ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಜೀವ ಪಡೆದ ರಸ್ತೆವಿಸ್ತರಣೆ ಸಮೀಕ್ಷೆ

Last Updated 21 ಸೆಪ್ಟೆಂಬರ್ 2011, 9:25 IST
ಅಕ್ಷರ ಗಾತ್ರ

ಶಹಾಪುರ: ಪಟ್ಟಣದ ಹೃದಯ ಭಾಗವಾಗಿರುವ ಬಸವೇಶ್ವರ ವೃತ್ತದಿಂದ ಕನ್ಯಾಕೊಳ್ಳುರ ಅಗಸಿಯವರೆಗೆ ಮತ್ತೆ ಮಂಗಳವಾರ ಒಳ ರಸ್ತೆ ವಿಸ್ತರಣೆಗಾಗಿ ಪುರಸಭೆ ಸಿಬ್ಬಂದಿಯವರು ಸಮೀಕ್ಷೆ ನಡೆಸಿ ಕೆಂಪು ಬಣ್ಣದಿಂದ ಗುರುತು ಹಾಕುವ ಕಾರ್ಯ ಸಾಗಿತು.

ಈಗಾಗಲೇ ಹಲವು ತಿಂಗಳ ಹಿಂದೆ ಸಮೀಕ್ಷೆ ಮಾಡಿ ಗುರುತು ಹಾಕಲಾಗಿತ್ತು. ರಾಜಕೀಯ ಒತ್ತಡದ ಮೂಲಕ ಎಷ್ಟು ಪ್ರಮಾಣದಲ್ಲಿ ತೆರವುಗೊಳಿಸಬೇಕೆಂಬ ಗೊಂದಲ ಸೃಷ್ಟಿಸಿ ಸಮಸ್ಯೆಯನ್ನು ಜೀವಂತವಾಗಿ ಇಡಲಾಗಿತ್ತು ಎಂದು ತಿಳಿದು ಬಂದಿದೆ.

ಸಾರ್ವಜನಿಕರ ಧ್ವನಿಯಂತೆ ಕೆಲಸ ನಿರ್ವಹಿಸುತ್ತಿರುವ ಪುರಸಭೆ ಮುಖ್ಯಾಧಿಕಾರಿ ಎನ್.ಮಾಧವಿಯವರ ನೇತೃತ್ವದಲ್ಲಿ ಸಮೀಕ್ಷೆ ಕೈಗೆತ್ತಿಕೊಂಡಿದ್ದು ಬಸವೇಶ್ವರ ವೃತ್ತದಿಂದ ಹಳೆಯ ತರಕಾರಿ ಮಾರುಕಟ್ಟೆಯ ಹತ್ತಿರದ ವರೆಗೆ ರಸ್ತೆಯ ಮಧ್ಯದಿಂದ 30 ಅಡಿ ಎಡ ಹಾಗೂ ಬಲ  ಒಟ್ಟು 60 ಅಡಿ ಪ್ರದೇಶ ಒತ್ತುವರಿ ಜಾಗವನ್ನು ತೆರವುಗೊಳಿಸಬೇಕು.

ನಂತರ ಮುಂದೆ ಕನ್ಯಾಕೊಳ್ಳುರು ಅಗಸಿಯವರಿಗೆ ರಸ್ತೆ ಮಧ್ಯದಿಂದ 22 ಅಡಿ ಎಡ ಹಾಗೂ ಬಲ ಒಟ್ಟು 44 ಅಡಿ ಜಾಗವನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಯವರು ಸ್ಪಷ್ಟವಾಗಿ ಪುರಸಭೆ ಮುಖ್ಯಾಧಿಕಾರಿಗೆ ಮೌಖಿಕವಾಗಿ ತಿಳಿಸಿದ್ದಾರೆ ಎಂದು ಪುರಸಭೆಯ ಕಾರ್ಯಾಲಯದ ಮೂಲಗಳಿಂದ ತಿಳಿದು ಬಂದಿದೆ.

ಸ್ಥಳೀಯ ರಾಜಕೀಯ ಪ್ರಭಾವಿ ವ್ಯಕ್ತಿಯೊಬ್ಬರು ಪುರಸಭೆ ಅಧಿಕಾರಿಯ ಮೇಲೆ ಒತ್ತಡ ಹಾಕಿ ಕೇವಲ  ಎಡ ಹಾಗೂ ಬಲ ಸೇರಿ 50 ಅಡಿ ತೆರವುಗೊಳಿಸಲು ಸೂಚಿಸಿದ್ದರು ಅದಕ್ಕೆ ಕ್ಯಾರೇ ಅನ್ನದೆ ಮತ್ತೆ ಸಮೀಕ್ಷೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ವಿಸ್ತರಣೆ ಕಾರ್ಯವನ್ನು ನಡೆಸಲಾಗುತ್ತಿದೆ. ಈಗಾಗಲೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಂದಿರ, ಮಸೀದಿ, ಚರ್ಚ, ಮಠ ಯಾವುದೇ ಇದ್ದರು ಸಹ ಅದನ್ನು ಲೆಕ್ಕಿಸದೆ ತೆರವುಗೊಳಿಸಬೇಕು ಎಂಬ ಸ್ಪಷ್ಟವಾದ ಆದೇಶವಿದೆ. ಕೆಲ ರಾಜಕೀಯ ಮುಖಂಡರು ತಮ್ಮ ಸ್ವಾರ್ಥ ಸಾಧನೆಗೆ  ಭಾವನಾತ್ಮಕ ಸಂಬಂಧ ಕಲ್ಪಿಸಿ ಸಮಸ್ಯೆಯ ಪರಿಹಾರಕ್ಕೆ ಮುಕ್ತಿ ನೀಡದಂತೆ ತರೆಮರೆಯಲ್ಲಿ ಸಾಗಿದ್ದು ಗುಟ್ಟಾಗಿ ಉಳಿದಿಲ್ಲ ಎನ್ನುತ್ತಾರೆ ಪುರಸಭೆ ಅಧಿಕಾರಿಯೊಬ್ಬರು.

ಅಕ್ಟೋಬರ ತಿಂಗಳದ ಮೊದಲ ವಾರದಲ್ಲಿ ರಸ್ತೆ ವಿಸ್ತರಣೆ ಕಾರ್ಯವನ್ನು ಆರಂಭಿಸಲಾಗುವುದು.
ಅಲ್ಲಿಯವರೆಗೆ ಒತ್ತುವರಿದಾರರಿಗೆ ಮನವಿ ಮಾಡಿ ದೂರ ಸರಿಯಲು ಕೋರಲಾಗುವುದು. ನಂತರ ಕಾನೂನು ಪ್ರಕಾರ ನಮ್ಮ ಕಾರ್ಯ ನಡೆಯುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತಮ ಕಾರ್ಯ: ನೂತನವಾಗಿ ಆಗಮಿಸಿರುವ ಪುರಸಭೆ ಮುಖ್ಯಾಧಿಕಾರಿಯವರು ಸಾರ್ವಜನಿಕ ಪರ ಕೆಲಸಗಳನ್ನು ಕೈಗೆತ್ತಿಕೊಂಡು ನೆರವೇರಿಸುತ್ತಿರುವುದು ಉತ್ತಮ ಬೆಳವಣಿಗೆ.

ಜನಪರ ಕಾರ್ಯಗಳಿಗೆ ಯಾರು ಅಡ್ಡಿಪಡಿಸಬಾರದು. ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪುರಸಭೆ ಮುಖ್ಯಾಧಿಕಾರಿಯನ್ನು ಎತ್ತಂಗಡಿ ಮಾಡುವ ಹುನ್ನಾರ ನಡೆದಿದೆ ಎಂದು ತಿಳಿದು ಬಂದಿದೆ.
ಇದು ಸರಿಯಾದ ಮಾರ್ಗವಲ್ಲ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿರುವಾಗ ಎಲ್ಲ ವರ್ಗದ ಜನತೆ ಮತ್ತಷ್ಟು ಸಹಕಾರ ನೀಡಬೇಕು. ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ, ವಿಸ್ತರಣೆ ಕಾರ್ಯಕ್ಕೆ ನಮ್ಮದು ಸಂಪೂರ್ಣ ಬೆಂಬಲವಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಈಶಾನ್ಯ ಸಾರಿಗೆ ಉಪಾಧ್ಯಕ್ಷ ವೆಂಕಣ್ಣಗೌಡ ಹಾಲಬಾವಿ ಹಾಗೂ ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷ ಚಂದ್ರಶೇಖರ ದೇಸಾಯಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT