ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮೋದಿ ಮೋಡಿ?

ಗುಜರಾತ್ ಚುನಾವಣೋತ್ತರ ಸಮೀಕ್ಷೆ
Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ: ಗುಜರಾತ್‌ನಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೂರನೇ ಸಲ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬಹುದು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಪಡೆಯಬಹುದು ಎಂದು ಟೆಲಿವಿಷನ್ ಚಾನೆಲ್‌ಗಳು ನಡೆಸಿರುವ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಸಿ ವೋಟರ್, ಚಾಣಕ್ಯ ಹಾಗೂ ಎಬಿಪಿ ನ್ಯೂಸ್ ನಡೆಸಿರುವ ಮತಗಟ್ಟೆ ಸಮೀಕ್ಷೆಗಳು ಮೋದಿ ಅತ್ಯಧಿಕ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿವೆ. ಆದರೆ ಇವು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ನೀಡಿರುವ ಸ್ಥಾನಗಳಲ್ಲಿ ಅತ್ಯಲ್ಪ ಅಂತರವಿದೆ. ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲರ ಗುಜರಾತ್ ಪರಿವರ್ತನಾ ಪಕ್ಷ ಉತ್ತಮ ಪ್ರದರ್ಶನ ನೀಡುವುದಿಲ್ಲ ಎಂದು ಎಲ್ಲ ಸಮೀಕ್ಷೆಗಳು ತಿಳಿಸಿವೆ.

ಗುಜರಾತ್ ವಿಧಾನಸಭೆಯ ಒಟ್ಟು 182 ಸ್ಥಾನಗಳಲ್ಲಿ ಚಾಣಕ್ಯ ಸಮೀಕ್ಷೆ 140 ಸ್ಥಾನಗಳಲ್ಲಿ ಮೋದಿ ಜಯ ಗಳಿಸಲಿದ್ದಾರೆ ಎಂದು ಹೇಳಿದೆ. ಸಿ- ವೋಟರ್ 119 ರಿಂದ 129 ಸ್ಥಾನಗಳನ್ನು ನೀಡಿದೆ. ಚಾಣಕ್ಯ ಕಾಂಗ್ರೆಸ್‌ಗೆ 40 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದ್ದರೆ, ಸಿ- ವೋಟರ್ 49 ರಿಂದ 59 ಸ್ಥಾನಗಳನ್ನು ಕೊಟ್ಟಿದೆ. ಎಬಿಪಿ- ನೆಲ್ಸನ್ ಬಿಜೆಪಿಗೆ 126 ಹಾಗೂ ಕಾಂಗ್ರೆಸ್‌ಗೆ 50 ಸ್ಥಾನಗಳು ದೊರೆಯಬಹುದು ಎಂದು ಅಂದಾಜು ಮಾಡಿದೆ. 2007ರ ಚುನಾವಣೆಯಲ್ಲಿ ಬಿಜೆಪಿ 117 ಹಾಗೂ ಕಾಂಗ್ರೆಸ್ 59 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು.

ಬಿಜೆಪಿ 118ರಿಂದ 128 ಹಾಗೂ ಕಾಂಗ್ರೆಸ್ 50 ರಿಂದ 58 ಸ್ಥಾನಗಳನ್ನು ಗಳಿಸಬಹುದು ಎಂದು ಹೆಡ್‌ಲೈನ್ಸ್ ಟುಡೆ ಊಹೆ ಮಾಡಿದೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 117 ಹಾಗೂ ಕಾಂಗ್ರೆಸ್ 59 ಸ್ಥಾನಗಳನ್ನು ಪಡೆದಿದ್ದವು. ಕಳೆದ ಸಲ ಗುಜರಾತ್‌ನಲ್ಲಿ ಬಿಜೆಪಿ ಶೇ 49 ಹಾಗೂ ಕಾಂಗ್ರೆಸ್ ಶೇ 38ರಷ್ಟು ಮತಗಳನ್ನು ಪಡೆದಿತ್ತು. ಈ ಸಲ ಚಾಣಕ್ಯ ಪ್ರಮುಖ ಎರಡು ಪಕ್ಷಗಳಿಗೆ ಹಿಂದಿನಷ್ಟೇ ಮತಗಳು ದೊರೆಯಲಿವೆ ಎಂದು ಅದು ನಿರೀಕ್ಷೆ ಮಾಡಿದೆ. ಸಿ- ವೋಟರ್ ಪ್ರಕಾರ ಇದು ಕ್ರಮವಾಗಿ ಶೇ 46 ಮತ್ತು ಶೇ 37 ಆಗಬಹುದು.

ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟಿ (ಸಿಎಸ್‌ಡಿಎ) ನಡೆಸಿರುವ ಸಮೀಕ್ಷೆಯಂತೆ ಗುಜರಾತ್‌ನಲ್ಲಿ ಮೋದಿ ಕಳೆದ ಸಲಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಬಹುದು; ಕಾಂಗ್ರೆಸ್ ಬಲ ಇನ್ನಷ್ಟು ಕುಗ್ಗಬಹುದು. ಮೋದಿ ಮುಖ್ಯಮಂತ್ರಿ ಆಗಬೇಕೆಂಬುದು ಶೇ 41 ಮತದಾರರ ಅಭಿಲಾಷೆ. ಕೇಶುಭಾಯ್ ಮತ್ತು ಶಂಕರಸಿಂಗ್ ವಘೇಲ ಪರ ಶೇ 8ರಷ್ಟು ಮತದಾರರು ಒಲುವು ತೋರಿದ್ದಾರೆ. ಲೇವಾ ಪಟೇಲರಲ್ಲೇ ಹೆಚ್ಚು ಜನ ಮೋದಿ ನಾಯಕತ್ವ ಬೆಂಬಲಿಸಿದ್ದಾರೆ ಎಂದು ಅದು ಹೇಳಿದೆ.

ಹಿಮಾಚಲದಲ್ಲಿ ಕಾಂಗ್ರೆಸ್ ಮೇಲುಗೈ?: ಕಾಂಗ್ರೆಸ್‌ಗೆ ಗುಜರಾತ್‌ನಲ್ಲಿ ಹಿನ್ನಡೆಯಾದರೂ ಹಿಮಾಚಲ ಪ್ರದೇಶದಲ್ಲಿ ಅನುಕೂಲವಾಗಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ಊಹಿಸಿವೆ. 68 ಸದಸ್ಯ ಬಲದ ಹಿಮಾಚಲ ಪ್ರದೇಶದಲ್ಲಿ ಸಿ- ವೋಟರ್ ಕಾಂಗ್ರೆಸ್‌ಗೆ 30 ರಿಂದ 38, ಬಿಜೆಪಿಗೆ 27 ರಿಂದ 35 ಸ್ಥಾನಗಳನ್ನು ನೀಡಿದೆ. ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟಿ (ಸಿಎಸ್‌ಡಿಎಸ್) ನಡೆಸಿರುವ ಸಮೀಕ್ಷೆ ಅಧಿಕಾರ ಯಾರ ಪಾಲಾದರೂ ಆಗಬಹುದು ಎಂದಿದೆ.

ಸಿಎನ್‌ಎನ್- ಐಬಿಎನ್ ಮತ್ತು ವೀಕ್ ಸಮೀಕ್ಷೆ ಕಾಂಗ್ರೆಸ್ ಮತ್ತು ಬಿಜೆಪಿಗೆ 29ರಿಂದ 35 ಸ್ಥಾನಗಳನ್ನು ನೀಡಿದೆ. ಹಿಮಾಚಲದ ಶೇ 41ರಷ್ಟು ಮತದಾರರು ವೀರಭದ್ರಸಿಂಗ್ ಮುಖ್ಯಮಂತ್ರಿ ಆಗಬೇಕು ಎಂದು ಬಯಸಿದ್ದಾರೆ. ಶೇ 35ರಷ್ಟು ಮತದಾರರು ಪ್ರೇಂ ಕುಮಾರ್ ಧುಮಾಲ್ ಪರವಾಗಿ ನಿಂತಿದ್ದಾರೆ. ಎರಡು ರಾಜ್ಯಗಳಲ್ಲೂ ಅತ್ಯಧಿಕ ಮತದಾನವಾಗಿದೆ.

ನವೆಂಬರ್ 4ರಂದು ನಡೆದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶೇ75 ಹಾಗೂ ಸೋಮವಾರ ಮುಗಿದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಶೇ 70ಕ್ಕೂ ಹೆಚ್ಚು ಮತದಾನ ಆಗಿದೆ. ಮೊದಲ ಹಂತದ ಮತದಾನ ಡಿಸೆಂಬರ್ 13ರಂದು ಮುಗಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT