ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತಷ್ಟು ವಿಳಂಬ

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ನಾಲ್ಕು ತಿಂಗಳಿಂದ ತೆರವಾಗಿರುವ ಲೋಕಾಯುಕ್ತರ ನೇಮಕ ಇನ್ನೂ ನೆನೆಗುದಿಯಲ್ಲಿದೆ. ನ್ಯಾ. ಸಂತೋಷ ಹೆಗ್ಡೆ ಅವರ ನಿವೃತ್ತಿಯ ಬಳಿಕ ನೇಮಕಗೊಂಡಿದ್ದ ನ್ಯಾ. ಶಿವರಾಜ ಪಾಟೀಲರು ನಿವೇಶನ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ ನಂತರ ಲೋಕಾಯುಕ್ತರ ನೇಮಕ ಸಾಧ್ಯವಾಗಿಲ್ಲ.
 
ಕರ್ನಾಟಕ ವಿಧಾನಮಂಡಲ ಅಂಗೀಕರಿಸಿದ 1984ರ ಲೋಕಾಯುಕ್ತ ಕಾಯ್ದೆಯಲ್ಲಿ ತೆರವಾದ ಲೋಕಾಯುಕ್ತ ಹುದ್ದೆಯನ್ನು ಎಷ್ಟು ಅವಧಿಯಲ್ಲಿ ಭರ್ತಿ ಮಾಡಬೇಕು ಎಂಬುದು ಸ್ಪಷ್ಟವಾಗಿಲ್ಲದ ಕಾರಣ ಇದು ಸರ್ಕಾರ ಮತ್ತು ರಾಜ್ಯಪಾಲರ ಮರ್ಜಿಯನ್ನು ಆಧರಿಸಿಯೇ ತುಂಬ ಬೇಕಾದ ಹುದ್ದೆಯಂತಾಗಿದೆ.

ಭ್ರಷ್ಟಾಚಾರ ಹಗರಣಗಳ ಕಳಂಕದ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಆಗಿರುವ ರಾಜ್ಯದ ಬಿಜೆಪಿ ಸರ್ಕಾರ, ಪಕ್ಷದಲ್ಲಿನ ಪ್ರಭಾವಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಆಡಳಿತಾತ್ಮಕ ಹೊಣೆ ನಿರ್ವಹಿಸಬೇಕಾಗಿದೆ.

ಇಂಥ ನಾಜೂಕಿನ ಸ್ಥಿತಿಯಲ್ಲಿ ಬಿಜೆಪಿ ಸರ್ಕಾರಕ್ಕೆ ಲೋಕಾಯುಕ್ತರ ನೇಮಕ ವಿಳಂಬವಾಗುವುದೇ ಬೇಕಾಗಿದೆ. ಇದಕ್ಕೆ ಒತ್ತಾಸೆ ನೀಡುವಂತೆ ರಾಜ್ಯಪಾಲರೂ ಬಿಗಿ ನಿಲುವನ್ನು ಪ್ರಕಟಿಸುತ್ತಿರುವುದರಿಂದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ರೂಪುಗೊಂಡಿದ್ದ ಲೋಕಾಯುಕ್ತ ಹಲ್ಲಿಲ್ಲದ ಹಾವಿನಂತೆ ನಿಷ್ಕ್ರಿಯ ಸ್ಥಿತಿಗೆ ಇಳಿದಿದೆ.
 
ಭ್ರಷ್ಟಾಚಾರ ನಿಯಂತ್ರಣಕ್ಕೆ ತಾನೇ ರೂಪಿಸಿದ್ದ ತನಿಖಾ ಸಂಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ರಾಜ್ಯ ಸರ್ಕಾರ ತನ್ನ ಹೊಣೆಗೇಡಿತನವನ್ನು ನಿರ್ಲಜ್ಜೆಯಿಂದ ಸಮರ್ಥಿಸಿಕೊಳ್ಳುವ ದಿವಾಳಿತನಕ್ಕೆ ಇಳಿದಂತಾಗಿದೆ.

ಲೋಕಾಯುಕ್ತ ಹುದ್ದೆಗೆ ಒಬ್ಬರ ಹೆಸರಿಗೆ ಪಟ್ಟು ಹಿಡಿದ ರಾಜ್ಯ ಸರ್ಕಾರ, ಸರ್ಕಾರ ಸೂಚಿಸಿದ ವ್ಯಕ್ತಿಯನ್ನು ನೇಮಕ ಮಾಡಲಾಗದು ಎಂದು ಹಠ ಹಿಡಿದ ರಾಜ್ಯಪಾಲರ ನಿಲುವುಗಳಿಂದ ಈ ನೇಮಕವೇ ಅನಿಶ್ಚಿತವಾಗಿದೆ.

ನ್ಯಾ. ಸಂತೋಷ ಹೆಗ್ಡೆ ಅವರು, ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತು ಸಲ್ಲಿಸಿದ ತನಿಖಾ ವರದಿಯನ್ನು ಆಧರಿಸಿ ಮೂರು ತಿಂಗಳಲ್ಲಿ ಕ್ರಮ ಆರಂಭಿಸಬೇಕಿದ್ದ ರಾಜ್ಯ ಸರ್ಕಾರಕ್ಕೆ ಲೋಕಾಯುಕ್ತ ಹುದ್ದೆ ಇಲ್ಲದಿರುವುದು ತಾಂತ್ರಿಕವಾಗಿ ಅನುಕೂಲಸ್ಥಿತಿ ಕಲ್ಪಿಸಿದೆ.
 
ಲೋಕಾಯುಕ್ತ ಕಾಯ್ದೆಯ ಆರಂಭದಲ್ಲಿಯೇ `ಸಾರ್ವಜನಿಕ ಸೇವಕರಾದ ಮುಖ್ಯಮಂತ್ರಿ, ಸಚಿವರನ್ನು ಒಳಗೊಂಡಂತೆ..~ ಎಂಬ ಉಲ್ಲೇಖವಿದ್ದರೂ ರಾಜ್ಯ ಸರ್ಕಾರ, `ಮುಖ್ಯಮಂತ್ರಿ ಮತ್ತು ಸಚಿವರು ಸಾರ್ವಜನಿಕ ಸೇವಕರೇ~ ಎಂಬುದನ್ನು ಸ್ಪಷ್ಟಪಡಿಸುವಂತೆ ಲೋಕಾಯುಕ್ತರನ್ನು ಕೋರಿದೆ. ಇದು ಲೋಕಾಯುಕ್ತ ವರದಿಯ ಅನುಪಾಲನೆಗೆ ಕುಂಟು ನೆಪಗಳನ್ನು ಕಂಡುಕೊಂಡ ತಂತ್ರ.
 
ಲೋಕಾಯುಕ್ತರಿಲ್ಲದೆ ಸರ್ಕಾರ ಕೋರಿದ ಸ್ಪಷ್ಟನೆಗೆ ಉತ್ತರ ಬರುತ್ತಿಲ್ಲ. ಯಾವ ವರದಿಯನ್ನು ಆಧರಿಸಿ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಆಯಿತೋ, ಆ ಲೋಕಾಯುಕ್ತ ವರದಿಯನ್ನೇ ತಿರಸ್ಕರಿಸುವಂಥ ಸನ್ನಿವೇಶ ನಿರ್ಮಾಣ ಸರ್ಕಾರದ ಹುನ್ನಾರ ಇರುವಂತಿದೆ.
 
ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ಪ್ರಬಲವಾಗಿರಲು ಅದಕ್ಕೆ ಸಾಂವಿಧಾನಿಕ ಸ್ಥಾನ ಸಿಗುವಂತೆ ಕಾಯ್ದೆ ತಿದ್ದುಪಡಿ ಅಗತ್ಯ. ಅಕ್ರಮ ಗಣಿಗಾರಿಕೆಯ ಹಗರಣಗಳು ಸುತ್ತಿಕೊಂಡಿರುವುದರಿಂದ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿಗೂ ಪ್ರಬಲ ಲೋಕಾಯುಕ್ತ ವ್ಯವಸ್ಥೆ ಅಂತರಂಗದಲ್ಲಿ ಬೇಕಾಗಿಲ್ಲ.

ಆದರೆ ಪ್ರಾಮಾಣಿಕ ಮತ್ತು ದಕ್ಷ ಆಡಳಿತ ವ್ಯವಸ್ಥೆಯನ್ನು ಬಯಸುವವರೆಲ್ಲರೂ ಲೋಕಾಯುಕ್ತರ ಶೀಘ್ರ ನೇಮಕದ ಪರವಾಗಿದ್ದಾರೆ. ಜನಮತಕ್ಕೆ ಮನ್ನಣೆ ನೀಡಿ ಬೇಗನೆ ಲೋಕಾಯುಕ್ತರ ನೇಮಕ ಆಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT