ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಎದ್ದು ಬಂತು ಬೊಫೋರ್ಸ್ ಭೂತ

Last Updated 4 ಜನವರಿ 2011, 7:05 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬೊಫೋರ್ಸ್ ಫಿರಂಗಿಗಳ ಖರೀದಿಯಲ್ಲಿ ಮಧ್ಯವರ್ತಿಗಳಾದ ವಿನ್ ಛಡ್ಡಾ ಮತ್ತು ಒಟ್ಟಾವಿಯೊ ಕ್ವಟ್ರೋಚಿ ಅವರಿಗೆ 41 ಕೋಟಿ ರೂಪಾಯಿ ಲಂಚ ನೀಡಲಾಗಿದೆ. ಈ ದುಡ್ಡಿಗೆ ಅವರು ಭಾರತದಲ್ಲಿ ತೆರಿಗೆ ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆಯ ನ್ಯಾಯಮಂಡಳಿ ಆದೇಶಿಸುವುದರೊಂದಿಗೆ ಕಾಂಗ್ರೆಸ್ ಪಕ್ಷದ ಮುಂದೆ ಮತ್ತೊಮ್ಮೆ ಬೊಫೋರ್ಸ್ ಭೂತ ಎದುರಾಗಿದೆ.

‘ಬೊಫೋರ್ಸ್ ಫಿರಂಗಿ ಖರೀದಿ ವ್ಯವಹಾರದಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂಬ ಭಾರತ ಸರ್ಕಾರದ ನೀತಿಯನ್ನು ಕಡೆಗಣಿಸಿ ಸ್ವೀಡನ್‌ನ ಎ.ಬಿ. ಬೊಫೋರ್ಸ್ ಕಂಪೆನಿಯು ಎ.ಇ.ಸರ್ವೀಸಸ್ ಮತ್ತು ಸ್ವನ್‌ಸ್ಕಾ ಕಂಪೆನಿಗಳ ಮೂಲಕ ಕ್ವಟ್ರೋಚಿ ಮತ್ತು ಛಡ್ಡಾ ಅವರಿಗೆ 41.25 ಕೋಟಿ ರೂಪಾಯಿ  ಕಮಿಷನ್ ನೀಡಿದ್ದು ತನಿಖೆಯಿಂದ ಗೊತ್ತಾಗಿದೆ’ ಎಂದು ಡಿ.31ರಂದು ಹೊರಡಿಸಲಾದ ತನ್ನ 98 ಪುಟಗಳ ಆದೇಶದಲ್ಲಿ ನ್ಯಾಯಮಂಡಳಿ ತಿಳಿಸಿದೆ.

ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಐಟಿಎಟಿ) ನ್ಯಾಯಾಂಗ ಸದಸ್ಯ ಆರ್. ಪಿ. ತೊಲಾನಿ ಮತ್ತು ಲೆಕ್ಕಪತ್ರ ಸದಸ್ಯ ಆರ್. ಸಿ. ಶರ್ಮಾ ಅವರು ಈ ಆದೇಶ ಹೊರಡಿಸಿದ್ದಾರೆ. 1987-88 ಮತ್ತು 1988-89ರ ಹಣಕಾಸು ವರ್ಷದಲ್ಲಿ ತಮಗೆ 52 ಕೋಟಿ ರೂಪಾಯಿ ಮತ್ತು ತಮ್ಮ ತಂದೆಗೆ 85 ಲಕ್ಷ ರೂಪಾಯಿ ಬಾಕಿ ತೆರಿಗೆ ಪಾವತಿಸಲು ಆದೇಶಿಸಿದ್ದನ್ನು ರದ್ದುಪಡಿಸಬೇಕು ಎಂಬ ವಿನ್ ಛಡ್ಡಾ ಅವರ ಪುತ್ರನ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಮಂಡಳಿ ಈ ಮಹತ್ವದ ಆದೇಶ ನೀಡಿದೆ.

1987ರಲ್ಲಿ ಸ್ವೀಡನ್‌ನಿಂದ 400ರಷ್ಟು 155 ಮಿ.ಮೀ. ಹೋವಿಟ್ಸರ್ ಫಿರಂಗಿಗಳನ್ನು 1,437 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತಕ್ಕೆ ತರಿಸಿಕೊಳ್ಳಲಾಗಿತ್ತು. ಈ ವ್ಯವಹಾರದಲ್ಲಿ ಯಾವುದೇ ಮಧ್ಯವರ್ತಿ ಇರಬಾರದು ಎಂಬುದು ಭಾರತದ ರಕ್ಷಣಾ ನೀತಿಯಾಗಿತ್ತು. ಒಂದು ವೇಳೆ ಮಧ್ಯವರ್ತಿಗಳಿದ್ದರೂ ಅವರಿಗೆ ಬೊಫೋರ್ಸ್ ಕಂಪೆನಿಯೇ ಕಮಿಷನ್ ನೀಡಬೇಕು, ಇಲ್ಲವೇ ಒಟ್ಟು ಗುತ್ತಿಗೆ ಮೊತ್ತದಿಂದ ಈ ಕಮಿಷನ್ ಹಣವನ್ನು ಕಡಿತಗೊಳಿಸಬೇಕಿತ್ತು. ಆದರೆ ಬೊಫೋರ್ಸ್ ಕಂಪೆನಿ ಹಾಗೆ ಮಾಡಲಿಲ್ಲ. ಇದರಿಂದಾಗಿ ಭಾರತವು 41.25 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಯಿತು. ಈ ದುಡ್ಡನ್ನು ಬೊಫೋರ್ಸ್ ಕಂಪೆನಿ ಗುತ್ತಿಗೆ ಒಪ್ಪಂದದ ಷರತ್ತುಗಳಿಗೆ ವಿರುದ್ಧವಾಗಿ ವಿನ್ ಛಡ್ಡಾ ಮತ್ತು ಕ್ವಟ್ರೋಚಿ ಅವರಿಗೆ ಹಸ್ತಾಂತರಿಸಿತು’ ಎಂದು ನ್ಯಾಯಮಂಡಳಿಯ ಆದೇಶದಲ್ಲಿ ತಿಳಿಸಲಾಗಿದೆ.

ಸ್ಥಳೀಯ ಗುತ್ತಿಗೆದಾರರು, ಭಾರತೀಯ ಸೇನಾಧಿಕಾರಿಗಳು, ನಾಗರಿಕ ಅಧಿಕಾರಿಗಳು ಮತ್ತು ರಾಜಕಾರಣಿಗಳೊಂದಿಗೆ ಶಾಮೀಲಾಗಿ ಈ ಏಜೆಂಟ್‌ರು ಬೊಫೋರ್ಸ್ ಕಂಪೆನಿಗೆ ಸಹಾಯ ಮಾಡಿದ್ದಾರೆ. ಗೋಪ್ಯ ಸ್ವಿಸ್ ಬ್ಯಾಂಕ್ ಖಾತೆಗಳ ಮೂಲಕ ಈ ಲಂಚದ ದುಡ್ಡನ್ನು ಪಾವತಿಸಲಾಗಿದೆ. ಲಂಚ ಪಡೆದ ಸಮಯದಲ್ಲಿ ಕ್ವಟ್ರೋಚಿ ಅವರು ಭಾರತದಲ್ಲಿ ಇದ್ದ ಕಾರಣ ಅವರು ಅದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. 2001ರಲ್ಲಿ ನಿಧನರಾದ ಛಡ್ಡಾ ಅವರು ಪಡೆದ ಹಣಕ್ಕೆ ಕೂಡ ತೆರಿಗೆ ಪಾವತಿಸಬೇಕು ಎಂದು ತಿಳಿಸಲಾಗಿದೆ.

ಹಣದ ಮೂಲ ತಿಳಿಯಬಾರದು ಎಂಬ ಕಾರಣಕ್ಕೆ ಛಡ್ಡಾ ಮತ್ತು ಕ್ವಟ್ರೋಚಿ ಅವರು ತಮ್ಮ ದುಡ್ಡನ್ನು ಪದೇ ಪದೇ ವರ್ಗಾವಣೆ ಮಾಡುತ್ತಿದ್ದರು ಎಂಬುದನ್ನೂ ನ್ಯಾಯಮಂಡಳಿ ಬೆರಳು ಮಾಡಿ ತೋರಿಸಿದೆ.

‘ಸಂಬಂಧಪಟ್ಟ ಎಲ್ಲಾ ಆದಾಯ ತೆರಿಗೆ ವಂಚನೆಗಳಿಗೆ ತಾರ್ಕಿಕ ಅಂತ್ಯ ಹಾಡಬೇಕಿದೆ. ಇಲ್ಲವಾದರೆ ಭಾರತದಲ್ಲಿ ಪ್ರಭಾವ ಬಳಸಿ ತೆರಿಗೆ ವಂಚನೆ ಮಾಡಬಹುದಾಗಿದೆ ಎಂಬ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ. ಹೀಗಾಗಿ ಬಾಕಿ ಮಾಡಿದ ತೆರಿಗೆಯನ್ನು ಪಾವತಿಸಲೇಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕ್ವಟ್ರೋಚಿ ಅವರು ರಾಜೀವ್ ಗಾಂಧಿ ಕುಟುಂಬಕ್ಕೆ ನಿಕಟರಾಗಿದ್ದವರು. ಲಂಚ ಪ್ರಕರಣದಲ್ಲಿ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ್ದರೂ 1993ರಲ್ಲಿ ದೇಶ ಬಿಟ್ಟು ಹೋದವರು ಮರಳಿ ದೇಶಕ್ಕೆ ಕಾಲಿಟ್ಟಿಲ್ಲ. ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ನೀಡಿದ ಮುಂಗಡ ಹಣದ ಶೇ 3ಕ್ಕೆ ಸಮವಾಗಿ ಈ ಲಂಚದ ಹಣ ಇದ್ದು, ಇದರಲ್ಲಿ ಯಾರಿಗೆಲ್ಲ ಪಾಲು ಸಿಕ್ಕಿದೆ ಎಂಬುದು ಸದ್ಯದ ದೊಡ್ಡ ಪ್ರಶ್ನೆಯಾಗಿದೆ.

ಕ್ವಟ್ರೋಚಿ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲದಿರುವುದರಿಂದ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಕೈಬಿಡಬೇಕು ಎಂದು ಸಿಬಿಐ ಕೋರಿಕೆ ಸಲ್ಲಿಸಿದ್ದನ್ನು ವಿಚಾರಣೆ ನಡೆಸುತ್ತಿರುವ ದೆಹಲಿಯ ನ್ಯಾಯಾಲಯವೊಂದು ತನ್ನ ತೀರ್ಪು ನೀಡುವುದಕ್ಕೆ ಮುನ್ನವೇ ಆದಾಯ ತೆರಿಗೆ ಇಲಾಖೆಯ ನ್ಯಾಯಮಂಡಳಿಯಿಂದ ಈ ಮಹತ್ವದ ಆದೇಶ ಹೊರಬಿದ್ದಿದೆ.

ಸಿಬಿಐಯು 1999ರಲ್ಲಿ ಬೊಫೋರ್ಸ್ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ರಕ್ಷಣಾ ಕಾರ್ಯದರ್ಶಿ ಎಸ್. ಕೆ. ಭಟ್ನಾಗರ್, ಕ್ವಟ್ರೋಚಿ, ಬೊಫೋರ್ಸ್ ಕಂಪೆನಿಯ ಮಾಜಿ ಮುಖ್ಯಸ್ಥ ಮಾರ್ಟಿನ್ ಆರ್ಡಬೊ ಮತ್ತು ಬೊಫೋರ್ಸ್ ಕಂಪೆನಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.

ಕ್ವಟ್ರೋಚಿ ಮಾತ್ರ ಇದುವರೆಗೆ ಭಾರತದ ಯಾವುದೇ ನ್ಯಾಯಾಲಯದ ಮುಂದೆಯೂ ಹಾಜರಾಗಿಲ್ಲ. 2003ರಲ್ಲಿ ಮಲೇಷ್ಯಾದಿಂದ ಮತ್ತು 2007ರಲ್ಲಿ ಅರ್ಜೆಂಟೈನಾದಿಂದ ಕ್ವಟ್ರೋಚಿ ಅವರನ್ನು ಗಡೀಪಾರು ಮಾಡಿಸಿಕೊಳ್ಳಲು ಸಿಬಿಐ ವಿಫಲವಾಗಿತ್ತು.  ಹಗರಣಗಳ ಭಾರಕ್ಕೆ ಸಿಲುಕಿರುವ ಕಾಂಗ್ರೆಸ್ ವಿರುದ್ಧ ಕತ್ತಿ ಮಸೆಯಲು ವಿರೋಧ ಪಕ್ಷಗಳಿಗೆ ಮತ್ತೊಂದು ಪ್ರಬಲ ಅಸ್ತ್ರ ದೊರೆತಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT