ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರಾಗಲು ಮೂರೇ ದಿನ ಅವಕಾಶ

Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಕೇವಲ ಮೂರು ದಿನ ಕಾಲಾವಕಾಶ ಇದೆ. ಪಟ್ಟಿಯಲ್ಲಿ ಹೆಸರು ಇಲ್ಲದೆ ಇರುವವರು ಕೂಡಲೇ ಅರ್ಜಿ ಸಲ್ಲಿಸುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ಮನವಿ ಮಾಡಿದ್ದಾರೆ.

ಇದುವರೆಗೆ 7.53 ಲಕ್ಷ ಅರ್ಜಿಗಳು ಬಂದಿದ್ದು, ಈ ಪೈಕಿ 4.36 ಲಕ್ಷ ಜನರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಬುಧವಾರ ಒಂದೇ ದಿನ 68 ಸಾವಿರ ಅರ್ಜಿಗಳು ಬಂದಿವೆ. ಬೆಂಗಳೂರಿನಲ್ಲಿ 3.40 ಲಕ್ಷ ಅರ್ಜಿಗಳು ಬಂದಿದ್ದು, 2.89 ಲಕ್ಷ ಜನರ ಹೆಸರನ್ನು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಂಚೆ ಮತದಾನ:  ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗುವ ಮೂರು ಲಕ್ಷ ಸಿಬ್ಬಂದಿಗೆ ತರಬೇತಿ ಸಂದರ್ಭದಲ್ಲಿ ಮತಪತ್ರಗಳನ್ನು ನೀಡಲಾಗುತ್ತದೆ. ರಕ್ಷಣಾ ಸೇವೆಯಲ್ಲಿರುವ ರಾಜ್ಯದ 37 ಸಾವಿರ ಸಿಬ್ಬಂದಿಗೆ ಅಂಚೆ ಮೂಲಕ ಕಳುಹಿಸಲಾಗುತ್ತದೆ. ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡ 48 ಗಂಟೆಗಳ ನಂತರ ರಕ್ಷಣಾ ಸೇವೆಯ ಸಿಬ್ಬಂದಿಗೆ `ಮತಪತ್ರ' ರವಾನೆಯಾಗಲಿದೆ ಎಂದರು.

ರಕ್ಷಣಾ ಸೇವೆಯಲ್ಲಿರುವವರು ಹಾಗೂ ಚುನಾವಣಾ ಕರ್ತವ್ಯದಲ್ಲಿ ತೊಡಗುವ ಸಿಬ್ಬಂದಿ ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ಅಂಚೆ ಮೂಲಕ ಮತಪತ್ರವನ್ನು ವಾಪಸ್ ಕಳುಹಿಸಬೇಕು. ಮತ ಎಣಿಕೆ ಆರಂಭವಾಗುವುದಕ್ಕೂ ಮುಂಚೆ ಬರುವ ಮತಪತ್ರಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಆದ್ದರಿಂದ ಆದಷ್ಟು ಬೇಗ ಕಳುಹಿಸಬೇಕು ಎಂದು ಅವರು ತಿಳಿಸಿದರು.

ಔರಾದಕರ ಅವರೇ ಇರಬೇಕು

ರಾಘವೇಂದ್ರ ಔರಾದಕರ ಬದಲು, ಸೇವಾ ಹಿರಿತನದ ಆಧಾರದ ಮೇಲೆ ಬೇರೆಯವರನ್ನು ನಗರ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡುವ ಸಂಬಂಧ ಸರ್ಕಾರ ಕಳುಹಿಸಿದ್ದ ಮೂವರು ಅಧಿಕಾರಿಗಳ ಪಟ್ಟಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

13 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳು ರಾಘವೇಂದ್ರ ಅವರಿಗಿಂತ ಸೇವೆಯಲ್ಲಿ ಹಿರಿಯರಾಗಿದ್ದಾರೆ. ಹಿರಿತನದ ಆಧಾರದ ಮೇಲೆ ಬಿಪಿನ್ ಗೋಪಾಲಕೃಷ್ಣ, ಎಂ.ಎನ್.ರೆಡ್ಡಿ ಹಾಗೂ ಎಚ್.ಸಿ. ಕಿಶೋರಚಂದ್ರ ಅವರ ಹೆಸರನ್ನು ಸರ್ಕಾರ ಆಯೋಗಕ್ಕೆ ಕಳುಹಿಸಿತ್ತು. ಆದರೆ, ಆಯೋಗವು ಈ ಪಟ್ಟಿಯನ್ನು ತಿರಸ್ಕರಿಸಿ ಔರಾದಕರ ಅವರನ್ನೇ ಕಮಿಷನರ್ ಆಗಿ ನೇಮಕ ಮಾಡುವಂತೆ ಸೂಚಿಸಿದ್ದು ಯಾವುದೇ ಕ್ಷಣದಲ್ಲಿ ಆದೇಶ ಹೊರಬೀಳಬಹುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT