ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಕೇಂದ್ರೀಯ ವಿದ್ಯಾಲಯ ಸಿಗುತ್ತಾ?

Last Updated 22 ಫೆಬ್ರುವರಿ 2011, 6:25 IST
ಅಕ್ಷರ ಗಾತ್ರ

ತುಮಕೂರು: ನಗರಕ್ಕೆ ಮತ್ತೊಂದು ಕೇಂದ್ರೀಯ ವಿದ್ಯಾಲಯ ಸಿಗುತ್ತಾ? ಸಿಗಬಹುದೆಂಬ ನಿರೀಕ್ಷೆಯಲ್ಲಿ ಮಕ್ಕಳ ಪೋಷಕರು ಇದ್ದಾರೆ.ಮಕ್ಕಳಿಗೆ ಸಿಬಿಎಸ್‌ಸಿ ಶಿಕ್ಷಣ ಕೊಡಿಸಲು ಈಗ ಪೋಷಕರಲ್ಲೂ ಪೈಪೋಟಿ ಸೃಷ್ಟಿಯಾಗಿದೆ. ಹೀಗಾಗಿಯೇ ಕೇವಲ ಐದು ದಿನಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮೊದಲ ಬಾರಿಗೆ 914 ಅರ್ಜಿಗಳು ಸಲ್ಲಿಕೆಯಾಗಿವೆ.

ಪೋಷಕರು ತಮ್ಮ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಣ ಕೊಡಿಸಲು ಹೆಚ್ಚು ಆಸಕ್ತಿ ವಹಿಸುತ್ತಿರುವುದನ್ನು ಮನಗಂಡಿರುವ ಸಂಸದ ಜಿ.ಎಸ್.ಬಸವರಾಜು, ಕಳೆದ ಬಾರಿಯೇ ಹೆಚ್ಚುವರಿ ತರಗತಿಗಳನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರಿಂದ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಮತ್ತೊಂದು ಕೇಂದ್ರೀಯ ವಿದ್ಯಾಲಯ ತರಲು ಪ್ರಯತ್ನ ನಡೆಸುತ್ತಿದ್ದು, ಜಿಲ್ಲಾಡಳಿತ ಪ್ರಕ್ರಿಯೆ ಆರಂಭಿಸಿದೆ.

ಇನ್ನೊಂದು ವಿದ್ಯಾಲಯ ಮಂಜೂರು ಮಾಡುವಂತೆ ಕೇಂದ್ರೀಯ ವಿದ್ಯಾಲಯ ವ್ಯವಸ್ಥಾಪನ ಸಮಿತಿಯಲ್ಲೂ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗುತ್ತಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ  ಡಾ.ಸಿ.ಸೋಮಶೇಖರ್ ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.ಸಂಸದ ಜಿ.ಎಸ್.ಬಸವರಾಜು ನೀಡಿರುವ ಮನವಿ ಆಧರಿಸಿ, ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ತುಮಕೂರಿನಲ್ಲಿ ಮತ್ತೊಂದು ವಿದ್ಯಾಲಯ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೇಂದೀಯ ವಿದ್ಯಾಲಯ  ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಇನ್ನೊಂದು ಕೇಂದ್ರೀಯ ವಿದ್ಯಾಲಯ ಆರಂಭವಾಗುವುದು ಖಚಿತ ಎಂದು ವ್ಯವಸ್ಥಾಪನಾ ಸಮಿತಿಯ ಸದಸ್ಯ ಕುಂದರನಹಳ್ಳಿ ರಮೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಅಮಲಾಪುರದಲ್ಲಿರುವ ಕೇಂದ್ರೀಯ ವಿದ್ಯಾಲಯ ಮೂರು ಸೆಕ್ಷನ್‌ಗಳಲ್ಲಿ ನಡೆಯುತ್ತಿದ್ದು, 1ರಿಂದ 12ನೇ ತರಗತಿವರೆಗೆ ಇದೆ. ಕಳೆದ ವರ್ಷ 11ನೇ ತರಗತಿ ಆರಂಭವಾಗಿದ್ದು, ಈ ಬಾರಿ 12ನೇ ತರಗತಿಯೂ ಆರಂಭವಾಗಲಿದೆ. ಒಟ್ಟು 700 ವಿದ್ಯಾರ್ಥಿಗಳು ಇಲ್ಲಿ ಸಿಬಿಎಸ್‌ಸಿ ಶಿಕ್ಷಣ ಪಡೆಯುತ್ತಿದ್ದಾರೆ.

44.22 ಎಕರೆ ಇರುವ ಬಡ್ಡಿಹಳ್ಳಿ ಕೆರೆ ಜಾಗದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ 15 ಎಕರೆ ಭೂಮಿ 2001ರ ಜೂನ್ 15ರಂದು ಮಂಜೂರಾಗಿತ್ತು. ರೈತರ ವಿರೋಧ ಮತ್ತು ಕೆಲ ಖಾಸಗಿ ಸಂಸ್ಥೆಗಳು, ಕೈಗಾರಿಕೋದ್ಯಮಿಗಳ ಲಾಬಿಯಿಂದ ಅಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಯಾಗದೆ, ನಗರ ಸಮೀಪದ ಅಮಲಾಪುರದಲ್ಲಿ ಆರಂಭವಾಯಿತು.

ಬಡ್ಡಿಹಳ್ಳಿ ಕೆರೆ ಜಾಗದಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದ ರೈತರೇ ಈಗ ಈ ಹಿಂದೆ ಮಂಜೂರು ಮಾಡಿದ್ದ ಜಾಗದಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸುವಂತೆ ಕೋರಿದ್ದಾರೆ. ಕೃಷಿಗೆ ಉಪಯೋಗವಾಗುವಂತೆ ಉಳಿದ ಕೆರೆಯನ್ನು ಅಭಿವೃದ್ಧಿಪಡಿಸುವಂತೆ ಸಂಸದರು ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾಡಳಿತದ ಪ್ರಸ್ತಾವನೆಗೆ ಒಪ್ಪಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಗರಕ್ಕೆ ಮತ್ತೊಂದು ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡಿದರೆ, ಅದನ್ನು ನಗರದೊಳಗೆ ಇರುವ ಬಡ್ಡಿಹಳ್ಳಿ ಕೆರೆಯ ಜಾಗದಲ್ಲಿ ಆರಂಭಿಸಿ, ಕೆರೆಯನ್ನು ಅಭಿವೃದ್ಧಿಪಡಿಸಿದರೆ ರೈತರಿಗೂ ಅನುಕೂಲವಾಗುತ್ತದೆ. ಮಕ್ಕಳಿಗೂ ಹತ್ತಿರದಲ್ಲೇ ಶಿಕ್ಷಣ ಪಡೆಯಲು ನೆರವಾಗುತ್ತದೆ ಎನ್ನುವ ಅಭಿಪ್ರಾಯ ಕೇಂದ್ರೀಯ ವಿದ್ಯಾಲಯದ ಮಕ್ಕಳ ಪೋಷಕರ ವಲಯದಿಂದ ಕೇಳಿಬರುತ್ತಿದೆ.

ಬಡ್ಡಿಹಳ್ಳಿ ಕೆರೆಯ ಜಾಗ ಯಾವುದೇ ಆಕ್ಷೇಪವಿಲ್ಲದೆ ಲಭಿಸಿದರೂ ಅಲ್ಲಿ ಕಟ್ಟಡ ತಲೆ ಎತ್ತಿ, ಶಾಲೆ ಆರಂಭವಾಗಲು ಒಂದೆರಡು ವರ್ಷಗಳಾದರೂ ಬೇಕಾಗುತ್ತದೆ. ಈ ಬಾರಿಯ ಶೈಕ್ಷಣಿಕ ವರ್ಷದಿಂದಲೇ ಶಾಲೆ ಆರಂಭಿಸುವ ಒತ್ತಡ ಮತ್ತು ಬೇಡಿಕೆ ಇರುವುದರಿಂದ ತಾತ್ಕಾಲಿಕ ವ್ಯವಸ್ಥೆಯಾಗಿ ಪಾಲಿಕೆ ಆವರಣದಲ್ಲೇ ಇರುವ ಪಾಲಿಕೆಗೆ ಸೇರಿದ ಕಟ್ಟಡ (ಈ ಹಿಂದೆ ಸರ್ವೋದಯ ಕಾಲೇಜು ನಡೆಯುತ್ತಿದ್ದ ಕಟ್ಟಡ) ಅಥವಾ ವಿ.ವಿ ಸ್ನಾತಕೋತ್ತರ ಕೇಂದ್ರ ಬಳಸಿಕೊಳ್ಳುವ ಕುರಿತು ಜಿಲ್ಲಾಡಳಿತದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ಅಲ್ಲೊಂದು, ಇಲ್ಲೊಂದು ಕೇಂದ್ರೀಯ ವಿದ್ಯಾಲಯ ಆರಂಭಿಸುವ ಬದಲು ಈಗಿರುವ ಅಮಲಾಪುರದ ಜಾಗದಲ್ಲೇ ಮತ್ತೊಂದನ್ನು ಆರಂಭಿಸುವುದು ಸೂಕ್ತ. ಅಲ್ಲಿ ಕೇವಲ ನಾಲ್ಕು ಎಕರೆ ಜಾಗವನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಇನ್ನು ಆರು ಎಕರೆ ಜಾಗವಿದೆ. ಅಲ್ಲೆ ಉತ್ತಮ ಕ್ಯಾಂಪಸ್ ನಿರ್ಮಿಸುವುದು ಸೂಕ್ತ ಎನ್ನುವ ಸಲಹೆಗಳು ವ್ಯಕ್ತವಾಗುತ್ತಿದೆ.

ಇದೇನೆ ಇರಲಿ; ನಗರಕ್ಕೆ ಮತ್ತೊಂದು ಕೇಂದ್ರೀಯ ವಿದ್ಯಾಲಯ ಆರಂಭವಾದರೆ, ಸ್ಪರ್ಧಾತ್ಮಕ ಜಗತ್ತಿಗೆ ಅಣಿಯಾಗಲು ಜಿಲ್ಲೆಯ ಮಕ್ಕಳಿಗೂ ಬಾಲ್ಯದಿಂದಲೇ ಗುಣಮಟ್ಟದ ಶಿಕ್ಷಣ ದೊರಕುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವುದು ಶಿಕ್ಷಣಾಸಕ್ತರ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT