ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಕಲ್ಲು ತೂರಾಟ: ಲಾಠಿ ಪ್ರಹಾರ

Last Updated 25 ಫೆಬ್ರುವರಿ 2011, 16:40 IST
ಅಕ್ಷರ ಗಾತ್ರ

ಮಡಿಕೇರಿ: ವಿರಾಟ್ ಹಿಂದೂ ಸಮಾಜೋತ್ಸವದ ಶೋಭಾಯಾತ್ರೆ ವೇಳೆ ಕಿಡಿಗೇಡಿಗಳು ಕೆಲವು ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರ ಬೆನ್ನಲ್ಲಿಯೇ ಶುಕ್ರವಾರ ಕೂಡ ಕಲ್ಲು ತೂರಾಟ ಮುಂದುವರಿದಿದ್ದರಿಂದ ಪೊಲೀಸರು ನಗರದ ಹಲವೆಡೆ ಸಂಜೆ ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಿದರು.

ನಗರದಲ್ಲಿ ಪರಿಸ್ಥಿತಿ ಬಿಗುವಿನಿಂದಿದ್ದರೂ ಸಂಪೂರ್ಣ ಹತೋಟಿಯಲ್ಲಿದೆ. ಮುಂಜಾಗ್ರತಾ ಕ್ರಮವಾಗಿ ಫೆ. 28 (ಸೋಮವಾರ) ಸಂಜೆವರೆಗೆ ನಗರದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾ  ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ ಆದೇಶ ಹೊರಡಿಸಿದ್ದಾರೆ.

ಮಹದೇವಪೇಟೆಯ ಮೂಕಾಂಬಿಕ ಎಂಟರ್‌ಪ್ರೈಸಸ್ ಮಳಿಗೆ ಮೇಲೆ ಬೈಕ್‌ನಲ್ಲಿ ಬಂದ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಒಂದು ಪಂಗಡದ ಗುಂಪು ಸ್ಥಳದಲ್ಲಿ ಜಮಾಯಿಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಗಮನಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಅನಂತರ ಈ ಗುಂಪು ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ಕಲ್ಲು  ತೂರಾಟ ನಡೆಸಿದವರನ್ನು ಬಂಧಿಸುವಂತೆ ಪಟ್ಟು ಹಿಡಿದು ಮೂರು ಗಂಟೆಗಳ ಗಡುವು ನೀಡಿತು.

ಮಧ್ಯಾಹ್ನ 2 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಈ ಗುಂಪು ಕಾಯ್ದೆಯನ್ನು  ಉಲ್ಲಂಘಿಸಿ ಠಾಣೆಯ ಮುಂದೆ ಜಮಾಯಿಸಿದ್ದರಿಂದ ಪೊಲೀಸರು ಅನ್ಯ ಮಾರ್ಗವಿಲ್ಲದೆ ಲಾಠಿ ಪ್ರಹಾರ  ನಡೆಸಿ ಚದುರಿಸಿದರು. ಆನಂತರ ಜನರಲ್ ತಿಮ್ಮಯ್ಯ ವೃತ್ತ, ಖಾಸಗಿ ಬಸ್ ನಿಲ್ದಾಣ, ಮಹದೇವಪೇಟೆ, ಕೊಹಿನೂರು ರಸ್ತೆ ಮತ್ತಿತರ ಕಡೆಗಳಲ್ಲಿ ಲಾಠಿ ಪ್ರಹಾರ ನಡೆಸಿದ ಪೊಲೀಸರು, ಗುಂಪುಗಳನ್ನು ಚದುರಿಸಿದರು. ಬೆತ್ತದ ರುಚಿ ಕಂಡ ಜನತೆ ದಿಕ್ಕಾಪಾಲಾಗಿ ಓಡಿದರು.

ಇಡೀ ಮಡಿಕೇರಿ ನಗರ ಸಂಪೂರ್ಣ ಪೊಲೀಸ್ ನಿಯಂತ್ರಣದಲ್ಲಿದ್ದಂತೆ ಭಾಸವಾಗುತ್ತಿದೆ. ಪ್ರಮುಖ ವೃತ್ತಗಳಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ನಾಲ್ಕು ವಜ್ರ ವಾಹನಗಳು ಗಸ್ತು ತಿರುಗುತ್ತಿವೆ. ಸಂಜೆಯಿಂದ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಇಡೀ ನಗರ ಸ್ತಬ್ಧವಾದಂತೆ ಕಂಡು ಬರುತ್ತಿದೆ. ಈ ಮಧ್ಯೆ, ಕೆಲವು ಅಂಗಡಿಗಳ ಮೇಲೆ ಗುರುವಾರ ಕಲ್ಲು ತೂರಾಟ ನಡೆಸಿದ ಘಟನೆಯನ್ನು ಖಂಡಿಸಿ ಕೊಡಗು ಮುಸ್ಲಿಂ ಹಿತರಕ್ಷಣಾ ಸಮಿತಿ ಶುಕ್ರವಾರ ಗದ್ದಿಗೆ ಬಳಿಯಿಂದ ಮಧ್ಯಾಹ್ನ 3 ಗಂಟೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿತ್ತಾದರೂ, ಜಿಲ್ಲಾಡಳಿತ ಮಧ್ಯಾಹ್ನ 2 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಮೆರವಣಿಗೆ ರದ್ದುಪಡಿಸಲಾಯಿತು.

ಈ ನಡುವೆ, ಗುರುವಾರ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ ನಡೆಸಿದ 11 ಮಂದಿಯ ಹೆಸರನ್ನು ಉಲ್ಲೇಖಿಸಿ ಕೊಡಗು ಮುಸ್ಲಿಂ ಹಿತರಕ್ಷಣಾ ಸಮಿತಿ ನೀಡಿದ್ದ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದರು. ಬಂಧಿತ ಆರೋಪಿಗಳೆಲ್ಲರೂ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ನಗರದ ಕಾಲೇಜು ರಸ್ತೆಯಲ್ಲಿರುವ ಗಣೇಶ್ ಮೆಡಿಕಲ್ಸ್ ಮಳಿಗೆಗೂ ಶುಕ್ರವಾರ ಸಂಜೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ನಗರದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದ್ದರೂ ಬೂದಿ ಮುಚ್ಚಿದ ಕೆಂಡದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT