ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ತುಂಬಬಹುದು ಮಡಿಲು

Last Updated 21 ಸೆಪ್ಟೆಂಬರ್ 2013, 4:44 IST
ಅಕ್ಷರ ಗಾತ್ರ

ಉತ್ತರಾಖಂಡದ ಇತ್ತೀಚೆಗಿನ ಜಲಪ್ರಳಯದಲ್ಲಿ ತಮ್ಮ ಕಣ್ಣೆದುರೇ ಕೊಚ್ಚಿಹೋದ, ಕಣ್ಮರೆಯಾದ ಕಂದಮ್ಮಗಳನ್ನು ಕಳೆದುಕೊಂಡು ಕಾಗರ್ತ್ತಲಲ್ಲಿ ಮುಳುಗಿದವರು ಹಲವರು. ದಿನಗಳೆದಂತೆ ಅವರಲ್ಲಿ ಮತ್ತೆ ಮಕ್ಕಳನ್ನು ಪಡೆಯುವ ಹಂಬಲ ಒಡಮೂಡುತ್ತಿದೆ. ಆದರೆ ಇವರಲ್ಲಿ ಬಹುತೇಕರು ಮಕ್ಕಳಾಗದಂತೆ ಅದಾಗಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವವರು. ಆದರೂ ದತ್ತು ಪಡೆಯುವ ಮನಸ್ಸಿಲ್ಲದೆ, ಸ್ವಂತ ಮಗು ಹೊಂದುವ ಹಂಬಲವನ್ನು ಹತ್ತಿಕ್ಕಿಕೊಳ್ಳಲಾಗದೇ ಅಲ್ಲೀಗ, ಹಲವಾರು ಮಂದಿ ದಿನನಿತ್ಯ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ. ಅದೇ ರೀತಿ, ಇತರೆಡೆಯೂ ಒಂದೇ ಮಗು ಸಾಕು ಎಂದೋ ಅಥವಾ ಇಬ್ಬರು ಮಕ್ಕಳಾದ ನಂತರ ಅನಿವಾರ್ಯವಾಗಿಯೋ ಬಹುತೇಕ ಮಹಿಳೆಯರು ಸಂತಾನಹರಣ  ಶಸ್ತ್ರಚಿಕಿತ್ಸೆ  ಮಾಡಿಸಿಕೊಳ್ಳುವುದು ಸಾಮಾನ್ಯ.

ದುರದೃಷ್ಟವಶಾತ್‌, ವಿವಿಧ ದುರಂತಗಳಲ್ಲಿ ಮಕ್ಕಳನ್ನು ಕಳೆದು­ಕೊಂಡಾಗ ಅಥವಾ ಏಕೈಕ ಮಗು ಬೆಳೆಯುತ್ತಾ ಬಂದಂತೆಲ್ಲ ಒಂಟಿತನ ಅನುಭವಿಸುವುದನ್ನು ನೋಡಲಾರದೇ ಮತ್ತೊಂದು ಮಗುವನ್ನು ಪಡೆಯಲು ಹಂಬಲಿಸುವವರೂ ಹಲವರು. ಹಾಗಿದ್ದರೆ ಎಷ್ಟು ಮಹಿಳೆಯರಿಗೆ ಹೀಗೆ ಮರು ಸಂತಾನ ಭಾಗ್ಯ ಲಭಿಸುತ್ತದೆ? ಯಾರಿ­ಗೆಲ್ಲ ಮತ್ತೆ ಒಡಲು ತುಂಬಿಸಿಕೊಳ್ಳುವ ಅವಕಾಶದ ಹೆಬ್ಬಾಗಿಲು ಶಾಶ್ವತವಾಗಿ  ಮುಚ್ಚಿಹೋಗಿರುತ್ತದೆ? ಇಲ್ಲಿದೆ ಮಾಹಿತಿ.

ಪ್ರಕರಣ 1
ಡಾಕ್ಟ್ರೇ, ನನ್ನ ಹೆಸರು ಚಿತ್ರಾ, 37 ವರ್ಷ. 11 ವರ್ಷದ ಒಬ್ಬನೇ ಮಗನಿದ್ದ. 3 ತಿಂಗಳ ಹಿಂದೆ  ಕೆರೆಯಲ್ಲಿ ಈಜಾಡಲು ಹೋದ­­ವನು ಮೇಲೇಳಲೇ ಇಲ್ಲ. ನನಗೆ ಇನ್ನೊಂದು ಮಗು­ವಾಗಲು ಸಾಧ್ಯವೇ? 4 ವರ್ಷಗಳ ಹಿಂದೆ ಟ್ಯೂಬೆಕ್ಟಮಿ ಮಾಡಿ­­ಸಿಕೊಂಡಿದ್ದೆ. ಹೀಗಾಗುತ್ತದೆ ಎಂದು ಕನ­ಸಲ್ಲೂ ಎಣಿಸಿರಲಿಲ್ಲ. ಹೇಗಾದರೂ ಮಾಡಿ ನೀವೇ ದಾರಿ ತೋರಿಸಿ.

ಪ್ರಕರಣ 2: ಸಾವಿತ್ರಿ 30 ವರ್ಷ– ಆರತಿಗೊಬ್ಬಳು ಕೀರ್ತಿ­ಗೊಬ್ಬ ಎಂಬಂತೆ ಮುತ್ತಿನಂತಹ ಇಬ್ಬರು ಮಕ್ಕಳಿದ್ದರು ಡಾಕ್ಟ್ರೇ. 6 ವರ್ಷದ ಮಗ ಡೆಂಗೆ ಜ್ವರಕ್ಕೆ ಬಲಿಯಾಗಿ 3 ತಿಂಗ­ಳಾಯ್ತು. 2 ವರ್ಷದ ಹಿಂದೆ ಮಗಳು ಹುಟ್ಟಿದಾಗ ಸಿಜೇರಿ­ಯನ್ ಹೆರಿಗೆಯ ಜೊತೆಗೆ ಸಂತಾನಹರಣ ಚಿಕಿತ್ಸೆ­ಯನ್ನೂ ನೀವೇ ಮಾಡಿದ್ರಿ. ಈಗ ಮತ್ತೆ ಮಗುವಾಗಬಹುದೇ?

ಪ್ರಕರಣ 3: ಸುಮಲತಾ, 32 ವರ್ಷ– ಇಬ್ಬರು ಹೆಣ್ಣು ಮಕ್ಕ­ಳಾದ ಮೇಲೆ ಹೆಚ್ಚು ಮಕ್ಕಳನ್ನು ಸಾಕುವುದು ಕಷ್ಟ ಎಂದು ನಾನು ಯಜಮಾನರು ಇಬ್ಬರೂ ತೀರ್ಮಾನಿಸಿ, ನಾನು ಟ್ಯೂಬೆಕ್ಟಮಿ ಮಾಡಿಸಿಕೊಂಡೆ. ಆದರೆ ಈಗ ನಮ್ಮತ್ತೆ, ನನಗಿರುವ ಒಬ್ಬನೇ ಮಗನಿಗೆ ವಂಶೋದ್ಧಾರಕ ಹುಟ್ಟಲೇಬೇಕು, ಇಲ್ಲವಾದರೆ  ಅವನಿಗೆ ಬೇರೆ ಮದುವೆ ಮಾಡುತ್ತೇನೆ ಎಂದು ದಿನಾಲೂ ಹಿಂಸೆ ಕೊಡುತ್ತಿದ್ದಾರೆ. ನನಗಂತೂ ದಿಕ್ಕೇ ತೋಚದಂತಾಗಿದೆ ಡಾಕ್ಟ್ರೇ, ಏನು ಮಾಡಲಿ?

ಪ್ರಕರಣ 4: ಮೊನ್ನೆ ಮೊನ್ನೆ ಚುನಾವಣಾ ರಾಜಕೀಯ­ದಲ್ಲಿ ವಿರೋಧಿಗಳು ನನ್ನ ಮಗನನ್ನೇ ಬಲಿ ತೆಗೆದುಕೊಂಡು ಬಿಟ್ಟರು. ಈಗ ಒಬ್ಬಳೇ ಮಗಳಿದ್ದಾಳೆ, ಅವಳಿಗೆ ಆಸ್ತಮಾ ಕಾಯಿಲೆ. ಸಂತಾನಹರಣ ಚಿಕಿತ್ಸೆಯಾಗಿ 10 ವರ್ಷವಾ­ಗಿದೆ. ಇನ್ನೊಂದು ಮಗು ಬೇಕೇ ಬೇಕು ಅನಿಸುತ್ತಿದೆ. ಏನು ಮಾಡುವುದು?

ಪ್ರಕರಣ 5: ಕುಟುಂಬದವರೆಲ್ಲ ಪ್ರವಾಸ ಹೊರಟಿದ್ದಾಗ ನಡೆದ ಅಪಘಾತದಲ್ಲಿ ಇಬ್ಬರು ಮಕ್ಕಳನ್ನೂ ಒಟ್ಟಿಗೇ ಕಳೆದು­ಕೊಂಡ ನತದೃಷ್ಟೆ ನಾನು. ನನ್ನಂತಹವರು ಅದೆಷ್ಟು ಜನರಿ­ದ್ದಾರೋ. ನನಗೀಗ 36 ವರ್ಷ. ಜೀವನವೇ ಜಿಗುಪ್ಸೆಯಾಗಿ­ಬಿಟ್ಟಿದೆ. 10 ವರ್ಷದ ಹಿಂದೆ ಮಕ್ಕಳಾಗದಂತೆ ಆಪರೇಷನ್ ಬೇರೆ ಆಗಿದೆ. ನನ್ನ ಬದುಕಲ್ಲಿ ಮತ್ತೆ ಬೆಳಕು ಮೂಡಬಹುದೇ?

ಪ್ರಕರಣ 6: ನಂದಿನಿ, 30 ವರ್ಷ– ಒಂದೇ ಮಗುವಿಗೆ ಲ್ಯಾಪ್ರೊಸ್ಕೋಪಿಕ್ ಟ್ಯೂಬೆಕ್ಟಮಿ ಮಾಡಿಸಿಕೊಂಡಿದ್ದೆ. ಯಜಮಾ­ನರು ರಸ್ತೆ ಅಪಘಾತದಲ್ಲಿ ತೀರಿಹೋದರು. ಮರು ಮದುವೆ ಮಾಡಿಕೊಂಡೆ. ಆದರೆ ಇವರಿಗೆ ಇದು ಮೊದಲನೇ ಮದುವೆ. ಇವರ  ಮನೆಯವರಿಗೆ ನನಗೆ ಆಪರೇಷನ್ ಆಗಿರು­ವುದು ಗೊತ್ತಿಲ್ಲ. ನನಗೆ ಮತ್ತೆ ಸಂತಾನ ಭಾಗ್ಯ ಸಿಗಬಹುದೇ ಮೇಡಂ?

ಹೀಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಿಗೆ ತಮ್ಮ ವೃತ್ತಿಜೀವನದಲ್ಲಿ ಎದುರಾಗುವ ಘಟನೆಗಳು ಹಲವು. ಇಂತಹ ಸಂದರ್ಭಗಳಲ್ಲೆಲ್ಲ ಬಹುತೇಕರಿಗೆ, ಕಾರ್ಮೋಡದ ಮರೆಯಿಂದ ಕಾಣಿಸಿಕೊಳ್ಳುವ ಕೋಲ್ಮಿಂಚಿನಂತೆ ನೆನಪಿಗೆ ಬರುವುದು ‘ಡಿಂಭನಾಳಗಳ ಮರುಜೋಡಣೆ’ ಎಂಬ ಶಸ್ತ್ರಚಿಕಿತ್ಸೆ. ಇದರ ಸಾಧಕ– ಬಾಧಕಗಳ ಬಗ್ಗೆ ಬೆಳಕು ಚೆಲ್ಲುವುದೇ ಈ ಲೇಖನದ ಪ್ರಮುಖ ಉದ್ದೇಶ.

* * *
ನಮ್ಮ ಅಜ್ಜ– ಅಜ್ಜಿಯ ಕಾಲದಲ್ಲಿ ಋತುಚಕ್ರ ನಿಲ್ಲುವವರೆಗೂ ಹಡೆಯುತ್ತಲೇ ಇರುತ್ತಿದ್ದರು. ಯಾಕೆಂದರೆ ಆಗ ಸಂತಾನ ನಿಯಂತ್ರಣ ಕ್ರಮಗಳೇ ಇರಲಿಲ್ಲ. ನನ್ನ ಮುತ್ತಜ್ಜಿಯ 9ನೆಯ ಮಗಳು ನನ್ನ ತಾಯಿಗಿಂತ ಚಿಕ್ಕವರು. ಎಷ್ಟೋ ಬಾರಿ ಮುತ್ತಜ್ಜಿ ಮತ್ತು ಅಜ್ಜಿಯರ ಬಾಣಂತನ ಒಟ್ಟಿಗೇ ಆಗುತ್ತಿತ್ತು ಎಂದು ಅಮ್ಮ ಹೇಳುತ್ತಿದ್ದರು. ಅದಕ್ಕೇ ಇರಬಹುದು ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ­ ಹೊಂದಿರುವ ದೇಶಗಳ ಪೈಕಿ 2ನೇ ಸ್ಥಾನ ಭಾರತಕ್ಕೆ.

1952ರಿಂದೀಚೆಗೆ ನಮ್ಮಲ್ಲಿ ಕುಟುಂಬ ಯೋಜನಾ ವಿಧಾನಗಳು ಜನಪ್ರಿಯವಾದವು. ಅದರಲ್ಲೂ ಸ್ತ್ರೀಯರಲ್ಲಿ ಶಾಶ್ವತ ವಿಧಾನವಾದ ಟ್ಯೂಬೆಕ್ಟಮಿ (ಡಿಂಭನಾಳ/  ನಳಿಕಾಛೇದನ ಶಸ್ತ್ರಚಿಕಿತ್ಸೆ) ಅತ್ಯಂತ ಜನಪ್ರಿಯ ವಿಧಾನ. ಪುರುಷರಲ್ಲಿ ವ್ಯಾಸೆಕ್ಟಮಿ (ವೀರ್ಯನಾಳ ಛೇದನ) ಅತ್ಯಂತ ಸುಲಭ ಹಾಗೂ ಸರಳವಾದ ಸಂತಾನ ನಿಯಂತ್ರಣ ವಿಧಾನ ಎನಿಸಿಕೊಂಡಿದೆ. ಆದರೂ ಪುರುಷ ಪ್ರಧಾನ ಸಮಾಜ ಎಂಬ ಕಾರಣಕ್ಕೋ ಏನೋ ಅದು ಅಷ್ಟು ಜನಪ್ರಿಯವಾಗಲೇ ಇಲ್ಲ.

ಸಂತಾನಹರಣ ಚಿಕಿತ್ಸೆ ಹೇಗೆ?

ಸ್ತ್ರೀಯರಲ್ಲಿ ತಿಂಗಳಿಗೆ ಒಮ್ಮೆ ಅಂಡಾಶಯದಿಂದ ಬಿಡುಗಡೆಯಾಗುವ ಅಂಡವು ಡಿಂಭನಾಳದ (ನಳಿಕೆ) ತುದಿಯ ಹಿಡಿತಕ್ಕೆ ಒಳಗಾಗುತ್ತದೆ. ನಂತರ ಅದು ಡಿಂಭ­ನಾ­ಳ­ದಿಂದ ಗರ್ಭಾಶಯದತ್ತ ಚಲಿಸುವಾಗ, ಲೈಂಗಿಕ ಕ್ರಿಯೆಯಿಂದ ಗರ್ಭ­ಕೋಶಕ್ಕೆ ಬರುವ ವೀರ್ಯಾಣುಗಳ ಜೊತೆ ಫಲಿತವಾಗುತ್ತದೆ. ಹೀಗೆ ಡಿಂಭನಾಳ­ದಲ್ಲಿ ಫಲಿತವಾಗುವ ಅಂಡಾಣು ಗರ್ಭಕೋಶದತ್ತ ಚಲಿಸಿ ಭ್ರೂಣವಾಗಿ ಬೆಳೆದು ಹಂತ ಹಂತವಾಗಿ ಮಾರ್ಪಡುವ ಪ್ರಕ್ರಿಯೆಯೇ ಸಂತಾನೋತ್ಪತ್ತಿ.

ಪ್ರತಿ ಹೆಣ್ಣಿನಲ್ಲೂ ಒಂದು ಗರ್ಭಾಶಯ, ಎರಡು ಡಿಂಭನಾಳಗಳು, ಎರಡು ಅಂಡಾಶಯಗಳು ಇರುತ್ತವೆ. ಇನ್ನು ಮಕ್ಕಳು ಬೇಡ ಎಂದು ನಿರ್ಧರಿಸುವವರಿಗೆ ಮಾಡುವ ಟ್ಯೂಬೆಕ್ಟಮಿ ಅಥವಾ ಡಿಂಭನಾಳ ಛೇದನದಲ್ಲಿ ಡಿಂಭನಾಳವನ್ನು ಎರಡೂ ಕಡೆ ಕತ್ತರಿಸಿ (1ಸೆ.ಮೀ. ನಷ್ಟು) ತೆಗೆಯಲಾಗುತ್ತದೆ. ಇದಕ್ಕೆ ಕೆಲವು ನಿಗದಿತ ವಿಧಾನಗಳು ಇರುತ್ತವೆ. ಅವುಗಳೆಂದರೆ,

1. ಮಾರ್ಪಡಿಸಿದ ---ಪಾಮೆರಾಯನ ವಿಧಾನ (Modified pomeroy treatment)– ಇದೊಂದು ಅತ್ಯುತ್ತಮವಾದ ಚಿಕಿತ್ಸೆ.  ಹೆರಿಗೆಯಾದ 24 ಗಂಟೆಯ ನಂತರ ಯಾವಾಗ ಬೇಕಾದರೂ ಈ ಬಗೆಯ ಟ್ಯೂಬೆಕ್ಟಮಿಯನ್ನು ಮಾಡಿಸಬಹುದು.

2. ಲ್ಯಾಪ್ರೊಸ್ಕೋಪಿ ವಿಧಾನ– ಈ ಚಿಕಿತ್ಸೆಯಲ್ಲಿ ಉದರದರ್ಶಕವನ್ನು ಹೊಟ್ಟೆಯೊಳಗೆ ತೂರಿಸಿ ಡಿಂಭನಾಳವನ್ನು ಬ್ಯಾಂಡ್‌ನಿಂದ (ಉಂಗುರದಂತಹ ಸಾಧನ) ಒತ್ತಿ ತಡೆಯುತ್ತಾರೆ. ಈ ಚಿಕಿತ್ಸೆಯನ್ನು ಹೆರಿಗೆಯಾದ 6 ವಾರಗಳ ನಂತರವಷ್ಟೇ  ಮಾಡಬೇಕು. ಏಕೆಂದರೆ ಹೆರಿಗೆಯ ಸಂದರ್ಭದಲ್ಲಿ ನಾಳಗಳು  ಊದಿಕೊಂಡಿರುತ್ತವೆ. ಅವು ಸಹಜ ಸ್ಥಿತಿಗೆ ಬರಲು ಒಂದೂವರೆ ತಿಂಗಳು ಬೇಕಾಗುತ್ತದೆ. ಅದಕ್ಕೆ ಮೊದಲೇ ಈ ಶಸ್ತ್ರಚಿಕಿತ್ಸೆಯನ್ನು ಮಾಡಿದರೆ ನಾಳಗಳು ಉದುರಿಹೋಗುವ ಸಂಭವ ಇರುತ್ತದೆ. ಹೀಗಾದಾಗ ಮತ್ತೆ ಮಗು ಆಗಿಬಿಡುವ ಸಾಧ್ಯತೆ ಹೆಚ್ಚಾಗಿರುತ್ತದೆ.  ಈ ಎರಡೂ ಬಗೆಯ ಸಂತಾನಹರಣವೂ ದಿನನಿತ್ಯ ಮಾಡುವಂತಹ ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸಾ ವಿಧಾನಗಳು.

ಆದರೆ, ಶಾಶ್ವತ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಎಷ್ಟೋ ವರ್ಷ­ಗಳ ನಂತರ ಶೇ 1-3ರಷ್ಟು ಮಂದಿ ಮತ್ತೆ ತಮ್ಮಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಮರುಕಳಿಸಬೇಕೆಂದು ಬಯಸುತ್ತಾರೆ. ಹೀಗೆ ವಿಧಿಯಾಟವೇ ಮೇಲುಗೈಯಾ­ದಾಗ, ಡಿಂಭನಾಳದ ಮರುಜೋಡಣಾ ಶಸ್ತ್ರಚಿಕಿತ್ಸೆಗೆ ಮೊರೆ ಹೋಗುವುದೇ ಹೀಗೆ  ಹತಾಶೆಗೊಂಡವರ ಬದುಕಿನಲ್ಲಿ ಇರಬಹುದಾದ ಆಶಾಕಿರಣ.

ಏನಿದು ಡಿಂಭನಾಳದ ಮರುಜೋಡಣೆ?
(ರಿವರ್ಸಲ್ ಆಫ್ ಸ್ಟೆರಲೈಸೇಷನ್ )
ಈ ವಿಧಾನದಲ್ಲಿ ಎಲ್ಲ ದೊಡ್ಡ ಶಸ್ತ್ರಚಿಕಿತ್ಸೆಗಳ ಹಾಗೆ ರಕ್ತಪರೀಕ್ಷೆಯನ್ನು, ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲೇ ಬೇಕು. ಗಂಡ– -ಹೆಂಡತಿ ಇಬ್ಬರ ಒಪ್ಪಿ­ಗೆಯನ್ನೂ  ಪಡೆಯಬೇಕು. ಪೂರ್ವಭಾವಿಯಾಗಿ ಉದರದರ್ಶಕ ಪರೀಕ್ಷೆ ಮತ್ತು ಎಚ್.ಎಸ್.ಜಿ ಪರೀಕ್ಷೆಗಳನ್ನು ಮಾಡಿಸಿಕೊಂಡು ಮರು ಶಸ್ತ್ರಚಿಕಿತ್ಸೆಗೆ ಸಿದ್ಧರಾಗ­ಬೇಕು. ಗರ್ಭನಾಳ ಅಥವಾ ಗರ್ಭಕೋಶದ ಕ್ಷಯರೋಗ ಇಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು (ಇದ್ದವರಿಗೆ ಈ ಶಸ್ತ್ರಚಿಕಿತ್ಸೆ ಮಾಡಬಾರದು)

ಪತಿಯ ವೀರ್ಯ ತಪಾಸಣೆ ಮಾಡಿ ವೀರ್ಯಾಣುಗಳು ಅಗತ್ಯ ಸಂಖ್ಯೆ ಹಾಗೂ ಉತ್ತಮ ಗುಣಮಟ್ಟದಲ್ಲಿ ಇವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. (ಏಕೆಂದರೆ ಪತಿಯ ವೀರ್ಯಾಣುಗಳು ಕಡಿಮೆ ಸಂಖ್ಯೆಯಲ್ಲಿ ಇದ್ದರೆ ಮೊದಲು ಅದನ್ನು ಸರಿಪಡಿಸಿ ನಂತರ ಡಿಂಭನಾಳಗಳ ಮರುಜೋಡಣೆಯನ್ನು ಮಾಡಬೇಕಾಗುತ್ತದೆ)

ಯಾವಾಗ ಮಾಡಬೇಕು?
ಋತುಚಕ್ರ ಪ್ರಾರಂಭವಾಗಿ 7ರಿಂದ 10 ದಿನಗಳ ಒಳಗೆ ಈ ಶಸ್ತ್ರಚಿಕಿತ್ಸೆ ನಡೆಸಬೇಕು. ಸಾಮಾನ್ಯವಾಗಿ ಸಂಪೂರ್ಣ ಎಚ್ಚರ ತಪ್ಪಿಸುವ ಅರಿವಳಿಕೆ ಅಥವಾ ಸ್ಪೈನಲ್ ಅರಿವಳಿಕೆ ನೀಡಿ ನಿಪುಣ ಸ್ತ್ರಿರೋಗ ತಜ್ಞರು ಉದರದರ್ಶಕದ ಮೂಲಕವೇ ಈ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಾರೆ. ಇಲ್ಲದಿದ್ದಲ್ಲಿ ತೆರೆದ ಸೂಕ್ಷ್ಮ  ಶಸ್ತ್ರಚಿಕಿತ್ಸಾ ವಿಧಾನದಲ್ಲೂ ಮಾಡಬಹುದು. ಅತ್ಯಂತ ಮುಂಜಾಗ್ರತೆ ವಹಿಸಿ ಸೂಕ್ಷ್ಮವಾದ ದಾರವನ್ನು ಉಪಯೋಗಿಸಿ, ಹಿಂದೆ ಟ್ಯೂಬೆಕ್ಟಮಿ ಮಾಡುವಾಗ  ಕತ್ತರಿಸಿ ಹಾಕಿದ್ದ ಡಿಂಭನಾಳಗಳನ್ನು ಮರುಜೋಡಿಸುತ್ತಾರೆ. ಮಿಥಿಲೀನ್ ನೀಲಿ ದ್ರಾವಣದ ಮೂಲಕ ಡಿಂಭನಾಳದ ಅಡೆ-ತಡೆಯು ಸರಿಯಾಗಿ ಇದೆಯೇ ಎಂಬುದನ್ನು  ಖಾತ್ರಿ ಮಾಡಿಕೊಳ್ಳುತ್ತಾರೆ.

ಎಷ್ಟು ಫಲಪ್ರದ?
ಹೀಗೆ ಮಾಡುವ ಶಸ್ತ್ರಚಿಕಿತ್ಸೆಯು ಎಷ್ಟು ಫಲಪ್ರದ ಅಥವಾ ಯಾರಲ್ಲಿ ಅದು  ಯಶಸ್ವಿಯಾಗಬಹುದು ಎಂಬುದು ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.
ಮರುಜೋಡಣೆಯಾದ ಡಿಂಭನಾಳವು 8 ಸೆಂ.ಮೀ.ಗಿಂತ ಹೆಚ್ಚಾಗಿದ್ದರೆ ಶೇ 80ರಷ್ಟು ಜನರಿಗೆ ಮಕ್ಕಳಾಗುವುದು ಖಚಿತ. ಲ್ಯಾಪ್ರೊಸ್ಕೋಪಿಕ್ ಉಂಗುರ ಅಳವಡಿಕೆಯ ವಿಧಾನದಲ್ಲಿ ಟ್ಯೂಬೆಕ್ಟಮಿ ಮಾಡಿಸಿಕೊಂಡು 5 ವರ್ಷದ ಒಳಗೆ ಮರುಜೋಡಣೆ ಶಸ್ತ್ರಚಿಕಿತ್ಸೆ ಮಾಡಿದಾಗ ಮತ್ತೆ ಮಕ್ಕಳಾಗುವ ಪ್ರಮಾಣ ಶೇ 60– -80ರಷ್ಟು ಫಲಪ್ರದ ಆಗುತ್ತದೆ. ಮಾರ್ಪಡಿಸಿದ ಪಾಮೆರಾಯ್ ವಿಧಾನದಲ್ಲಿ ಟ್ಯೂಬೆಕ್ಟಮಿ ಮಾಡಿಸಿಕೊಂಡು 5 ವರ್ಷದ ಒಳಗಾಗಿದ್ದಲ್ಲಿ, ಮರುಜೋಡಣಾ ಶಸ್ತ್ರಚಿಕಿತ್ಸೆಯ ಯಶಸ್ಸು ಶೇ 40-– 60 ರಷ್ಟು ಇರುತ್ತದೆ.

ಒಟ್ಟಿನಲ್ಲಿ ಯಾವುದೇ ಬಗೆಯಲ್ಲಿ ಟ್ಯೂಬೆಕ್ಟಮಿ ಮಾಡಿಸಿಕೊಂಡು 5-– 10 ವರ್ಷಗಳ ನಂತರ ಗರ್ಭನಾಳಗಳನ್ನು ಮರುಜೋಡಿಸಲು ಮುಂದಾದರೆ ಫಲಿ­ತಾಂಶ ಶೇ 16ಕ್ಕೂ ಕಡಿಮೆ ಇರುತ್ತದೆ. ಜೊತೆಗೆ ಒಟ್ಟಾರೆ ಫಲಿತಾಂಶವು ಮಹಿಳೆಯ ಸಮಗ್ರ ಆರೋಗ್ಯ ಹಾಗೂ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಅವಲಂಬಿತ ಆಗಿರುತ್ತದೆ.  ಡಿಂಭನಾಳಗಳ ಮರುಜೋಡಣೆಯ ನಂತರ 6 ತಿಂಗಳಿನಿಂದ 5 ವರ್ಷಗಳವರೆಗೆ ಮಕ್ಕಳಾಗುವುದನ್ನು ಕಾದು ನೋಡಬೇಕು. ನಂತರವೂ ಆಗದಿದ್ದಲ್ಲಿ ಬೇರೆ ವಿಧಾನಗಳಾದ ಕೃತಕ ಗರ್ಭಧಾರಣೆ (ಪ್ರಣಾಳ ಶಿಶು), ಬಾಡಿಗೆ ತಾಯ್ತನ, ದತ್ತು ತೆಗೆದುಕೊಳ್ಳುವುದು ಇತ್ಯಾದಿ ವಿಧಾನಗಳಿಂದ ಮಗುವನ್ನು ಪಡೆಯಲು ಪ್ರಯತ್ನಿಸುವುದು ಅನಿವಾರ್ಯವಾಗುತ್ತದೆ.

ಕತ್ತರಿಸಿ ಹಾಕಿದ್ದೆಷ್ಟು?

ಮತ್ತೆ ಸಂತಾನ ಭಾಗ್ಯ ಪಡೆಯಲು ನಡೆಸುವ ಡಿಂಭನಾಳಗಳ ಮರು­ಜೋಡಣೆ ಶಸ್ತ್ರಚಿಕಿತ್ಸೆಯ ಯಶಸ್ಸು, ಹಿಂದೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವಾಗ ಎಷ್ಟು ಪ್ರಮಾಣದಲ್ಲಿ ಡಿಂಭನಾಳಗಳನ್ನು ಕತ್ತರಿಸಿ ತೆಗೆಯಲಾಗಿತ್ತು ಎಂಬುದನ್ನು ಸಹ ಅವಲಂಬಿಸಿರುತ್ತದೆ. ಒಂದು ವೇಳೆ ಡಿಂಭನಾಳಗಳನ್ನು ಎರಡೂ ಕಡೆ 1 ಸೆ.ಮೀ. ಗಿಂತಲೂ ಹೆಚ್ಚಿನ ಪ್ರಮಾಣ­ದಲ್ಲಿ ಕತ್ತರಿಸಿ ತೆಗೆದಿದ್ದರೆ ಆ ಮಹಿಳೆಯ ಸಂತಾನಭಾಗ್ಯದ ಕನಸು ಕನಸಾಗೇ ಉಳಿಯುತ್ತದೆ. ಯಾಕೆಂದರೆ ಅಂಡಾಶಯದಿಂದ ಅಂಡಾಣುವನ್ನು ಹಿಡಿದಿಟ್ಟು, ಅದು ವೀರ್ಯಾಣುವಿನ ಜೊತೆ ಫಲಿತ ಆಗುವಂತೆ ಮಾಡುವಲ್ಲಿ ಡಿಂಭನಾಳಗಳ ತುದಿ ಪ್ರಮುಖ ಪಾತ್ರ ವಹಿಸುತ್ತದೆ. ಅಂತಹ ಪ್ರಮುಖ ಅಂಗವನ್ನೇ ಸಂಪೂಣರ್ವಾಗಿ ಕತ್ತರಿಸಿ ತೆಗೆದಿದ್ದರೆ ಡಿಂಭನಾಳ­ಗಳನ್ನು ಮರು ಜೋಡಿಸಿದರೂ ನಿರೀಕ್ಷಿತ ಫಲಿತಾಂಶ ಲಭ್ಯವಾಗುವುದಿಲ್ಲ.

ಅನಿರೀಕ್ಷಿತ ಘಟನೆಗಳಿಂದ ಭವಿಷ್ಯದಲ್ಲಿ ಮರುಜೋಡಣಾ ಶಸ್ತ್ರಚಿಕಿತ್ಸೆಯ ಸಾಧ್ಯತೆ ಬರಬಹುದು ಎಂಬುದನ್ನು ಗಮನದಲ್ಲಿ ಇಟ್ಟು, ನಿಗದಿತ ಪ್ರಮಾಣದಲ್ಲಷ್ಟೇ ಡಿಂಭನಾಳಗಳನ್ನು ಕತ್ತರಿಸಬೇಕಾದ ಜಾಗ್ರತೆ­ಯನ್ನು ವೈದ್ಯರು ವಹಿಸಬೇಕಾಗುತ್ತದೆ. ಅಪರೂಪದ ಪ್ರಕರಣಗಳಲ್ಲಿ, ಹೀಗೆ ಎಚ್ಚರಿಕೆ ವಹಿಸಿ ಮಾಡಿದ ಸಂತಾನಹರಣ ಶಸ್ತ್ರಚಿಕಿತ್ಸೆಯು ವಿಫಲ­ವಾಗಿ ಮತ್ತೆ ಗರ್ಭ ಕಟ್ಟಿದ ಉದಾಹರಣೆಗಳೂ ಇವೆ.

ಹೀಗಾದಾಗ ಸಂತಾನಹರಣ ಶಸ್ತ್ರಚಿಕಿತ್ಸೆ ವಿಫಲವಾಗುವುದರಿಂದ ಸಂಬಂಧಿಸಿದ ವೈದ್ಯರು ಅಥವಾ ಆಸ್ಪತ್ರೆಗೆ ಕೆಟ್ಟ ಹೆಸರು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಬಹುತೇಕ ವೈದ್ಯರು ಮುಂದೊಂದು ದಿನ ಒದಗಿಬರಬಹುದಾದ ಅನಿ­ರೀಕ್ಷಿತ ಘಟನೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಸಂತಾನಹರಣ ಶಸ್ತ್ರ­ಚಿಕಿತ್ಸೆಗಷ್ಟೇ ತಮ್ಮ ಗಮನ ಕೇಂದ್ರೀಕರಿಸುತ್ತಾರೆ. ಆಗ ಡಿಂಭನಾಳ­ಗಳನ್ನು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕತ್ತರಿಸಿ ತೆಗೆದುಹಾಕುವ ಸಂಭವ ಹೆಚ್ಚಾಗಿರುತ್ತದೆ. ಹೀಗಾಗಿ, ಇದು ಜನರಿಗೆ ಮಾತ್ರವಲ್ಲ ವೈದ್ಯರಿಗೂ ಅತ್ಯಂತ ಸೂಕ್ಷ್ಮವಾದ ದೈಹಿಕ ಮತ್ತು ಸಾಮಾಜಿಕ ತೊಡಕಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT