ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬಂತು ಮಾಗಡಿ ಅವರೆ

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಅವರೆ’ ಎಂದರೆ ಸಾಕು ನಗರದ ಬಡಾವಣೆಯ ಮನೆಗಳ ಮುಂದೆ ಗೃಹಿಣಿಯರು ಅವರೆಕಾಯಿ ರಾಶಿ ಹಾಕಿ ಸುಲಿಯುತ್ತಾ, ಹರಟುತ್ತಿರುವ ದೃಶ್ಯ ಕಣ್ಣ ಮುಂದೆ ಬರುತ್ತದೆ. ಗೃಹಿಣಿಯರಿಗೆ, ಅವರೆ ಸುಲಿದು ಕಾಳು ಹಿಸುಕಿ ಬೇಳೆ ಮಾಡುತ್ತಾ ಸಮಯ ಕಳೆದದ್ದೇ ತಿಳಿಯದು.

ಲೋಕಾಭಿರಾಮವಾಗಿ ಮಾತಿನ ಮಾಲೆ ಹೆಣೆಯುತ್ತಾ, ಬೆರಳುಗಳು ಸದಾ ಬೇಳೆಯನ್ನು ಹಿತುಕುತ್ತಾ ಇದ್ದರೆ ಇದು ಹೆಚ್ಚುವರಿ ಕೆಲಸವೆನಿಸದು. ಬೆಂಗಳೂರಿನ ಜನರಿಗೆ ಅವರೆ ಅಂದರೆ ಅಷ್ಟೊಂದು ಪ್ರೀತಿ. ಏನೇ ಅಡುಗೆ ಮಾಡಿದರೂ ಅದರಲ್ಲಿ ನಾಲ್ಕು ಕಾಳು ಅವರೆ ಹಾಕಿದರಷ್ಟೇ ತೃಪ್ತಿ. ಮಾಂಸದಡುಗೆಗೂ ಹಿತಕಿದ ಬೇಳೆ ಹಾಕುವುದು ಇಲ್ಲಿನ ವಿಶೇಷ. ಇದನ್ನು ಅರಿತ ವ್ಯಾಪಾರಿಗಳು ಬೇಕರಿಗಳಲ್ಲಿ ಅವರೆ ಬೇಳೆಯದೇ ಬಗೆಬಗೆಯ ತಿನಿಸು ಸಿದ್ಧಪಡಿಸಿ ಇಡುತ್ತಿದ್ದಾರೆ. ಕೆಲವು ಬೇಕರಿಗಳಲ್ಲಿ ಅವರೆಯಿಂದ ತಯಾರಿಸಿದ, ಬಗೆಬಗೆಯ ಕರಿದ ತಿಂಡಿಗಳು ಸಿಗುತ್ತಿವೆ. ಅವರೆಯಿಂದ ಏನು ತಯಾರಿಸಿದರೂ ರುಚಿ. ಪಾಕ ತಪ್ಪಿದರೂ ರುಚಿಗೆ ಮೋಸವಿಲ್ಲ. ಹಾಗಾಗಿ ಇನ್ನೆರಡು ತಿಂಗಳು ಅಡುಗೆಮನೆಯಲ್ಲಿ ಅವರೆಯದೇ ಕಾರುಬಾರು.

ಅವರೆಯಿಂದ ಬಗೆಬಗೆ ತಿನಿಸು ಆವಿಷ್ಕಾರವಾದ ಹಿನ್ನೆಲೆಯಲ್ಲಿ ನಗರದಲ್ಲಿ ಅವರೆ ತಿನ್ನುವ ಸಂಸ್ಕೃತಿ ಹೆಚ್ಚಾಗಿದೆ. ಇದೇ ಕಾರಣದಿಂದ ಈಗ ಅವರೆ ಬೆಳೆದ ರೈತ, ಅದನ್ನು ಕೀಳುವ ಕೂಲಿ, ಮಾರುವ ವ್ಯಾಪಾರಿ, ಸಾಗಾಣಿಕೆದಾರ, ಕಾಳು ಬಿಡಿಸುವ ಮಹಿಳೆಯರು, ಬೇಳೆ ಬಿಡಿಸುವವರಿಗೆ ಕೈತುಂಬ ಕೆಲಸ. ನಗರದ ಅವೆನ್ಯೂ ರಸ್ತೆ ವಿ.ವಿ. ಪುರಂ, ಜಯನಗರ ಮುಂತಾದ ಕಡೆ ಅನೇಕ ವರ್ಷಗಳಿಂದ ಅವರೆಬೇಳೆ ಮಾರುವವರು ಕಾಣಸಿಗುತ್ತಾರೆ.

ಈ ವರ್ಷ ಮಳೆ ಹೆಚ್ಚು ಬಂದಿದೆ. ಬೆಳೆ ಚೆನ್ನಾಗಿ ಆಗಿದೆ. ಈಗಾಗಲೇ ಮಾಗಡಿಯ ಅವರೆ ಮಾರುಕಟ್ಟೆ ಪ್ರವೇಶಿಸಿದೆ. ಈ ಬಾರಿ ಕೃಷಿ ವಿವಿ ಅಭಿವೃದ್ಧಿಪಡಿಸಿದ ‘ಸೊಗಡವರೆ’ ಹೊಸ ತಳಿ ಕೂಡ ಮಾರುಕಟ್ಟೆಗೆ ಕಾಲಿಟ್ಟಿದೆ. ಆದರೂ ಮಾಗಡಿ ಅವರೆಯಷ್ಟು ಗುಣಮಟ್ಟದ ಅವರೆ ಬೇರೆ ಇಲ್ಲ ಎನ್ನುತ್ತಾರೆ ವ್ಯಾಪಾರಿಗಳು. ವಿ.ವಿ.ಪುರಂ ವೃತ್ತದ ಬಳಿ ಕಳೆದ ಹದಿನೈದು ದಿನಗಳಿಂದ ಹಿತಕಿದ ಬೇಳೆ ವ್ಯಾಪಾರ ಶುರುವಾಗಿದೆ.

ವಿ.ವಿ.ಪುರಂನ ಸಜ್ಜನರಾವ್‌ ವೃತ್ತದ ಬಳಿಯ ಶ್ರೀ ವಾಸವೀ ಕಾಂಡಿಮೆಂಟ್ಸ್‌ನಲ್ಲಿ ಅವರೆಯ ನೂರಾರು ಬಗೆಯ ತಿನಿಸುಗಳಿವೆ. ಹಸಿ ಅವರೆ ಇರದ ಕಾಲದಲ್ಲಿ ಶೇಖರಿಸಿಟ್ಟ ಬೇಳೆಯನ್ನು ಬಳಸಲಾಗುತ್ತದೆ. ಡಿಸೆಂಬರ್ ಕೊನೆಯ ವಾರ ಅವರೆ ಮೇಳ ಆರಂಭವಾಗಲಿದೆ. ಆಗ ಅವರೆಯಿಂದ ತಯಾರಿಸಿದ ದೋಸೆ, ವಡೆ, ಜಾಮೂನ್, ಹೋಳಿಗೆ ಮುಂತಾದ ಹಲವು ಬಗೆಯ ತಿನಿಸುಗಳನ್ನು ಸವಿಯುವ ಅವಕಾಶವಿದೆ.

ಶ್ರೀ ವಾಸವೀ ಕಾಂಡಿಮೆಂಟ್ಸ್ ಬಳಿಯೇ ಕಳೆದ ಮೂವತ್ತು ವರ್ಷಗಳಿಂದ ಮಾಗಡಿಯಿಂದ ಅವರೆ ಬೇಳೆಯನ್ನೇ ತಂದು ಮಾರುತ್ತಿರುವ ಮಾಗಡಿಯ ಕೆಂಪತಿಮ್ಮೇಗೌಡರು ತಾವೂ ಒಂದು ಎಕರೆಯಲ್ಲಿ ಅವರೆ ಬೆಳೆದವರು. ಆದರೂ ಸುತ್ತಮುತ್ತಲಿನ ರೈತರಿಂದ ಬೇಳೆ ಖರೀದಿಸಿ ವ್ಯಾಪಾರ ಮಾಡುತ್ತಾರೆ. ಮಾಗಡಿಯವರೇ ಆದ ರಾಮಣ್ಣ ಕೆ.ಆರ್. ಮಾರುಕಟ್ಟೆಯಿಂದ ಅವರೆಕಾಯಿ ಖರೀದಿಸಿ ಬೇಳೆ ಮಾಡಿ ಮಾರುತ್ತಿದ್ದಾರೆ. ‘ಮಣಕ್ಕೆ ರೂ300ರಿಂದ ರೂ350 ಬೆಲೆ’ ಎನ್ನುತ್ತಾರೆ ರಾಮಣ್ಣ.

ದಿನಕ್ಕೆ ಐನೂರರಿಂದ ಏಳುನೂರು ಕೆ.ಜಿ. ಹಿತಕಿದ ಬೇಳೆ ಖರ್ಚಾಗುತ್ತಿದೆ ಎಂದು ವ್ಯಾಪಾರಿಗಳು ಅಂದಾಜಿಸುತ್ತಾರೆ. ಹಾಗಾದರೆ ಇಡೀ ಬೆಂಗಳೂರಿನ ಅವರೆ ವ್ಯಾಪಾರ ಲೆಕ್ಕ ಹಾಕುವುದು ಕಷ್ಟ. ಈಗ ಕಚ್ಚಾ ಅವರೆ ಕೇಜಿಗೆ ರೂ40 ಇದ್ದರೆ, ಬೇಳೆ ಲೀಟರ್‌ (750 ಗ್ರಾಂ)ಗೆ ರೂ140ರವರೆಗೂ ಮಾರಾಟವಾಗುತ್ತಿದೆ. ಬೇಳೆಯನ್ನು ಗ್ರಾಂ, ಕೆ.ಜಿ. ಲೆಕ್ಕದಲ್ಲಿ ಮಾರುವ ಬದಲು ಲೀಟರ್‌ ಎಂದು ಯಾವುದೋ ಒಂದು ಡಬ್ಬದಲ್ಲಿ ಅಳತೆ ಮಾಡಿಕೊಟ್ಟರೂ ಜನ ಮರುಮಾತಾಡದೇ ಕೊಂಡುಕೊಳ್ಳುತ್ತಿದ್ದಾರೆ. ಬೆಂಗಳೂರು ಜನರ ಅವರೆ ವ್ಯಾಮೋಹವೇ ಅಂಥದ್ದು. ಈಗಾಗಲೇ ಮದುವೆ ಸೀಸನ್‌ ಶುರುವಾಗಿರುವ ಕಾರಣ ಬೇಳೆ ಬೇಡಿಕೆ ಹೆಚ್ಚಿದೆ.

ಸಿಪ್ಪೆ ರಸ್ತೆಗೆಸೆದರೆ ರುಚಿ ಹೆಚ್ಚುತ್ತದಂತೆ!
ಮನೆ ಮುಂದಿನ ರಸ್ತೆಯಲ್ಲಿ ಹಿತಕಿದ ಬೇಳೆಯ ಸಿಪ್ಪೆಯನ್ನು ಸುರಿಯುವುದು ಮಾಮೂಲಿ. ಇದಕ್ಕೆ ನೀಡುವ ಕಾರಣ ಒಂದೊಂದು ಬಗೆಯದು. ಕೆಲವರು ಹೀಗೆ ಜನ ಓಡಾಡುವ ಹಾದಿಯಲ್ಲಿ ಸುರಿದರೆ ಬೇಳೆಯಿಂದ ಮಾಡಿದ ಅಡುಗೆ ರುಚಿಯಾಗಿರುತ್ತದೆ ಎಂದು ಭಾವಿಸುತ್ತಾರೆ. ಮಾಡುವ ಅಡುಗೆ ರುಚಿಯಾಗಲಿ ಎಂಬ ಆಶಯ ಗೃಹಿಣಿಯರದು. ಇದೊಂದು ನಂಬಿಕೆಯಷ್ಟೇ. ಆದರೆ ಅವರೆ ಕಾಳಿನ ಸಿಪ್ಪೆಯನ್ನು ರಸ್ತೆಗೆ ಎಸೆಯುವುದು ಸಾಮಾನ್ಯವಾಗಿ ಕಾಣುವ ದೃಶ್ಯ.

ಮಲೆನಾಡಿನ ರೈತರು ಕಾಳುಮೆಣಸಿನ ಕಾಳುಗಳನ್ನು ಬೇರ್ಪಡಿಸಿ ಉಳಿದ ಕಡ್ಡಿಯನ್ನು ಜನ ಓಡಾಡುವ ದಾರಿಯಲ್ಲಿ ಚೆಲ್ಲುತ್ತಾರೆ. ಇದನ್ನು ನೂರಾರು ಜನ ತುಳಿದರೆ ಮುಂದಿನ ವರ್ಷ ಕಾಳುಮೆಣಸು ಫಸಲು ಚೆನ್ನಾಗಿ ಆಗುತ್ತದೆ ಎಂಬುದು ಅಲ್ಲಿನ ನಂಬಿಕೆ.
ಅವರೆಯ ಜೊತೆಗೂ ಇಂಥದ್ದೇ ನಂಬಿಕೆಯೊಂದು ತಳುಕುಹಾಕಿಕೊಂಡಿದೆ.

ಬಗೆಬಗೆ ರುಚಿ
ಅವರೆಯಿಂದ ಏನೇನು ಅಡುಗೆ ತಯಾರಿಸಬಹುದು ಎಂದು ಪಟ್ಟಿ ಮಾಡುವುದಕ್ಕಿಂತ ಏನೇನು ಮಾಡಲು ಸಾಧ್ಯವಿಲ್ಲ ಎಂದು ಪಟ್ಟಿ ಮಾಡುವುದು ಸುಲಭ. ಅಷ್ಟೊಂದು ಬಗೆಯ ಅಡುಗೆ ಅವರೆಯಿಂದ ಸಾಧ್ಯ. ಅವರೆ ಮೇಳದ ಕಾರಣ ನೂರಾರು ಬಗೆಯ ತಿಂಡಿಗಳನ್ನು ಬೆಂಗಳೂರಿನ ಜನ ಪ್ರತಿವರ್ಷ ಸವಿಯುತ್ತಿದ್ದಾರೆ.

ಹಿತಕವರೆಯಿಂದ ತಯಾರಿಸಿದ ವಡೆ,  ದೋಸೆ, ಬೇಳೆ ಪಾಯಸ, ಜಾಮೂನು, ಹೋಳಿಗೆ, ಅವರೆಕಾಳು ಸಾಂಬಾರು-, ಚಿಲಕವರೆ ತೊವ್ವೆ, ಅವರೆ ಅಕ್ಕಿ ರೊಟ್ಟಿ, ಹೋಳಿಗೆ, ಜಿಲೇಬಿ, ಮಂಚೂರಿ, ಚಿತ್ರಾನ್ನ, ಪಕೋಡ, ದೋಸೆ, ಬೆಣ್ಣೆ ಉಂಡೆ ಮಿಕ್ಸ್, ಅವಲಕ್ಕಿ ಮಿಕ್ಸ್, ಸೋನಾಕೇಕ್‌, ಉಸುಲಿ... ಹೀಗೆ ತಿಂಡಿಯ ಪಟ್ಟಿ ಉದ್ದ ಇದೆ. ಒಣಗಿಸಿ ಶೇಖರಿಸಿಟ್ಟ ಬೇಳೆಯಿಂದಲೂ ನಿಪ್ಪಟ್ಟು, ಹುರಿದ ಮಸಾಲೆ ಬೇಳೆ, ಕೋಡುಬಳೆ, ಮುರುಕ್ಕು, ಅವಲಕ್ಕಿ ಮಿಕ್ಸ್ ವರ್ಷವಿಡೀ ಸಿಗುತ್ತದೆ.

ಮಾಂಸಾಹಾರಿಗಳು ಚಿಕನ್‌ ಮತ್ತು ಮಟನ್‌ ಮಸಾಲೆಗಳಿಗೂ ಬೇಳೆ ಹಾಕುವುದು ವಿಶೇಷ. ಕೀಮಾ  ಉಂಡೆಯ ಜೊತೆ ಬೇಳೆ ಬೆರೆಸಿ ರುಚಿಕರವಾದ ಸಾರು ಮಾಡುತ್ತಾರೆ. ಇನ್ನು ರಾಗಿಮುದ್ದೆಗೆ ಎಳೆ ಬೇಳೆಯ ಸಾರು, ಇದೆಲ್ಲ ಈ ಕಾಲದ ವಿಶೇಷ ಮೆನು. ಅವರೆ ಬೇಳೆ ಇದ್ದರೆ ತರಕಾರಿಯೂ ಕಡಿಮೆ ಸಾಕಾಗುತ್ತದೆ. ಇನ್ನು ಗೃಹಿಣಿಯರು ಅಡುಗೆ ಮಾಡುತ್ತಾ ಇನ್ನಷ್ಟು ಬಗೆಯ ತಿಂಡಿ ತಯಾರಿಸಿದರೂ ಅಚ್ಚರಿಯಿಲ್ಲ. ಎಲ್ಲದಕ್ಕೂ ಸೈ ಎನ್ನುತ್ತಿದೆ ಅವರೆ.

ತಾಜಾ ಬೇಳೆ

ಕೆ.ಆರ್. ಮಾರುಕಟ್ಟೆಯಿಂದ ಕಚ್ಚಾ ಅವರೆ ಖರೀದಿಸಿ ಬೇಳೆ ಮಾಡಿ ಮಾರುತ್ತೇನೆ. ಒಂದು ಮಣ ಅವರೆಕಾಯಿಗೆ ರೂ300 ಇದೆ. ಬೇಳೆಗೆ ಸದ್ಯ ರೂ140 ಇದೆ. ಇನ್ನು ಸ್ವಲ್ಪ ದಿನದಲ್ಲಿ ಕಡಿಮೆಯಾಗಬಹುದು. ಆದರೆ ಕಳೆದ ವರ್ಷಕ್ಕಿಂತ ಹೆಚ್ಚು ಫಸಲು ಬಂದಿದ್ದರೂ ಬೆಲೆಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗದು. ಜನ ಬೆಲೆ ಹೆಚ್ಚು ಎಂದು ಚೌಕಾಸಿ ಮಾಡುತ್ತಾರೆ. ಲೀಟರ್‌ ಮೇಲೆ ಇನ್ನೂ ಸ್ವಲ್ಪ ಹಾಕಿ ಅಂತಾರೆ. ಆದರೆ ಬೇಳೆ ಮಾಡಲು ಹೆಚ್ಚು ಸಮಯ ಬೇಕು. ಬೆಲೆ ಹೆಚ್ಚು ಎನಿಸಿದರೂ ಪ್ರತಿದಿನ ಸುಲಿದು ಬೇಳೆ ಮಾಡುವ ಕಾರಣ ತಾಜಾ ಇರುತ್ತದೆ. ಹುಳುಕು ಇರದು. ಕೊಂಡವರಿಗೆ ಸಿಪ್ಪೆ ಸುಲಿಯುವ ಕೆಲಸವೂ ಇಲ್ಲ. 
- ರಾಮಣ್ಣ, ಮಾಗಡಿ


ಮಾಗಡಿ ಅವರೆಯೇ ಶ್ರೇಷ್ಠ

ಮಾಗಡಿ ಅವರೆ ಎರಡು ವಾರಗಳಿಂದ ಪೂರೈಕೆಯಾಗುತ್ತಿದೆ. ಅದರಲ್ಲೂ ಬೇಳೆ ಮಾಡಿಯೇ ಮಾರುವುದು ಇಲ್ಲಿನ ವಿಶೇಷ. ಮಾಗಡಿಯಲ್ಲಿ ಅವರೆ ಬೆಳೆದ ರೈತರು ತಮ್ಮ ಮನೆಗಳಲ್ಲಿಯೇ ಬೇಳೆ ಮಾಡಿ ಕೊಡುತ್ತಾರೆ. ಅಲ್ಲಿಂದ ಪ್ರತಿದಿನ ಖರೀದಿಸಿ ಇಲ್ಲಿ ತಂದು ಮಾರುತ್ತೇವೆ. ರೈತರೇ ಬೇಳೆ ಮಾಡಿಕೊಡುವುದರಿಂದ ರೈತರಿಗೂ ಲಾಭ. ಅವರೆ ಸಿಪ್ಪೆ ಹಸುಗಳಿಗೆ ಒಳ್ಳೆಯ ಆಹಾರ. ಜೊತೆಗೆ ಸಾಗಾಣಿಕೆ, ಕೂಲಿ, ಬಸ್‌ನಲ್ಲಿ ಲಗೇಜು ಚಾರ್ಜು ಇಂಥ ಕಿರಿಕಿರಿ ಇಲ್ಲ. ಮನೆಯಲ್ಲಿಯೇ ರೈತ ಮಹಿಳೆಯರು ದಿನಕ್ಕೆ ಹತ್ತರಿಂದ ಹದಿನೈದು ಲೀಟರ್‌ ಅವರೆ ಸುಲಿಯುತ್ತಾರೆ. ಇನ್ನು ಅವರೆ ಹೆಚ್ಚು ಬರಲು ಶುರುವಾದ ನಂತರ ಸ್ವಲ್ಪ ಬೆಲೆ ಇಳಿಯುವ ಸಾಧ್ಯತೆ ಇದೆ. ಈಗ ಒಂದು ಲೀಟರ್‌ಗೆ ರೂ140, ಕೇಜಿಗೆ ರೂ220ರಂತೆ ಮಾರಾಟ ಮಾಡುತ್ತಿದ್ದೇವೆ. ಈ ತಿಂಗಳ ಅಂತ್ಯದಲ್ಲಿ ಅವರೆ ಮೇಳ ಇರುವ ಕಾರಣ ಹೆಚ್ಚು ವ್ಯಾಪಾರವಾಗುವ ನಿರೀಕ್ಷೆ ಇದೆ. ಇನ್ನೂ ಮೂರು ತಿಂಗಳು ಮಾಗಡಿ ಅವರೆ ಸಿಗಲಿದೆ. ಮಾಗಡಿ ಅವರೆ ಬೇರೆಲ್ಲ ಅವರೆಗಿಂತ ಶ್ರೇಷ್ಠ ಗುಣಮಟ್ಟದ್ದು.
– ಕೆಂಪತಿಮ್ಮೇಗೌಡ


ಚಿತ್ರಗಳು: ಸತೀಶ್‌ ಬಡಿಗೇರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT