ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಎಂಪಿಯಾಗ್ತೀನಿ ಏನ್‌ ತಿಳ್ಕೊಂಡಿದ್ದೀರಾ?

ಪ್ರದೇಶಾಭಿವೃದ್ಧಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿದ್ದೇಶ್ವರ ಗುಡುಗು
Last Updated 4 ಡಿಸೆಂಬರ್ 2013, 6:10 IST
ಅಕ್ಷರ ಗಾತ್ರ

ದಾವಣಗೆರೆ: ‘ಅಧಿಕಾರದ ಅವಧಿ ಮುಗಿಯುತ್ತಿದೆ ಎಂದು ತಾತ್ಸಾರ ಮಾಡಬೇಡಿ. ಮತ್ತೆ ಎಂಪಿಯಾಗುತ್ತೇನೆ. ಏನ್‌ ತಿಳ್ಕೊಂಡಿದ್ದೀರಾ?’.
– ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರು ಅಧಿಕಾರಿಗಳ ವಿರುದ್ಧ ಗುಡುಗಿದ್ದು ಹೀಗೆ.

ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಕೈಗೊಂಡ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅಂದಾಜು ಪಟ್ಟಿ ಸಿದ್ಧಪಡಿಸುವುದಕ್ಕೆಂದೇ 8–10 ತಿಂಗಳು ಅವಧಿ ತೆಗೆದುಕೊಂಡ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ರಂಗಮಂದಿರದ ಅಂದಾಜುಪಟ್ಟಿ ಸಿದ್ಧಪಡಿಸಲು 10 ತಿಂಗಳು ಬೇಕೆ? ನಾನು ಹೋಗುತ್ತೇನೆ (ಸಂಸತ್‌ ಸದಸ್ಯ ಸ್ಥಾನದಿಂದ) ಎಂದು ಭಾವಿಸಿದ್ದೀರಾ? ನನ್ನ ವಿರುದ್ಧ ದ್ವೇಷವೇ?’ ಎಂದು ಪ್ರಶ್ನಿಸಿದರು.

‘ಕಾಮಗಾರಿ ತ್ವರಿತವಾಗಿ ಮಾಡುವುದಾದರೆ ಮಾಡಬೇಕು. ಇಲ್ಲವಾದಲ್ಲಿ ಏಕೆ ತೆಗೆದುಕೊಳ್ಳಬೇಕು? ಒಂದು ತಿಂಗಳ ನಂತರ ಮುಂಬರುವ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದೆ. ಅಷ್ಟರೊಳಗೆ ಇನ್ನೊಮ್ಮೆ ಸಭೆ ನಡೆಸುತ್ತೇನೆ.ಕಾಮಗಾರಿಗಳನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ತಿಂಗಳ ನಂತರ ನಾನೂ ಕೇಳಲಾಗುವುದಿಲ್ಲ; ನೀವೂ ಹೇಳಲಾಗುವುದಿಲ್ಲ’ ಎಂದು ಅನುಷ್ಠಾನ ಸಂಸ್ಥೆಗಳಿಗೆ ಹೇಳಿದರು.

ಇದಕ್ಕೆ ದನಿಗೂಡಿಸಿದ ಜಿಲ್ಲಾಧಿಕಾರಿ ಎಸ್‌.ಟಿ.ಅಂಜನಕುಮಾರ್‌, ಚುನಾವಣೆ ಬರುತ್ತಿದೆ. ಇನ್ನು ಕಾಮಗಾರಿ ಮುಗಿದಿಲ್ಲ ಎಂದರೆ ಏನರ್ಥ. ಅಧಿಕಾರಿಗಳು ಕಥೆ ಹೇಳದೇ ಆದಷ್ಟು ಬೇಗನೆ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು.

‘ನಾನು ನೀಡಿದ ಹಣದ ಮಿತಿಯಲ್ಲಿ ಕಾಮಗಾರಿ ಮುಗಿಸಬೇಕು. ವಿಳಂಬ ಮಾಡಿದರೆ ಮುಂದಿನ ಹಣ ಎಲ್ಲಿಂದ ಬರುತ್ತದೆ? ಈಗ ದೊರೆತಿರುವ ಹಣ ಬಳಸಿದರೆ ತಾನೆ ನಂತರ ಹಣ ಬರುತ್ತದೆ? ಅನುದಾನ ಬಳಕೆಯಲ್ಲಿ ನಿರ್ಲಕ್ಷ್ಯ ವಹಿಸಬಾರದು’ ಎಂದು ಸಿದ್ದೇಶ್ವರ ತಾಕೀತು ಮಾಡಿದರು.

ಹಲವಾಗಲು ಗ್ರಾಮದಲ್ಲಿ ರಂಗಮಂದಿರ ನಿರ್ಮಿಸಲು ಹೆಚ್ಚುವರಿಯಾಗಿ ₨ 4 ಲಕ್ಷ ಅನುದಾನ ನೀಡುವಂತೆ ಸೂಚಿಸಿದರು. ವಿವಿಧ ಗ್ರಾಮಗಳಿಗೆ ಸಮುದಾಯ ಭವನ ನಿರ್ಮಾಣಕ್ಕೆ ನೀಡಿದ ಅನುದಾನ ಸಾಲದಾದ ಹಿನ್ನೆಲೆಯಲ್ಲಿ ಪ್ರಸ್ತಾವಗಳನ್ನು ವಾಪಸ್‌ ಪಡೆಯುವಂತೆ ನಿರ್ದೇಶಿಸಿದರು. ಆ ಹಣವನ್ನು ಇತರ ಕಾಮಗಾರಿಗೆ ನೀಡುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಅಂಜನಕುಮಾರ್‌ ಮಾತನಾಡಿ, ‘ಎಲ್ಲವನ್ನೂ ಒಂದು ಹಂತಕ್ಕೆ ತರುತ್ತಿದ್ದೇನೆ. ಅಧಿಕಾರಿಗಳು ಸುಳ್ಳು ಮಾಹಿತಿ ಕೊಡಬಾರದು. ನನಗೆ ಸಹಕಾರ ಕೊಡಿ, ಮಾರ್ಗದರ್ಶನ ನೀಡಿ. ನಾನು ಕೆಲಸ ಮಾಡಿಸುತ್ತೇನೆ’ ಎಂದು ಕೋರಿದರು. ಪ್ರತಿಕ್ರಿಯಿಸಿದ ಸಿದ್ದೇಶ್ವರ, ‘ನೀವು ದಕ್ಷರಿದ್ದೀರಿ. ಗಡುವು ನೀಡಿ ಸಾಕಾಗಿದೆ. ಕೆಲಸ ಮಾಡಿಸಿ’ ಎಂದು ಸೂಚಿಸಿದರು.

ಮರಳು ಹೊರಗೆ ಸಾಗಿಸಲು ನಿರ್ಬಂಧ
ಸಭೆಯಲ್ಲಿ ಮರಳಿನ ಕೊರತೆ ವಿಚಾರ ಪ್ರತಿಧ್ವನಿಸಿತು. ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಅಂಜನ ಕುಮಾರ್‌, ಸರ್ಕಾರದ ಕಾಮಗಾರಿಗಳಿಗೆ ಮರಳಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಿಂದ ಹೊರಗಡೆಗೆ ಮರಳು ಸಾಗಿಸದಂತೆ ನಿರ್ಬಂಧ ವಿಧಿಸಲಾಗಿದೆ ಎಂದು  ತಿಳಿಸಿದರು.

ಸರ್ಕಾರವೇ ಹೊಸ ನೀತಿ ರೂಪಿಸುತ್ತಿದೆ. ಅಷ್ಟರೊಳಗೆ ಜಿಲ್ಲೆಯಲ್ಲಿಯೂ ಕ್ರಮ ವಹಿಸುತ್ತಿದ್ದೇವೆ ಎಂದರು. ತಮ್ಮ ಶಿಕ್ಷಣ ಸಂಸ್ಥೆಯ ಕಟ್ಟಡದ ಕಾಮಗಾರಿಗೆ ಮರಳು ಕೊಡಿಸಿ ಎಂದು ಸಿದ್ದೇಶ್ವರ ಕೋರಿದರು. ಪ್ರತಿಕ್ರಿಯಿಸಿದ ಡಿಸಿ, ಎಷ್ಟು ಬೇಕಾದರೂ ಮರಳು ಕೊಡಿಸುತ್ತೇನೆ ಎಂದು ಭರವಸೆ ನೀಡಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT