ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತಷ್ಟು ಅನುಕೂಲ ಕಲ್ಪಿಸಿ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಮತ್ತಷ್ಟು ಅನುಕೂಲ ಕಲ್ಪಿಸಿ
ಮಾಗಡಿಯಿಂದ ಹೆಬ್ಬಳಲು -ಸಂಕೀಘಟ್ಟದವರೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ವ್ಯವಸ್ಥೆ ಇದೆ. ಇದರಿಂದ ಹೆಬ್ಬಳಲು ಹಾಗೂ ಮಾಗಡಿ ನಡುವೆ ಓಡಾಡುವ ಪ್ರಯಾಣಿಕರಿಗೆ ಅನುಕೂಲವಾಗಿದೆ. ಆದರೆ ಈ ಬಸ್ ಅನ್ನು ಬೆಂಗಳೂರು -ಹೆಬ್ಬಳಲು-ಮಾಗಡಿ ಮಾರ್ಗವಾಗಿ ಓಡಿಸಿದಲ್ಲಿ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವಾಗುತ್ತದೆ. ಈ ಬಗ್ಗೆ ಸಾರಿಗೆ ಇಲಾಖೆ ಕಾರ್ಯಪ್ರವೃತ್ತವಾಗಲಿ.
-ಬಿ.ಎಸ್. ರಮೇಶ್,
ಎಚ್.ಎನ್. ಮಂಜುನಾಥ್

ಸಿಗ್ನಲ್ ದೀಪ ಅಳವಡಿಸಿ
ಟ್ರಾಫಿಕ್ ಅವ್ಯವಸ್ಥೆ ಸರಿಪಡಿಸಲು ಪೊಲೀಸರು ಎಷ್ಟೇ ಎಚ್ಚರ ವಹಿಸಿದ್ದರೂ ನಗರದಲ್ಲಿ ಅಪಘಾತಗಳು ಆಗುತ್ತಿವೆ. ಇಸ್ರೋ ಬಡಾವಣೆ ಎಸ್‌ಬಿಐ ಎದುರಿನ ರಸ್ತೆಯಲ್ಲಿ ಯಾವಾಗಲೂ ವಾಹನ ದಟ್ಟಣೆ ಇರುತ್ತದೆ. ಚಾಲಕರೂ ಭಾರಿ ವೇಗದಲ್ಲಿ ಹೋಗುತ್ತಿರುತ್ತಾರೆ. ಪಾದಚಾರಿಗಳು ಈ ರಸ್ತೆ ದಾಟಲು ಹರಸಾಹಸ ಮಾಡಬೇಕಿದೆ. ಹಾಗೆಯೇ ವಸಂತಪುರದ ಸಾಯಿಬಾಬ ಮಂದಿರದ ಬಳಿ ಟ್ರಾಫಿಕ್‌ನಿಂದಾಗಿ ಭಕ್ತರಿಗೆ ರಸ್ತೆ ದಾಟಲು ಕಷ್ಟವಾಗುತ್ತಿದೆ.
ಇಸ್ರೋ ಬಡಾವಣೆ ಎಸ್‌ಬಿಐ ಎದುರು ಮತ್ತು ವಸಂತಪುರದ ಸಾಯಿಬಾಬ ಮಂದಿರದ ಎದುರು ಸಿಗ್ನಲ್ ದೀಪ ಅಳವಡಿಸಲು ಮನವಿ.
-ಎನ್.ಎಸ್.ಎನ್. ನರಸಿಂಹಮೂರ್ತಿ

ಮೈಸೂರು ರಸ್ತೆ ದುರವಸ್ಥೆ

ಬೆಂಗಳೂರು ನಗರದ ಮಧ್ಯ ಹಾಯ್ದಿರುವ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ಈಗ ರಾಷ್ಟ್ರೀಯ ಹೆದ್ದಾರಿಯ ದರ್ಜೆಗೆ ಏರಿದೆ. ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಹತ್ತು ವರ್ಷಗಳ ಹಿಂದೆಯೇ ಪುರಭವನದಿಂದ ಮೈಸೂರು ವೃತ್ತದವರೆಗೆ ಮೇಲು ಸೇತುವೆ ನಿರ್ಮಿಸಲಾಗಿದೆ.

ಮೇಲು ಸೇತುವೆಯ ಆದಿಚುಂಚನಗಿರಿ ಪ್ರವೇಶ ದ್ವಾರದಿಂದ ಬಿಹೆಚ್‌ಇಎಲ್ ಸಮೀಪದಲ್ಲಿರುವ ವಿಜಯನಗರ ವೃತ್ತದವರೆಗಿನ ರಸ್ತೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುತ್ತಿದ್ದು, ಗುಂಡಿಗಳಿಂದ ಕೂಡಿದ ಈ ರಸ್ತೆ ಮೈಲಿಬೇನೆ ಬಂದು ತೂತುಬಿದ್ದ ಮುಖದಂತೆ ಆಗಿದೆ.

ಈ ರಸ್ತೆಯನ್ನು ಗಮನಿಸಿದಾಗ ರಸ್ತೆಯಂಚಿನಿಂದ ಪಾದಚಾರಿ ಮಾರ್ಗದವರೆಗೆ ಟಾರ್ ಹಾಕದಿರುವದು, ರಸ್ತೆಯ ಮೇಲಿನ ನೀರು ಹರಿದುಹೋಗಲು ಸರಿಯಾದ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲಿ ಬಿರುಕು ಹಾಗೂ ಗುಂಡಿಗಳಿರುವುದು, ಅವುಗಳನ್ನು ಮುಚ್ಚಲು ಅಲ್ಲಲ್ಲಿ ದುರಸ್ತಿ ಮಾಡಿದ್ದು ಅಸಮರ್ಪಕ ದುರಸ್ತಿಯಿಂದಾಗಿ ರಸ್ತೆಯಲ್ಲಿ ಉಬ್ಬು ತಗ್ಗುಗಳು ನಿರ್ಮಾಣವಾಗಿರುವುದು ಕಂಡುಬರುತ್ತದೆ.

ಈ ರಸ್ತೆಯು ನಗರದ ಜೀವನಾಡಿಯಾಗಿದ್ದು, ಮೈಸೂರು ರಸ್ತೆ ಸ್ಯಾಟ್‌ಲೈಟ್ ಬಸ್ ನಿಲ್ದಾಣ ಸಹ ಇಲ್ಲಿಯೇ ಇದೆ. ಈ ಭಾಗದಲ್ಲಿ ಮೆಟ್ರೊ ರೈಲು ಬಾರದಿರುವ ಹಿನ್ನೆಲೆಯಲ್ಲಿ ರಸ್ತೆಯನ್ನು ಅಗಲೀಕರಿಸಿ, ರಾಷ್ಟ್ರೀಯ ಹೆದ್ದಾರಿಯ ದರ್ಜೆಗೆ ಏರಿಸಬೇಕಾಗಿದೆ.  
ಈ ಭಾಗದ ಸಂಸದರು, ಶಾಸಕರು, ಬಿಬಿಎಂಪಿ ಸದಸ್ಯರು, ಬಿಬಿಎಂಪಿ ಅಧಿಕಾರಿಗಳು ಇತ್ತ ಗಮನ ಹರಿಸುವರೆ? 
-ಬಸವರಾಜ ಹುಡೇದಗಡ್ಡಿ

ಒಳಚರಂಡಿ ಸ್ವಚ್ಛಗೊಳಿಸಿ

ವಿವೇಕನಗರ ಎಕ್ಸ್‌ಟೇನ್‌ಷನ್‌ನ (ವಾರ್ಡ್ ನಂಬರ್ 115) ಈಜಿಪುರ ಮುಖ್ಯ ರಸ್ತೆಯ ಟ್ರಾನ್ಸ್‌ಫಾರ‌್ಮರ್ ಮುಂಭಾಗದಲ್ಲಿರುವ 1ನೇ ಅಡ್ಡರಸ್ತೆಯಲ್ಲಿ ಒಂದು ವಾರದಿಂದ ಛೇಂಬರ್ ಕಟ್ಟಿಕೊಂಡು, ತ್ಯಾಜ್ಯ ನೀರು ರಸ್ತೆಯ ಮೇಲೆಲ್ಲಾ ಹರಿಯುತ್ತಿದೆ. ಈ ಹೊಲಸನ್ನು ಜನರು ತುಳಿದುಕೊಂಡೇ ಓಡಾಡಬೇಕಾಗಿದೆ.

ಇಲ್ಲಿನ ಒಳಚರಂಡಿ ಪೈಪ್‌ಗಳನ್ನು ಸುಮಾರು ವರ್ಷಗಳ ಹಿಂದೆ ಹಾಕಿದ್ದು, ಪೈಪುಗಳು ಚಿಕ್ಕದಾಗಿವೆ.  ಒತ್ತಡ ಹೆಚ್ಚಾಗಿ ಛೇಂಬರ್‌ನಲ್ಲಿ ಆಗಾಗ ತ್ಯಾಜ್ಯ ನೀರು ಕಟ್ಟಿಕೊಳ್ಳುತ್ತದೆ. ಒಳಚರಂಡಿ ಕಚೇರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಹೊಸ ಪೈಪುಗಳನ್ನು ಹಾಕಿಲ್ಲ. ಈಗ ಛೇಂಬರ್ ಮುಚ್ಚಳಗಳು ಒಡೆದುಹೋಗಿವೆ. ಇದರಲ್ಲಿ ಕಲ್ಲುಗಳು- ಮಣ್ಣು, ಕಸ-ಕಡ್ಡಿಗಳು ಬಿದ್ದು ತ್ಯಾಜ್ಯ ನೀರು ಸರಿಯಾಗಿ ಹೋಗದೇ ಕಟ್ಟಿಕೊಂಡಿದೆ.
ಇದಕ್ಕೆ ಹೊಸ ಮುಚ್ಚಳ ಅಳವಡಿಸಿ, ಕಟ್ಟಿಕೊಂಡಿರುವ ಛೇಂಬರ್‌ನ್ನು ಸ್ವಚ್ಛಗೊಳಿಸಬೇಕಾಗಿ ಸಂಬಂಧಪಟ್ಟ ಒಳಚರಂಡಿ ಅಧಿಕಾರಿಗಳಲ್ಲಿ ಮನವಿ.
-ಎಲ್.ಎನ್.

ಪೌರ ಕಾರ್ಮಿಕರಿಗೆ  ಬಸ್ ಸೌಲಭ್ಯ 


ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜಗಜೀವನರಾಂ ನಗರದ ವಾರ್ಡ್ ನಂ  136, 137, 138ರಲ್ಲಿ ಬಿಬಿಎಂಪಿ ಪೌರಕಾರ್ಮಿಕರು ಮತ್ತು ಗುತ್ತಿಗೆ ಪೌರಕಾರ್ಮಿಕರು ಹೆಚ್ಚಾಗಿ ವಾಸ ಮಾಡುತ್ತಾರೆ. ಬಹುತೇಕ ಕೆಳ ವರ್ಗಕ್ಕೆ ಸೇರಿದ ಅವರೆಲ್ಲ ಬೆಳಿಗ್ಗೆ ಎದ್ದು ತಮಗೆ ನಿಗದಿಪಡಿಸಿದ ಪ್ರದೇಶಗಳಿಗೆ ಸ್ವಚ್ಛತಾ ಕಾರ್ಯಕ್ಕೆ ತೆರಳಬೇಕಿದೆ. ಆದರೆ, ಬಸ್ ಸೌಲಭ್ಯ ಇಲ್ಲದ ಕಾರಣ ಇವರೆಲ್ಲ ಕಸದ ಗಾಡಿಯಲ್ಲಿ ಪ್ರಯಾಣಿಸುತ್ತಾರೆ. 

ಈ ಕಾರ್ಮಿಕರಿಗೆಲ್ಲ ಜಗಜೀವನರಾಂ ನಗರದಿಂದ ಜಯನಗರ, ಶ್ರಿನಗರ, ಬನಶಂಕರಿ ಕಡೆಗೆ ಬಿಎಂಟಿಸಿ ಬಸ್ ಸೌಕರ್ಯ ಕಲ್ಪಿಸಬೇಕೆಂದು ಕೋರುತ್ತೇನೆ.

-ಸುಜಾತ ಎಸ್. ರಾಯುಡು.

ಅಪಾಯಕಾರಿ ಬೀದಿ ದೀಪ
ವಿದ್ಯಾಮಾನ್ಯನಗರ 9ನೇ ಮುಖ್ಯ ರಸ್ತೆಯ `ಬಿ~ ಅಡ್ಡರಸ್ತೆಯಲ್ಲಿ ಮನೆ ನಂ. 748ರ ಮುಂದೆ, ಒಂದು ಸಿಮೆಂಟ್ ಕಂಬದ ಬೀದಿ ದೀಪವಿದೆ. ಮಳೆ ಬಂದಾಗಲೆಲ್ಲಾ ಸಿಮೆಂಟ್ ಹೋಗಿ ಕಂಬದಿಂದ ಚೂರು ಚೂರಾಗಿ ಕೆಳಗಡೆ ಬಿದ್ದು, ಕರೆಂಟ್ ಹರಿಯುವ ವೈರ್‌ಗಳು ಕಾಣುವಂತಾಗಿದೆ. ಈ ವಿದ್ಯುತ್ ಕಂಬದ ಬಳಿ ಓಡಾಡಲು ಭಯವಾಗುತ್ತಿದೆ. ಇದನ್ನು ಎಷ್ಟು ಸಲ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. 
ಕೆಇಬಿ ಉದಾಸೀನ ಧೋರಣೆಗೆ ಕಾರಣವೇನೋ ತಿಳಿಯದು. ಈಗಲಾದರೂ ಅವರು ಇತ್ತ ತಮ್ಮ ಗಮನಹರಿಸುವರೇ?


-ಕೆ.ಆರ್. ರಾಘವೇಂದ್ರರಾವ್

ಸ್ಪಷ್ಟೀಕರಣ

ದಿನಾಂಕ: 20.12.2011 ರಂದು ಪ್ರಜಾವಾಣಿ ದಿನಪತ್ರಿಕೆಯ ಕುಂದುಕೊರತೆ ಅಂಕಣದಲ್ಲಿ `ಕಸ ತೆರವುಗೊಳಿಸಿ~ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿದ್ದ ದೂರಿನ ಬಗ್ಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಬಸವನಗುಡಿ) ಉಪ ವಿಭಾಗದವರು ವರದಿ ನೀಡಿ, ಕಾಳಿದಾಸ ಬಡಾವಣೆಯ 2ನೇ ಮತ್ತು 3ನೇ ಅಡ್ಡರಸ್ತೆಗೆ ಹೊಂದಿಕೊಂಡಿರುವ ಖಾಲಿ ನಿವೇಶನವಿದ್ದು, ಈ ನಿವೇಶನದ ದಕ್ಷಿಣ ಭಾಗಕ್ಕೆ ಮುನೇಶ್ವರ ದೇವಸ್ಥಾನ ಇರುತ್ತದೆ. ಈ ಖಾಲಿ ನಿವೇಶನವನ್ನು ಹಾಗಿಂದಾಗ್ಗೆ ಸ್ವಚ್ಛಗೊಳಿಸಲು ನಿವೇಶನದ ಮಾಲೀಕರಿಗೆ ನೋಟಿಸ್ ನೀಡಿದ್ದರೂ ಸಹ ಸ್ಚಚ್ಛಗೊಳಿಸಿರುವುದಿಲ್ಲ. ಆದುದರಿಂದ 156ನೇ ವಾರ್ಡ್‌ನ ಕಿರಿಯ ಆರೋಗ್ಯ ಪರಿವೀಕ್ಷಕರು ಮತ್ತು ಪರಿಸರ ಅಧಿಕಾರಿಗಳು ಖುದ್ದು ಪರಿಶೀಲನೆ ಮಾಡಿ, ಖಾಲಿ ನಿವೇಶನವನ್ನು ಸ್ವಚ್ಛಗೊಳಿಸಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
-ಸಾರ್ವಜನಿಕ ಸಂಪರ್ಕಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT