ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಒಂದಾಗೋಣ ಬಾ...

Last Updated 14 ಜುಲೈ 2012, 19:30 IST
ಅಕ್ಷರ ಗಾತ್ರ

ಎಷ್ಟು ಎತ್ತಿ ಕಟ್ಟಿದರೂ
ಲೂಸು, ಬಿಜೆಪಿಯ ನಿಕ್ಕರು
ಹೇಗೆ ಬಿಗಿ ಮಾಡುವರೋ ಪಾಪ
ಹೊಸ ಟೈಲರು, ನಮ್ಮ ಶೆಟ್ಟರು!

`ಶಾಂತಿ, ಶಿಸ್ತು!~ ಎಂದ ಪರಮೇಶಿ. `ಲೇ ತಮಾ, ಇದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಅಲ್ಲ, ಹರಟೆಕಟ್ಟೆ. ನಾವಿಲ್ಲಿ ಏನ್‌ಬೇಕಾದ್ರು ಮಾತಾಡಬಹುದು. ಗಣವೇಷ, ಬಣರಾಜಕೀಯ ಇಲ್ಲಿ  ನಡೆಯಲ್ಲ~ ಎಂದ ದುಬ್ಬೀರ, ಪರಮೇಶಿಯ ಡುಬ್ಬ ಚಪ್ಪರಿಸುತ್ತ.
`ಅಂದ್ರೇ ಬಿಜೆಪಿ ಶಾಸಕರಲ್ಲಿ ಶಾಂತಿ, ಶಿಸ್ತು ಐತೆ ಅಂತ ನಿನ್ನ ಮಾತಿನ ಅರ್ಥನಾ?~ ತೆಪರೇಸಿಯ ಕೊಕ್ಕೆ.

`ಮತ್ತೆ? ಇಲ್ವಾ? ಎಲ್ಲೋ ಒಂದು ಹತ್ತು ಪರ್ಸೆಂಟ್ ಭಿನ್ನಮತ, ಒಂದು ಇಪ್ಪತ್ತು ಪರ್ಸೆಂಟು ಭ್ರಷ್ಟಾಚಾರ, ಒಂದು ಮೂವತ್ತು ಪರ್ಸೆಂಟು ಕುರ್ಚಿ ಕಾದಾಟ, ಮೇಲೆ ಇನ್ನೊಂದು ಹತ್ತು-ಹದಿನೈದು ಪರ್ಸೆಂಟು ಬಣರಾಜಕೀಯ, ಜೈಲು ಬೇಲು ಇತ್ಯಾದಿ ಐತಪ. ಉಳಿದದ್ದೆಲ್ಲ ಶಾಂತಿ ಶಿಸ್ತೇ. ಮನಿ ಅಂದಮ್ಯೋಲ ಕಸ ಬಿದ್ದೇ ಬೀಳ್ತತಿ. ಅದನ್ನ ಹೊಡೀತಾನೇ ಇರ‌್ಬೇಕು, ಅಲ್ವಾ?~ ಪರಮೇಶಿ ವ್ಯಂಗ್ಯವಾಡಿದ.

`ಈ ಬಿಜೆಪಿಯವರು ಏನೇ ಹೊಡೆದಾಡಿದ್ರು ಕೊನಿಗೆ ಎಲ್ಲರೂ `ಮತ್ತೆ ಒಂದಾಗೋಣ ಬಾ~ ಅನ್ನೋತರ ಒಟ್ಟಿಗೇ ಒಂದೇ ಹಾರ ಹಾಕಿಸ್ಕಂಡು, ಕೈ ಎತ್ಕಂಡು, ಹಲ್ಲು ಬಿಟ್ಕಂಡು ನಿಂತ್ಕೋತಾರಪ್ಪ. ಅದನ್ನ ಮೆಚ್ಚಬೇಕು ನೋಡು.~ ಮಿಸ್ಸಮ್ಮ ನಕ್ಕಳು.

`ಅದಿರ‌್ಲಿ ಮಿಸ್ಸಮ್ಮ, ನಂಗೆ ಈ ರಾಜಕಾರಣಿಗಳು ವಿಕ್ಟರಿ ಸಿಂಬಲ್ ತರ ಬೆರಳು ಅಲ್ಲಾಡಿಸೋದ್ನ ಕಂಡ್ರೆ ಮೈ ಉರೀತತೆ ನೋಡು. ಅವರ ಕೈ ಬೆರಳುಗಳ್ನ ಹಂಗೆ ಕಟ್ ಮಾಡಿ ಎಸೀಬೇಕು ಅನ್ಸುತ್ತೆ. ಗೆದ್ರೂ ಎರಡು ಬೆರಳು ತೋರಿಸ್ತಾರೆ. ಸೋತ್ರೂ ಎರಡು ಬೆರಳು ತೋರಿಸ್ತಾರೆ. ಜೈಲಿಗೆ ಹೋಗುವಾಗ್ಲು ಅಲ್ಲಾಡಿಸ್ತಾರೆ, ಬೇಲ್ ಸಿಕ್ರೂ ಅಲ್ಲಾಡಿಸ್ತಾರೆ. ಇವರಿಗೇನು ತೆಲಿಗಿಲಿ ಸರಿ ಐತೋ ಇಲ್ಲೊ ತಿಳೀತಿಲ್ಲಪ...~ ಯಬಡೇಶಿ ಕೋಪ ಪ್ರದರ್ಶಿಸಿದ.

`ಶಾಂತಿ, ಶಾಂತಿ, ಒಬ್ಬೊಬ್ರುದು ಒಂದೊಂದ್ ತರ ಕಣೋ ಯಬಡೇಶಿ, ಈಗ ನಮ್ಮ ನಿತ್ಯಾನಂದರದು ಸದಾ ಕೈ ಮುಗಿಯೋ ಪೋಸು. ಪ್ರವಚನದಲ್ಲಿದ್ರು ಅಷ್ಟೇ ಪೋಲಿಸ್ ಕಸ್ಟಡೀಲಿದ್ರೂ ಅಷ್ಟೆ. ರಾಮನ ಪೋಟೋದಲ್ಲಿರೋ ಆಂಜನೇಯನ ತರ `ಕೈ ಮುಗಿದ~ ಪೋಸ್‌ನಲ್ಲೇ ಇರ‌್ತಾರೆ.

ಆಮೇಲೆ ನಮ್ ಮಾಜಿ ಸಿಎಮ್ಮು ಸದಾನಂದರದು ಹೆಸರಿಗೆ ತಕ್ಕಂಗೆ ಯಾವಾಗ್ಲೂ ನಗು. ಸದಾ ನಗ್ತಾನೇ ಇರ‌್ತಾರೆ. ಮೊನ್ನೆ ರಾಜೀನಾಮೆ ಕೊಡುವಾಗ್ಲು ಅಷ್ಟೆ, ನಗ್ತಾ ನಗ್ತಾ ಕೊಟ್ರು. ಏನ್ಮಾಡೋಕಾಗುತ್ತೆ? ಅದೇ ತರ ಕೆಲ ರಾಜಕಾರಣಿಗಳಿಗೆ ಬೆರಳು ಅಲ್ಲಾಡ್ಸೋ ಚಟ. ಆಡಿಸ್ಲಿ ಬಿಡು...~ ಗುಡ್ಡೆ ಯಬಡೇಶಿಯನ್ನ ಸಮಾಧಾನಿಸಿದ.

`ಅಲ್ಲೋ ಗುಡ್ಡೆ, ಅದೇನರೆ ಹಾಳಾಗ್ಲಿ, ಮುಖ್ಯಮಂತ್ರಿ ಸ್ಥಾನ ಒಂದು, ಈ ಉಪ ಮುಖ್ಯಮಂತ್ರಿ ಯಾಕೆ ಎರಡು?~
`ಕೆಲ್ಸ ಸುಲಭ ಆಗ್ತತಿ ಕಣೋ ಮಗಾ, ಇಬ್ರಿಗೂ ಜವಾಬ್ದಾರಿ ಹೊರಿಸಿ ಮುಖ್ಯಮಂತ್ರಿಗಳು ಆರಾಮಾಗಿರಬಹುದು. ಕೆಲವರು ಎರಡೆರಡು ಮನಿ, ಮದುವೆ ಮಾಡ್ಕಂಡಿರ‌್ತಾರೆ, ಯಾಕೆ ಹೇಳು? ಇವಳು ಜಗಳ ಮಾಡಿದ್ರೆ ಅವಳ ಮನಿಗೋಗಬಹುದು, ಅವಳು ಜಗಳ ಮಾಡಿದ್ರೆ ಇವಳ ಮನಿಗೆ ಬರಬಹುದು ಅಂತ. ಅಥ್ವಾ ಇಬ್ಬರ‌್ನೂ ಕೆಲ್ಸಕ್ಕೆ ಕಳಿಸಿ ತಾನು ಆರಾಮಾಗಿರಬಹುದು ಅಂತ. ಇವೆಲ್ಲ ನಿಂಗೆ ಅರ್ಥ ಆಗಲ್ಲಬಿಡು...~ ಗುಡ್ಡೆ ನಕ್ಕ.

`ಆಹಾ ಮಳ್ಳ, ಭಾರೀ ಅನುಭವಸ್ಥನ ತರ ಮಾತಾಡ್ತಾನೆ. ಅದಿರ‌್ಲಿ, ಜಗದೀಶ್ ಶೆಟ್ರು ನೆಮ್ಮದಿಯಾಗಿ ರಾಜ್ಯಭಾರ ಮಾಡ್ತಾರೆ ಅಂತೀಯ?~ ಮಿಸ್ಸಮ್ಮ ಪ್ರಶ್ನಿಸಿದಳು.
`ಒಳ್ಳೆ ಪ್ರಶ್ನೆ. ಜಗದೀಶ್ ಶೆಟ್ಟರ ನೆಮ್ಮದಿ ಟೀವಿ ನ್ಯೂಸ್ ಚಾನೆಲ್‌ನೋರ ಕೈಯಲ್ಲೈತೆ ನೋಡು. ಅವರು ಟೀವಿಯವರ‌್ನ ಸರಿಯಾಗಿ ಮ್ಯೋನೇಜ್ ಮಾಡಿಬಿಟ್ರೆ ಅರ್ಧ ರಾಜ್ಯ ಗೆದ್ದಂಗೆ. ಜಗತ್ತಿನ ಸೃಷ್ಟಿಗೆ ಕಾರಣವಾದ `ದೇವಕಣ~ ಎಲ್ಲೈತೋ ಗೊತ್ತಿಲ್ಲ. ಆದ್ರೆ ಈ ಭಿನ್ನಮತದ ದೇವಕಣ ಇರೋದು ಟಿ.ವಿ. ಕ್ಯಾಮೆರಾಗಳಲ್ಲೇ. ಹುಷಾರಾಗಿರಬೇಕು~ ಎಂದ ಗುಡ್ಡೆ ನಗುತ್ತ.

`ಕರೆಕ್ಟಾಗಿ ಹೇಳಿದೆ ಕಣಲೆ, ಶೆಟ್ಟರ್ ಸಾಹೇಬ್ರು ಉಳಿದಿರೋ ಒಂದು ವರ್ಷದಲ್ಲಿ ಬೆಲ್ಲದಂಗಡಿ ನಡೆಸಿದ್ರೆ ಓ.ಕೆ., ಕಬ್ಬಿಣದ ಅಂಗಡಿ ನಡೆಸಿದ್ರೆ ಯಾವ ನೊಣಾನೂ ಬರಲ್ಲ. ಯಾವಾಗ್ಲು  ಸದಾನಂದಗೌಡ್ರ ತರ ನಗ್ತಾ ನಗ್ತಾ ಇರ‌್ಬೇಕು, ಕುಮಾರಸ್ವಾಮಿ ತರ ಪತ್ರಕರ್ತರ ಹೆಗಲ ಮೇಲೆ ಕೈ ಹಾಕ್ತಾ `ಏನ್ ಬ್ರದರ್ ಸಿಗ್ಲೇ ಇಲ್ಲ~ ಅಂತಿರ‌್ಬೇಕು ಅಲ್ವಾ?~ ತೆಪರೇಸಿ ಧ್ವನಿಗೂಡಿಸಿದ.

`ಅಯ್ಯೋ, ಹಾಗಂತ ಜಾಸ್ತಿ ನಗಂಗಿಲ್ಲಪಾ, ಯಡ್ಯೂರಪ್ಪ ಅವರಿಗೆ ಗೊತ್ತಾದ್ರೆ ಮುಗೀತು. `ಯಾಕೋ ಬಹಳ ನಗ್ತಿದಾರೆ, ಬಂದು ಕಾಣೋಕೆ ಹೇಳಿ~ ಅಂದುಬಿಡ್ತಾರೆ ಅಷ್ಟೆ.~ ಪರಮೇಶಿ ಜೋರಾಗಿ ನಕ್ಕ.

`ಯಡ್ಯೂರಪ್ಪ ಸುಮ್ನಿದ್ರೂ ನಮ್ಮ ಬೀಪಿ ಹರೀಶು, ಸುರೇಶ್‌ಗೌಡ ಅಂತೂ ಕೇಳೇ ಕೇಳ್ತಾರೆ. ನಿಮ್ಮನ್ನ ಮುಖ್ಯಮಂತ್ರಿ ಮಾಡಿದ್ದೇ ನಾವು, ಯಾರನ್ನ ಕೇಳಿ ನಗ್ತೀರಿ? ಅಂತ ಕ್ಲಾಸ್ ತಗಂಡ್‌ಬಿಡ್ತಾರೆ...~

`ಅದೂ ನಿಜ ಅನ್ನು. ಅಲ್ಲ ಅದಿರ‌್ಲಿ, ಬೀಪಿ ಹರೀಶು ಅಷ್ಟೊಂದು ಕೂಗಾಡ್ತಿದ್ರಲ್ಲ, ಅವರನ್ಯಾಕೆ ಮಂತ್ರಿ ಮಾಡ್ಲಿಲ್ಲ?~
`ನಿನ್ತೆಲಿ, ನಾಲ್ಕು ಸಲ ಗೆದ್ದಿರೋ ಶಂಕರಲಿಂಗೇಗೌಡ್ರನ್ನೇ ಮಂತ್ರಿ ಮಾಡಿಲ್ಲ. ಅವರು ಪಂಚೆ ಕೊಡವಿಕೊಂಡು ಸಿಕ್ಕ ಸಿಕ್ಕೋರ ಮೇಲೆ ಎಗರಾಡ್ತಿದ್ರಂತೆ. ಎಂ.ಪಿ. ಕುಮಾರಸ್ವಾಮಿ ಅನ್ನೋ ಶಾಸಕರು ಇನ್ನೂ ಒಂದೆಜ್ಜೆ ಮುಂದಕ್ಕೋಗಿ `ನನ್ನ ಮಂತ್ರಿ ಮಾಡ್ಲಿಲ್ಲ ಅಂತ ಬೇಜಾರಿಲ್ಲ.

ಈಗ ಮಂತ್ರಿಗಳಾಗಿರೋರ ಪೈಕಿ ಯಾರಾದ್ರು ಜೈಲಿಗೆ ಹೋದ್ರೆ ಆಗಲಾದ್ರೂ ನನ್ನ ಮಂತ್ರಿ ಮಾಡಿ~ ಅಂತ ಸಖತ್ ರಾಂಗಾಗಿದ್ರಂತೆ. ಇಂಥದ್ರಲ್ಲಿ ಒಂದು ಸಲ ಗೆದ್ದಿರೋ ಹರೀಶ್ ಅವರ‌್ನ ಹೆಂಗೆ ಮಂತ್ರಿ ಮಾಡ್ತಾರೆ?~

`ಹಂಗಂತೀಯ? ಪಾಪ ಬೀಪಿ ಹರೀಶು ಈಗ `ಲೋಬೀಪಿ~ ಹರೀಶ್ ಆಗಿದಾರೆ ಅನ್ಸುತ್ತೆ. ಮಾತಿಲ್ಲ ಕತೆಯಿಲ್ಲ~ ತೆಪರೇಸಿ ನಕ್ಕ.

`ಏನೇ ಆಗ್ಲಪ, ಜಗದೀಶ್ ಶೆಟ್ಟರು ಇನ್ಮೇಲೆ ಬಹಳ ಹುಷಾರಾಗಿರಬೇಕು. ಕತ್ತಿ ಮೇಲೆ ನಡೆದಂಗೆ ರಾಜ್ಯಭಾರ ಮಾಡಬೇಕು. ಜೆಡಿಎಸ್‌ನೋರು ಇರೋ ಕಡೆ ತಲೆ ಹಾಕಿ ಮಲಗಬಾರದು. ಮಲಗಿದ್ರೂ ಯಡ್ಯೂರಪ್ಪ ಅವರಿಗೆ ಗೊತ್ತಾಗಬಾರದು. ಮೊನ್ನೆ ಏನಾತಂತೆ ಗೊತ್ತಾ? ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಶೆಟ್ಟರ್‌ಗೆ ಯಾವುದೋ ಫೋನ್ ಬಂತಂತೆ. ಯಾರು ಅಂತ ಮಾತಾಡ್ತಿದ್ದಂಗೆ ಶೆಟ್ಟರು ನಿಂತು ನಿಂತಲ್ಲೇ ಬೆವೆತು ಹೋದ್ರಂತೆ!~

`ಹೌದಾ? ಫೋನ್ ಮಾಡಿದ್ದು ಯಾರಂತೆ?~
`ಶುಭಾಶಯ ಹೇಳೋಕೆ ದೇವೇಗೌಡ್ರು ಫೋನ್ ಮಾಡಿದ್ರಂತೆ!~

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT