ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ `ಯುದ್ಧ ವಿಮಾನ'ದ ದೂಳು!

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ಪೂಜ್ಯ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜಿನ ಎದುರು ಇಡಲಾಗಿದ್ದ `ಮೆಸ್ಸರ್‌ಮಿಟ್ ಬಿಎಫ್-109' ಯುದ್ಧ ವಿಮಾನ 2002ರಲ್ಲಿ ನಾಪತ್ತೆಯಾದ ಪ್ರಕರಣದ ವಿಚಾರಣಾ ಅರ್ಜಿಯನ್ನು ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠವು 2010ರಲ್ಲಿ ವಜಾ ಗೊಳಿಸಿದ್ದನ್ನು ಪ್ರಶ್ನಿಸಿ ಮಾಜಿ ಸಚಿವ ಎಸ್.ಕೆ. ಕಾಂತಾ ಸುಪ್ರೀಂ ಕೋರ್ಟ್‌ನ ರಜಾ ಕಾಲದ ಪೀಠಕ್ಕೆ ಸಲ್ಲಿಸಿದ ಮೇಲ್ಮನವಿ ಊರ್ಜಿತಗೊಂಡಿದೆ. ಹೀಗಾಗಿ ಹಳೆ ಕಾಲದ ಯುದ್ಧ ವಿಮಾನವು ಗುಲ್ಬರ್ಗ ಜನರಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ದೋಷಾರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಹಾಗೂ ಸಾರ್ವಜನಿಕ ಆಸ್ತಿ ನಾಶವಾಗುವ ಸಂದರ್ಭ ಇದ್ದಾಗ ಹೈಕೋರ್ಟ್ ಪೀಠವು ಅಪರಾಧ ಪ್ರಕರಣವೊಂದನ್ನು ವಿಚಾರಣೆಯಿಂದ ಕೈಬಿಡಬಹುದೆ? ಎನ್ನುವ ಕಾನೂನಿನ ಪ್ರಶ್ನೆಯನ್ನು ಕಾಂತಾ ತಮ್ಮ ಮೇಲ್ಮನವಿ ಮೂಲಕ ಎತ್ತಿದ್ದಾರೆ.

`ಎರಡನೇ ಮಹಾಯುದ್ಧದಲ್ಲಿ ಜರ್ಮನ್ ಸೈನ್ಯ ಬಳಸಿದ ಯುದ್ಧ ವಿಮಾನ ಇದಾಗಿದೆ. ಬ್ರಿಟಿಷರ ವಶಕ್ಕೆ ಸಿಕ್ಕಿದ್ದ ಈ ವಿಮಾನವನ್ನು ಹೈದರಾಬಾದ್ ನಿಜಾಮರಿಗೆ ನೆನಪಿನ ಕಾಣಿಕೆಯಾಗಿ ನೀಡಲಾಗಿತ್ತು. ಇದೊಂದು ಅಮೂಲ್ಯ ಸಾರ್ವಜನಿಕ ಆಸ್ತಿ. ಹೈಕೋರ್ಟ್ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು.

ಸಂಗ್ರಹ ಯೋಗ್ಯವಾದ ಈ ವಿಮಾನವನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗಲಿ ಎನ್ನುವ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿತ್ತು. ಇದು ಎಚ್‌ಕೆಇ ಸ್ವತ್ತಾಗಿರಲಿಲ್ಲ ಎಂಬುದನ್ನು ಹೈಕೋರ್ಟ್ ಮನಗಂಡಿಲ್ಲ. ಇದನ್ನು ವ್ಯಾವಹಾರಿಕವಾಗಿ ನೋಡುವ ಅಧಿಕಾರ ಕಾಲೇಜಿನ ಆಡಳಿತ ಮಂಡಳಿಗೆ ಇರಲಿಲ್ಲ' ಎನ್ನುವ ಅಂಶಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಐತಿಹಾಸಿಕ ಮಹತ್ವ ಹೊಂದಿದ ಈ ಯುದ್ಧ ವಿಮಾನಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು  ತ್ವರಿತಗೊಳಿಸಲು, ಸೂಕ್ತ ತನಿಖೆಗೆ ಹೈಕೋರ್ಟ್ ಆದೇಶಿಸಬಹುದಿತ್ತು. ಇದ್ಯಾವುದಕ್ಕೂ  ಕಿವಿಗೊಡದೆ `ಯುದ್ಧ ವಿಮಾನಕ್ಕೂ ನಮಗೂ ಸಂಬಂಧವಿಲ್ಲ' ಎಂದು ಆಡಳಿತ ಮಂಡಳಿಯು ಮಂಡಿಸಿದ ವಾದಕ್ಕೆ ಮಾನ್ಯತೆ ನೀಡಿ, ಪ್ರಕರಣವನ್ನು ರದ್ದುಗೊಳಿಸಿದೆ ಎಂದು ಮೇಲ್ಮನವಿ ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಎರಡನೇ ಮಹಾಯುದ್ಧದ ವೇಳೆ ಇಂಗ್ಲೆಂಡ್‌ನಲ್ಲಿ ನೆಲಕ್ಕೆ ಉರುಳಿದ ಜರ್ಮನ್ ನಿರ್ಮಿತ ಈ ವಿಮಾನವನ್ನು ಇಂಗ್ಲಿಷರು ನಿಜಾಮರಿಗೆ 1941ರಲ್ಲಿ ಕಾಣಿಕೆಯಾಗಿ ನೀಡಿದ್ದರು. 1958ರಲ್ಲಿ ಆಗಿನ ಗುಲ್ಬರ್ಗ ಪುರಸಭೆಯ ಉದ್ಯಾನದಲ್ಲಿ ಇಡಲಾಗಿದ್ದ ವಿಮಾನವನ್ನು, ಅನಂತರ ಪಿಡಿಎ ಎಂಜಿನಿಯರಿಂಗ್ ಕಾಲೇಜಿಗೆ ಅಧ್ಯಯನ ಉದ್ದೇಶಕ್ಕಾಗಿ ಹಸ್ತಾಂತರಿಸಿತ್ತು.

ಹಾರಾಟ ನಡೆಸದ ಹೆಲಿಕಾಪ್ಟರ್, ಒಂದು ಹಳೆ ಕಾರು, ಹಳೆ ಬೈಕ್ ಹಾಗೂ ಹಳೆ ಸೈಕಲ್ ಪಡೆದುಕೊಂಡು 2002ರಲ್ಲಿ ಬೆಂಗಳೂರಿನ ಗಿರೀಶ್ ನಾಯ್ಡು ಎನ್ನುವ ವ್ಯಕ್ತಿಗೆ ಈ ವಿಮಾನವನ್ನು ಕಾಲೇಜಿನ ಆಡಳಿತ ಮಂಡಳಿಯು ಮಾರಾಟ ಮಾಡಿದೆ ಎನ್ನುವ ಅಂಶವು ವಿವಾದವನ್ನು ಸೃಷ್ಟಿಸಿತ್ತು.

ಎಚ್‌ಕೆಇಎಸ್ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಣಯ ಕೈಗೊಂಡು ವಿಮಾನವನ್ನು ಮಾರಾಟ ಮಾಡಿದೆ ಎಂದು ಆರೋಪಿಸಿ, 2002ರ ನವೆಂಬರ್‌ನಲ್ಲಿ  ಕಾಂತಾ ಅವರು 14 ಮಂದಿ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಐಪಿಸಿ ಸೆಕ್ಷನ್ 406, 423, 424 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ವೇಳೆ ಗುಲ್ಬರ್ಗ ಜೆಎಂಎಫ್‌ಸಿ ಎರಡನೇ ಕೋರ್ಟ್, ಸಿಒಡಿ ತನಿಖೆಗೆ ಆದೇಶಿಸಿತು. ಸಿಒಡಿ ಈ ಬಗ್ಗೆ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಿ ಕೋರ್ಟ್‌ಗೆ ಸಲ್ಲಿಸಿತ್ತು. ಯುದ್ಧವಿಮಾನವನ್ನು ದುರಸ್ತಿಗಾಗಿ ತೆಗೆದುಕೊಂಡು ಹೋಗಲಾಗಿದೆ ಎಂದು ಗಿರೀಶ್ ನಾಯ್ಡು ಒಮ್ಮೆ ಮಾತ್ರ ಹೇಳಿಕೆ ನೀಡಿ ಅನಂತರ ನಡೆದ ವಿಚಾರಣೆಗೆ ಹಾಜರಾಗಲೇ ಇಲ್ಲ. ಹೀಗಾಗಿ ವಿಚಾರಣೆಯು ನೆನೆಗುದಿಗೆ ಬಿದ್ದಿತು.

ಎಚ್‌ಕೆಇಎಸ್ ಆಡಳಿತ ಮಂಡಳಿಯ ಸದಸ್ಯ ಡಾ. ಬಸವರಾಜ ಗುಣವಂತರಾವ ಪಾಟೀಲ ಸೇರಿದಂತೆ 14 ಮಂದಿ ಗುಲ್ಬರ್ಗ ಸಂಚಾರಿ ಹೈಕೋರ್ಟ್ ಪೀಠಕ್ಕೆ ಮನವಿ ಸಲ್ಲಿಸಿದರು. ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಸುವುದಕ್ಕೆ ಹೈಕೋರ್ಟ್ ಸಂಚಾರಿ ಪೀಠವು 2010ರ ಜೂನ್ ತಿಂಗಳಲ್ಲಿ ತಡೆಯಾಜ್ಞೆ ನೀಡಿ, ಪ್ರಕರಣವನ್ನು ರದ್ದುಗೊಳಿಸಿತು.

ಸಾಕಷ್ಟು ಸಾಕ್ಷಿಗಳೊಂದಿಗೆ ಸಲ್ಲಿಸಿರುವ ಮೇಲ್ಮನವಿ ಅರ್ಜಿಗೆ ಸುಪ್ರೀಂಕೋರ್ಟ್ ಇದೀಗ ಅಸ್ತು ಎಂದಿದೆ. ಸಾರ್ವಜನಿಕರ ನೆನಪಿನಿಂದ ಮರೆಯಾಗಿದ್ದ `ಯುದ್ಧ ವಿಮಾನ'ಕ್ಕೆ ಸಂಬಂಧಿಸಿದ ಪ್ರಕರಣವು ಮತ್ತೆ ಗರಿಗೆದರಿದಂತಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT