ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಳೆ ಚುರುಕು; ಕಡಲ್ಕೊರೆತ ತೀವ್ರ

Last Updated 12 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಶುಕ್ರವಾರ ಬಿರಸುಗೊಂಡಿದೆ. ಕೊಡಗಿನಲ್ಲಿ ಮನೆ ಮೇಲೆ ಮರ ಬಿದ್ದು ನಾಲ್ವರು ಗಾಯಗೊಂಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.

ಉಡುಪಿ ಸಮೀಪದ ಪಡುಬಿದ್ರಿಯ ತೆಂಕ ಎರ್ಮಾಳಿನಲ್ಲಿ ಮತ್ತೆ ಕಡಲು ಅಬ್ಬರಿಸಿದ್ದು, ತೆಂಗಿನ ಮರಗಳು ಬುಡ ಸಮೇತ ಸಮುದ್ರಕ್ಕೆ ಉರುಳಿ ಬಿದ್ದಿವೆ. ಗೂಡಂಗಡಿಯೊಂದು ಸಮುದ್ರ ಪಾಲಾಗಿದೆ. ಮೀನುಗಾರಿಕಾ ರಸ್ತೆ ಹಾನಿಗೊಳ್ಳುವ ಆತಂಕ ಇದೆ.

ಪಕ್ಕದ ತೊಟ್ಟಂ ಗ್ರಾಮದ ಸಂಪರ್ಕ ರಸ್ತೆ ಈಗಾಗಲೇ ಹಾಳಾಗಿದೆ. ಕಡಲ್ಕೊರೆತದ ತೀವ್ರತೆ ಹೆಚ್ಚಾಗಿದ್ದು ತಡೆಗೋಡೆ ರೂಪದಲ್ಲಿ ಹಾಕುತ್ತಿರುವ ಕಲ್ಲುಗಳು ಅಲೆಗಳ ರಭಸವನ್ನು ತಾಳಿಕೊಳ್ಳದೇ ಕೊಚ್ಚಿಹೋಗುತ್ತಿವೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಿಗ್ಗೆಯೇ ಸುರಿಯಲಾರಂಭಿಸಿದ ಮಳೆ ನಿರಂತರವಾಗಿದ್ದು ಕುಮಾರಾಧಾರಾ ನದಿ ನೀರು ಅಪಾಯದ ಮಟ್ಟದಲ್ಲಿದೆ. ನದಿಯ ಸ್ನಾನಘಟ್ಟ ಈಗಾಗಲೇ ಮುಳುಗಿದೆ.

ಮಂಗಳೂರಿನಲ್ಲಿ ಬೆಳಿಗ್ಗೆ ಬಿಸಿಲು ಮತ್ತು ಮೋಡದ ವಾತಾವರಣವಿದ್ದು, ಮಧ್ಯಾಹ್ನದ ನಂತರ ನಿರಂತರ ಮಳೆ ಸುರಿಯಿತು. ಸಂಜೆ ವೇಳೆಗೆ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. 

ಮಳೆವಿವರ (ಮಿ.ಮೀ.ಗಳಲ್ಲಿ ):  ಮಂಗಳೂರು-49.2, ಬಂಟ್ವಾಳ-48.6, ಪುತ್ತೂರು 53.9, ಬೆಳ್ತಂಗಡಿ- 54.2, ಸುಳ್ಯ-50.4, ಕಡಬ- 64.4, ಮೂಡುಬಿದಿರೆ- 91.4.

ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಶುಕ್ರವಾರವೂ ಉತ್ತಮ ಮಳೆ ಸುರಿದಿದೆ. ಮಡಿಕೇರಿ, ಸಂಪಾಜೆ, ಶಾಂತಳ್ಳಿ, ಕೊಡ್ಲಿಪೇಟೆ, ಶನಿವಾರಸಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮವಾಗಿ ಮಳೆಯಾಗಿದೆ. ದಿನವಿಡೀ ಬಿಟ್ಟು ಬಿಟ್ಟು ಮಳೆ ಬರುತ್ತಿತ್ತು. ಮಳೆಯ ರಭಸ ಏರಿಳಿಕೆಯಿಂದ ಕೂಡಿತ್ತು.

ಮಡಿಕೇರಿಯಲ್ಲಿ ಬೆಳಿಗ್ಗೆ ಮಳೆಯ ಜತೆಗೆ ದಟ್ಟ ಮಂಜು ಕೂಡ ಆವರಿಸಿತ್ತು. ಭಾಗಮಂಡಲದ ತ್ರಿವೇಣಿ ಸಂಗಮ ಬಹುತೇಕ ಭರ್ತಿಯಾಗಿ ಹರಿಯುತ್ತಿದ್ದರೂ, ಸೇತುವೆಯ ಮೇಲೆ ನೀರು ಹರಿದಿಲ್ಲ. ಹೀಗಾಗಿ, ವಾಹನಗಳ ಸಂಚಾರ ಸಾಮಾನ್ಯವಾಗಿದೆ.

ಐವರಿಗೆ ಗಾಯ: ಮಡಿಕೇರಿ ಸಮೀಪದ ಚೇರಳ-ಶ್ರೀಮಂಗಲ ಗ್ರಾಮದ ಮನೆಯೊಂದರ ಮೇಲೆ ಮರ ಬಿದ್ದು ನಾಲ್ವರಿಗೆ ಗಾಯಗಳಾಗಿವೆ. ಚಿಕಿತ್ಸೆಗಾಗಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ, ಮಡಿಕೇರಿಯ ಚೈನ್‌ಗೇಟ್ ಬಳಿ ಮನೆಯೊಂದರ ತಡೆಗೋಡೆ ಕುಸಿದಿದೆ.

ಜಿಟಿ ಜಿಟಿ ಮಳೆ: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ದಿನ ಪೂರ್ತಿ ಜಿಟಿಜಿಟಿ ಮಳೆಯಾಗಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಚಿಕ್ಕೋಡಿ ತಾಲ್ಲೂಕಿನಲ್ಲಿ ವೇದಗಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದೆ.  ಶುಕ್ರವಾರ ಬೆಳಿಗ್ಗೆ ಜತ್ರಾಟ- ಭೀವಶಿ ಸೇತುವೆ ಜಲಾವೃತವಾಗಿ ಜನರ ಓಡಾಟಕ್ಕೆ ತೊಂದರೆಯಾಗಿದೆ. ಕಳೆದ ವಾರ ಕೂಡ ಈ ಸೇತುವೆ ಜಲಾವೃತವಾಗಿತ್ತು.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಬೈಲಹೊಂಗಲದಲ್ಲೂ ಭಾರಿ ಮಳೆಯಾಗಿದೆ. ಧಾರವಾಡ, ಗದಗ, ಹಾವೇರಿ, ವಿಜಾಪುರ, ಬಾಗಲಕೋಟೆ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಐದಾರು ದಿನಗಳಿಂದ ಕುಗ್ಗಿದ್ದ ಮಳೆ ಶುಕ್ರವಾರ ಚುರುಕುಗೊಂಡಿದೆ. ಶಿವಮೊಗ್ಗ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಜಿಟಿ-ಜಿಟಿ ಮಳೆಯಾಗುತ್ತಿದೆ.

ಪಶ್ಚಿಮಘಟ್ಟ ವ್ಯಾಪ್ತಿಯ ಆಗುಂಬೆ, ಹುಲಿಕಲ್ಲು, ಯಡೂರು, ಮಾಸ್ತಿಕಟ್ಟೆ, ನಗರ ಹಾಗೂ ಇತರ ಸ್ಥಳಗಳಲ್ಲಿ ಭಾರೀ ಮಳೆಯಾಗುತ್ತಿದೆ. ಲಿಂಗನಮಕ್ಕಿ, ಭದ್ರಾ, ತುಂಗಾ ಜಲಾಶಯಗಳಲ್ಲಿ ಒಳಹರಿವು ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT