ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ರಸ್ತೆಗಳ ಅತಿಕ್ರಮಣ ಸಮೀಕ್ಷೆ!

Last Updated 2 ಜನವರಿ 2014, 6:25 IST
ಅಕ್ಷರ ಗಾತ್ರ

ವಿಜಾಪುರ: ಇಲ್ಲಿಯ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಸರ್ಕಾರ ಮೇಲ್ದರ್ಜೆಗೇರಿಸಿದ್ದು, ಮಾಸ್ಟರ್‌ ಪ್ಲಾನ್‌  ಜಾರಿಯಾಗುತ್ತದೆಯೇ ಎಂಬ ಕುತೂಹಲ ಮತ್ತು ಆತಂಕ ಹೆಚ್ಚುತ್ತಿದೆ. ಮಾಸ್ಟರ್‌ ಪ್ಲಾನ್‌ ಜಾರಿ ಕುರಿತು ಜಿಲ್ಲಾ ಆಡಳಿತ ಇನ್ನು ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.

ಆದರೆ, ವಿಜಾಪುರ ನಗರದ ಅಭಿವೃದ್ಧಿಗೆ ಅತಿಕ್ರಮಣವೇ ಪ್ರಮುಖ ಅಡ್ಡಿಯಾಗಿರುವು­ದರಿಂದ ನಗರದ ರಸ್ತೆಗಳ ಅತಿಕ್ರಮಣ ಕುರಿತು ಮತ್ತೊಮ್ಮೆ ಸಮೀಕ್ಷೆ ನಡೆಸಲು ಮುಂದಾಗಿದೆ. ಅದಕ್ಕಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ. ‘ನಗರದ ರಸ್ತೆಗಳ ಅತಿಕ್ರಮಣ ಗುರುತಿಸಲು ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಎಸ್‌. ಹೇರಲಗಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯ­ನಿರ್ವಾಹಕ ಎಂಜಿನಿಯರ್‌ ಬಿ.ಕೆ. ಪಾಟೀಲ ಅವರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿದೆ.

ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಭೂ ದಾಖಲೆಗಳ (ಸರ್ವೇ) ಇಲಾಖೆಯವರು ಈ ತಂಡದಲ್ಲಿದ್ದು, ತಕ್ಷಣವೇ ಸಮೀಕ್ಷೆ ಆರಂಭ­ಗೊಳ್ಳಲಿದೆ’ ಎಂದು ವಿಜಾಪುರ ಮಹಾನಗರ ಪಾಲಿಕೆಯ ಆಯುಕ್ತ ಜಿ.ರಾಮದಾಸ ‘ಪ್ರಜಾವಾಣಿ’­ಗೆ ತಿಳಿಸಿದರು. ‘ನಗರದ ಪ್ರಮುಖ ರಸ್ತೆಗಳಲ್ಲಿಯ ಅತಿಕ್ರಮಣ­ವನ್ನು ಈಗಾಗಲೇ ಗುರುತಿಸಿದ್ದರೂ, ಈ ಅತಿಕ್ರಮಣ ನಿರ್ಧರಿಸಲು ಅನುಸರಿಸಿರುವ ಮಾನದಂಡ ಸರಿ ಇಲ್ಲ.

ರಸ್ತೆಯ ಮಧ್ಯಭಾಗ ಗುರುತಿಸುವಿಕೆ­ಯಲ್ಲಿಯೇ ತಾರತಮ್ಯ ಮಾಡಲಾಗಿದೆ ಎಂಬ ದೂರುಗಳು ಇವೆ. ಅದಕ್ಕಾಗಿ ಪಾರದರ್ಶಕವಾಗಿ ಅತಿಕ್ರಮಣ ಗುರುತಿಸಬೇಕು. ನಗರದ ಐದು ಪ್ರಮುಖ ರಸ್ತೆಗಳಲ್ಲಿಯ ಅತಿಕ್ರಮಣ ತೆರವಿಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಚಿವರು–ಶಾಸಕರು ಸೂಚಿಸಿದ್ದಾರೆ. ರಸ್ತೆಯ ಮಧ್ಯ ಭಾಗ ಯಾವುದು ಎಂಬುದನ್ನು ಗುರುತಿಸಿ 2–3 ದಿನ ಬಿಡುತ್ತೇವೆ. ಸಾರ್ವಜನಿಕರಿಗೆ ಆ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುತ್ತೇವೆ’ ಎಂದು ಅವರು ಹೇಳಿದರು.

‘ಈಗ ಅತಿಕ್ರಮಣವನ್ನು ಮಾತ್ರ ಗುರುತಿಸುತ್ತಿ­ದ್ದೇವೆ. ಈ ತಂಡದವರು ನಿತ್ಯವೂ ಸಮೀಕ್ಷೆ ನಡೆಸಿ ಇದೇ 10ರ ಒಳಗಾಗಿ ವರದಿ ನೀಡಲಿದ್ದಾರೆ. ಅತಿಕ್ರಮಣ ತೆರವು ಕಾರ್ಯಾಚರಣೆಯ ಕುರಿತು ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ಆ ನಂತರ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ರಾಮದಾಸ ಹೇಳಿದರು. ‘ಮೊದಲು ಮುಖ್ಯ ರಸ್ತೆಗಳು, ಆ ನಂತರ ಆಂತರಿಕ ರಸ್ತೆಗಳ ಅತಿಕ್ರಮಣ ಸಮೀಕ್ಷೆ ನಡೆಸುತ್ತೇವೆ’ ಎಂದು ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಎಸ್‌. ಹೇರಲಗಿ ತಿಳಿಸಿದರು.

ಮಾಸ್ಟರ್‌ ಪ್ಲಾನ್‌ ಎಂಬ ಬೆದರು ಗೊಂಬೆ:
‘ವಿಜಾಪುರ ನಗರದಲ್ಲಿ ಮಾಸ್ಟರ್‌ ಪ್ಲಾನ್‌ ಜಾರಿಗೆ ಈ ಹಿಂದೆ ನಿರ್ಧರಿಸಲಾಗಿತ್ತು. 2012ರ ಜನವರಿ 2ರಂದು ಆಗಿನ ಪ್ರಭಾರ ಜಿಲ್ಲಾಧಿಕಾರಿ ಕಾಶೀನಾಥ್‌ ಪವಾರ ಆಸ್ತಿ ಕಳೆದುಕೊಳ್ಳುವವರ ಸಭೆ ನಡೆಸಿದ್ದರು. ಪರಿಹಾರ ಕೊಟ್ಟರೆ ಮಾಸ್ಟರ್‌ ಪ್ಲಾನ್‌ ಜಾರಿಗೆ ಆಸ್ತಿ ಮಾಲೀಕರು ಸಮ್ಮತಿ ಸೂಚಿಸಿದ್ದರು. ಆ ನಂತರ ಬಂದ ಜಿಲ್ಲಾಧಿಕಾರಿಗಳು ಆ ಬಗ್ಗೆ ಚಕಾರ ಎತ್ತಲಿಲ್ಲ. ಈಗಲೂ ಅಷ್ಟೇ. ಸಮೀಕ್ಷೆ ಎಂಬುದು ಕೇವಲ ಹೆದರಿಸುವ ಇಲ್ಲವೆ ಕಣ್ಣೊರೆಸುವ ತಂತ್ರ’ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ಮಹಾನಗರ ಪಾಲಿಕೆಯ ಸದಸ್ಯರೊಬ್ಬರು ಹೇಳಿದರು!

₨ 23 ಕೋಟಿ ಮೀಸಲು
ವಿಜಾಪುರ ನಗರದಲ್ಲಿ ಮಾಸ್ಟರ್‌ ಪ್ಲಾನ್‌ ಜಾರಿಗೆ ನಗರೋತ್ಥಾನ ಯೋಜನೆಯಲ್ಲಿ ₨ 23 ಕೋಟಿ ಮೀಸಲಿಡಲಾಗಿದೆ. ಆರಂಭದಲ್ಲಿ 16 ರಸ್ತೆಗಳನ್ನು ಗುರುತಿಸಲಾಗಿತ್ತು. ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಗೋದಾವರಿ ಹೋಟೆಲ್‌ನಿಂದ ಗೋಲಗುಮ್ಮಟ ಪೊಲೀಸ್‌ ಠಾಣೆ ವರೆಗಿನ ಮುಖ್ಯ ರಸ್ತೆಯಲ್ಲಿ ಮಾತ್ರ ಮಾಸ್ಟರ್‌ ಪ್ಲಾನ್‌ ಜಾರಿಗೆ ನಿರ್ಧರಿಸಲಾಗಿತ್ತು. ಆದರೆ, ಸಾಹಿತ್ಯ ಸಮ್ಮೇಳನ ಮುಗಿದು ವರ್ಷ ಕಳೆದರೂ ಆ ಯೋಜನೆಯೂ ಕಾರ್ಯಗತಗೊಂಡಿಲ್ಲ.

‘ಗಾಂಧಿ ಚೌಕ್‌ನಿಂದ ರೈಲು ನಿಲ್ದಾಣದ ಕ್ರಾಸ್‌ ವರೆಗೆ 175 ಆಸ್ತಿಗಳನ್ನು ಭಾಗಶಃ ತೆರವುಗೊಳಿಸಬೇಕಾಗುತ್ತದೆ. ಅದಕ್ಕೆ ₨7.5 ಕೋಟಿ ಪರಿಹಾರ  (ಕಟ್ಟಡಗಳ ಮೌಲ್ಯ ₨2 ಕೋಟಿ ಹಾಗೂ ನಿವೇಶಗಳ ಮೌಲ್ಯ ₨5.5 ಕೋಟಿ) ನೀಡಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿತ್ತು. ಗಾಂಧಿಚೌಕ್‌ನಿಂದ ಗೋದಾವರಿ ಹೋಟೆಲ್‌ ವರೆಗಿನ ಆಸ್ತಿಗಳ ಸಮೀಕ್ಷೆ–ಪರಿಹಾರ ಕುರಿತು ಆಗ ಚರ್ಚೆ ನಡೆದಿರಲಿಲ್ಲ’ ಎಂಬುದು ಜಿಲ್ಲಾಧಿಕಾರಿಗಳ ಕಚೇರಿಯ ಮೂಲಗಳ ಮಾಹಿತಿ.

ಮಾಹಿತಿ ಕೊಡಿ
ವಿಜಾಪುರ ನಗರದ ರಸ್ತೆಗಳ ಅತಿಕ್ರಮಣ ಕುರಿತು ಸಮೀಕ್ಷೆ ನಡೆಸಲು ಎರಡು ತಂಡ ರಚಿಸಲಾಗಿದೆ. ಸಿಂದಗಿ ನಾಕಾದಿಂದ ಅಲ್‌ ಅಮೀನ್‌ ಕಾಲೇಜು ವರೆಗಿನ ಮುಖ್ಯ ರಸ್ತೆಯ ದಕ್ಷಿಣ ಭಾಗದ ಸಮೀಕ್ಷಾ ತಂಡಕ್ಕೆ ಎಸ್‌.ಎಸ್‌. ಹೇರಲಗಿ (ಮೊ.92437–11999) ಹಾಗೂ ಉತ್ತರ ಭಾಗದ ಸಮೀಕ್ಷಾ ತಂಡಕ್ಕೆ  ಬಿ.ಕೆ. ಪಾಟೀಲ (ಮೊ.94481–36802) ಮುಖ್ಯ­ಸ್ಥ­ರಾಗಿದ್ದಾರೆ. ಸಾರ್ವಜನಿಕರು ಅವರನ್ನು ಸಂಪರ್ಕಿಸಿ ಅತಿಕ್ರಮಣದ ಮಾಹಿತಿ ನೀಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT