ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಗೆದ್ದ ಕಾಂಗ್ರೆಸ್‌

Last Updated 29 ಮಾರ್ಚ್ 2014, 9:28 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ(ಪರಿಶಿಷ್ಟ ಜಾತಿ ಮೀಸಲು) 1991ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲೂ ಕಾಂಗ್ರೆಸ್‌ ಜಯಗಳಿಸಿತು. ಆ ಮೂಲಕ ಕ್ಷೇತ್ರವು ಕೈಪಾಳಯದ ಭದ್ರಕೋಟೆ ಎಂಬ ಮಾತಿಗೆ ಫಲಿತಾಂಶವೇ ಉತ್ತರ ನೀಡಿತ್ತು.

ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಸಂಖ್ಯೆ 17. ಪಿ. ಮಹದೇವಮ್ಮ ಎಂಬ ಮಹಿಳಾ ಅಭ್ಯರ್ಥಿ ಕೂಡ ಸ್ಪರ್ಧಿಸಿದ್ದರು. ಇವರು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ ಎರಡನೇ ಮಹಿಳೆ ಎಂಬುದು ವಿಶೇಷ. ಪಕ್ಷೇತರರಾಗಿದ್ದ ಅವರಿಗೆ 4,540 ಮತ ಬಿದ್ದಿದ್ದವು.

ಬಿಜೆಪಿಯು ಮೊದಲ ಬಾರಿಗೆ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು, ಈ ಚುನಾವಣೆಯ ವಿಶೇಷ. ಹಿಂದಿನ ಚುನಾವಣೆಗಳಲ್ಲಿ ಈ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿರಲಿಲ್ಲ. ಕಮಲ ಪಾಳಯದಿಂದ ಸ್ಪರ್ಧಿಸಿದ್ದ ಎಲ್‌. ಶಿವಲಿಂಗಯ್ಯ 1,42,456 ಮತ ಪಡೆದರು. ಆದರೆ, ಅವರಿಗೆ ಗೆಲುವು ಒಲಿಯಲಿಲ್ಲ. ಜನತಾದಳದಿಂದ ಕಣಕ್ಕೆ ಧುಮುಕಿದ್ದ ಎಚ್‌.ಸಿ. ಮಹದೇವಪ್ಪ 1,48,775 ಮತ ಪಡೆದು ಪರಾಭವಗೊಂಡರು.

ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿ. ಶ್ರೀನಿವಾಸಪ್ರಸಾದ್‌ ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿ ಸಂಸತ್‌ ಪ್ರವೇಶಿಸಿದರು. ಅವರ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಲು ಬಿಜೆಪಿ ಮತ್ತು ಜನತಾದಳದಿಂದ ಸಾಧ್ಯವಾಗಲಿಲ್ಲ. ಚಲಾವಣೆಗೊಂಡಿದ್ದ ಮತಗಳಲ್ಲಿ ಅವರು 2,17,735 ಮತ ಪಡೆದರು.

1991ರ ಚುನಾವಣೆ ವೇಳೆ ಕ್ಷೇತ್ರದಲ್ಲಿ ಒಟ್ಟು 9,44,165 ಮತದಾರರು ಇದ್ದರು. ಇವರಲ್ಲಿ 5,78,291 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಶೇ 61.25ರಷ್ಟು ಮತದಾನವಾಗಿತ್ತು. ಹಿಂದಿನ ಚುನಾವಣೆಗಿಂತ ಶೇ 13.21ರಷ್ಟು ಮತದಾನ ಕುಸಿತ ಕಂಡಿತ್ತು.

ಪಕ್ಷೇತರರಾದ ಆರ್‌. ಕೃಷ್ಣ– 750, ಬಿ. ಚಿಕ್ಕಸಿದ್ದಯ್ಯ– 1,624, ಪಿ. ಜಯರಪ್ಪ– 3,734, ಡಿ. ನಾರಾಯಣಸ್ವಾಮಿ– 1,677, ಪುಟ್ಟನಿಂಗಯ್ಯ– 7,911, ಮಾದಯ್ಯ– 8,203, ರಾಚು– 663, ಎಸ್‌. ವಿಜೇಂದರ್– 320, ವೆಂಕಟರಾಮಸ್ವಾಮಿ– 10,709, ಶಿವಾಶನ್‌ಗೌಂಡ– 726, ಶಿವಾಜೈ ಮೈಕಾ– 3,253, ಹನುಮಂತು– 520 ಹಾಗೂ ಕೆ. ಹುಚ್ಚಪ್ಪ– 602 ಮತ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT