ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಹಳಿತಪ್ಪಿದ ಇಂಡಿಯನ್ ಎಕ್ಸ್‌ಪ್ರೆಸ್

Last Updated 27 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ... ಈ ಹೆಸರುಗಳು ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುತ್ತವೆ. ಭಾರತದ ಟೆನಿಸ್‌ನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಶ್ರೇಯ  ಪೇಸ್ ಮತ್ತು ಭೂಪತಿಗೆ ಸಲ್ಲಬೇಕು.
 
ಇವರು ಜೊತೆಯಾಗಿ ಹಲವು ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ತಂದಿತ್ತಿದ್ದಾರೆ. ಅದೇ ರೀತಿ ವಿವಾದಗಳಿಂದಲೂ ಸುದ್ದಿಯಾಗಿದ್ದಾರೆ. ಇವರಿಬ್ಬರ ನಡುವಿನ ಸಂಬಂಧ ಮತ್ತೆ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ವರ್ಷದ ಆರಂಭದಲ್ಲಿ ಎಟಿಪಿ ಟೂರ್ನಿಗಳಲ್ಲಿ ಒಟ್ಟಾಗಿ ಆಡಲು ನಿರ್ಧರಿಸಿದ್ದ ಪೇಸ್- ಭೂಪತಿ ಮುಂದಿನ ವರ್ಷ ಬೇರೆ ಬೇರೆ ಜೊತೆಗಾರರೊಂದಿಗೆ ಆಡಲಿದ್ದಾರೆ. ಅಂದರೆ ಈ ಋತುವಿನ ಮುಕ್ತಾಯದೊಂದಿಗೆ ಇವರ ನಡುವಿನ `ಸಂಬಂಧ~ ಕೊನೆಗೊಳ್ಳಲಿದೆ. ಇವರಿಬ್ಬರು ಪರಸ್ಪರ ದೂರವಾಗುತ್ತಿರುವುದು ಇದೇ ಮೊದಲಲ್ಲ.

ಡೇವಿಸ್ ಕಪ್, ಏಷ್ಯನ್ ಕ್ರೀಡಾಕೂಟ ಹಾಗೂ ಒಲಿಂಪಿಕ್‌ನಲ್ಲಿ ಒಟ್ಟಾಗಿ ಆಡುತ್ತಿದ್ದರೂ ಇವರು ಎಟಿಪಿ ಟೂರ್ನಿಗಳಲ್ಲಿ ಒಂಬತ್ತು ವರ್ಷಗಳ ಕಾಲ ಜೊತೆಯಾಗಿ ಆಡಿರಲಿಲ್ಲ. ಆದರೆ ಈ ವರ್ಷದ ಆರಂಭದಲ್ಲಿ ಎಟಿಪಿ ಟೂರ್ನಿಗಳಲ್ಲಿ ಒಟ್ಟಾಗಿ ಆಡುವ ಮಹತ್ವದ ತೀರ್ಮಾನ ಕೈಗೊಂಡಿದ್ದರು. ಇದು ದೇಶದ ಟೆನಿಸ್ ಪ್ರೇಮಿಗಳ ಸಂತಸಕ್ಕೂ ಕಾರಣವಾಗಿತ್ತು. ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲಾಮ್ ಪುರುಷರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆಲ್ಲುವುದು ಈ ನಿರ್ಧಾರದ ಹಿಂದಿನ ಉದ್ದೇಶವಾಗಿತ್ತು.

ಜನವರಿ ತಿಂಗಳಲ್ಲಿ ನಡೆದಿದ್ದ ಚೆನ್ನೈ ಓಪನ್ ಟೂರ್ನಿಯಲ್ಲಿ `ಇಂಡಿಯನ್ ಎಕ್ಸ್‌ಪ್ರೆಸ್~ ಖ್ಯಾತಿಯ ಪೇಸ್- ಭೂಪತಿ ಒಟ್ಟಾಗಿ ಆಡಿ  ಕಿರೀಟ ಮುಡಿಗೇರಿಸಿಕೊಂಡಿದ್ದರು. ಆದರೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಇವರಿಗೆ ನಿರಾಸೆ ಎದುರಾಗಿತ್ತು. ಅಮೆರಿಕ ಓಪನ್, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಪುರುಷರ ಡಬಲ್ಸ್ ಕಿರೀಟ ಈಗಾಗಲೇ ಇಬರಿಬ್ಬರ ಬಳಿ ಇದೆ. ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಭಾಗ್ಯ ಇನ್ನೂ ಲಭಿಸಿಲ್ಲ.

2012ರ ಜನವರಿಯಲ್ಲಿ ನಡೆಯಲಿರುವ ಚೆನ್ನೈ ಓಪನ್ ಟೂರ್ನಿಯಲ್ಲಿ ಪೇಸ್ ಹಾಗೂ ಭೂಪತಿ ಬೇರೆ ಜೊತೆಗಾರರೊಂದಿಗೆ ಆಡುವರು. ಯುವ ಆಟಗಾರರ ಜೊತೆ ಸೇರಿಕೊಂಡು ಮುಂದಿನ ಋತುವಿನಲ್ಲಿ ಕಣಕ್ಕಿಳಿಯುವುದು ಇಬ್ಬರ ಉದ್ದೇಶ. ಭೂಪತಿ ಅವರು ರೋಹನ್ ಬೋಪಣ್ಣ ಜೊತೆ ಆಡುವುದಾಗಿ ಈಗಾಗಲೇ ಹೇಳಿದ್ದಾರೆ. ಲಿಯಾಂಡರ್ ಪೇಸ್ ಹೊಸ ಜೊತೆಗಾರ ಯಾರು ಎಂಬುದು ಇನ್ನೂ ಖಚಿತವಾಗಿಲ್ಲ. ಅವರು ರಾಡೆಕ್ ಸ್ಟೆಪಾನೆಕ್ ಜೊತೆ ಕಣಕ್ಕಿಳಿಯುವ ಸಾಧ್ಯತೆಯಿದೆ.

ಪೇಸ್-ಭೂಪತಿ ನಡುವೆ ಮತ್ತೆ ಒಡಕು ಉಂಟಾಗಿದೆ ಎಂದು ಕೆಲವು ದಿನಗಳ ಹಿಂದೆಯೇ ವರದಿಯಾಗಿತ್ತು. ಆದರೆ ಇದನ್ನು ನಿರಾಕರಿಸಿದ್ದ ಭೂಪತಿ `ವರ್ಲ್ಡ್ ಟೂರ್ ಫೈನಲ್ಸ್‌ನಲ್ಲಿ ಪೇಸ್ ಮತ್ತು ನಾನು ಒಟ್ಟಾಗಿ ಆಡುವೆವು~ ಎಂದಿದ್ದರು. ಮಾತ್ರವಲ್ಲ ಈ ಟೂರ್ನಿಯಲ್ಲಿ ಜೊತೆಯಾಗಿ ಆಡಿದ್ದಾರೆ. ಇದೀಗ ಚೆನ್ನೈ ಓಪನ್‌ಗೆ ಬೇರೆ ಜೊತೆಗಾರರನ್ನು ಕಂಡುಕೊಂಡ ಕಾರಣ ಇವರು ದೂರವಾಗುತ್ತಿರುವುದು ಖಚಿತವಾಗಿದೆ.

ಈ ಬೆಳವಣಿಗೆಯಿಂದ ಭಾರತದ ಟೆನಿಸ್‌ಗೆ ನಷ್ಟ ಉಂಟಾಗುವುದು ಸ್ಪಷ್ಟ. ಮುಂಬರುವ ಲಂಡನ್ ಒಲಿಂಪಿಕ್ ಕೂಟದಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುವವರು ಯಾರು ಎಂಬ ಪ್ರಶ್ನೆ ಇದೀಗ ಎದ್ದಿದೆ. ಪೇಸ್ ಮತ್ತು ಭೂಪತಿ ಒಲಿಂಪಿಕ್ ತನಕ ಜೊತೆಯಾಗಿ ಆಡಿದ್ದಲ್ಲಿ ಅವರೇ ಲಂಡನ್‌ನಲ್ಲಿ ಭಾರತದ ಭರವಸೆ ಎನಿಸುತ್ತಿದ್ದರು. ಆದರೆ ಅಂತಹ ಸಾಧ್ಯತೆ ಕ್ಷೀಣಿಸಿದೆ.

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಐಟಿಎಫ್ ನಿಯಮದಂತೆ ವಿಶ್ವ ರ‌್ಯಾಂಕಿಂಗ್‌ನಲ್ಲಿ ಅಗ್ರ 10 ರೊಳಗಿನ ಸ್ಥಾನದಲ್ಲಿರುವ ಆಟಗಾರರು ಒಲಿಂಪಿಕ್‌ಗೆ ನೇರ ಅರ್ಹತೆ ಪಡೆಯುವರು. ಪ್ರಸಕ್ತ ರ‌್ಯಾಂಕಿಂಗ್ ಪಟ್ಟಿಯಲ್ಲಿ ಪೇಸ್, ಭೂಪತಿ ಮತ್ತು ರೋಹನ್ ಬೋಪಣ್ಣ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ.

`ಈಗ ರ‌್ಯಾಂಕಿಂಗ್‌ನಲ್ಲಿ ಎಲ್ಲ ಮೂವರು ಅಗ್ರ 10 ರೊಳಗಿನ ಸ್ಥಾನದಲ್ಲಿದ್ದಾರೆ. ಜೂನ್ ವೇಳೆಗೆ (ಒಲಿಂಪಿಕ್‌ಗೆ ಪ್ರವೇಶ ಪತ್ರ ಕಳುಹಿಸುವ ಸಮಯ) ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ನೋಡಬೇಕು. ಒಲಿಂಪಿಕ್‌ಗೆ ನಾವು ಇಬ್ಬರನ್ನು ಕಳುಹಿಸಬೇಕಿದೆ. ಆ ಇಬ್ಬರು ಯಾರೆಂಬುದನ್ನು ನಮ್ಮ ಆಯ್ಕೆ ಸಮಿತಿ ನಿರ್ಧರಿಸಲಿದೆ~ ಎಂದು ಎಐಟಿಎ ಕಾರ್ಯದರ್ಶಿ ಅನಿಲ್ ಖನ್ನಾ ತಿಳಿಸಿದ್ದಾರೆ.

ಪೇಸ್- ಭೂಪತಿ, ಪೇಸ್- ಬೋಪಣ್ಣ ಅಥವಾ ಭೂಪತಿ- ಬೋಪಣ್ಣ ಇದರಲ್ಲಿ ಒಂದು ಜೋಡಿ ಒಲಿಂಪಿಕ್‌ನಲ್ಲಿ ಆಡುವುದು ಖಚಿತ. ಆದರೆ ವಿಶ್ವದ ಮಹಾ ಕ್ರೀಡಾ ಮೇಳದಲ್ಲಿ ದೇಶವನ್ನು ಪ್ರತಿನಿಧಿಸುವ ಅದೃಷ್ಟ ಯಾವ ಜೋಡಿಗೆ ಲಭಿಸುತ್ತದೆ ಎಂಬ ಕುತೂಹಲ ಟೆನಿಸ್ ಪ್ರೇಮಿಗಳದ್ದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT