ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಮ್ಮೆ ಮುಖ್ಯಮಂತ್ರಿ: ಶೆಟ್ಟರ್ ವಿಶ್ವಾಸ

Last Updated 23 ಏಪ್ರಿಲ್ 2013, 9:10 IST
ಅಕ್ಷರ ಗಾತ್ರ

ಮುಂಡಗೋಡ: `ದೇವೆಗೌಡರು ಸಿದ್ದರಾಮಯ್ಯನವರನ್ನು ಸಿ.ಎಂ. ಮಾಡದಿದ್ದರಿಂದ ಅವರು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್‌ನವರು ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳಿ ಆಗ ಪಕ್ಷಕ್ಕೆ ಬರಮಾಡಿಕೊಂಡರು. ಈಗ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲು ಆಗುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಐದಾರು ಜನರು ಈಗಾಗಲೇ ಕೋಟ್ ಹೊಲಿಸಿಕೊಂಡು ಮುಖ್ಯಮಂತ್ರಿಯ ಕನಸು ಕಾಣುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

ಇಲ್ಲಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾಋ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. `ಅತೃಪ್ತಗೊಂಡಿರುವ ಎಸ್.ಎಂ.ಕೃಷ್ಣ ಅವರು ಪ್ರಚಾರಕ್ಕೆ ಬರದಿದ್ದರೆ ಜನರು ತಪ್ಪು ತಿಳಿದುಕೊಳ್ಳುತ್ತಾರೆ ಎಂದು ಮನವೊಲಿಸಿ ಬೆಂಗಳೂರಿನ ಕೆಲವೆಡೆ ಪ್ರಚಾರ ನಡೆಸಿದ್ದಾರೆ. ಪರಮೇಶ್ವರ, ಡಿ.ಕೆ.ಶಿವಕುಮಾರ ಸೇರಿದಂತೆ ಹಲವರು ಸಿ.ಎಂ. ರೇಸಿನಲ್ಲಿದ್ದಾರೆ.

ಬೊಮ್ಮಾಯಿ ಅವರ ನಂತರ ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಆಗುವ ಅವಕಾಶ ಕಡಿಮೆಯಾಗಿತ್ತು. ಆದರೆ ಕಳೆದ 9 ತಿಂಗಳು ಸ್ವಚ್ಛ ಹಾಗೂ ಭ್ರಷ್ಟಾಚಾರಮುಕ್ತ ಆಡಳಿತ ನೀಡಿದ್ದರಿಂದ ಮುಂದಿನ ಐದು ವರ್ಷಗಳವರೆಗೆ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಅವಕಾಶ ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ದೊರಕಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, `ಯಡಿಯೂರಪ್ಪನವರಿಗೆ ಪಕ್ಷ ಎಲ್ಲವನ್ನೂ ನೀಡಿತ್ತು. ಪಕ್ಷಕ್ಕೆ ಮೋಸ ಮಾಡುತ್ತಾರೆ ಎಂದು ನಾವು ಭಾವಿಸಿರಲಿಲ್ಲ. ಅಧಿಕಾರದ ಮದ, ದುರಹಂಕಾರ, ಸ್ವಯಂಕೃತ ಅಪರಾಧದಿಂದ ಹುದ್ದೆಯನ್ನು ತ್ಯಜಿಸಬೇಕಾಯಿತೇ ವಿನಃ ನಮ್ಮಿಂದ ಅಧಿಕಾರ ಕಳೆದುಕೊಂಡಿಲ್ಲ' ಎಂದರು.
ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.

ಶಾಸಕ ವಿ.ಎಸ್.ಪಾಟೀಲ ಮಾತನಾಡಿ, `ಯಲ್ಲಾಪುರ ಕ್ಷೇತ್ರದಲ್ಲಿ ಜನರು ಒಂದು ಸಾರಿ ಆರಿಸಿದ ಶಾಸಕರನ್ನೇ ಪದೇ ಪದೇ ಆರಿಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ. ಅಭಿವೃದ್ಧಿ ಅಧಾರದ ಮೇಲೆಯೆ ಜನರು ಪಕ್ಷವನ್ನು ಬೆಂಬಲಿಸಲಿದ್ದಾರೆ' ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸಾದ ಕಾರವಾರಕರ, ಶಂಭುಲಿಂಗ ಹೆಗಡೆ, ಉಮೇಶ ಬಿಜಾಪುರ, ನಾಗಭೂಷಣ ಹಾವಣಗಿ, ಪಿ.ಜಿ.ತಂಗಚ್ಚನ್, ಮಂಜುನಾಥ ಕಟಗಿ, ಸುಮನ್ ಕುಲಕರ್ಣಿ, ಎಸ್.ಪಿ.ಸಮ್ಮಸಗಿ, ಡಿ.ಎಫ್.ಮಡ್ಲಿ, ತುಕಾರಾಮ ಇಂಗಳೆ, ಬಿ.ಎಂರಾಯ್ಕರ, ಉಮೇಶ ಭಾಗ್ವತ, ಬಾಬಣ್ಣ ಇತರರು ಉಪಸ್ಥಿತರಿದ್ದರು. ಡಿ.ಜೆ.ಕುಲಕರ್ಣಿ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT