಮ ರೂಪಿಸಬೇಕು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ವಿಶೇಷ ಆಂದೋಲನವನ್ನು ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಇತರೇ ವಿಧಾನಗಳ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.
ಬೀದಿನಾಟಕ ಸೇರಿದಂತೆ ಜನಪದ ಕಲಾ ಪ್ರಕಾರಗಳ ಮೂಲಕ ಜನರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಅರಿವು ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಬೇಕು. ಚಲನಚಿತ್ರ ಪ್ರದರ್ಶನಕ್ಕೂ ಏರ್ಪಾಡು ಮಾಡಬೇಕು ಎಂದು ಹೇಳಿದರು.

ಯುವ ಮತದಾರರು ಪಟ್ಟಿಗೆ ಹೆಸರು ದಾಖಲು ಮಾಡಲು ಕಾರ್ಯಕ್ರಮ  ಆಯೋಜಿಸಬೇಕು. ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸ, ವಿಚಾರ ಸಂಕಿರಣ, ಪ್ರಬಂಧ ಸ್ಪರ್ಧೆ ಆಯೋಜಿಸಿ ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಅದರ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಅರ್ಹರು ಮತದಾರರ ಪಟ್ಟಿಯಿಂದ ಹೊರಗಿರದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರದ ಅಧಿಕಾರಿಗಳು ಯುವಜನರ ಸಹಕಾರ ಪಡೆದು ಮತದಾರರ ಪಟ್ಟಿ ಸೇರ್ಪಡೆ ಆಂದೋಲನವನ್ನು ಯಶಸ್ವಿಗೊಳಿಸಬೇಕು ಎಂದರು.

ಅ. 7, 14 ಹಾಗೂ 21ರಂದು ರಾಜಕೀಯ ಪಕ್ಷಗಳ ಬೂತ್‌ಮಟ್ಟದ ಏಜೆಂಟರಿಂದ ಮತದಾರರ ಪಟ್ಟಿಯ ಸಂಬಂಧ ಆಕ್ಷೇಪಣೆ ಹಾಗೂ ಅಹವಾಲು ಸ್ವೀಕರಿಸಬೇಕು. ಡಿ. 1ರಂದು ಎಲ್ಲ ಆಕ್ಷೇಪಣೆ, ಅಹವಾಲು ಅರ್ಜಿಗಳನ್ನು ವಿಲೇವಾರಿ ಮಾಡಲು ದಿನಾಂಕ ನಿಗದಿ ಮಾಡಲಾಗಿದೆ ಎಂದರು.

ತಹಶೀಲ್ದಾರ್‌ಗಳಾದ ಚಂದ್ರಕಾಂತ್ ಭಜಂತ್ರಿ, ಕವಿತಾ ರಾಜಾರಾಂ, ಶಿವನಾಗಯ್ಯ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬೆಳ್ಳಶೆಟ್ಟಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಸಿದ್ದರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಮಂಜಪ್ಪ, ವಾರ್ತಾ ಸಹಾಯಕ ಎ. ರಮೇಶ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಚಲುವಯ್ಯ ಹಾಜರಿದ್ದರು.

ಮತದಾರರಪಟ್ಟಿ ಪರಿಷ್ಕರಣೆ ವಿವರ
ಸಭೆಗೂ ಮೊದಲು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳ ಸಭೆ ನಡೆಯಿತು.

ಅ. 1ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಅಂದಿನಿಂದ ಅ. 31ರವರೆಗೆ ಪಟ್ಟಿಗೆ ಸಂಬಂಧಿಸಿದಂತೆ ಅಹವಾಲು ಮತ್ತು ಆಕ್ಷೇಪಣೆ  ಸ್ವೀಕರಿಸಲಾಗುವುದು. ಅ. 6 ಹಾಗೂ 9ರಂದು ಭಾವಚಿತ್ರವಿರುವ ಮತದಾರರ ಪಟ್ಟಿ ಕುರಿತಂತೆ ಸ್ಥಳೀಯ ಸಂಸ್ಥೆಗಳಲ್ಲಿ ಪರಿಷ್ಕರಣೆ ಹಾಗೂ ಹೆಸರು ವ್ಯತ್ಯಾಸ ಸಂಬಂಧ ಸಭೆ ನಡೆಯಲಿದೆ.
ಡಿ. 1ರಿಂದ 31ರವರೆಗೆ ಮಾಹಿತಿ, ಭಾವಚಿತ್ರ ಹೊಂದಿದ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ನಡೆಯಲಿದೆ. 2013ರ ಜ. 5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT