ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರದ ಅನುಭವ ಕಥನ

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

`ಮತಾಂತರಗೊಂಡ ಕ್ರೈಸ್ತರನ್ನು ಅವರ ಕುಟುಂಬ ಯಾವ ರೀತಿ ಕಾಣುತ್ತದೆಯೋ ಗೊತ್ತಿಲ್ಲ. ಆದರೆ, ಚರ್ಚ್ ಮಾತ್ರ ಅವರನ್ನು ಸಂಪೂರ್ಣವಾಗಿ ಕ್ರಿಶ್ಚಿಯನ್ನರು ಎಂದು ಒಪ್ಪಿಕೊಳ್ಳುತ್ತದೆ. ಮತಾಂತರಗೊಂಡ ನಂತರ ಅವರ ಜೀವನಶೈಲಿ, ಆಚರಣೆ ಕೂಡ ನಮಗಿಂತ ಭಿನ್ನವೇನೂ ಇರುವುದಿಲ್ಲ. ಮತಾಂತರಿಗಳನ್ನು ಕೂಡ ಚರ್ಚ್ ಮೂಲ ಕ್ರಿಶ್ಚಿಯನ್ನರಂತೆಯೇ ನಡೆಸಿಕೊಳ್ಳುತ್ತದೆ. ಮೂಲ ಕ್ರಿಶ್ಚಿಯನ್ನರ ಕ್ರಿಸ್‌ಮಸ್ ಆಚರಣೆ ಯಾವ ರೀತಿ ಇರುತ್ತದೆಯೋ ಮತಾಂತರಗೊಂಡವರದ್ದೂ ಅದೇ ರೀತಿ ಇರುತ್ತದೆ' ಎಂದು ಮಾತು ಪ್ರಾರಂಭಿಸಿದರು ಶಿವಾಜಿನಗರದಲ್ಲಿರುವ ಸಂತ ಮರಿಯ ಬೆಸಿಲಿಕ ಫಾದರ್ ಎಲ್.ಅರುಳಪ್ಪ.

`ಯಾರ ಮೇಲೆಯೂ ಒತ್ತಡ ಹೇರಿಯಾಗಲೀ ಆಮಿಷ ಒಡ್ಡಿಯಾಗಲೀ ನಮ್ಮ ಧರ್ಮಕ್ಕೆ ಸೇರಿಸಿಕೊಳ್ಳುವುದಿಲ್ಲ. ಸ್ವಇಚ್ಛೆಯಿಂದ ಬಂದವರನ್ನು ಮಾತ್ರ ಮತಾಂತರ ಮಾಡಿಕೊಳ್ಳುತ್ತೇವೆ. ಬಂದೊಡನೆಯೇ ಮತಾಂತರಗೊಳಿಸಲೂ ಅವಕಾಶ ಇಲ್ಲಿಲ್ಲ.  ಅಂಥವರನ್ನು ಮೊದಲಿಗೆ ಸಮಾಲೋಚನೆಗೆ ಒಳಪಡಿಸುತ್ತೇವೆ. ಚರ್ಚ್‌ಗೆ ಅವರ ನಡೆ, ನುಡಿ, ಉದ್ದೇಶ ಇಷ್ಟವಾದರೆ ಮಾತ್ರ ಮುಂದಿನದ್ದು.

ಬಂದವರು ಸ್ವಇಚ್ಛೆಯಿಂದ ಬಂದಿದ್ದಾರೆ ಎಂಬುದು ಮನವರಿಕೆಯಾದ ನಂತರ ಮೂರು ತಿಂಗಳ ತರಬೇತಿ ನೀಡುತ್ತೇವೆ. ಕ್ರೈಸ್ತರ ಆಚರಣೆ, ಪ್ರಾರ್ಥನೆ ಸಲ್ಲಿಸುವ ವಿಧಾನ, ಕ್ರೈಸ್ತ ಧರ್ಮ ಎಂದರೇನು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ಮತಾಂತರ ಬಯಸಿ ಬರುವ ವ್ಯಕ್ತಿಗಳ ಪೋಷಕರ ಅಭಿಪ್ರಾಯ ಸಂಗ್ರಹಿಸಿ ಅವರಿಂದ ಯಾವುದೇ ತಕರಾರು ಇಲ್ಲದಿದ್ದರೆ ಮಾತ್ರ ಅವರಿಗೆ ದೀಕ್ಷೆ ನೀಡಲಾಗುವುದು' ಎನ್ನುತ್ತಾರೆ ಅವರು.  

ಶಿವಾಜಿನಗರ ಚರ್ಚ್‌ನಲ್ಲಿ ವರ್ಷಕ್ಕೆ 20ರಿಂದ 25 ಜನ ಮತಾಂತರಗೊಳ್ಳುತ್ತಾರೆ. ಅವರಲ್ಲಿ ಅನೇಕರು ಮೇಲ್ಮಧ್ಯಮ ವರ್ಗದವರು. ಐಟಿ-ಬಿಟಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಹುಡುಗರು. ಕ್ರೈಸ್ತ ಶಾಲೆಯಲ್ಲಿ ಓದಿದವರು ಹೆಚ್ಚಾಗಿ ಮತಾಂತರದತ್ತ ಒಲವು ತೋರಿಸುತ್ತಿದ್ದಾರೆ. ಪ್ರೀತಿಗಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಉದಾಹರಣೆಗಳು ಸಾಕಷ್ಟಿವೆಯಂತೆ. `ಐಟಿ ಹುಡುಗನೊಬ್ಬ ಕ್ರಿಶ್ಚಿಯನ್ ಹುಡುಗಿಯನ್ನು ಪ್ರೀತಿಸುತ್ತಾನೆ.

ಆ ಮನೆಯವರು ಬೇರೆ ಜಾತಿ ಹುಡುಗನನ್ನು ಮದುವೆಯಾಗಲು ಒಪ್ಪುವುದಿಲ್ಲ ಎಂದಿಟ್ಟುಕೊಳ್ಳಿ. ಪರಸ್ಪರ ಪ್ರೀತಿ ಮಾಡುತ್ತಿರುವ ಹುಡುಗ ಹುಡುಗಿಯರು ಒಬ್ಬರೊನ್ನಬ್ಬರು ಬಿಟ್ಟಿರಲಾಗದೆ ಇಬ್ಬರಲ್ಲಿ ಒಬ್ಬರು ಮತಾಂತರಗೊಳ್ಳುತ್ತಾರೆ. ಮತ್ತೆ ಕೆಲವರು ಕ್ರಿಶ್ಚಿಯನ್ ಶಾಲೆಗಳಲ್ಲಿ ಓದಿದವರು ಚರ್ಚ್‌ನ ಆಚರಣೆ, ಸಂಪ್ರದಾಯಗಳನ್ನು ಮೆಚ್ಚಿ ಸ್ವಇಚ್ಛೆಯಿಂದಲೇ ಬರುತ್ತಾರೆ' ಎಂಬುದು ಫಾದರ್ ಅರುಳಪ್ಪ ನೀಡುವ ವಿವರಣೆ.

`ಒಮ್ಮೆ ಮತಾಂತರಗೊಂಡವರು ಜೀವನಪೂರ್ತಿ ಇಲ್ಲೇ ಇರಬೇಕೆಂಬ ನಿರ್ಬಂಧವನ್ನು ಚರ್ಚ್ ಎಂದಿಗೂ ಹೇರುವುದಿಲ್ಲ. ಆದರೆ, ಕ್ರೈಸ್ತರಾಗಿ ಮತಾಂತರಗೊಂಡವರು ಚರ್ಚ್‌ನ ನಿಯಮಕ್ಕೆ ಬದ್ಧರಾಗಿ ನಡೆಯಲೇಬೇಕು. ಇದು ನಮ್ಮಲ್ಲಿನ ನಿಯಮ. ಮತಾಂತರಗೊಂಡವರಿಗೆ ಯಾವುದೇ ಧರ್ಮದವರನ್ನು ವರಿಸುವ ಆಯ್ಕೆ ಇರುತ್ತದೆ.  ಚರ್ಚ್ ಎಂದಿಗೂ ನಮ್ಮದೇ ಜಾತಿಯ ಕನ್ಯೆಯನ್ನು ಮದುವೆ ಆಗಬೇಕು ಎಂದು ಒತ್ತಡ ಹೇರುವುದಿಲ್ಲ. ಬೇರೆ ಜಾತಿಯವರೊಂದಿಗೆ ವಿವಾಹವಾದರೆ ಹೊಂದಾಣಿಕೆ ಸಮಸ್ಯೆ ಎದುರಾಗುವ ಸಂಭವ ಹೆಚ್ಚಿರುವುದರಿಂದ ನಮ್ಮದೇ ಸಮುದಾಯದ ವಧುವನ್ನು ವರಿಸುವಂತೆ ಸೂಚಿಸುತ್ತೇವೆ ಅಷ್ಟೆ' ಎಂಬುದು ಅವರು ನೀಡುವ ಸ್ಪಷ್ಟನೆ.

ಪಾಂಡು `ಸುಜ್ಞಾನ್' ಆದದ್ದು...
“ಹೆಸರು ಪಾಂಡು. ಬೆಳೆದಿದ್ದು ಸುಂಕದ ಕಟ್ಟೆಯಲ್ಲಿರುವ ಅಜ್ಜಿ ಮನೆಯಲ್ಲಿ. ಕೂಡು ಕುಟುಂಬದಲ್ಲಿ ಎರಡನೇ ಮಗನಾಗಿ ಜನಿಸಿದವನು ನಾನು. ಓದಿದ್ದು ಪದವಿ. ಅದರಿಂದೇನೂ ಉಪಯೋಗವಿಲ್ಲ ಎಂಬುದು ಅರಿವಾಗುವ ವೇಳೆಗಾಗಲೇ ವಯಸ್ಸು 28 ದಾಟಿತ್ತು. ಮನೆಯಲ್ಲಿ ಆರ್ಥಿಕ ಮುಗ್ಗಟ್ಟು. ನನಗೆ ಉದ್ಯೋಗ ಮಾಡುವುದು ಅನಿವಾರ್ಯವಾಗಿತ್ತು. ಆಗ ನನಗಿಂತ ಹತ್ತು ಹನ್ನೆರಡು ವರ್ಷ ಚಿಕ್ಕ ವಯಸ್ಸಿನ ಮಕ್ಕಳೊಂದಿಗೆ ಕುಳಿತು ಐಟಿಐ ಮುಗಿಸಿದೆ.  ತರಬೇತಿ ಮುಗಿಸಿ ಬಂದಾಗ ಮತ್ತೆ ನನ್ನನ್ನು ಕಾಡಿದ್ದು ಅದೇ ಶೂನ್ಯತೆ.

ಕೊನೆಗೂ ಬಿಡದಿ ಬಳಿ ಇರುವ ಟೊಯೊಟಾ ಕಂಪೆನಿಯೊಂದರಲ್ಲಿ ನನಗೆ ಉದ್ಯೋಗ ಸಿಕ್ಕಿತು. ಆ ವೇಳೆ ತಂಗಿಯ ಸ್ನೇಹಿತೆಯ ಮೂಲಕ ದೂರವಾಣಿಯಲ್ಲಿ ಪರಿಚಯವಾಗಿದ್ದು ಕ್ರೈಸ್ತ ಹುಡುಗಿ ಅನಿತಾ. ಫೋನ್‌ನಲ್ಲಿ ಆಕೆ ಜತೆ ಮೊದಲ ಸಾರಿ ಮಾತನಾಡಿದಾಗ ಆಕೆಯ ಧ್ವನಿ ಇಷ್ಟವಾಯ್ತು. ಫೋನ್‌ನಲ್ಲಿ ನಿತ್ಯ ಸಂಭಾಷಣೆ ನಡೆಯುತ್ತಲೇ ಇತ್ತು. ಮೊದಲೆಲ್ಲಾ ಔಪಚಾರಿಕವಾಗಿದ್ದ ನಮ್ಮ ಮಾತುಗಳು ನಂತರ ಖಾಸಗಿ ಸಂಗತಿಗಳ ವಿನಿಮಯದತ್ತ ತಿರುಗಿತು. ಅಲ್ಲಿಂದ ಸಲುಗೆ. ಒಂಡೆರೆಡು ಬಾರಿ ಮನೆಯವರ ಕಣ್ಣು ತಪ್ಪಿಸಿ ಭೇಟಿಯಾದೆವು. ನಂತರ ಪ್ರೀತಿ ಹುಟ್ಟಿತು. ಇಬ್ಬರೂ ಮದುವೆಯ ನಿರ್ಧಾರಕ್ಕೆ ಬಂದೆವು.

ಮದುವೆಯಾಗಲು ಅನಿತಾ ಕೂಡ ಒಪ್ಪಿದರು. ಆದರೆ, ಆಕೆ ನಾನು ಕ್ರಿಶ್ಚಿಯನ್ ಮತಕ್ಕೆ ಪರಿವರ್ತನೆಯಾದರೆ ಮಾತ್ರ ಮದುವೆಗೆ ಒಪ್ಪುತ್ತೇನೆ ಎಂಬ ಶರತ್ತು ವಿಧಿಸಿದರು. ಪ್ರೀತಿಸಿದ ಹುಡುಗಿಯನ್ನು ಬಿಟ್ಟಿರುವ ಮನಸ್ಸು ನನಗಿರಲಿಲ್ಲ. ಹಾಗಾಗಿ ನಾನು ಮತಾಂತರಕ್ಕೆ ಒಪ್ಪಿದೆ.  ಮದುವೆಗೂ ಮುನ್ನ ನಾನು ಅಪ್ಪ ಅಮ್ಮನಿಗೆ ವಿಷಯ ಮುಟ್ಟಿಸಿದೆ. ಅಚ್ಚರಿಯ ಸಂಗತಿಯೆಂದರೆ, ನಾನು ಬೇರೆ ಜಾತಿಯ ಹುಡುಗಿಯನ್ನು ಮದುವೆ ಆಗುತ್ತೇನೆಂದಾಗ ಅವರು ವಿರೋಧಿಸಲಿಲ್ಲ. ಬೆಳೆದು ನಿಂತಿರುವ ತಂಗಿಯನ್ನು ಮದುವೆ ಮಾಡಿ ನೀನು ಮದುವೆ ಆಗು, ಅಭ್ಯಂತರವೇನೂ ಇಲ್ಲ ಎಂದರು.

ನಾನು ಮೈಸೂರಿನ ಚರ್ಚ್‌ನಲ್ಲಿ ಮತಾಂತರಗೊಂಡೆ. ಫಾದರ್ ನನಗೆ `ಸುಜ್ಞಾನ್' ಎಂದು ನಾಮಕರಣ ಮಾಡಿದರು.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರು ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆಯೂ ಅವರು ವಿವರಿಸಿದರು.

ಅತ್ತೆ ಮನೆಯಲ್ಲಿ ಅವರ ಮೊದಲ ಕ್ರಿಸ್‌ಮಸ್ ಆಚರಣೆ ಹೀಗಿತ್ತು...
“ಅನಿತಾಗೆ ಮೈಸೂರಿನ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಸಿಕ್ಕಿತು. ಆಕೆಯ ತವರು ಮನೆಯೂ ಮೈಸೂರು. ಬಿಡದಿಯಲ್ಲಿ ಕೆಲಸ ಮಾಡುತ್ತಿದ್ದ ನಾನು ನನ್ನ ಮೊದಲ ಕ್ರಿಸ್‌ಮಸ್‌ಗೆ ಎರಡು ದಿನ ಮುಂಚಿತವಾಗಿಯೇ ಹೋದೆ. ಅತ್ತೆ, ಮಾವ ಸಂಭ್ರಮದಿಂದಲೇ ನನ್ನನ್ನು ಸ್ವಾಗತಿಸಿದರು. ದೀಪಾವಳಿಯಲ್ಲಿ ಅಳಿಯನಿಗೆ ಉಡುಗೊರೆ ನೀಡುವಂತೆ ಅವರು ಹೊಸ ಬಟ್ಟೆ, ವಾಚನ್ನು ಉಡುಗೊರೆಯಾಗಿ ನೀಡಿದರು. ಅಳಿಯ ಹಿಂದೂ ಸಂಪ್ರದಾಯದಿಂದ ಬಂದವರು. ಕ್ರಿಸ್‌ಮಸ್‌ನ ಆಚರಣೆ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ ಎಂದು ಅತ್ತೆ ಮಗಳ ಬಳಿ ತಮ್ಮ ಅನುಮಾನ ವ್ಯಕ್ತಪಡಿಸಿದರು. ಅನಿತಾ ಆ ವಿಷಯವನ್ನು ನನ್ನ ಕಿವಿಗೆ ಮುಟ್ಟಿಸಿದರು.

`ಅತ್ತೆ, ನಾನು ಯಾರ ಒತ್ತಾಯದಿಂದಲೂ ಕ್ರೈಸ್ತನಾಗಿಲ್ಲ. ಸ್ವಇಚ್ಛೆಯಿಂದಲೇ ಮತಾಂತರಗೊಂಡಿದ್ದೇನೆ. ನಾನು ನಿಮ್ಮ ಆಚರಣೆಯನ್ನು ತಿರಸ್ಕರಿಸುತ್ತೇನೆ ಅನ್ನುವ ಭಯ ಬೇಡ' ಎಂದೆ. ಆನಂತರ ನಾನೇ ಮನೆಯನ್ನು ಮಿಣುಕು ದೀಪಗಳಿಂದ ಸಿಂಗರಿಸಿ, ಮಧ್ಯೆ ಮಧ್ಯೆ ಆಕಾಶ ಬುಟ್ಟಿ ಹಾಗೂ ಸ್ಟಾರ್‌ಗಳನ್ನು ಕಟ್ಟಿದಾಗ ಅತ್ತೆಯ ಮನಸ್ಸಲ್ಲಿ ನಿರಾಳಭಾವ. ಅತ್ತೆ ಅವತ್ತು ಐದಾರು ಬಗೆಯ ಸಿಹಿತಿನಿಸುಗಳನ್ನು ಮಾಡಿದ್ದರು. ಎಲ್ಲರೂ ಒಟ್ಟಿಗೆ ಕೂತು ಊಟ ಸವಿದೆವು. ಡಿ.24ರ ಮಧ್ಯರಾತ್ರಿ ಪ್ರಾರ್ಥನೆಯಲ್ಲಿ ನಾನು ಸಡಗರದಿಂದಲೇ  ಪಾಲ್ಗೊಂಡೆ. ಪ್ರಾರ್ಥನೆ ಮುಗಿದ ನಂತರ ಪಟಾಕಿ ಹಚ್ಚಿ ಸಂಭ್ರಮಿಸಿದೆ. ಈವ್ ಪಾರ್ಟಿಯಲ್ಲಿ ಪತ್ನಿ, ಅತ್ತೆ, ಮಾವ, ಮೈದುನರ ಜತೆಗೂಡಿ ವೈನ್ ಗುಟುಕರಿಸಿ ಮಾಂಸಾಹಾರದ ಖಾದ್ಯಗಳನ್ನು ಸವಿದೆ. ಎಲ್ಲವೂ ಹೊಸದೆನ್ನಿಸಿತು.

ಮತಾಂತರಗೊಂಡು ತಪ್ಪು ಮಾಡಿದೆ ಎಂಬ ಭಾವ ನನ್ನೊಳಗೆ ಇದುವರೆಗೂ ಮೂಡಿಲ್ಲ. ಅನಿತಾ ನನಗೆ ಎಲ್ಲವನ್ನೂ ನೀಡಿದ್ದಾರೆ. ಅಲ್ಲಿಂದೀಚೆಗೆ ನಾನು ಪ್ರತಿ ಕ್ರಿಸ್‌ಮಸ್ ಅನ್ನು ಹೆಂಡತಿ ಮಗುವಿನ ಜತೆಗೆ ಸಡಗರದಿಂದಲೇ ಆಚರಿಸುತ್ತೇನೆ. ನನಗೀಗ ನಾಲ್ಕು ವರ್ಷದ ಮಗಳಿದ್ದಾಳೆ. ಶ್ರೇಯಾ ಕ್ರಿಸ್ತಲ್ ಅಂತ ಹೆಸರಿಟ್ಟ್ದ್ದಿದೇನೆ. ಕಂಪೆನಿ ಉದ್ಯೋಗಕ್ಕೆ ಗುಡ್‌ಬೈ ಹೇಳಿ ಸ್ವಂತ ಉದ್ಯಮ ಆರಂಭಿಸಿದ್ದೇನೆ. ಮತಾಂತರಗೊಂಡರೂ ನನ್ನ ಮನಸ್ಸಿನಲ್ಲಿ ಇದುವರೆಗೂ ಯಾವುದೇ ಧರ್ಮ ಸಂಘರ್ಷ ಕಾಡಿಲ್ಲ. ಹಾಗಾಗಿ ಮನಸ್ಸಿನ್ಲ್ಲಲಿ ಯಾವುದೇ ದುಗುಡ ಇಟ್ಟುಕೊಳ್ಳದೆ ಹೆಂಡತಿ-ಮಗುವಿನ ಜತೆ ಸಂತಸದಿಂದ ಇದ್ದೇನೆ”.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT