ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರಿಗೆ ಆಮಿಷದ ಉರುಳು

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಿಸ್ಸಂಶಯವಾಗಿ ಭ್ರಷ್ಟಾಚಾರದ ಗಂಗೋತ್ರಿ ನಮ್ಮ ಚುನಾವಣೆಯಲ್ಲಿದೆ. ಕೋಟ್ಯಧಿಪತಿಗಳಲ್ಲದೆ ಇದ್ದವರು ಚುನಾವಣೆಯಲ್ಲಿ ಸ್ಪರ್ಧಿಸುವ ಕನಸನ್ನೂ ಕಾಣಲಾರದ ಸ್ಥಿತಿ ಇದೆ. ಲೋಕಸಭಾ ಸದಸ್ಯರಲ್ಲಿ 300 ಕೋಟ್ಯಧಿಪತಿಗಳಿದ್ದಾರೆ, ಕರ್ನಾಟಕ ವಿಧಾನಸಭೆಯಲ್ಲಿ 91 ಶ್ರಿಮಂತ ಶಾಸಕರ ಘೋಷಿತ ಸರಾಸರಿ ಆಸ್ತಿ 6.3 ಕೋಟಿ ರೂಪಾಯಿ.

ಲೋಕಸಭೆ ಇಲ್ಲವೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವ ಅಭ್ಯರ್ಥಿಯೂ ಚುನಾವಣಾ ಆಯೋಗ ನಿಗದಿಪಡಿಸಿರುವ ಮಿತಿಯಲ್ಲೇ ಖರ್ಚು ಮಾಡಿ ಗೆಲ್ಲಲು ಸಾಧ್ಯ ಇಲ್ಲ ಎನ್ನುವುದು ವಾಸ್ತವ. ಹಣ, ಹೆಂಡ, ಸೀರೆ,ಧೋತಿ ಇಲ್ಲವೆ ನಗದು ವ್ಯವಹಾರ ಮಾತ್ರ ಅಲ್ಲ ಮತದಾರರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ಹೊಸ ದಾರಿಗಳನ್ನು ಹುಡುಕುತ್ತಲೇ ಇರುತ್ತಾರೆ.

ಈಗಿನ ಸ್ಥಿತಿಯಲ್ಲಿ ಚುನಾವಣಾ ಆಯೋಗದ ಪಾತ್ರ ಸೀಮಿತವಾದುದು. ಚುನಾವಣೆ ಘೋಷಣೆ ಮಾಡಿದ ದಿನದಿಂದ ಫಲಿತಾಂಶ ಪ್ರಕಟವಾಗುವ ವರೆಗಿನ ಅವಧಿಯಲ್ಲಿ ಮಾತ್ರ ಅದರ ಪಾತ್ರ. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಚುನಾವಣಾ ಆಯೋಗ ಅಭ್ಯರ್ಥಿಗಳ ಅಕ್ರಮ ಚಟುವಟಿಕೆಯ ವಿರುದ್ಧ ಒಂದಷ್ಟು ದೂರು ದಾಖಲಿಸಿಕೊಂಡರೂ ತಪ್ಪಿತಸ್ಥರಿಗೆ ಶಿಕ್ಷೆಯಾದದ್ದು ಇಲ್ಲವೆ ಇಲ್ಲ ಎನ್ನುವಷ್ಟು ವಿರಳ. 

`ಹಲ್ಲಿಲ್ಲದ ಹಾವು~ ಎನ್ನುವ ಟೀಕೆಯನ್ನು ನಿರಾಕರಿಸಲಾಗದ ಸ್ಥಿತಿ ಚುನಾವಣಾ ಆಯೋಗದ್ದು.. ಚುನಾವಣಾ ಸುಧಾರಣೆಯ ಮೂಲಕ ಆಯೋಗವನ್ನು ಬಲಪಡಿಸಬೇಕೆಂಬ ಪ್ರಯತ್ನ ಸ್ವಾತಂತ್ರ್ಯ ಬಂದ ದಿನದಿಂದ ನಡೆಯುತ್ತಿದೆ. ಆದರೆ ಇದರ ಪರಿಣಾಮವನ್ನು ಅರಿತಿರುವ ರಾಜಕೀಯ ಪಕ್ಷಗಳು ಈ ಬಗ್ಗೆ ಆಸಕ್ತಿ ತೋರಿದ್ದು ಕಡಿಮೆ.

ರಾಜ್ಯದಲ್ಲಿ `ಆಪರೇಷನ್ ಕಮಲ~ದ ಮೂಲಕ ಪಕ್ಷಾಂತರ ಕಾಯ್ದೆಗೆ ಸವಾಲು ಹಾಕಿದ ರಾಜಕಾರಣಿಗಳು ಈಗ ಚುನಾವಣೆಗಳ ನಿಯಂತ್ರಣಕ್ಕಾಗಿ ಇರುವ ಕಾಯ್ದೆಯನ್ನು ನಿಷ್ಕ್ರಿಯಗೊಳಿಸಲು ಹೊರಟಿದ್ದಾರೆ.

ಚುನಾವಣೆಯ ಕಾಲದಲ್ಲಿ ಮತದಾರರಿಗೆ ಆಮಿಷವೊಡ್ಡುವುದು ಹಳೆಯ ಪದ್ಧತಿ, ಆ ಕಾಲದಲ್ಲಿ ಜಾರಿಯಲ್ಲಿರುವ ನೀತಿ ಸಂಹಿತೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳು ಚುನಾವಣೆಗಿಂತ ಮೊದಲೇ ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದಾದ್ಯಂತ ನಡೆಯುತ್ತಿರುವ ಇಂತಹ ಅಕ್ರಮ ಚಟುವಟಿಕೆಗಳ ನೋಟ ಇಲ್ಲಿದೆ.
.........................

ಚಿಕ್ಕಬಳ್ಳಾಪುರದ `ಸಮಾಜಸೇವಕರು~

ರಿಲಯನ್ಸ್ ಕಂಪೆನಿಯ ಉದ್ಯೋಗಿಯಾಗಿದ್ದ  ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಇದೇ ಕ್ಷೇತ್ರಕ್ಕೆ ಸೇರಿರುವ ಪೆರೇಸಂದ್ರ ಗ್ರಾಮದವರಾದ ಇವರು `ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್~ ಮೂಲಕ ಆಗಾಗ ಶಾಲಾ-ಕಾಲೇಜು ಮಕ್ಕಳಿಗೆ ನೋಟ್‌ಪುಸ್ತಕ, ಬಸ್‌ಪಾಸ್‌ಗಳನ್ನು ವಿತರಿಸುತ್ತಾರೆ. ರಂಗೋಲಿ ಸ್ಪರ್ಧೆ, ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತಾರೆ.

    ಜೆಡಿ(ಎಸ್)ನಲ್ಲಿದ್ದ ಇವರ ತಂದೆ ಮಗನೊಂದಿಗೆ ಕಾಂಗ್ರೆಸ್ ಸೇರಿದ್ದರು. ಇವರ `ಸಮಾಜಸೇವೆ~ಯ ವೈಖರಿಯಿಂದ ಅಸಮಾಧಾನಕ್ಕೀಡಾಗಿರುವ ಸ್ಥಳೀಯ ಕಾಂಗ್ರೆಸಿಗರು ಇವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಬಡಕುಟುಂಬದಿಂದ ಬಂದಿರುವ ಎಸ್.ಎನ್.ಸುಬ್ಬಾರೆಡ್ಡಿ ಸ್ಥಳೀಯವಾಗಿ ಸಾಮೂಹಿಕ ವಿವಾಹಕ್ಕೆ ಪ್ರಸಿದ್ಧಿ ಪಡೆದಿದ್ದಾರೆ. ಅವರದ್ದೇ ಟ್ರಸ್ಟ್‌ನಿಂದ ಈ ವಿವಾಹಗಳನ್ನು ನಡೆಸುತ್ತಾರೆ. ನೂತನ ದಂಪತಿಗಳಿಗೆ ಸೀಮೆ ಹಸುಗಳನ್ನು ನೀಡುವುದು ಇವರ ವಿಶೇಷ. ಬಡ ಕುಟುಂಬದಿಂದ ಬಂದಿರುವ ಸುಬ್ಬಾರೆಡ್ಡಿಯವರು ಊರು ಬಿಟ್ಟು ಬೆಂಗಳೂರು ಸೇರಿ ಹೋಟೆಲ್ ಉದ್ಯಮಿಯಾಗಿ ಬೆಳೆದದ್ದೇ ಇನ್ನೊಂದು ಕತೆ.
 
2008ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೇ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ ಸುಬ್ಬಾರೆಡ್ಡಿ ಅಂತಿಮ ಕ್ಷಣದಲ್ಲಿ ನಾಮಪತ್ರ ಹಿಂಪಡೆದಿದ್ದರು. ಇವರ ಆಸೆ ಕಾಂಗ್ರೆಸ್ ಟಿಕೆಟ್ ಮೇಲೆ.

ಕೋಲಾರದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿದ್ದ ಡಿ.ಆರ್. ಶಿವಕುಮಾರಗೌಡ `ಕರ್ಣಶ್ರೀ ಚಾರಿಟಬಲ್ ಟ್ರಸ್ಟ್~ ವತಿಯಿಂದ ಪುಸ್ತಕ ವಿತರಣೆ, ಗಣೇಶಮೂರ್ತಿಗಳ ವಿತರಣೆ, ಒಕ್ಕಲಿಗರ ಸಮಾವೇಶ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶಿಡ್ಲಘಟ್ಟದಲ್ಲಿ ಬೇರೂರಲು ಪ್ರಯತ್ನಿಸುತ್ತಿದ್ದಾರೆ.  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ.

ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ರಿಯಲ್ ಎಸ್ಟೇಟ್ ಉದ್ಯಮಿ ಜೆ.ಕೆ.ಕೃಷ್ಣಾರೆಡ್ಡಿಯವರು ಕ್ಷೇತ್ರದ ವೃದ್ಧರಿಗೆ ಉಚಿತವಾಗಿ ಧಾರ್ಮಿಕ ಕ್ಷೇತ್ರಗಳ ಪ್ರವಾಸ ನಡೆಸುತ್ತಿದ್ದಾರೆ.

ಕುಟುಂಬದ ಹಿರಿಯರನ್ನು ಒಲಿಸಿಕೊಂಡರೆ ಮನೆ ಮಂದಿಯದ್ದೆಲ್ಲ ಮತ ಬೀಳಬಹುದು ಎಂಬ ಲೆಕ್ಕಾಚಾರ ಇವರದ್ದು. ಸದ್ಯ ಜೆಡಿ (ಎಸ್) ಪಕ್ಷದಲ್ಲಿದ್ದಾರೆ. ಬೇರೆ ಪಕ್ಷಗಳು ಟಿಕೆಟ್ ಕೊಟ್ಟರೆ ಬೇಡ ಅನ್ನುವವರಲ್ಲ. ಅದಕ್ಕಾಗಿ ಈ ಕಸರತ್ತು.
 
* ರಾಹುಲ ಬೆಳಗಲಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT