ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೂರುಗೆ ಭಾವಪೂರ್ಣ ಶ್ರದ್ಧಾಂಜಲಿ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವಿದ್ಯಾಭವನದ ಶಾಖೆಗಳನ್ನು ದೇಶ-ವಿದೇಶಗಳಲ್ಲಿ ಸ್ಥಾಪಿಸಿ ವೇದ ಹಾಗೂ ಗಾಂಧಿ ಉಪನಿಷತ್ತುಗಳನ್ನು ಎಲ್ಲೆಡೆ ಪಸರಿಸಿದ ವಿದ್ವಾಂಸ, ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ ಅವರಿಗೆ ಶನಿವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿ ಸೇವೆ ಸಲ್ಲಿಸಿ, ವಿಜಯದಶಮಿಯಂದು ನಿಧನರಾದ ಡಾ. ಮತ್ತೂರು ಕೃಷ್ಣಮೂರ್ತಿ ಅವರಿಗೆ ಭವನದ ಮಿತಿಯಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಕಂಬನಿ ಮಿಡಿಯುವ ಮೂಲಕ ನುಡಿ ನಮನ ಸಲ್ಲಿಸಿದರು.

ರಾಜ್ಯಸಭಾ ಸದಸ್ಯ ಹಾಗೂ ನಿವೃತ್ತ ನ್ಯಾಯಮೂರ್ತಿ ಡಾ.ಎಂ. ರಾಮಾಜೋಯಿಸ್, `ಬಡತನದಲ್ಲಿ ಹುಟ್ಟಿ ಬೆಳೆದ ಮತ್ತೂರರಿಗೆ ಶ್ರೀಮಂತಿಕೆ ಇಲ್ಲದಿದ್ದರೂ ತಮ್ಮ ಅಂತಃಶಕ್ತಿಯ ಮೂಲಕವೇ ಕಂಡಕ್ಟರ್‌ನಿಂದ ನಿರ್ದೇಶಕರವರೆಗೆ ಬೆಳೆದರು. ಮಾನವನ ನಾಲ್ಕು ಋಣಗಳಲ್ಲಿ ಪ್ರಮುಖವಾದಂತಹ ಜ್ಞಾನಾರ್ಜನೆ, ಜ್ಞಾನ ಪ್ರಸರಣದ ಮೂಲಕ ಸಾರ್ಥಕ ಜೀವನ ನಡೆಸಿದರು~ ಎಂದು ಸ್ಮರಿಸಿದರು.

`ಭಾರತೀಯ ವಿದ್ಯಾಭವನ ಶಾಖೆಗಳನ್ನು ಮೈಸೂರು, ಶಿವಮೊಗ್ಗ, ಕೊಡಗಿನಲ್ಲಲ್ಲದೆ, ದೂರದ ಲಂಡನ್ನಿನಲ್ಲೂ ಸ್ಥಾಪಿಸಿದ ಕೀರ್ತಿ ಡಾ. ಮತ್ತೂರು ಕೃಷ್ಣಮೂರ್ತಿ ಅವರಿಗೆ ಸಲ್ಲಬೇಕು. ಮನುಷ್ಯನ ಶರೀರ ನಶ್ವರ. ಆದರೆ,  ಸೇವೆಯ ಮೂಲಕ ನಮ್ಮೆಲ್ಲರ ಮಧ್ಯೆ ಚಿರಂಜೀವಿಯಾಗಿ ಉಳಿದಿದ್ದಾರೆ~ ಎಂದರು.

ಭವನದ ಅಧ್ಯಕ್ಷ ಎನ್. ರಾಮಾನುಜ, `ಡಾ. ಮತ್ತೂರರ ವ್ಯಕಿತ್ವವನ್ನು ಬಣ್ಣಿಸಲು ಪದಗಳೇ ಸಿಗುವುದಿಲ್ಲ. ಅವರದು ಮಗುವಿನಂತಹ ಮನಸ್ಸಾಗಿತ್ತು. ಭಕ್ತಿ, ಪ್ರೀತಿ, ನಯ-ವಿನಯ, ಗೌರವಕ್ಕೆ ಅವರ ಮತ್ತೊಂದು ಹೆಸರಾಗಿದ್ದರು~ ಎಂದು ಬಣ್ಣಿಸಿದರು.

ಮೈಸೂರು ಮತ್ತಿತರ ಕಡೆ ಭವನದ ಶಾಖೆಗಳನ್ನು ತೆರೆಯಲು ಮತ್ತೂರರು ಪಟ್ಟಂತಹ ಶ್ರಮದ ಬಗ್ಗೆ ಪ್ರಸ್ತಾಪಿಸಿದ ಅವರು, ಅವರ ಆತ್ಮಕ್ಕೆ ತೃಪ್ತಿ ತರುವ ರೀತಿಯಲ್ಲಿ ಭವನದ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು.

ಭವನದ ಲಂಡನ್ ಶಾಖೆಯ ನಿರ್ದೇಶಕ ಡಾ.ಎಂ.ಎನ್. ನಂದಕುಮಾರ್, `ಭಾರತೀಯ ವಿದ್ಯಾಭವನಕ್ಕಾಗಿ ಡಾ. ಮತ್ತೂರರು ತಮ್ಮ ಜೀವನವನ್ನು ಮುಡುಪಾಗಿಟ್ಟರು. ಭವನದ ಕಾರ್ಯಚಟುವಟಿಕೆಗಳಿಗೆ ಬಿಟ್ಟರೆ ಯಾರಿಂದಲೂ ಸ್ವಂತಕ್ಕಾಗಿ ಹಣ ಅಪೇಕ್ಷಿಸಿದವರಲ್ಲ~ ಎಂದರು.

ಇದಕ್ಕೂ ಮುನ್ನ ಬೆಂಗಳೂರು ಮುದ್ರಣಾಲಯ ಹೊರತಂದಿರುವ `ವಿಷ್ಣು ಸಹಸ್ರನಾಮ~ ಡೈರಿಯನ್ನು ವಿದ್ವಾಂಸ ಮಾರ್ಕಂಡೇಯ ಅವಧಾನಿ ಬಿಡುಗಡೆ ಮಾಡಿದರು. `ವಿಷ್ಣು ಮತ್ತು ಶಿವ ಬೇರೆ ಅಲ್ಲ ಎಂಬುದನ್ನು ಡಾ. ಮತ್ತೂರರು ವಿಷ್ಣು ಸಹಸ್ರನಾಮ ಪಾರಾಯಣದ ಮೂಲಕ ಎಲ್ಲರಿಗೂ ಅರ್ಥೈಸಿದರು~ ಎಂದು ಅವಧಾನಿ ಸ್ಮರಿಸಿದರು.

ಅನೇಕ ಗಣ್ಯರು ನುಡಿ ನಮನದ ಮೂಲಕ ಡಾ. ಮತ್ತೂರರಿಗೆ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಆರಂಭದಲ್ಲಿ ಮೃತರ ಗೌರವಾರ್ಥ ಎರಡು ನಿಮಿಷ ಮೌನ ಆಚರಿಸಲಾಯಿತು. ಆನಂತರ ಮತ್ತೂರರ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ಚಂದ್ರಿಕಾ ಭಜನಾ ಮಂಡಲಿ ಹಾಗೂ ಔದುಂಬರ ಭಜನಾ ಮಂಡಲಿಗಳಿಂದ ಭಜನೆ ಕಾರ್ಯಕ್ರಮ ಕೂಡ ನಡೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT