ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತೀಯ ಗಲಭೆಗೆ ಪ್ರೋತ್ಸಾಹ ಸಲ್ಲ

Last Updated 13 ಡಿಸೆಂಬರ್ 2012, 6:31 IST
ಅಕ್ಷರ ಗಾತ್ರ

ದಾವಣಗೆರೆ: ಅಮಾಯಕ ಮತ್ತು ಮುಗ್ಧ ಜನರ ಪ್ರಾಣಹರಣ ಮಾಡುವ ಮತೀಯ ಗಲಭೆಗಳಿಗೆ ಪ್ರೋತ್ಸಾಹ ಸಲ್ಲ ಎಂದು ಉಪನ್ಯಾಸಕ ದಾದಾಪೀರ್ ನವಿಲೇಹಾಳ್ ಅಭಿಪ್ರಾಯಪಟ್ಟರು.
ನಗರದ ರೋಟರಿ ಬಾಲಭವನದಲ್ಲಿ ಬುಧವಾರ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ `ಬಾಬರಿ ಮಸೀದಿ ಧ್ವಂಸ' ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಮಾನವಕುಲದ ಏಳಿಗೆ ಎಲ್ಲ ಧರ್ಮಗಳ ಸಾರವಾಗಿದೆ. ಆದರೆ, ಧರ್ಮಗಳ ನೈಜ ನಿಲುವುಗಳನ್ನು ತಿಳಿದುಕೊಳ್ಳದ ಅರೆಜ್ಞಾನಿಗಳೆಂಬ ಮೂರನೇ ವರ್ಗ ಮತೀಯ ಹೆಸರಲ್ಲಿ ಗಲಭೆಗಳನ್ನು ಸೃಷ್ಟಿಸಿ ಹಿಂಸಾಕೃತ್ಯ ನಡೆಸುತ್ತಿದೆ. ರಾಮನ ಮೌಲ್ಯಗಳನ್ನು ಅರಿಯದವರು `ರಾಮ ಜನ್ಮಭೂಮಿ ಚಳವಳಿ' ಸೃಷ್ಟಿಸಿ ಜನರ ನೆಮ್ಮದಿ ಭಂಗಗೊಳಿಸಿದರು. 400ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದ `ಬಾಬರಿ ಮಸೀದಿ'ಯನ್ನು ಗುದ್ದಲಿ, ಸಲಾಕೆ, ಪಿಕಾಸಿಗಳಿಂದ ಅಗೆದು ಅರೆಕ್ಷಣದಲ್ಲಿ ಕೆಡವಿ ಹಾಕಿದರು.

ನಂತರ ಅಯೋಧ್ಯೆಯಲ್ಲಿ ಲೆಕ್ಕವಿಲ್ಲದಷ್ಟು ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ನಡೆಯಿತು. ಅದೇ ರೀತಿಯಲ್ಲಿ 1984ರಲ್ಲಿನ ದೆಹಲಿ ಸಿಖ್ ನರಮೇಧ, 2002ರ ಗುಜರಾತ್ ನರಮೇಧಗಳು ಮತೀಯ ಹೆಸರಲ್ಲಿ ಕಾವುಪಡೆದು ಅಮಾಯಕರನ್ನು ನುಂಗಿಹಾಕಿತು. ದೇಶದಲ್ಲಿ ಇಷ್ಟು ಕ್ರೂರ ನರಮೇಧಗಳು ನಡೆಯಲು ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆ ಕಾರಣವಾಗಿದೆ ಎಂದು ಆಪಾದಿಸಿದರು.

ಸ್ವಾತಂತ್ರ್ಯಪೂರ್ವದಲ್ಲೇ ಗಾಂಧೀಜಿ, ಗೋಖಲೆ, ನೆಹರೂ, ಮೌಲಾನಾ •ಅಜಾದ್ ಮೊದಲಾದವರು ಉದಾರವಾದಿ ಸಮಾಜ ನಿರ್ಮಿಸಿ, ಎಲ್ಲ ಮತ ಧರ್ಮಗಳಿಗೆ ಸಮಾನ ಹಕ್ಕು, ಅವಕಾಶ ಕಲ್ಪಿಸುವ ಪ್ರಜಾಪ್ರಭುತ್ವ ನಿರ್ಮಾಣಗೊಳಿಸುವ ಧ್ಯೇಯ ಹೊಂದಿದ್ದರು. ಆದರೆ, ತಿಲಕ್, ಮದನ್ ಮೋಹನ ಮಾಲವೀಯ ಇತರ ಪ್ರಭಾವಿ ನಾಯಕರು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿಗಣಿಸಿದ್ದರು. ಈ ವೈಚಾರಿಕ ಬಿರುಕು 20ನೇ ಶತಮಾನದಲ್ಲಿ ಏಕ ಕಾಲಘಟ್ಟದಲ್ಲಿ ಅಸ್ತಿತ್ವ ಕಂಡ ಆರ್‌ಎಸ್‌ಎಸ್ ಮತ್ತು ಕಮ್ಯುನಿಸ್ಟ್ ನಂತರ ಶಿವಸೇನೆ ರೂಪದಲ್ಲಿ ಸ್ಪಷ್ಟತೆ ಪಡೆದುಕೊಂಡಿತು. ಎಂದರು.

ಕೋಮು ಸೌಹಾರ್ದ ವೇದಿಕೆ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ತೋರಣಘಟ್ಟ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಗೌರವ ಅಧ್ಯಕ್ಷ ಅನೀಸ್ ಪಾಶ, ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಕ್ರೈಸ್ತ ಮುಖಂಡ ರಾಜಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT