ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಪಟ್ಟಿ ಪರಿಷ್ಕರಣೆಗೆ ಮತ್ತೊಮ್ಮೆ ಅವಕಾಶ

Last Updated 6 ಫೆಬ್ರುವರಿ 2012, 4:45 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಚುನಾವಣೆಗಳಲ್ಲಿ ನೀವು ಕಡ್ಡಾಯವಾಗಿ ಮತದಾನ ಮಾಡಬೇಕೆ? ಹಾಗಾದರೆ ಕೂಡಲೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಿ?

ಏಕೆಂದರೆ, ಈ ಹಿಂದೆ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಭಾವಚಿತ್ರ ನೀಡದಂತಹ ನಗರದ ಸುಮಾರು 14 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ!

ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಕಾಣೆಯಾಗಿದ್ದರೆ ಅಥವಾ ಹೆಸರು, ವಿಳಾಸದಲ್ಲಿ ಬದಲಾವಣೆಯಾಗಿದ್ದಲ್ಲಿ ಅದಕ್ಕೆ ಗಾಬರಿಪಡುವ ಅಗತ್ಯವಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಮತ್ತೆ ಅವಕಾಶ ಕಲ್ಪಿಸಿದೆ.

2011ರ ನವೆಂಬರ್ 1ಕ್ಕೆ ಅನ್ವಯವಾಗುವಂತೆ ಸಿದ್ಧಪಡಿಸಲಾದ ಮತದಾರರ ಕರಡು ಪಟ್ಟಿಯನ್ನು ಪರಿಷ್ಕರಿಸಿದ ಆಯೋಗ, ಜನವರಿ 5ರಂದು ಈ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಪಟ್ಟಿಯಲ್ಲಿ ಮತದಾರರ ಹೆಸರು ಇಲ್ಲದ ಪಕ್ಷದಲ್ಲಿ ಸಮೀಪದ ಪಾಲಿಕೆ ವಾರ್ಡ್ ಕಚೇರಿಯಲ್ಲಿ ನಮೂನೆ-6 ಅನ್ನು ದ್ವಿಪ್ರತಿಯಲ್ಲಿ ಸಲ್ಲಿಸಬಹುದು. ಅಲ್ಲದೆ, ಹೆಸರು ಕೈಬಿಡಲು ನಮೂನೆ-7, ವ್ಯತ್ಯಾಸ ಸರಿಪಡಿಸಲು ನಮೂನೆ-8, ಬದಲಾವಣೆಗೆ ನಮೂನೆ 8(ಎ) ಸಲ್ಲಿಸಬಹುದು. ಮತದಾರರು ವಯಸ್ಸು ಹಾಗೂ ವಿಳಾಸ ದೃಢೀಕರಣಕ್ಕಾಗಿ ಅರ್ಜಿ ನಮೂನೆ ಜತೆಗೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಹಾಗೂ ವಿಳಾಸ ದೃಢೀಕರಣದ ದಾಖಲೆ ಪತ್ರ ಸಲ್ಲಿಸಬೇಕಾಗುತ್ತದೆ.

ನಮೂನೆ ಸ್ವೀಕರಿಸಿದ ನಂತರ ಅದನ್ನು ಸ್ಕ್ಯಾನ್ ಮಾಡಿ, ಮತದಾರರಿಗೆ ನಿರ್ದಿಷ್ಟ ಸಂಖ್ಯೆ ನೀಡಲಾಗುತ್ತದೆ. ಆನಂತರ ಸಿಬ್ಬಂದಿ ಮನೆ-ಮನೆಗೆ ತೆರಳಿ ಪರಿಶೀಲಿಸಿದ ನಂತರ ಪಟ್ಟಿಯನ್ನು 15ರಿಂದ 20 ದಿನಗಳಲ್ಲಿ ಅಂತಿಮಗೊಳಿಸಿ, ಚುನಾವಣಾ ಆಯೋಗಕ್ಕೆ ಸಲ್ಲಿಸಲಿದೆ. ಆಯೋಗ ಅಂತಿಮವಾಗಿ ಮತದಾರರ ಪಟ್ಟಿ ಪ್ರಕಟಿಸಲಿದೆ.

ಮುಂಬರುವ ಚುನಾವಣೆಗಳಲ್ಲಿ ವಿದ್ಯುನ್ಮಾನ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಕಡ್ಡಾಯಗೊಳಿಸಲು ಚುನಾವಣಾ ಆಯೋಗ ಚಿಂತಿಸುತ್ತಿದೆ. ಬೆಂಗಳೂರು ನಗರದಲ್ಲಿ ಇದುವರೆಗೆ ಶೇ 79ರಿಂದ 80ರಷ್ಟು ಮತದಾರರಿಗೆ ಮಾತ್ರ ಮಂದಿಗೆ ವಿದ್ಯುನ್ಮಾನ ಭಾವಚಿತ್ರವಿರುವ ಗುರುತಿನ ಚೀಟಿ ನೀಡಲಾಗಿದೆ. ಆದರೆ, ರಾಜ್ಯದಲ್ಲಿ ಈ ಪ್ರಮಾಣ ಶೇ 90.61ರಷ್ಟಿದೆ. ಬೆಂಗಳೂರಿನ ವ್ಯತ್ಯಾಸ ಸರಿಪಡಿಸಿದಲ್ಲಿ ಶೇ 94ರಷ್ಟು ಮಂದಿಗೆ ವಿದ್ಯುನ್ಮಾನ ಭಾವಚಿತ್ರವಿರುವ ಗುರುತಿನ ಚೀಟಿ ನೀಡಲು ಸಾಧ್ಯವಾಗಲಿದೆ.

ಮತದಾರರ ಹೆಸರು, ಭಾವಚಿತ್ರ, ವಿಳಾಸ ಅದಲು-ಬದಲಾಗುವುದನ್ನು ತಪ್ಪಿಸಲು ನಮೂನೆಯನ್ನೇ ಸ್ಕ್ಯಾನ್ ಮಾಡಿ ನಿರ್ದಿಷ್ಟ ಸಂಖ್ಯೆ ನೀಡುವುದರಿಂದ ಮುಂದಿನ ದಿನಗಳಲ್ಲಿ ತಪ್ಪುಗಳಿಗೆ ಅವಕಾಶ ಇರುವುದಿಲ್ಲ. ಹೀಗಾಗಿ, ಮತದಾರರು ನಮೂನೆ ಜತೆಗೆ ಭಾವಚಿತ್ರ ನೀಡುವುದು ಕಡ್ಡಾಯ. ಭಾವಚಿತ್ರ ಲಗತ್ತಿಸದ ನಮೂನೆಗಳನ್ನು ಸ್ವೀಕರಿಸುವುದೇ ಇಲ್ಲ ಎನ್ನುತ್ತಾರೆ ಪಾಲಿಕೆಯ ಚುನಾವಣಾ ವಿಭಾಗದ ಅಧಿಕಾರಿಯೊಬ್ಬರು.

ಇನ್ನು, 2012ರ ಜನವರಿ 1ಕ್ಕೆ 18 ವರ್ಷ ತುಂಬಿದ ಯುವಕ-ಯುವತಿಯರು ಮುಂದಿನ ಮುಂದಿನ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸುವುದಕ್ಕೆ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ಅವಕಾಶವಿದೆ. ಈ ಹಿಂದೆ ಮತದಾರರ ನೋಂದಣಿ ಆಂದೋಲನ ನಡೆಸಿದ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ವ್ಯಾಪಕ ಜಾಹೀರಾತು ನೀಡಿದ್ದರ ಜತೆಗೆ, ಸಂಬಂಧಪಟ್ಟವರಿಗೆ ಏಳು ದಿನಗಳೊಳಗಾಗಿ ಭಾವಚಿತ್ರ ನೀಡುವಂತೆ ನೋಟಿಸ್ ಜಾರಿಗೊಳಿಸಲಾಗಿತ್ತು.
 
ಆದರೂ ಸಕಾಲದಲ್ಲಿ ಭಾವಚಿತ್ರ ಒದಗಿಸದ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಪಾಲಿಕೆಯ ಚುನಾವಣಾ ವಿಭಾಗದ ಮೂಲಗಳು ತಿಳಿಸಿವೆ. ನಿಧನರಾದವರ, ಸ್ಥಳಾಂತರಗೊಂಡವರ ಜತೆಗೆ ನಿರ್ದಿಷ್ಟ ವಿಳಾಸ ನೀಡಿದ್ದರೂ ಅಲ್ಲಿ ವಾಸವಿಲ್ಲದವರ ಬಗ್ಗೆ ಸರ್ವೆ ನಡೆಸಿದ ನಂತರ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವ ಮುನ್ನ ಸ್ಥಳ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ, ಈ ಸಂಬಂಧ ಆ ಪ್ರದೇಶದ ನಾಲ್ವರ ಸಹಿಯನ್ನು ಪಡೆಯಲಾಗಿದೆ ಎಂದು ಈ ಮೂಲಗಳು ಸ್ಪಷ್ಟಪಡಿಸಿವೆ.

 4.13 ಕೋಟಿ ಮತದಾರರು:  ಇನ್ನು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಜ. 5ರಂದು ಪ್ರಕಟಿಸಿದ ಪಟ್ಟಿ ಪ್ರಕಾರ, 4.13 ಕೋಟಿ ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಸತ್ತವರು, ಸ್ಥಳಾಂತರ, ಹೆಚ್ಚುವರಿಯಾಗಿ ಹೆಸರು ಸೇರ್ಪಡೆ, ಪುನರಾವರ್ತನೆಯಾದಂತಹ ಹಾಗೂ ಭಾವಚಿತ್ರ ನೀಡದ 18 ಲಕ್ಷ (ಬೆಂಗಳೂರು ಸೇರಿ) ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಒಟ್ಟು ಜನಸಂಖ್ಯೆಯ ಪೈಕಿ ಶೇ 65ರಿಂದ 70ರಷ್ಟು ಮಂದಿ ಮತದಾರರು ಮತ ಚಲಾಯಿಸುವ ಅರ್ಹತೆ ಪಡೆಯಲಿದ್ದಾರೆ. ಪ್ರತಿ ವರ್ಷ 18 ವರ್ಷ ತುಂಬಿದ 5ರಿಂದ 6 ಲಕ್ಷ ಹೊಸ ಮತದಾರರು ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ಮತದಾರರ ನೋಂದಣಿ ನಿರಂತರ ಪ್ರಕ್ರಿಯೆ. ಹೀಗಾಗಿ, ಹೆಸರು ಸೇರ್ಪಡೆ, ಮಾರ್ಪಾಡಿಗೆ ಇದೊಂದು ಅವಕಾಶ ಎನ್ನುತ್ತಾರೆ ರಾಜ್ಯ ಚುನಾವಣಾ ಆಯೋಗದ ಜಂಟಿ ಮುಖ್ಯ ಚುನಾವಣಾಧಿಕಾರಿ ಟಿ. ಶಾಮಯ್ಯ.

ಬೆಂಗಳೂರು ನಗರದಲ್ಲಿ ಆಯಾ ವಾರ್ಡ್ ಕಚೇರಿ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ತಾಲ್ಲೂಕು ಕಚೇರಿ, ಕಂದಾಯ ಕಚೇರಿಗಳಲ್ಲಿ ನಮೂನೆ ಸಲ್ಲಿಸಲು ಅವಕಾಶವಿದೆ. ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರು ಈಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣಾ ಆಯೋಗದ ಮತದಾರರ ಪಟ್ಟಿಯಲ್ಲಿ ತಮ್ಮ ಭಾವಚಿತ್ರ ಹಾಗೂ ಹೆಸರಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಲು ಇದು ಸಕಾಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT