ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಾವೊ ದಾಳಿ; ಹಿಂಸಾಚಾರ

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

ಪಟ್ನಾ/ರಾಂಚಿ (ಪಿಟಿಐ): ನಾಯಕನೊಬ್ಬನ ಬಂಧನವನ್ನು ಖಂಡಿಸಿ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ 24 ಗಂಟೆಗಳ ಬಂದ್‌ಗೆ ಕರೆ ನೀಡಿದ್ದ ಮಾವೊವಾದಿಗಳು ಮುಷ್ಕರದ ಸಂದರ್ಭದಲ್ಲಿ ಹಿಂಸಾಚಾರ ನಡೆಸಿದ್ದಾರೆ.

ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಮಾವೊವಾದಿಗಳು ರೈಲ್ವೆ ನಿಲ್ದಾಣವೊಂದರ ಮೇಲೆ ದಾಳಿ ನಡೆಸಿ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿದ ಘಟನೆ ನಡೆದಿದೆ. ಮತ್ತು ಪೊಲೀಸ್ ಠಾಣೆ, ಮೊಬೈಲ್ ಗೋಪುರಗಳ ಮೇಲೂ ದಾಳಿ ನಡೆಸಿದ್ದಾರೆ.

ಬುಧವಾರ ರಾತ್ರಿ ಗಂಗಾದಾಮೋದರ್ ಎಕ್ಸ್‌ಪ್ರೆಸ್ ರೈಲು ಆಗಮಿಸುವುದಕ್ಕೂ ಮೊದಲು ಜೆಹನಾಬಾದ್ ಜಿಲ್ಲೆಯ ನಡುವಾಲ್ ರೈಲ್ವೆ ನಿಲ್ದಾಣಕ್ಕೆ ನುಗ್ಗಿದ 30 ಮಂದಿ  ಮಾವೊವಾದಿಗಳು ಸ್ಟೇಷನ್ ಮಾಸ್ಟರ್ ಕೊಠಡಿಯನ್ನು ಧ್ವಂಸ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಟಿಕೆಟ್ ಕೌಂಟರ್‌ಗೆ ಬೆಂಕಿ ಹಚ್ಚಿ ಟಿಕೆಟ್ ಕಾಯ್ದಿರಿಸುವ ಕಂಪ್ಯೂಟರ್, 5,597 ರೂಪಾಯಿ ನಗದು, ಸಿಗ್ನಲ್ ನಿಯಂತ್ರಣ ವ್ಯವಸ್ಥೆಯನ್ನು ನಾಶಪಡಿಸಿದ ಮಾವೊವಾದಿಗಳು, ಸ್ಟೇಷನ್ ಮಾಸ್ಟರ್ ಮತ್ತು ಇತರ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿದರು ಎಂದು ಮೂಲಗಳು ಹೇಳಿವೆ.

ರೈಲ್ವೆ ಸಿಬ್ಬಂದಿಯನ್ನು ಎರಡು ಕಿ.ಮೀ ದೂರದವರೆಗೆ ಕರೆದುಕೊಂಡು ಹೋದ ನಂತರ ಅವರನ್ನು ಬಿಡುಗಡೆಗೊಳಿಸಿದರು. ಕೆಲವು ದಿನಗಳ ಹಿಂದೆ ಗಯಾ ಜಿಲ್ಲೆಯ ಗುರುವಾದಲ್ಲಿ ಮಾವೊವಾದಿ ನಾಯಕ ಜಗದೀಶ್ ಮಾಸ್ಟರ್ ಅಲಿಯಾಸ್ ಜಗದೀಶ್ ಯಾದವ್‌ನನ್ನು ಬಂಧಿಸಿರುವುದನ್ನು ಪ್ರತಿಭಟಿಸಿ ಈ ಕೃತ್ಯ ನಡೆಸಿರುವುದಾಗಿ ಅವರು ಹೇಳಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ, ಸುಮಾರು 100 ಶಸಸ್ತ್ರಧಾರಿ ಮಾವೊವಾದಿಗಳು ಗಯಾ ಜಿಲ್ಲೆಯ ಕೋಟಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದಾರೆ.

ಠಾಣೆಯಲ್ಲಿ ಬಿಹಾರ ಮಿಲಿಟರಿ ಪೊಲೀಸ್, ಜಿಲ್ಲಾ ಶಸಸ್ತ್ರ ಪಡೆ ಮತ್ತು ವಿಶೇಷ ಸಹಾಯಕ ಪಡೆಯ ತಲಾ ಒಂದು ತಂಡ ಕರ್ತವ್ಯನಿರತವಾಗಿತ್ತು ಎಂದು ನಗರ ಪೊಲೀಸ್ ಸೂಪರಿಂಟೆಂಡೆಂಟ್ ರತ್ನಮಣಿ ಸಂಜೀವ್ ಹೇಳಿದ್ದಾರೆ.

ಮಾವೊವಾದಿಗಳ ದಾಳಿಗೆ ಪ್ರತಿಯಾಗಿ ಭದ್ರತಾ ಸಿಬ್ಬಂದಿ 150 ಸುತ್ತುಗಳ ಗುಂಡು ಹಾರಿಸಿ ಅವರನ್ನು ಚದುರಿಸಿದರು ಎಂದು ಅವರು ಹೇಳಿದ್ದಾರೆ.

ಇಮಾಮ್‌ಗಂಜ್ ಬಾಜಾರ್‌ನಲ್ಲಿ ಮಾವೊವಾದಿಗಳು ಎರಡು ಮೊಬೈಲ್ ಗೋಪುರಗಳನ್ನು ಸ್ಫೋಟಿಸಿದ್ದಾರೆ ಎಂದೂ ಅವರು ಹೇಳಿದರು.

ಜಾರ್ಖಂಡ್‌ನ ಪಲಮಾವು ಜಿಲ್ಲೆಯಲ್ಲಿ ರೈಲ್ವೆ ಹಳಿಯನ್ನು ಸ್ಫೋಟಿಸಲು ಮಾವೊವಾದಿಗಳು ಯತ್ನಿಸಿದ್ದಾರೆ. ಹಳಿಗೆ ತೀವ್ರ ಹಾನಿ ಏನೂ ಸಂಭವಿಸಿಲ್ಲ. ಎರಡು ಸ್ಲ್ಯಾಬ್‌ಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಅನೂಪ್ ಟಿ. ಮಾಥ್ಯೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT