ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಪಟ್ಟಿಗೆ ಹೆಸರು: 43,496 ಅರ್ಜಿ

Last Updated 9 ಏಪ್ರಿಲ್ 2013, 9:03 IST
ಅಕ್ಷರ ಗಾತ್ರ

ಕೋಲಾರ: ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಸಲುವಾಗಿ ಜಿಲ್ಲೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ 43 ಸಾವಿರ ಮೀರಿದೆ. ಏ.10ರ ಒಳಗೆ ಅವುಗಳ ಪರಿಶೀಲನೆ ಕೆಲಸ ಮುಗಿಯಬೇಕಿರುವುದರಿಂದ ಅದಕ್ಕಾಗಿ ನಿಯೋಜಿತರಾಗಿರುವ ಸಿಬ್ಬಂದಿ ಹಗಲು-ರಾತ್ರಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಜಿಲ್ಲೆಯ ಎಲ್ಲ ತಹಶೀಲ್ದಾರ್ ಕಚೇರಿಗಳು ಈಗ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಎಂಬ ಜ್ವರದಲ್ಲಿ ಬಿಸಿಯಾಗಿವೆ. ಎಲ್ಲಿ ನೋಡಿದರೂ ಅರ್ಜಿಗಳ ಕಡತಗಳು, ಅವುಗಳ ಪರಿಶೀಲನೆ, ಕಂಪ್ಯೂಟರ್‌ಗೆ ಮಾಹಿತಿಗಳ ಅಳವಡಿಕೆ ಕೆಲಸವೇ ನಡೆಯುತ್ತಿದೆ.

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆಕಾಂಕ್ಷಿಗಳಿಂದ ಅರ್ಜಿಗಳನ್ನು ಜ.16ರಿಂದ ಸ್ವೀಕರಿಸಲಾರಂಭಿಸಲಾಗಿತ್ತು. ಅರ್ಜಿ ಸಲ್ಲಿಸುವ ಕೊನೆ ದಿನವಾದ ಏ.7ರವರೆಗೆ ಜಿಲ್ಲೆಯಲ್ಲಿ ಒಟ್ಟು 43,496 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ, ಕೋಲಾರ ಮತ್ತು ಬಂಗಾರಪೇಟೆಯಲ್ಲಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದರಿಂದ ಇಲ್ಲಿನ ಸಿಬ್ಬಂದಿಗೆ ಹೆಚ್ಚಿನ ಜವಾಬ್ದಾರಿ ಏರ್ಪಟ್ಟಿದೆ. ಕೋಲಾರ ತಾಲ್ಲೂಕಿನಲ್ಲಿ 13,136, ಬಂಗಾರಪೇಟೆ ತಾಲ್ಲೂಕಿನಲ್ಲಿ 8538 ಅರ್ಜಿಗಳು ಸಲ್ಲಿಕೆಯಾಗಿವೆ.

ಹಗಲು-ರಾತ್ರಿ: ಅರ್ಜಿ ಸ್ವೀಕರಿಸಲು ಕೊನೆ ದಿನವಾದ ಭಾನುವಾರ ನಾವೆಲ್ಲರೂ ರಾತ್ರಿ 10 ಗಂಟೆವರೆಗೂ ಕೆಲಸ ಮಾಡಿದೆವು. ರಾಶಿರಾಶಿ ಅರ್ಜಿಗಳು ಬಂದಿರುವುದರಿಂದ ಅವುಗಳೆಲ್ಲವನ್ನೂ ಮೊದಲಿಗೆ ಕಂಪ್ಯೂಟರ್‌ನಲ್ಲಿ ದಾಖಲಿಸುವ ಕೆಲಸ ಕಡ್ಡಾಯವಾಗಿದೆ. ಆ ಕೆಲಸ ಮುಗಿಯಲು ಇನ್ನೂ ಕೆಲ ದಿನಗಳು ಬೇಕಾಗುತ್ತವೆ ಎಂದು ಸಿಬ್ಬಂದಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ಗ್ರಾಮ ಲೆಕ್ಕಿಗರಿಗೆ ಜವಾಬ್ದಾರಿ: ಮತದಾರರ ಅರ್ಜಿಗಳನ್ನು ಪರಿಶೀಲಿಸುವುದಷ್ಟೇ ಅಲ್ಲದೆ, ಸ್ಥಳಕ್ಕೆ ತೆರಳಿ ದಾಖಲೆಗಳ ಪರಿಶೀಲನೆ ಮಾಡುವ ಕೆಲಸವನ್ನೂ ಗ್ರಾಮ ಲೆಕ್ಕಿಗರಿಗೆ ವಹಿಸಿರುವುದರಿಂದ ಅವರೆಲ್ಲರೂ ಸ್ಥಳ ಪರಿಶೀಲನೆಯ ಹೆಚ್ಚುವರಿ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಸಲ್ಲಿಕೆಯಾಗಿರುವ ಅರ್ಜಿಗಳ ಜತೆಗೆ ವಿಳಾಸ ಮತ್ತು ವಯಸ್ಸಿನ ದೃಢೀಕರಣದ ದಾಖಲೆಸಲ್ಲಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ಮಾಡುವುದು. ದಾಖಲೆಗಳಿಲ್ಲದ ಅರ್ಜಿಗಳನ್ನು ತಿರಸ್ಕರಿಸುವುದು ಮೊದಲಿಗೆ ಮಾಡಬೇಕಾದ ಕೆಲಸ. ನಂತರ, ಸ್ವೀಕೃತವಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ, ವಿಳಾಸ ಪರಿಶೀಲನೆ ಮಾಡಬೇಕಿದೆ. ನಿಗದಿತ ದಿನದೊಳಗೆ ಈ ಕೆಲಸಗಳನ್ನು ಮಾಡಬೇಕಿರುವುದರಿಂದ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದೇವೆ ಎಂದು ಗ್ರಾಮ ಲೆಕ್ಕಿಗರೊಬ್ಬರು ತಿಳಿಸಿದರು.

ಇಂದೂ ಸ್ವೀಕಾರ
ಬ್ಲಾಕ್‌ಹಂತದ ಮತಗಟ್ಟೆ ಅಧಿಕಾರಿಗಳು ಸಾರ್ವಜನಿಕರಿಂದ ಭಾನುವಾರ ಸ್ವೀಕರಿಸಿದ ಅರ್ಜಿಗಳನ್ನು ಎಲ್ಲ ತಹಶೀಲ್ದಾರ್ ಕಚೇರಿಗಳಲ್ಲಿ ಸೋಮವಾರ ಸ್ವೀಕರಿಸಲಾಯಿತು. ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಕೆಯಾದ ಅರ್ಜಿಗಳ ಅಂಕಿ-ಅಂಶವನ್ನು ಭಾನುವಾರವೇ ಪಡೆದು ಚುನಾವಣೆ ಆಯೋಗಕ್ಕೆ ಮಾಹಿತಿಗಾಗಿ ನೀಡಲಾಗಿದೆ. ಏ.14ರ ಒಳಗೆ ಅರ್ಜಿಗಳ ಪರಿಶೀಲನೆ ಕಾರ್ಯ ಮುಗಿಸಿ 17ರಂದು ಅಂತಿಮ ಪಟ್ಟಿ ಪ್ರಕಟಿಸಬೇಕಿದೆ ಎಂದು ಕೋಲಾರ ತಹಶೀಲ್ದಾರ್ ಕಚೇರಿ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಕಂಟ್ರೋಲ್ ರೂಂಗೆ ಸ್ಥಳಾಭಾವ!
ಚುನಾವಣೆ ವೆಚ್ಚಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಸಲುವಾಗಿ ನಗರ ತಹಶೀಲ್ದಾರ್ ಕಚೇರಿಯಲ್ಲಿ ತೆರೆಯಲಾಗಿರುವ ಕಂಟ್ರೋಲ್ ರೂಂಗೆ ಸ್ಥಳಾವಕಾಶದ ಕೊರತೆ ಎದುರಾಗಿದೆ. ಕಂಟ್ರೋಲ್ ರೂಂಗೆಂದು ಮೀಸಲಾಗಿರುವ ಕೊಠಡಿಯಲ್ಲಿ ಮತದಾರರ ಅರ್ಜಿಗಳ ಪರಿಶೀಲನೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕಂಟ್ರೋಲ್ ರೂಂ ಸಿಬ್ಬಂದಿ ಕೋಲಾರ ಕ್ಷೇತ್ರದ ಚುನಾವಣಾಧಿಕಾರಿ ಡಾ.ವೆಂಕಟೇಶಮೂರ್ತಿ ಕೊಠಡಿಯಲ್ಲಿ ಕುಳಿತಿರಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

ದೂರು ಸ್ವೀಕರಿಸಲು ಅಗತ್ಯವಿರುವ ದೂರವಾಣಿ, ಫ್ಯಾಕ್ಸ್ ಮತ್ತಿತರ ಸಾಧನಗಳು ಮತ್ತೊಂದು ಕೊಠಡಿಯಲ್ಲಿರುವುದರಿಂದ, ಸಿಬ್ಬಂದಿ ಬಳಿ ಸದ್ಯಕ್ಕೆ ದೂರು ದಾಖಲಿಸುವ ರಿಜಿಸ್ಟರ್ ಮಾತ್ರ ಇದೆ. ಕಂಟ್ರೋಲ್ ರೂಂಗೆ ಯಾವುದೇ ದೂರು ಇದುವರೆಗೂ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT