ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಕ್ರೀಡೆ ಮೇಲಿನ ಒಲವು...

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

‘ಅಕಸ್ಮಾತ್‌ ಸಚಿನ್ ತೆಂಡೂಲ್ಕರ್‌ ಕ್ರಿಕೆಟಿಗರಾಗಿರ ದಿದ್ದರೆ ಅತ್ಯುತ್ತಮ ಟೇಬಲ್‌ ಟೆನಿಸ್ ಆಟಗಾರರಾಗುತ್ತಿದ್ದರು’
-ಹೀಗೆಂದು ಮಹೇಂದ್ರ ಸಿಂಗ್‌ ದೋನಿ ಒಮ್ಮೆ ಹೇಳಿದ್ದರು. ಏಕೆಂದರೆ ಕ್ರಿಕೆಟ್‌ ಪ್ರವಾಸಗಳ ವೇಳೆ ತಂಡ ಉಳಿದುಕೊಳ್ಳುತ್ತಿದ್ದ ಹೋಟೆಲ್‌ನಲ್ಲಿ ಟೇಬಲ್‌ ಟೆನಿಸ್‌ ಆಡುವಾಗ ಪ್ರತಿ ಬಾರಿ ಗೆಲ್ಲುತ್ತಿದ್ದದ್ದು ತೆಂಡೂಲ್ಕರ್‌. ಸಹ ಆಟಗಾರರನ್ನೆಲ್ಲಾ ಅವರು ಸೋಲಿಸುತ್ತಿದ್ದರು. ಟೇಬಲ್‌ ಟೆನಿಸ್‌ ಆಡುವ ಪ್ರಮುಖರ ಎದುರೂ ಸಚಿನ್‌ ಗೆದ್ದ ಉದಾಹರಣೆಗಳಿವೆ. ವಿಶೇಷವೆಂದರೆ ಅವರು ಎಡಗೈನಲ್ಲಿ ಟಿಟಿ ಆಡುತ್ತಾರೆ.

ಸಚಿನ್‌ ಟೆನಿಸ್‌ ಕೂಡ ಚೆನ್ನಾಗಿ ಆಡುತ್ತಾರೆ. ಅವರು ಮೊದಲು ಕನಸು ಕಂಡಿದ್ದು ಟೆನಿಸ್‌ ಆಟಗಾರ ಆಗಬೇಕೆಂಬುದು. ಈಗಲೂ ಅವರ ಹೀರೊ ಜಾನ್‌ ಮೆಕೆನ್ರೊ. ಚಿಕ್ಕಂದಿನಲ್ಲಿ ಮೆಕೆನ್ರೊ ರೀತಿ ಹೇರ್‌ಸ್ಟೈಲ್‌ ಮಾಡಿಕೊಂಡು ತಿರುಗಾಡುತ್ತಿದ್ದರಂತೆ. ಇದನ್ನು ಹಲವು ಸಂದರ್ಶನಗಳಲ್ಲಿ ತೆಂಡೂಲ್ಕರ್‌ ಹೇಳಿಕೊಂಡಿದ್ದಾರೆ. ಕ್ರಿಕೆಟ್‌ ಬ್ಯಾಟ್‌ ಹಿಡಿಯುವ ಮುನ್ನ ಅವರ ಕೈಯಲ್ಲಿ ರ್‍್ಯಾಕೆಟ್ ಇತ್ತು.

ಗಾಲ್ಫ್‌ ಮೇಲೂ ಸಚಿನ್‌ ಪ್ರೀತಿ ಬೆಳೆಸಿಕೊಂಡಿದ್ದಾರೆ. ಗಾಲ್ಫ್‌ ಕೋರ್ಸ್‌ಗಳಿಗೆ ಪದೇ ಪದೇ ಭೇಟಿ ನೀಡುತ್ತಿರುತ್ತಾರೆ. ಕೋಲಾರದ ಬಳಿ ಇರುವ ಖಾಸಗಿ ಗಾಲ್ಫ್‌ ಕೋರ್ಸ್‌ ವೊಂದ ರಲ್ಲಿ ವಿಲ್ಲಾ ಖರೀದಿಸಿದ್ದಾರೆ ಎಂಬ ಸುದ್ದಿ ಇದೆ. ಅಹಮ ದಾಬಾದ್‌ನ ಗಾಲ್ಫ್‌ ಕೋರ್ಸ್‌ವೊಂದರಲ್ಲಿ ಕೂಡ ಅವರು ವಿಲ್ಲಾ ಖರೀದಿಸಿದ್ದಾರೆ. ವಿರಾಮದ ವೇಳೆ ಅಲ್ಲಿಗೆ ತೆರಳಿ ಗಾಲ್ಫ್‌ ಆಡುತ್ತಿರುತ್ತಾರೆ. ಬ್ಯಾಡ್ಮಿಂಟನ್‌ ಮೇಲೂ ಆಸಕ್ತಿ ಇದೆ.

ಸಚಿನ್‌ ಮಾತ್ರವಲ್ಲ; ಹೆಚ್ಚಿನ ಕ್ರೀಡಾಪಟುಗಳು ತಮ್ಮ ಕ್ಷೇತ್ರವಲ್ಲದೇ ಮತ್ತೊಂದು ಕ್ರೀಡೆ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಕೆಲವರು ಎರಡು ಕ್ರೀಡೆಗಳಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದ ಉದಾಹರಣೆಗಳಿವೆ. ಇನ್ನು ಕೆಲವರು ತಮ್ಮ ಕ್ರೀಡೆಯಿಂದ ನಿವೃತ್ತರಾದ ಮೇಲೆ ಮತ್ತೊಂದು ಕ್ರೀಡೆಯತ್ತ ಮುಖ ಮಾಡು ತ್ತಾರೆ. ಖುಷಿಗಾಗಿ, ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಅಥವಾ ನಿವೃತ್ತ ಜೀವನ ಸಾಗಿಸಲು ಈ ರೀತಿ ಮಾಡುತ್ತಾರೆ.

ಹೋದ ವರ್ಷ ಇಂಗ್ಲೆಂಡ್‌ನ ಕ್ರಿಕೆಟಿಗ ಆ್ಯಂಡ್ರ್ಯೂ ಫ್ಲಿಂಟಾಫ್‌ ಅವರು ವೃತ್ತಿಪರ ಬಾಕ್ಸಿಂಗ್‌ ಮೊರೆ ಹೋಗಿದ್ದರು. ಅದರಲ್ಲೂ ತಮ್ಮ ಚಾಕಚಕ್ಯತೆ ಮೆರೆದು ಸೈ ಎನಿಸಿಕೊಂಡಿದ್ದಾರೆ. ಆದರೆ ಅಮೆರಿಕದ ರಿಚರ್ಡ್‌ ಡಾಸನ್‌ ಎದುರಿನ ಸ್ಪರ್ಧೆ ವೇಳೆ ಅವರ ಭುಜಕ್ಕೆ ಗಂಭೀರ ಗಾಯವಾಗಿತ್ತು. ಅದಕ್ಕಾಗಿ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಯಿತು. 

ಫಾರ್ಮುಲಾ ಒನ್‌ ಮಾಜಿ ಚಾಂಪಿಯನ್‌ ಮೈಕಲ್‌ ಶುಮಾಕರ್‌ ಕೂಡ ತಮ್ಮ ನಿವೃತ್ತ ಜೀವನ ಸಾಗಿಸಲು ಮೊರೆ ಹೋಗಿದ್ದು ಸಾಹಸ ಕ್ರೀಡೆ ಸ್ಕೀಯಿಂಗ್‌ಗೆ. ಏಳು ಬಾರಿ ಚಾಂಪಿಯನ್‌ ಆಗಿ ವಿಶ್ವ ದಾಖಲೆ ಬರೆದಿರುವ ಶುಮಾಕರ್‌ ಅದೆಷ್ಟೊ ಯುವಕರ ಪಾಲಿಗೆ ಸ್ಫೂರ್ತಿಯ ಚಿಲುಮೆ. ವಿಶ್ವದಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದಾರೆ.

ಸ್ಕೀಯಿಂಗ್‌ ಕ್ರೀಡೆ ಮೇಲೆ ಜರ್ಮನಿಯ ಶುಮಾಕರ್‌ ಅಗಾಧ ಪ್ರೀತಿ ಹೊಂದಿದ್ದಾರೆ. ಆದರೆ ಇದೇ ಕ್ರೀಡೆ ಅವರ ಜೀವಕ್ಕೆ ಈಗ ಅಪಾಯ ತಂದೊಡ್ಡಿದೆ.
ಸ್ವಂತ ರೆಸಾರ್ಟ್‌ ಮಾಡಿಕೊಂಡು ಅದರಲ್ಲಿ ಈ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಫ್ರಾನ್ಸ್‌ನ ಮೆರಿಬಲ್‌ನಲ್ಲಿ ಈ ರೆಸಾರ್ಟ್‌ ಹೊಂದಿದ್ದಾರೆ. ಆದರೆ  20 ವರ್ಷಗಳ ತಮ್ಮ ಫಾರ್ಮುಲಾ ಒನ್‌ ರೇಸ್‌ ವೇಳೆ ಪುಟ್ಟ ಗಾಯ ಕೂಡ ಮಾಡಿಕೊಳ್ಳದ ಅವರು ಸ್ಕೀಯಿಂಗ್‌ನಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಒಂಬತ್ತು ವರ್ಷಗಳಿಂದ ಅವರು ತಮ್ಮನ್ನು ಸ್ಕೀಯಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು.

ಕಪಿಲ್‌ ದೇವ್‌ಗೆ ಗಾಲ್ಫ್‌ ಎಂದರೆ ಪಂಚಪ್ರಾಣ. ಹಲವು ಟೂರ್ನಿಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಜಯಿಸಿದ್ದಾರೆ. ಮಾಜಿ ನಾಯಕ ಸುನಿಲ್‌ ಗಾವಸ್ಕರ್‌ ಇಂಡಿಯನ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ ಮುಂಬೈ ಫ್ರಾಂಚೈಸ್‌ನ ಪಾಲುದಾರರಾಗಿದ್ದಾರೆ.  ರಾಹುಲ್‌ ದ್ರಾವಿಡ್‌ಗೆ ಹಾಕಿ ಮೇಲೆ ತುಂಬಾ ಪ್ರೀತಿ. ಶಾಲಾ ದಿನಗಳಲ್ಲಿ ಅವರು ಹಾಕಿ ಆಡುತ್ತಿದ್ದರು. ಭಾರತ ಕ್ರಿಕೆಟ್‌ ತಂಡದ ಯಶಸ್ವಿ ನಾಯಕ ದೋನಿ ಅವರು ಬಾಲ್ಯದಲ್ಲಿ ಒಲವು ಹೊಂದಿದ್ದು ಫುಟ್‌ಬಾಲ್‌ ಮೇಲೆ. ಸ್ಥಳೀಯ ಫುಟ್‌ಬಾಲ್‌ ಟೂರ್ನಿಗಳಲ್ಲಿ ಅವರು ಗೋಲ್‌ ಕೀಪರ್‌ ಆಗಿದ್ದರು. ಯಶಸ್ವಿ ವಿಕೆಟ್‌ ಕೀಪರ್‌ ಎನಿಸಿಕೊಳ್ಳಲು ಅವರಿಗೆ ಫುಟ್‌ಬಾಲ್‌ ಆಡಿದ್ದು ನೆರವಾಗಿದೆಯಂತೆ. ಅಷ್ಟೇ ಏಕೆ? ಮಹಿ ಅವರು ಸೂಪರ್‌ಬೈಕ್‌ ತಂಡ ಹೊಂದಿದ್ದಾರೆ. ಇದು ಹಲವು ಮೋಟಾರ್‌ ಸ್ಪೋರ್ಟ್ಸ್‌ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಯಶಸ್ವಿಯಾಗುತ್ತಿದೆ. ಇದರ ಹೆಸರು ‘ಮಹಿ ರೇಸಿಂಗ್‌ ಟೀಮ್‌ ಇಂಡಿಯಾ’ ಎಂದು.

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗರಾದ ಇಯಾನ್‌ ಬಾಥಂ ಹಾಗೂ ಡೆನಿಸ್‌ ಕಾಂಪ್ಟನ್‌ ಅವರು ಕ್ಲಬ್‌್ ಮಟ್ಟದಲ್ಲಿ ಫುಟ್‌ಬಾಲ್‌ ಆಡಿದವರು. ಆಸ್ಟ್ರೇಲಿಯಾದ ವೇಗಿ ಗ್ಲೆನ್‌ ಮೆಕ್‌ಗ್ರಾ ಅವರಿಗೆ ಬೇಟೆಯಾಡುವುದೆಂದರೆ ಪಂಚಪ್ರಾಣ. ಮತ್ತೊಬ್ಬ ವೇಗಿ ಬ್ರೆಟ್‌ಲೀ ಸಂಗೀತ ಪ್ರೇಮಿ. ಭಾರತ ಸೇರಿದಂತೆ ವಿವಿಧ ದೇಶಗಳಿಗೆ ತೆರಳಿ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಮ್ಯಾಥ್ಯು ಹೇಡನ್‌ ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಲೆಗ್‌ ಸ್ಪಿನ್ನರ್‌ ಅನಿಲ್‌ ಕುಂಬ್ಳೆಗೆ ಫೋಟೊಗ್ರಫಿ ಎಂದರೆ ತುಂಬಾ ಇಷ್ಟ. ರಿಕಿ ಪಾಂಟಿಂಗ್‌ಗೆ ಕುದುರೆ ಜೂಜು ಎಂದರೆ ಅಗಾಧ ಪ್ರೀತಿ. ಹಾಗಾಗಿಯೇ ಅವರಿಗೆ ‘ಪಂಟರ್‌’ ಎಂದು ಹೆಸರು ಬಂದಿದೆ.

ವೇಗದ ಓಟಗಾರರಾದ ಜಮೈಕಾದ ಉಸೇನ್‌ ಬೋಲ್ಟ್‌ ಹಾಗೂ ಯೋಹಾನ್‌ ಬ್ಲೇಕ್‌ ತಮ್ಮ ವಿರಾಮದ ಸಮಯದಲ್ಲಿ ಕ್ರಿಕೆಟ್‌ ಆಡುತ್ತಿರುತ್ತಾರೆ. ಬ್ಲೇಕ್‌ ಅವರ ಹೆಚ್ಚಿನ ಸ್ನೇಹಿತರು ಕ್ರಿಕೆಟ್‌ ಆಟಗಾರರು.  ಅಮೆರಿಕದ ಅಥ್ಲೀಟ್‌ ಮೇರಿಯನ್‌ ಜೋನ್ಸ್ ವಿಶ್ವವಿದ್ಯಾಲಯ ಮಟ್ಟದಲ್ಲಿ ಯಶಸ್ವಿ ಬ್ಯಾಸ್ಕೆಟ್‌ ಬಾಲ್‌ ಆಟಗಾರ್ತಿ ಎನಿಸಿಕೊಂಡಿದ್ದರು.

ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್‌ ಹಾಕಿಯಲ್ಲೂ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದಾರೆ. 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಪ್ರಯತ್ನಿಸಿದ್ದ ದಕ್ಷಿಣ ಆಫ್ರಿಕಾ ತಂಡದಲ್ಲಿ ರೋಡ್ಸ್‌ ಇದ್ದರು. ಆದರೆ ತಂಡ ಅರ್ಹತಾ ಹಂತದಲ್ಲಿ ಹೊರಬಿತ್ತು. ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಡಬ್ಲ್ತು.ಜಿ.ಗ್ರೇಸ್‌ ಅವರು 440 ಮೀಟರ್‌ ಹರ್ಡಲ್ಸ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದರು.

ಸ್ಕೀಯಿಂಗ್ ಎಂದರೇನು...?
ಸ್ಕೀಯಿಂಗ್‌ ಒಂದು ಸಾಹಸ ಕ್ರೀಡೆ. ಮನರಂಜನೆಗಾಗಿ ಈ ಕ್ರೀಡೆಯಲ್ಲಿ ಹೆಚ್ಚಿನವರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಸ್ಪರ್ಧೆ ಕೂಡ ನಡೆಯುತ್ತದೆ. ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಹಿಮದ ಮೇಲೆ ವೇಗವಾಗಿ ಚಲಿಸುವ ವಿಧಾನವನ್ನು ಸ್ಕೀಯಿಂಗ್‌ ಎನ್ನುತ್ತಾರೆ. ತಮ್ಮ ಷೂಗೆ ಸ್ಕೀ ಸಾಧನ ಕಟ್ಟಿಕೊಂಡು ಎರಡು ಕೋಲುಗಳ ನೆರವಿನಿಂದ ಹಿಮದ ಮೇಲೆ ಸ್ಕೇಟಿಂಗ್‌ ರೀತಿ ಜಾರುತ್ತಾ ಮುಂದೆ ಚಲಿಸಲಾಗುತ್ತದೆ. ವೇಗವಾಗಿ ತಲುಪಲು ಮಧ್ಯೆ ಮಧ್ಯೆ ಜಿಗಿಯಲೂಬಹುದು. ಭಾರಿ ಹಿಮಪಾತ ಬೀಳುವ ಪ್ರದೇಶಗಳಲ್ಲಿ ನಡೆದು ಹೋಗಲು ಹಿಂದೆ ಸ್ಕೀಯಿಂಗ್‌ ಬಳಸಲಾಗುತಿತ್ತು. ಮಿಲಿಟರಿ ಹಾಗೂ ಪ್ರವಾಸದ ಉದ್ದೇಶಗಳಿಗೆ ಇದು ನೆರವಾಗುತ್ತದೆ. 

ಸ್ಕೀಯಿಂಗ್‌ ಸ್ಪರ್ಧೆಯು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಕ್ರೀಡೆಗಳ ಪಟ್ಟಿಯಲ್ಲಿ ಸ್ಥಾನ ಕೂಡ ಪಡೆದಿದೆ. ಸ್ಕೀಯಿಂಗ್‌ನಲ್ಲಿ ಹಲವು ವಿಭಾಗಗಳಿವೆ. ಅಂತರರಾಷ್ಟ್ರೀಯ ಸ್ಕೀ ಫೆಡರೇಷನ್‌ ಸ್ಥಾಪಿಸಲಾಗಿದೆ.  ಹಿಮ ಪ್ರದೇಶಗಳಲ್ಲಿ ಹಲವು ತಿರುವುಗಳು, ಇಳಿಜಾರಿನ ಸ್ಥಳಗಳಿರುತ್ತವೆ. ಕಂದಕಗಳಿರುತ್ತವೆ. ಜೊತೆಗೆ ಅಲ್ಲಲ್ಲಿ ಬಂಡೆಕಲ್ಲುಗಳಿರುತ್ತವೆ. ಹಾಗಾಗಿ ಸ್ಕೀಯಿಂಗ್‌ ತುಂಬಾ ಅಪಾಯಕಾರಿ ಕ್ರೀಡೆ ಕೂಡ. ಕೊಂಚ ನಿಯಂತ್ರಣ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಫ್ರಾನ್ಸ್‌ನಲ್ಲಿ ಚಳಿಗಾಲದಲ್ಲಿ ನಡೆಯುವ ಸ್ಕೀಯಿಂಗ್‌ ಸ್ಪರ್ಧೆಗಳಲ್ಲಿ ಪ್ರತಿ ವರ್ಷ 24-26 ಸ್ಪರ್ಧಿಗಳು ಸಾವನ್ನಪ್ಪುತ್ತಾರೆ. ಇಲ್ಲಿ ಹಲವು ರೆಸಾರ್ಟ್‌ಗಳಲ್ಲಿ ಸ್ಕೀಯಿಂಗ್‌ ಸ್ಪರ್ಧೆ ಆಯೋಜಿಸಲಾಗುತ್ತದೆ. 2009ರಲ್ಲಿ ಖ್ಯಾತ ನಟಿ ನತಾಷಾ ರಿಚರ್ಡ್ಸನ್‌ ಅವರು ಮನರಂಜನೆಗಾಗಿ ಸ್ಕೀಯಿಂಗ್‌ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT