ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರಿಗೆ ನೀರು, ನೆರಳಿನ ವ್ಯವಸ್ಥೆ

Last Updated 17 ಏಪ್ರಿಲ್ 2013, 20:24 IST
ಅಕ್ಷರ ಗಾತ್ರ

ಬೆಂಗಳೂರು:  `ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಒಟ್ಟಾರೆ 7,258 ಮತಗಟ್ಟೆ ತೆರೆಯಲಾಗಿದ್ದು, ಪ್ರತಿ ಮತಗಟ್ಟೆಯಲ್ಲಿ ಸರದಿಯಲ್ಲಿ ಕಾಯುವ ಮತದಾರರಿಗೆ ನೆರಳು, ನೀರು, ಶೌಚಾಲಯ ಸೇರಿದಂತೆ ಎಲ್ಲ ಸೌಕರ್ಯ ಒದಗಿಸಲಾಗುತ್ತದೆ' ಎಂದು ಬೆಂಗಳೂರು ನಗರ ಜಿಲ್ಲಾ ಮುಖ್ಯ ಚುನಾವಣಾಧಿಕಾರಿ, ಬಿಬಿಎಂಪಿ ಆಯುಕ್ತ ಸಿದ್ದಯ್ಯ ತಿಳಿಸಿದರು.

ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಸಿದ್ಧತೆಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಿದರು. `ಅಂಗವಿಕಲರನ್ನು ಮತಯಂತ್ರದವರೆಗೆ ಕರೆದೊಯ್ಯಲು ಪ್ರತಿ ಮತಗಟ್ಟೆಯಲ್ಲಿ ರ‌್ಯಾಂಪ್ ವ್ಯವಸ್ಥೆ ಮಾಡಲಾಗುತ್ತಿದೆ. ಅಂಧರೂ ಸೇರಿದಂತೆ ಯಾರೂ ಮತದಾನ ಮಾಡುವ ಅವಕಾಶದಿಂದ ವಂಚಿತರಾಗದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ' ಎಂದು ಹೇಳಿದರು.

`ಮತಗಟ್ಟೆಗಳಲ್ಲಿ 3,063 ಸಾಮಾನ್ಯ, 2,153 ಸೂಕ್ಷ್ಮ ಮತ್ತು 1,782 ಅತಿ ಸೂಕ್ಷ್ಮ ಎಂಬ ವಿಭಾಗ ಮಾಡಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳ ಬಳಿ ಅರೆ ಸೇನಾಪಡೆ ತುಕುಡಿಗಳನ್ನು ನಿಯೋಜನೆ ಮಾಡಲಾಗುತ್ತದೆ. ಅಂತಹ ಪ್ರದೇಶಗಳ ಬೆಳವಣಿಗೆ ಮೇಲೆ ವಿಶೇಷ ನಿಗಾ ವಹಿಸಲಾಗುತ್ತದೆ' ಎಂದು ತಿಳಿಸಿದರು.

ಚುನಾವಣಾ ಅಕ್ರಮಗಳ ಮೇಲೆ ಕಣ್ಣಿಡಲು ಪ್ರತಿ ಕ್ಷೇತ್ರಕ್ಕೆ ಆರರಂತೆ ಗಸ್ತು ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್, ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಸಶಸ್ತ್ರ ಪೊಲೀಸ್ ಪಡೆ ಮತ್ತು ವಿಡಿಯೊ ಛಾಯಾಗ್ರಾಹಕ ಇರುತ್ತಾರೆ. ಇದಲ್ಲದೆ ನಗರದ ಎಲ್ಲ ರಸ್ತೆಗಳಲ್ಲಿ ಓಡಾಡುವ ವಾಹನಗಳ ಮೇಲೆ ನಿಗಾ ಇಡಲು ಪ್ರತ್ಯೇಕ ತಂಡಗಳು ಕಾರ್ಯ ನಿರ್ವಹಿಸುತ್ತಿವೆ' ಎಂದು ವಿವರಿಸಿದರು.

`ಚುನಾವಣಾ ಕಾರ್ಯಕ್ಕೆ ಪೊಲೀಸರನ್ನು ಹೊರತುಪಡಿಸಿ 31,935 ಸಿಬ್ಬಂದಿ ಅಗತ್ಯವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಿ ಇಲಾಖೆಗಳ 48,000 ಜನ ನೌಕರರನ್ನು ಈ ಉದ್ದೇಶಕ್ಕಾಗಿ ಗುರುತಿಸಲಾಗಿದೆ.

ವೈದ್ಯಕೀಯ ಹಾಗೂ ಮದುವೆ ಸಮಾರಂಭದ ಕಾರಣದಿಂದ ವಿನಾಯ್ತಿ ನೀಡಬೇಕು ಎನ್ನುವ ಬೇಡಿಕೆ 300ಕ್ಕೂ ಅಧಿಕ ನೌಕರರಿಂದ ಬಂದಿದೆ. ನಿಜವಾದ ಸಮಸ್ಯೆ ಇದ್ದ ಪ್ರಕರಣಗಳಲ್ಲಿ ಮಾತ್ರ ವಿನಾಯ್ತಿ ನೀಡಲಾಗುವುದು' ಎಂದು ಮಾಹಿತಿ ನೀಡಿದರು.

`ಪ್ರತಿ ಕ್ಷೇತ್ರ ವ್ಯಾಪ್ತಿಯಲ್ಲಿ ಏ. 22, 28 ಮತ್ತು ಮೇ 4ರಂದು ಮೂರು ಹಂತದ ತರಬೇತಿಯನ್ನು ಸಿಬ್ಬಂದಿಗೆ ನೀಡಲಾಗುವುದು. ಸಿಬ್ಬಂದಿ ವಾಸವಿರುವ ಹಾಗೂ ಕಾರ್ಯ ನಿರ್ವಹಿಸುವ ಪ್ರದೇಶ ಹೊರತುಪಡಿಸಿ ಮೂರನೇ ಸ್ಥಳದಲ್ಲಿ ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುವುದು' ಎಂದು ತಿಳಿಸಿದರು.`ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಇದುವರೆಗೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದ್ದು, ವಿವಿಧ ಹಂತಗಳಲ್ಲಿ ವಿಚಾರಣೆ ನಡೆಯುತ್ತಿದೆ.

ಈ ಪ್ರಕರಣಗಳಿಗೆ ಕಾರಣವಾದ ಪಕ್ಷ ಮತ್ತು ಅಭ್ಯರ್ಥಿಗಳ ಶೋಧದ ಕಾರ್ಯವೂ ನಡೆದಿದೆ' ಎಂದು ಹೇಳಿದರು. `ಎಲ್ಲ 28 ಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕರು ನಗರಕ್ಕೆ ಆಗಮಿಸಿದ್ದು, ತಮ್ಮ ಜವಾಬ್ದಾರಿ ವಹಿಸಿಕೊಂಡಿದ್ದಾರೆ' ಎಂದ ಅವರು, `ಚುನಾವಣಾ ಅಕ್ರಮ ಸಾಮಗ್ರಿಗಳ ದಾಸ್ತಾನಿಗೆ ವಿವಿಧ ಕಡೆಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ' ಎಂದು ತಿಳಿಸಿದರು.

ಪ್ರಚಾರ ಕಾರ್ಯ: `ಕಳೆದ ಸಲ ವಿಧಾನಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಕಡಿಮೆ ಮತದಾನವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮತದಾನಕ್ಕೆ ಪ್ರೋತ್ಸಾಹ ನೀಡಲು ವ್ಯಾಪಕ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗಿದೆ.

ನಗರದ ಎಲ್ಲ ಪ್ರಮುಖ ವೃತ್ತಗಳಲ್ಲಿ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಬ್ಯಾನರ್‌ಗಳನ್ನು ಕಟ್ಟಲಾಗಿದೆ. ಐಟಿ ಪಾರ್ಕ್ ಸೇರಿದಂತೆ ಹೊಸೂರು ರಸ್ತೆಯೊಂದರಲ್ಲೇ 250ಕ್ಕೂ ಅಧಿಕ ಬ್ಯಾನರ್ ಕಟ್ಟಲಾಗಿದೆ. ಮತದಾರರ ಜಾಗೃತಿ ವಾಹನಗಳೂ ಪ್ರಚಾರ ಕಾರ್ಯದಲ್ಲಿ ತೊಡಗಿವೆ.

ಬಿಎಂಟಿಸಿಯ 800 ಬಸ್‌ಗಳಲ್ಲಿ ಚುನಾವಣಾ ಸಂದೇಶಗಳನ್ನು ಅಂಟಿಸಲಾಗಿದೆ' ಎಂದು ವಿವರಿಸಿದರು. ಬಿಬಿಎಂಪಿ ಹೆಚ್ಚುವರಿ ಆಯುಕ್ತರಾದ ಡಾ. ಆರ್. ವಿಶಾಲ್ ಮತ್ತು ಡಾ.ಕೆ.ವಿ. ತ್ರಿಲೋಕಚಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT