ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ವಿಘ್ನದಿಂದ ಪಾರಾದ ವಸುಂಧರೆ

Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಮಾಯನ್ ಕ್ಯಾಲೆಂಡರ್ ಕೊನೆಗೊಳ್ಳುವ ಡಿಸೆಂಬರ್ 21ರಂದು ಜಗತ್ತಿನಲ್ಲಿ ಪ್ರಳಯ ಸಂಭವಿಸಲಿದೆ ಎನ್ನುವುದು ಸುಳ್ಳಾದ ಬಳಿಕ ನಾಸಾ ಇನ್ನೊಂದು ಸಿಹಿ ಸುದ್ದಿ ಹೊರಗೆಡವಿದೆ.ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸುವ ಭೀತಿ ದೂರವಾಗಿದೆ ಎಂದು ಅದು ತಿಳಿಸಿದೆ.

2011 ಎಜಿ5 ಹೆಸರಿನ ಕ್ಷುದ್ರಗ್ರಹ 2040ರ ಫೆಬ್ರುವರಿಯಲ್ಲಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಶೇ 1ಕ್ಕಿಂತಲೂ ಕಡಿಮೆ ಎಂದು ನಾಸಾ ಹೇಳಿದೆ.

ಎರಡು ಫುಟ್‌ಬಾಲ್ ಕ್ರೀಡಾಂಗಣಗಳಷ್ಟು ದೊಡ್ಡದಾದ 140 ಮೀಟರ್ ವ್ಯಾಸದ ಕ್ಷುದ್ರಗ್ರಹ ಪೃಥ್ವಿ ಮೇಲೆ ಬೀಳುವ ಸಾಧ್ಯತೆ ಇದೆ ಎಂದು ಈ ಹಿಂದೆ ನಾಸಾದ ವಿಜ್ಞಾನಿಗಳೇ ಹೇಳಿದ್ದರು.

ಒಂದುವೇಳೆ ಈ ಕ್ಷುದ್ರಗ್ರಹ ಭೂಮಿ ಮೇಲೆ ಬಿದ್ದರೆ ಸುಮಾರು 100 ಮೆಗಾಟನ್‌ಗಳಷ್ಟು ಶಕ್ತಿ ಬಿಡುಗಡೆಯಾಗುತ್ತದೆ. ಎರಡನೇ ಮಹಾಯುದ್ದದಲ್ಲಿ ಬಳಸಿದ್ದ ಅಣುಬಾಂಬ್‌ಗಿಂತ ಸಾವಿರಾರು ಪಟ್ಟು ಅಧಿಕ ಪ್ರಮಾಣದಲ್ಲಿ ಪರಿಣಾಮ ಉಂಟು ಮಾಡುತ್ತದೆ. ಸುಮಾರು 10 ಸಾವಿರ ವರ್ಷಗಳಿಗೊಮ್ಮೆ ಈ ರೀತಿಯ ಕ್ಷುದ್ರಗ್ರಹಗಳು ಅಪ್ಪಳಿಸಿ ವಿನಾಶ ಉಂಟು ಮಾಡುತ್ತಿರುತ್ತವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಹವಾಯಿಯ ಮೌನಾ ಕೀ ಯಲ್ಲಿರುವ ಜೆಮಿನಿ ದೂರದರ್ಶಕದಿಂದ ಕ್ಷುದ್ರಗ್ರಹವನ್ನು ಅವಲೋಕಿಸಿದ್ದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು ಎಂದು ನಾಸಾದ ವಿಜ್ಞಾನಿಗಳಲ್ಲೊಬ್ಬರಾದ ರಿಚರ್ಡ್ ವೆನ್ಸಕೋಟ್ ತಿಳಿಸಿದ್ದಾರೆ.

`ಒಂದು ನಿರ್ದಿಷ್ಟ ವಸ್ತುವನ್ನು ದೂರದರ್ಶಕದಿಂದ ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಆದರೆ, ಜೆಮಿನಿ ದೂರದರ್ಶಕದಿಂದ ಇದು ಸಾಧ್ಯವಾಗಿದ್ದಕ್ಕೆ ಸಂತಸವಾಗಿದೆ' ಎಂದು ಅವರು ಹೇಳಿದ್ದಾರೆ.

ಜೆಮಿನಿ ದೂರದರ್ಶಕದಿಂದ 2012ರ ಅಕ್ಟೋಬರ್ 20, 21 ಮತ್ತು 27ರಂದು ಕ್ಷುದ್ರಗ್ರಹವನ್ನು ಗಮನಿಸಲಾಗಿತ್ತು. ಕ್ಷುದ್ರಗ್ರಹವನ್ನು ಪತ್ತೆ ಹಚ್ಚಿದ ಬಳಿಕ ಅನೇಕ ಬಾರಿ ಪರಿಶೀಲನೆ ನಡೆಸಲಾಗಿದೆ. ಈ ಕುರಿತ ಛಾಯಾಚಿತ್ರಗಳನ್ನು ಪರೀಕ್ಷಿಸಲಾಗಿದೆ. ಆದರೆ, ಅಂಕಿ-ಅಂಶಗಳನ್ನು ಗಮನಿಸಿದಾಗ ಸೂಕ್ತ ನಿರ್ಣಯಕ್ಕೆ ಬರಲು ಆಗುವುದಿಲ್ಲ ಮತ್ತು ಖಚಿತತೆ ಅಗತ್ಯ ಎಂದು ಅವರು ತಿಳಿಸಿದ್ದಾರೆ.

ಖಗೋಳಶಾಸ್ತ್ರಜ್ಞರಾದ ಡೇವಿಡ್ ಥೋಲೆನ್, ರಿಚರ್ಡ್ ವೇನ್ಸಕೋಟ್, ಮಾರ್ಕೊ ಮಿಚೆಲಿ ಮತ್ತು ಗಾರೆಟ್ ಎಲಿಯಟ್ ಈ ಕುರಿತು ಅಂಕಿ-ಅಂಶಗಳನ್ನು ವಿಶ್ಲೇಷಿಸಿದ್ದಾರೆ. ಅಲ್ಲದೇ ಕ್ಯಾಲಿಫೋರ್ನಿಯಾದ ಪಸೆಡೇನಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿ (ಜೆಪಿಎಲ್) ಯಲ್ಲಿಯೂ ವಿಶ್ಲೇಷಣೆ ನಡೆಸಲಾಗಿದ್ದು, `ಒಂದು ನಿರ್ದಿಷ್ಟ ಗ್ರಹದ ಪಥದ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಗ್ರಹವೊಂದರಿಂದ ಭವಿಷ್ಯದಲ್ಲಿ  ಭೂಮಿಗೆ ಅಪಾಯ ಇದೆ ಎಂದು ಊಹೆ ಮಾಡಲು ಆಗದು' ಎಂದು ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT