ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದಗಜ ತಾಂಡವ, ಮೈಸೂರು ತಲ್ಲಣ

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಬುಧವಾರ ಮುಂಜಾನೆ ಮದಗಜಗಳ ತಾಂಡವನೃತ್ಯ. ಕೇವಲ ದಸರಾ ಆನೆಗಳು, ಅರಮನೆಯ ಆನೆಗಳು, ಮಠದ ಆನೆಗಳನ್ನು ಮಾತ್ರ ನೋಡಿದ್ದ ಇಲ್ಲಿನ ಜನರು ಬೆಳ್ಳಂಬೆಳಿಗ್ಗೆ ಕಾಡಾನೆಗಳು ದಿಢೀರ್ ಪ್ರತ್ಯಕ್ಷವಾಗಿದ್ದನ್ನು ಕಂಡು ದಂಗಾಗಿ ಹೋದರು. ಮೊದಮೊದಲು ಈ ಆನೆಗಳು ನಾಡಾನೆಗಳೇ ಇರಬೇಕು ಎಂದುಕೊಂಡರೂ ಇವು ಕಾಡಾನೆಗಳು ಎಂದು ಗೊತ್ತಾಗುತ್ತಿದ್ದಂತೆ ಹೌಹಾರಿದರು.

ಇನ್ನೂ ಮಬ್ಬುಗತ್ತಲೆ ಇರುವ ಬೆಳಗಿನ 5.15ರ ವೇಳೆಗೆ ಸಯ್ಯಾಜಿರಾವ್ ರಸ್ತೆಯ ಆರ್‌ಎಂಸಿ ದೊಡ್ಡಮೋರಿ ಬಳಿ ಆನೆಗಳು ಪ್ರತ್ಯಕ್ಷವಾಗಿದ್ದನ್ನು ಕಂಡು ತಾವೂ ದಿಕ್ಕಾಪಾಲಾದರು. ಆನೆಯತ್ತ ಕಲ್ಲು, ಕೋಲುಗಳನ್ನು ಬಿಸಾಡಿ ಅವುಗಳನ್ನೂ ರೊಚ್ಚಿಗೆಬ್ಬಿಸಿದರು.

ಕಾಡಂಚಿನ ಗ್ರಾಮಗಳಲ್ಲಿ ಮಾಮೂಲಿಯಾಗಿದ್ದ ಕಾಡಾನೆಗಳ ದಾಳಿ ನಗರಕ್ಕೂ ಬಂತೇ ಎಂದು ಆತಂಕಕ್ಕೆ ಒಳಗಾದ ಜನರನ್ನು ನಿಯಂತ್ರಿಸುವುದೂ  ಜಿಲ್ಲಾಡಳಿತಕ್ಕೆ ದೊಡ್ಡ ಕಷ್ಟವಾಯಿತು. ಈ ಎರಡು ಆನೆಗಳ ದಾಂಧಲೆಗೆ  ವ್ಯಕ್ತಿಯೊಬ್ಬ ಬಲಿಯಾದರೆ ನಾಲ್ವರು ತೀವ್ರವಾಗಿ ಗಾಯಗೊಂಡರು. ಮೂರು ಹಸುಗಳೂ ಅಸುನೀಗಿದವು. ಕಾಲಿಗೆ ಸಿಕ್ಕ ದ್ವಿಚಕ್ರ ವಾಹನಗಳು, ಜೀಪ್, ಬಸ್ಸುಗಳನ್ನು ಜಖಂಗೊಳಿಸಿ ರೌದ್ರಾವತಾರವನ್ನು ಪ್ರದರ್ಶಿಸಿದವು.

ಬೆಳಿಗ್ಗೆ 5.15ರಿಂದ 9 ಗಂಟೆಯವರೆಗೆ ನಗರದಲ್ಲಿ ಆನೆ ನಡೆದಿದ್ದೇ ಹಾದಿಯಾಗಿತ್ತು. ಕಾಲಿಗೆ ಸಿಕ್ಕಿದ್ದನ್ನು ಧ್ವಂಸ ಮಾಡುತ್ತಿದ್ದವು. ಸುಖ ನಿದ್ದೆಯಿಂದ ಜನತೆ  ಕಣ್ಣು ಬಿಡುವಾಗಲೇ ಆನೆಗಳ ದಾಂಧಲೆಯ ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ ಇಡೀ ನಗರ ಆತಂಕದಲ್ಲಿ ಮುಳುಗಿತು. ಸಂಪೂರ್ಣ ನಗರದಲ್ಲಿ ಅಘೋಷಿತ ಕರ್ಫ್ಯೂ ಜಾರಿಗೊಂಡಿತು. ಆದರೆ ಆನೆಗಳು ಸಾಗುತ್ತಿದ್ದ ಮಾರ್ಗದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಅವುಗಳು ಕೆರಳಿದವು. ಪೊಲೀಸರಿಗೆ  ಜನರನ್ನು ನಿಯಂತ್ರಿಸುವುದೂ ಕಷ್ಟವಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಬೆಳಿಗ್ಗೆಯಿಂದ ನಡೆಸಿದ ಸತತ ಕಾರ್ಯಾಚರಣೆಯಲ್ಲಿ ಬೆಳಿಗ್ಗೆ 11.45ರ ವೇಳೆಗೆ ಮೊದಲ ಆನೆಯನ್ನು, ಸಂಜೆ 4 ರ ವೇಳೆಗೆ ಇನ್ನೊಂದು ಆನೆಯನ್ನು ಸೆರೆ ಹಿಡಿಯಲಾಯಿತು.

ನಾರಾಯಣಶಾಸ್ತ್ರಿ ರಸ್ತೆಯ ಬ್ಯಾಂಕ್ ಆಫ್ ಮಹಾರಾಷ್ಟ್ರದ ಎಟಿಎಂ ಕೇಂದ್ರದ ಭದ್ರತಾ ಸಿಬ್ಬಂದಿ ರೇಣುಕಾ ಸ್ವಾಮಿ (55) ಆನೆ ದಾಳಿಗೆ ತುತ್ತಾದವರು. ಬಂಬೂ ಬಜಾರ್‌ನ ಸಿದ್ದಮ್ಮ , ಸಣ್ಣಮ್ಮ , ಕುಂಬಾರಕೊಪ್ಪಲಿನ ಪವನ್ ಹಾಗೂ ಬೆಂಗಳೂರಿನ ಪವರ್‌ಲೂಮ್ ಉದ್ಯೋಗಿ ಬಾಲಕೃಷ್ಣ ಆನೆ ದಾಳಿಗೆ ಸಿಲುಕಿ ಗಾಯಗೊಂಡರು.

ಸಯ್ಯಾಜಿರಾವ್ ರಸ್ತೆಯ ಆರ್‌ಎಂಸಿ ದೊಡ್ಡಮೋರಿ ಬಳಿ ಬೆಳಿಗ್ಗೆ 5.15ರ ಸುಮಾರಿನಲ್ಲಿ ಅಂದಾಜು 5 ವರ್ಷದ ಹೆಣ್ಣಾನೆ ಹಾಗೂ ಸುಮಾರು 8  ವರ್ಷದ ಗಂಡಾನೆ  ಪ್ರತ್ಯಕ್ಷವಾದವು. ರಸ್ತೆಯಲ್ಲಿ ಜನರ ಓಡಾಟ ಹೆಚ್ಚಾಗುತ್ತಿದ್ದಂತೆ ಆನೆಗಳೆರಡು ಓಡತೊಡಗಿದವು. ಹೆಣ್ಣಾನೆ ಮೈಸೂರು-ಬೆಂಗಳೂರು ರಸ್ತೆಯತ್ತ ಮುಖ ಮಾಡಿದರೆ ಗಂಡಾನೆ ಬಂಬೂ ಬಜಾರ್‌ನತ್ತ ತೆರಳಿ ದಾರಿಹೋಕರ ಮೇಲೆ ಹರಿಹಾಯತೊಡಗಿತು.

ರಸ್ತೆಯಲ್ಲಿ ಆನೆ ಕಾಣುತ್ತಿದ್ದಂತೆ ಭಯಭೀತರಾದ ಜನ ದಿಕ್ಕಾಪಾಲಾಗಿ ಓಡತೊಡಗಿದರು. ಜೊತೆಗೆ ಆನೆಯತ್ತ ಕಲ್ಲು, ಬಡಿಗೆಗಳನ್ನು ಬೀಸಿದ್ದರಿಂದ ಆನೆಗಳು ಕೆರಳಿದವು.

ಬಂಬೂ ಬಜಾರ್‌ನಿಂದ ಮಿಷನ್ ಆಸ್ಪತ್ರೆಯತ್ತ ಹೆಜ್ಜೆ ಹಾಕಿದ ಗಂಡಾನೆ ರಸ್ತೆಯಲ್ಲಿ ನಡೆದು ಬರುತ್ತಿದ್ದ ಸಣ್ಣಮ್ಮನ ಮೇಲೆ ದಾಳಿ ನಡೆಸಿ, ಗಾಯಗೊಳಿಸಿತು. ಅಲ್ಲದೆ ಕಿವುಡು ಮತ್ತು ಅಂಧರ ಶಾಲೆ ಬಳಿ ರಸ್ತೆ ಬದಿಯಲ್ಲಿ ಕಟ್ಟಿಹಾಕಲಾಗಿದ್ದ ಹಸುಗಳ ಮೇಲೆ ದಾಳಿ ಮಾಡಿತು. ಸಯ್ಯಾಜಿರಾವ್ ರಸ್ತೆ  ಮೂಲಕ ಕೆ.ಆರ್.ವೃತ್ತಕ್ಕೆ ಆನೆ ಬಂದಾಗ ಕೆಎಸ್‌ಆರ್‌ಟಿಸಿ ಬಸ್ ಚಾಲಕ  ಗಾಬರಿಕೊಂಡು ವಾಹನವನ್ನು ರಸ್ತೆಬದಿಯಲ್ಲೆ ನಿಲ್ಲಿಸಿ ಪರಾರಿಯಾದ.

ನಾರಾಯಣಶಾಸ್ತ್ರಿ ರಸ್ತೆಯ ಬ್ಯಾಂಕ್ ಆಫ್ ಮಹಾರಾಷ್ಟ್ರ ಎಟಿಎಂ ಕೇಂದ್ರದಿಂದ ಕರ್ತವ್ಯ ಮುಗಿಸಿ 7 ಗಂಟೆ ಸುಮಾರಿನಲ್ಲಿ  ಹೊರಬಂದ ರೇಣುಕಾಸ್ವಾಮಿ ಮೇಲೆ ದಾಳಿ ನಡೆಸಿದ  ಪುಂಡಾನೆ ಮನಸೋ ಇಚ್ಛೆ ಸೊಂಡಿಲಿನಿಂದ ಎತ್ತಿಹಾಕಿ, ದಂತಗಳಿಂದ ತಿವಿಯಿತು. ಆಗ ಆತ ಸ್ಥಳದಲ್ಲೇ ಮೃತಪಟ್ಟರೂ ಆನೆ ಆರ್ಭಟ   ಮಾತ್ರ ತಣ್ಣಗಾಗಲಿಲ್ಲ.  ಮಹಾರಾಣಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ದಾಂಧಲೆ ನಡೆಸಿದ ಆನೆ ಬಳಿಕ ರಸ್ತೆಯಲ್ಲಿ ಜೀಪ್‌ವೊಂದರ ಮೇಲೆ ದಾಳಿ ನಡೆಸಿ ಜಖಂಗೊಳಿಸಿತು.  ಬಳಿಕ ಮೈಸೂರು ವಿಶ್ವವಿದ್ಯಾಲಯ ಕಾರ್ಯಸೌಧದ ಎದುರಿನ ಓವೆಲ್ ಮೈದಾನದೊಳಕ್ಕೆ ನುಗ್ಗಿತು. ವಾಯು ವಿಹಾರಕ್ಕೆ ಬಂದವರು ಆನೆ ಕಂಡು ಹೌಹಾರಿ  ದಿಕ್ಕಾಪಾಲಾಗಿ ಓಡಿ ಹೋದರು.

ಕಾಂಪೌಂಡ್ ಜಿಗಿಯಲು ಆನೆ ಯತ್ನಿಸಿತು. ಇದೇ ವೇಳೆಗೆ ಆನೆ ಬೆನ್ನತ್ತಿದ ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಚುಚ್ಚುಮದ್ದುಗಳನ್ನು ಕೋವಿಯ  ಸಹಾಯದಿಂದ ಹಾಕಿದರು. ಚುಚ್ಚುಮದ್ದಿಗೆ ಜಗ್ಗದ ಆನೆ ಮತ್ತೆ ರಸ್ತೆಯಲ್ಲಿ ಓಡಲು ಆರಂಭಿಸಿತು. ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ಒಳಹೊಕ್ಕು ಥ್ರೋಬಾಲ್ ನೆಟ್‌ನ್ನು ಕಿತ್ತುಹಾಕಿತು. ಈಜುಕೊಳದ ಬಳಿಯ ದೋಬಿ ಘಾಟ್‌ನ ಪೊದೆಯೊಂದರಲ್ಲಿ ಸೇರಿಕೊಂಡಿತು.

ಅರವಳಿಕೆ ಚುಚ್ಚುಮದ್ದು ನೀಡಿದ್ದರಿಂದ ಕೊನೆಗೂ ಗಂಡಾನೆ ಬೆಳಿಗ್ಗೆ 9 ಗಂಟೆ ಸುಮಾರಿನಲ್ಲಿ ನೆಲಕ್ಕೆ ಒರಗಿತು. ಅರಮನೆಯ ಮೂರು ದಸರಾ ಆನೆಗಳ  ಸಹಾಯದಿಂದ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೂರು ಗಂಟೆಗಳ ಕಾಲ ಸತತ ಪ್ರಯತ್ನದ ನಂತರ 11.45ರ ವೇಳೆಗೆ ಮರಿ ಆನೆಯನ್ನು ಹಿಡಿಯಲು ಸಫಲರಾದರು. ಆನೆ ಕಾಲಿಗೆ ಸರಪಳಿ, ಹಗ್ಗ ಹಾಕಿ ಎಳೆದೊಯ್ದರು.

ಅತ್ತ ಮೈಸೂರು-ಬೆಂಗಳೂರು ರಸ್ತೆಯ ಆರ್.ಎಸ್.ನಾಯ್ಡುನಗರದ ತೆಂಗಿನ ತೋಪಿನ ಒಳಗೆ ಕೆಸರಿನಲ್ಲಿ ಹೆಣ್ಣಾನೆ ಸಿಲುಕಿತು. ಅರವಳಿಕೆ ಚುಚ್ಚುಮದ್ದು ಹಾಕಿ, ಪಳಗಿದ ಆನೆಗಳಾದ ಅಭಿಮನ್ಯು, ಅರ್ಜುನ, ಗಜೇಂದ್ರ, ಶ್ರೀರಾಮನ  ಸಹಾಯದಿಂದ ಸಾಯಂಕಾಲ 4ರ ವೇಳೆಗೆ ಹೆಣ್ಣಾನೆಯನ್ನು ಸೆರೆಹಿಡಿಯುವಲ್ಲಿ  ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾದರು. ಸೆರೆ ಸಿಕ್ಕ ಆನೆಗಳನ್ನು ಬಂಡೀಪುರ ಇಲ್ಲವೆ ನಾಗರಹೊಳೆ ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ  ಅಧಿಕಾರಿಗಳು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT