ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬನ್ನಿ ಮುಂದಿನ ಜಾತ್ರೆಗೆ

Last Updated 5 ಫೆಬ್ರುವರಿ 2011, 8:25 IST
ಅಕ್ಷರ ಗಾತ್ರ

ಮೈಸೂರು: ಕಪಿಲಾನದಿ ತೀರದಲ್ಲಿ ಭಕ್ತರ ಕಲರವ.. ಅನ್ನದಾಸೋಹ ಆವರಣದಲ್ಲಿ ಅಕ್ಷರಶಃ ‘ಜನ ಜಾತ್ರೆ’.. ವಸ್ತು ಪ್ರದರ್ಶನ, ಕೃಷಿಮೇಳದಲ್ಲಿ ಮಾಹಿತಿ ಪಡೆಯಲು ನಿಂತಿದ್ದ ಸಾಲು ಸಾಲು ಜನ.. ಎಲ್ಲರ ಮೊಗದಲ್ಲೂ ಜಾತ್ರೆ ಮುಗಿದೇ ಬಿಟ್ಟಿತಲ್ಲ ಎನ್ನುವ ಭಾವನೆ.. ಜೊತೆಗೆ ಮತ್ತೆ ಮುಂದಿನ ಜಾತ್ರೆಯಲ್ಲಿ ಎಲ್ಲರೂ ಸೇರೋಣ ಎನ್ನುವ ಖುಷಿ..
-ಇವು, ನಂಜನಗೂಡು ತಾಲ್ಲೂಕು ಸುತ್ತೂರು ಮಠದ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಕಂಡು ಬಂದ ದೃಶ್ಯ.

ಆರು ದಿನಗಳ ಕಾಲ ನಡೆದ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ ತೆರೆ  ಬಿದ್ದಿತು. ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯ, ಹೊರರಾಜ್ಯಗಳಿಂದ ಲಕ್ಷಾಂತರ ಜನ ಭಕ್ತರು ಆಗಮಿಸಿ, ಜಾತ್ರೆಯಲ್ಲಿ ಪಾಲ್ಗೊಂಡರು. ಜಾತ್ರಾ ಮಹೋತ್ಸವದಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನ, ಕೃಷಿ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಆರು ದಿನಗಳಲ್ಲಿ ಸುಮಾರು 8 ರಿಂದ 10 ಲಕ್ಷ ಮಂದಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿರಬಹುದು ಎನ್ನಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ಆರು ದಿನಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ವ್ಯಾಪ್ತಿಯ ಎಲ್ಲಾ ಶಿಕ್ಷಣ ಸಂಸ್ಥೆಗಳ 1206ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳು ಒಟ್ಟು 278 ಕಾರ್ಯಕ್ರಮಗಳನ್ನು ನೀಡುವ ಮೂಲಕ ನೋಡುಗರ ಮೆಚ್ಚುಗೆಗೆ ಪಾತ್ರರಾದರು.

ಗಣಪನ ನಾನಾಮುಖ: ವಸ್ತು ಪ್ರದರ್ಶನ ಆವರಣದಲ್ಲಿ ಬೆಂಗಳೂರಿನ ರಮಣಶ್ರೀ ಪ್ರತಿಷ್ಠಾನ ಆಯೋಜಿಸಿದ್ದ 500ಕ್ಕೂ ಹೆಚ್ಚು ವೈವಿಧ್ಯಮಯ ಗಣೇಶ ವಿಗ್ರಹಗಳ ಪ್ರದರ್ಶನ ನೋಡುಗರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಆಧುನಿಕತೆಗೆ ತಕ್ಕಂತೆ ಲ್ಯಾಪ್‌ಟಾಪ್, ಮೊಬೈಲ್, ಢಾಬಾ ಗಣಪತಿ, ಕಿಂದರಿ ಜೋಗಿ, ಡೋಲು ಗಣಪತಿ ವಿಗ್ರಹಗಮನ ಸೆಳೆದವು.

ಕೃಷಿ ಮೇಳ: ಝಕಿನಿ, ಹ್ಯಾರಿಕಾಟ್ ಬಿನ್, ಸೆಲೆರಿ, ಪಾಕ್‌ಚಾಯ್, ಜೆರಿ ಟೊಮೆಟೋ ಬೆಳೆಗಳು, ಕೆಂಪು ಎಲೆಕೋಸು, ಬ್ರಕೋಲಿ, ಬದನೆಯ ಸುಧಾರಿತ ತಳಿಗಳ ಬಗ್ಗೆ ಕೃಷಿ ಮೇಳದಲ್ಲಿ ರೈತರು ಮಾಹಿತಿ ಪಡೆದುಕೊಂಡರು. ಸುಮಾರು 2 ರಿಂದ 3 ಲಕ್ಷ ಮಂದಿ ರೈತರು ಮೇಳವನ್ನು ವೀಕ್ಷಿಸಿರಬಹುದು ಎಂದು ಜಾತ್ರಾ ಮಹೋತ್ಸವ ಸಮಿತಿ ಅಂದಾಜಿಸಿದೆ.
ವಸ್ತು ಸಂಗ್ರಹಾಲಯ: ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆರಂಭಿಸಲಾಗಿರುವ ವಸ್ತು ಸಂಗ್ರಹಾಲಯವನ್ನು ಸಾವಿರಾರು ಜನ ವೀಕ್ಷಿಸಿದರು.

1000 ಕ್ವಿಂಟಲ್ ಅಕ್ಕಿ: ಜಾತ್ರೆಗೆ ಆಗಮಿಸುವ ಭಕ್ತರಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇದಕ್ಕಾಗಿ ಬಳಸಿದ್ದು ಬರೋಬ್ಬರಿ 1000 ಕ್ವಿಂಟಲ್ ಅಕ್ಕಿ. ಒಟ್ಟು ಎಂಟು ಲಕ್ಷಕ್ಕೂ ಹೆಚ್ಚು ಮೈಸೂರುಪಾಕ್, ಲಾಡು ಹಾಗೂ ಬಾದುಷಗಳನ್ನು ತಯಾರಿಸಲಾಗಿತ್ತು. ಜಾತ್ರೆ ಅಂಗವಾಗಿ ಸರ್ವಧರ್ಮ ಸಮ್ಮೇಳನ, ಸಾಮೂಹಿಕ ವಿವಾಹ, ರಥೋತ್ಸವ, ತೆಪ್ಪೋತ್ಸವ, ದನಗಳ ಜಾತ್ರೆ, ಸಂವಾದ ಗೋಷ್ಠಿ, ಜನಪದ ಜಾತ್ರೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಸ್ತು ಪ್ರದರ್ಶನ, ಕೃಷಿ ಮೇಳ ಫಲಿತಾಂಶ: ಜಾತ್ರಾ ಮಹೋತ್ಸವದಲ್ಲಿ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನ, ಕೃಷಿ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಫಲಿತಾಂಶ ವಿವರ ಹೀಗಿದೆ.

ವಸ್ತು ಪ್ರದರ್ಶನ- ಜೆಎಸ್‌ಎಸ್ ಮಹಾ ವಿದ್ಯಾಪೀಠ ಸಂಸ್ಥೆಗಳ ವಿಭಾಗ: ಜೆ.ಸಿ.ಎಂಜಿನಿಯರಿಂಗ್ ಕಾಲೇಜು (ಪ್ರಥಮ), ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ (ದ್ವಿತೀಯ), ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯ (ತೃತೀಯ), ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್ (ಸಮಾಧಾನಕರ ಬಹುಮಾನ).

ಜವಳಿ ಮತ್ತು ಕೈಮಗ್ಗ ಇಲಾಖೆ ಹಾಗೂ ನಬಾರ್ಡ್ ಪ್ರಾಯೋಜಿತ ಮಳಿಗೆಗಳ ವಿಭಾಗ: ಮಾನಸ ಅಗರಬತ್ತಿ ವರ್ಕ್ಸ್ ಮತ್ತು ಕೆಮಿಕಲ್ಸ್ (ಪ್ರಥಮ), ಚಾಮರಾಜನಗರದ ಚೇತನ ಹವ್ಯಾಸಿ ಬಳಗ (ದ್ವಿತೀಯ), ಕೊಳ್ಳೇಗಾಲದ ಜೆ.ಎಂ. ಗಾರ್ಮೆಂಟ್ಸ್ ಮಾರ್ಟಳ್ಳಿ ಹಾಗೂ ಬಾಗಲಕೋಟೆ ಜಿಲ್ಲೆಯ ಸೌಜನ್ಯ ನೇಕಾರರ ಉತ್ಪಾದನಾ ಹಾಗೂ ಮಾರಾಟ ಸಹಕಾರಿ ಸಂಘ (ತೃತೀಯ ಬಹುಮಾನ).

ವಾಣಿಜ್ಯ ವಿಭಾಗ: ನವಕರ್ನಾಟಕ ಪಬ್ಲಿಕೇಷನ್ಸ್ (ಪ್ರಥಮ), ದಿಗಂತ ಮಾರ್ಕೆಟಿಂಗ್ (ದ್ವಿತೀಯ).ಕೃಷಿ ಮೇಳ-ಸರ್ಕಾರಿ ಸಂಸ್ಥೆಗಳು: ಚಾಮರಾಜನಗರ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರ (ಪ್ರಥಮ), ಧಾರವಾಡ ಕೃಷಿ ವಿಶ್ವವಿದ್ಯಾಲಯ (ದ್ವಿತೀಯ).ಸರ್ಕಾರೇತರ ಸಂಸ್ಥೆಗಳು: ನಂಜನಗೂಡು ಶಿಕ್ಷಣ ಇಲಾಖೆ (ಪ್ರಥಮ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ದ್ವಿತೀಯ).

ಕೃಷಿ ಯಂತ್ರೋಪಕರಣಗಳ ವಿಭಾಗ: ರಾಯಚೂರು ಕೃಷಿ ವಿಶ್ವವಿದ್ಯಾಲಯ (ಪ್ರಥಮ), ಚಿತ್ರದುರ್ಗದ ವರ್ಷಾ ಅಸೋಸಿಯೇಟ್ಸ್ (ದ್ವಿತೀಯ), ಕೇಂದ್ರೀಯ ಕೃಷಿ ಎಂಜಿನಿಯರಿಂಗ್ ಸಂಸ್ಥೆ (ತೃತೀಯ), ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಶಿರಸಿ ಆಕಾರ ಬಳಗ (ವಿಶೇಷ ಬಹುಮಾನ).ಕೃಷಿ ಪರಿಕರಗಳ ವಿಭಾಗ: ಈಸ್ಟ್ ವೆಸ್ಟ್ ಸೀಡ್ಸ್ ಇಂಡಿಯಾ ಲಿಮಿಟೆಡ್ (ಪ್ರಥಮ), ಶಾಂತಿ ಅಗ್ರೋಟೆಕ್ (ದ್ವಿತೀಯ) ಹಾಗೂ ಬಿಸ್ಕೋ ಬಯೋಸೈನ್ಸ್ ಪ್ರೈವೇಟ್ ಲಿಮಿಟೆಡ್ (ತೃತೀಯ).

ಬೆಂಗಳೂರು-ಕನಕಪುರ-ಚಾಮರಾಜನಗರ ರೈಲು ಮಾರ್ಗ
ನಂಜನಗೂಡು: ಬಹು ದಿನಗಳ ಬೇಡಿಕೆಯಾದ ಬೆಂಗಳೂರು-ಕನಕಪುರ- ಮಳವಳ್ಳಿ-ಕೊಳ್ಳೇಗಾಲ-ಚಾಮರಾಜನಗರ ನಡುವೆ ನೂತನ ರೈಲು ಮಾರ್ಗವನ್ನು ನಿರ್ಮಿಸಲು ಬರಲಿರುವ ರೈಲ್ವೆ ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡುವುದಾಗಿ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಶುಕ್ರವಾರ ಪ್ರಕಟಿಸಿದರು.

ತಾಲ್ಲೂಕಿನ ಸುತ್ತೂರು ಕ್ಷೇತ್ರದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು- ಕನಕಪುರ- ಚಾಮರಾಜನಗರ ಮಾರ್ಗವಾಗಿ ತಮಿಳುನಾಡಿನ ಸತ್ಯಮಂಗಲಕ್ಕೆ ಹೊಸ ರೈಲು ಮಾರ್ಗ ನಿರ್ಮಿಸುವ ಇಚ್ಛಾಶಕ್ತಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಆದರೆ ತಮಿಳುನಾಡು ಪ್ರಾಂತ್ಯದಲ್ಲಿ ಅರಣ್ಯ ಪ್ರದೇಶ ಬರುವುದರಿಂದ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಲು ನಿರಾಕರಿಸಿದೆ. ಹಾಗಾಗಿ ಸದ್ಯಕ್ಕೆ ಬೆಂಗಳೂರು- ಚಾಮರಾಜನಗರ ಮಧ್ಯೆ ನೂತನ ರೈಲು ಮಾರ್ಗ ನಿರ್ಮಿಸಲು ಈ ಬಾರಿಯ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಈ ಬಗ್ಗೆ ಸಂಸದರಾದ ಆರ್.ಧ್ರುವನಾರಾಯಣ, ಎ.ಎಚ್.ವಿಶ್ವನಾಥ್ ಒತ್ತಡ ಹಾಕಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಪತ್ರ ಬರೆದಿದ್ದಾರೆ. ಈ ನಿಟ್ಟಿನಲ್ಲಿ ತಾವು ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಜೊತೆ ಮಾತನಾಡಿದ್ದಾನೆ. ಎಂದು ತಿಳಿಸಿದರು.

ಮೈಸೂರು ರೈಲ್ವೆ ‘ವರ್ಕ್‌ಶಾಪ್’ ಅಭಿವೃದ್ಧಿ ಪಡಿಸಲಾಗುವುದು. ಕುಡಚಿ ಮತ್ತು ಬಾಗಲಕೋಟೆ ನಡುವಣ ನೂತನ ರೈಲು ಮಾರ್ಗ ನಿರ್ಮಿಸಲು ಸಿದ್ದರಿದ್ದೇವೆ. ಆದರೆ ರಾಜ್ಯ ಸರ್ಕಾರ ಅಗತ್ಯ ಭೂಮಿ ಒದಗಿಸಿಲ್ಲ. ಭೂಮಿ ನೀಡಿದರೆ ಚಾಲ್ತಿಯಲ್ಲಿರುವ ರಾಜ್ಯದ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ತನ್ನ ಪಾಲಿನ ಹಣ ನೀಡುವಲ್ಲಿ ಕರ್ನಾಟಕ ಮತ್ತು ಆಂಧ್ರ ರಾಜ್ಯಗಳು ದೇಶದಲ್ಲಿ ಮೊದಲ ಸ್ಥಾನದಲ್ಲಿವೆ ಎಂದರು.

ಅರಸೀಕೆರೆ ರೈಲು ಚಾಮರಾಜನಗರಕ್ಕೆ ವಿಸ್ತರಣೆ: ಮೈಸೂರು- ನಂಜನಗೂಡು ನಡುವೆ ಪ್ರಯಾಣಿಕರ ದಟ್ಟಣಿ ಅಧಿಕವಾಗಿದೆ. ಈ ಮಾರ್ಗದಲ್ಲಿ ರೈಲು ಸಂಚಾರದ ಟ್ರಿಪ್ ಹೆಚ್ಚಿಸುವ ಅಗತ್ಯವಿದೆ ಎಂದು ‘ಪ್ರಜಾವಾಣಿ’ ರೈಲ್ವೆ ರಾಜ್ಯ ಸಚಿವ ಮುನಿಯಪ್ಪ ಅವರ ಗಮನಕ್ಕೆ ತಂದಾಗ, ತಕ್ಷಣ ಅದಕ್ಕೆ ಸ್ಪಂದಿಸಿದ ಅವರು, ಅರಸೀಕೆರೆ- ಮೈಸೂರು ನಡುವಣ ಸಂಚರಿಸುತ್ತಿರುವ ರೈಲಿನ ಪೈಕಿ ಒಂದು ರೈಲನ್ನು ಚಾಮರಾಜನಗರದ ತನಕ ವಿಸ್ತರಿಸುವಂತೆ ಸ್ಥಳದಲ್ಲಿ ಹಾಜರಿದ್ದ ನೈರುತ್ಯ ರೈಲ್ವೆಯ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಬಿ.ಬಿ.ವರ್ಮ ಅವರಿಗೆ ಆದೇಶ ನೀಡಿದರು. ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಬೋಗಿಗಳ ಸಂಖ್ಯೆ ಹೆಚ್ಚು ಮಾಡುವಂತೆಯೂ ಸೂಚಿಸಿದರು. ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಅನೂಪ್ ಎಸ್.ದಯಾನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT