ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದಗದ ಕೆರೆಯ ಐತಿಹಾಸಿಕ ಕಿಟ್ಟದಹಳ್ಳಿ

Last Updated 24 ಮಾರ್ಚ್ 2011, 8:10 IST
ಅಕ್ಷರ ಗಾತ್ರ

ಜೀವಜಲದ ಸುತ್ತ ಜನಜೀವನ ಬೆಳೆದು ಬಂದಿರುವ ಹಾಗೆ, ಶಿಕಾರಿಪುರ ತಾಲ್ಲೂಕಿನ ಐತಿಹಾಸಿಕ ಮದಗದ ಕೆರೆಯ ಹಿನ್ನೀರು ಪ್ರದೇಶದಲ್ಲಿ ಬೆಳೆದು ನಿಂತಿರುವ ಕಿಟ್ಟದಹಳ್ಳಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಬೆಳೆದು ನಿಂತಿದ್ದರೂ ಸಾಂಸ್ಕೃತಿಕವಾಗಿ ವಿಭಿನ್ನ ಅಭಿರುಚಿ ಹೊಂದಿರುವ ಗ್ರಾಮಗಳಲ್ಲಿ ಒಂದಾಗಿದೆ.

ಐತಿಹಾಸಿಕ ಕೆರೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ ಎನ್ನುವ ಜಾನಪದ ಹಾಡನ್ನು ನಾಡಿನ ಎಲ್ಲರೂ ಕೇಳಿರುತ್ತಾರೆ. ಇಂತಹ ಹಾಡಿಗೆ ಕಾರಣವಾದ ಕೆರೆಯೇ ಇಲ್ಲಿರುವುದು. ಕಣ್ಣು ಹಾಸಿದಷ್ಟು ದೂರದವರೆಗೂ ನೀರು ಕಾಣುವಷ್ಟು ವಿಸ್ತಾರವಾದ ಕೆರೆ ಇದಾಗಿದ್ದು ಇದನ್ನು ‘ಮದಗದ ಕೆಂಚಮ್ಮನ ಕೆರೆ’ ಎಂದು ಕರೆಯುತ್ತಾರೆ.

ಕೆರೆ ಕಟ್ಟಿಸಿದರೂ ನೀರು ಬಾರದಿದ್ದ ಕಾರಣಕ್ಕೆ ಕೆರೆ ಕಟ್ಟಿಸಿದ ಮಾಸೂರು ಮಲ್ಲನಗೌಡ್ರು ದೇವರನ್ನು ಕೇಳಿಸಿದಾಗ ಸೊಸೆಯನ್ನು ಬಲಿಕೊಟ್ಟರೆ ಮಾತ್ರ ನೀರು ನಿಲ್ಲುತ್ತದೆ ಎಂದಿದ್ದಕ್ಕಾಗಿ ‘ಕೆಂಚಮ್ಮ’ನನ್ನು ಬಲಿಕೊಟ್ಟಿರುವ ಐತಿಹಾಸಿಕ ಪ್ರತೀತಿ, ಜನಪದ ಹಾಡುಗಳು ಚಾಲ್ತಿಯಲ್ಲಿವೆ.

ಜಮೀನು ಮುಳುಗಡೆ ಸಮಸ್ಯೆ

ಸಾವಿರಾರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಮದಗದ ಕೆಂಚಮ್ಮನ ಕೆರೆಗೆ ಮಳೆಗಾಲದಲ್ಲಿ ಹರಿದು ಬರುವ ನೀರು ಅತ್ಯಂತ ಅದ್ಭುತವಾದದ್ದು. ಆಯನೂರು, ಕುಂಸಿ, ರಿಪ್ಪನಪೇಟೆ, ಕೊಣಂದೂರು ಪ್ರದೇಶದಲ್ಲಿ ಸುರಿಯುವ ಮಳೆಯ ನೀರು ಕುಮದ್ವತಿ ನದಿಯ ಮೂಲಕ ಇಲ್ಲಿಗೆ ಹರಿದು ಬರುವುದರಿಂದ ಮಳೆಗಾಲದಲ್ಲಿ ಇಲ್ಲೊಂದು ಸಣ್ಣ ಸಮುದ್ರವೇನಿರ್ಮಾಣಗೊಂಡಂತಿರುತ್ತದೆ.ಕೆರೆಯಲ್ಲಿ ನಿಲ್ಲುವ ನೀರಿನಿಂದಾಗಿ ಸುತ್ತಮುತ್ತಲಿನ ಐನೂರಕ್ಕೂ ಹೆಚ್ಚು ಎಕರೆ ಕೃಷಿ ಪ್ರದೇಶ ಮುಳುಗಡೆಯಾಗುತ್ತದೆ. ಇದರಿಂದಾಗಿ ರೈತರು ತೀವ್ರ ಸಮಸ್ಯೆಯನ್ನು ಎದುರಿಸುತ್ತಾರೆ. ಅಲ್ಲದೇ ಮೀನುಗಾರರೂ ಹೆಚ್ಚಿನ ಮಳೆಯಿಂದ ತಮ್ಮ ಚಟುವಟಿಕೆಯನ್ನು ಸ್ಥಗಿತಗೊಳಿಸುವಂತಾಗುತ್ತದೆ.

ಕೃಷಿ, ಮೀನುಗಾರಿಕೆ
ಸಮುದ್ರಕ್ಕೆ ನೆಂಟಸ್ತನ, ಉಪ್ಪಿಗೆ ಬಡತನ ಎನ್ನುವ ಗಾದೆಯಂತೆ, ಕೆರೆ ಅಂಚಿನಲ್ಲಿಯೇ ಗ್ರಾಮವಿದ್ದರೂ ಕೃಷಿ ಬಳಕೆಗೆ ಕೆರೆಯ ನೀರು ಸಿಗುವುದಿಲ್ಲ, ಇಲ್ಲಿನ ಜನರು ಬೋರ್‌ವೆಲ್ ನೀರನ್ನು ನಂಬಿಕೊಂಡು ಕೃಷಿಯನ್ನು ನಡೆಸುತ್ತಾರೆ.

ಮೆಕ್ಕೆಜೋಳ, ಭತ್ತ, ಬಾಳೆ ಪ್ರಮುಖ ಬೆಳೆಯಾಗಿದ್ದು, ಇಲ್ಲಿನ ಕೆಲವು ರೈತರು ಸಾವಯವ ಪದ್ಧತಿಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಸಗಣಿ, ಗೋಮೂತ್ರ, ಹಸಿರು ಎಲೆಗಳ ಬಳಕೆ ಮೂಲಕ ತೋಟಗಾರಿಕೆ ಕೃಷಿಯನ್ನು ಗಂಗಾಧರಸ್ವಾಮಿ ಹಿರೇಮಠ, ಎಂ.ಲೋಕೇಶಪ್ಪ, ಹನುಮಂತರಾಯಗೌಡ್ರು ಮಾಡುತ್ತಿದ್ದು, ಶೂನ್ಯ ಬಂಡಾವಾಳ ಕೃಷಿಯ ಬಗ್ಗೆ ಇತರೆ ರೈತರಿಗೂ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ.

ಕೆರೆಗೆ ಹೊಂದಿಕೊಂಡಿರುವ ಪ್ರದೇಶವಾದ ಖವಾಸಪುರದಲ್ಲಿ ವಾಸವಾಗಿರುವ ಮುಸ್ಲಿಂ, ಬಣಜಾರ್, ಮೀನುಗಾರರು ಕೆರೆಯಲ್ಲಿ ಮೀನು ಹಿಡಿಯುವ ಕೆಲಸದಲ್ಲಿ ತೊಡಗಿದ್ದಾರೆ. ಕುಟುಂಬದ ಗಂಡು ಮಕ್ಕಳು ಮೀನನ್ನು ಹಿಡಿದು ತಂದರೆ, ಮಹಿಳೆಯರು ಪಕ್ಕದ ಮಾಸೂರು, ಶಿಕಾರಿಪುರದ ಪೇಟೆಗೆ ಅವನ್ನು ತಂದು ಮಾರಾಟ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.
ಸೌಲಭ್ಯ ವಂಚಿತ ಗ್ರಾಮ

ಶಿಕಾರಿಪುರದಿಂದ ಮಾಸೂರು, ಹಾವೇರಿ ತೆರಳುವ ಮುಖ್ಯ ರಸ್ತೆಯಲ್ಲಿ ಇದ್ದರೂ ಈ ಗ್ರಾಮ ಹಲವು ಸರ್ಕಾರಿ ಸೌಲಭ್ಯಗಳಿಂದ ವಂಚನೆಗೆ ಒಳಗಾಗಿದೆ. ಸುತ್ತಲೂ ಸಣ್ಣ ಹಳ್ಳಿಗಳನ್ನು ಒಳಗೊಂಡಿರುವ ಇಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಸ್ಥಾಪನೆ ಅತ್ಯಂತ ಅಗತ್ಯವಾಗಿದ್ದರೂ ಈವರೆಗೆ ಇದು ಸಾಧ್ಯವಾಗಿಲ್ಲ. ಅಲ್ಲದೇ ಸರ್ಕಾರಿ ಆಸ್ಪತ್ರೆಯೂ ಕೂಡ ಮತ್ತಿಕೋಟೆ ಗ್ರಾಮದಲ್ಲಿ ಸ್ಥಾಪಿತಗೊಂಡಿದ್ದು, ಇಲ್ಲಿನ ಜನರು ತಮ್ಮ ಆರೋಗ್ಯ ಸೇವೆಗಾಗಿ ಶಿಕಾರಿಪುರ ಪಟ್ಟಣವನ್ನೇ ಅವಲಂಬಿಸುವಂತಾಗಿದೆ.

ಕಳೆದ ವರ್ಷ ಗ್ರಾಮಕ್ಕೆ ಹೈಸ್ಕೂಲು ಮಂಜೂರಾತಿಯಾಗಿದ್ದು ಕೇವಲ ಎರಡು ಕೊಠಡಿಗಳಿಗೆ ಸೀಮಿತಗೊಂಡಿದ್ದು, ಇಲ್ಲಿ ಹೆಚ್ಚಿನ ಕೊಠಡಿಗಳ ಆವಶ್ಯಕತೆ ಇದೆ ಎನ್ನುವುದು ಗ್ರಾ.ಪಂ. ಉಪಾಧ್ಯಕ್ಷೆ ರತ್ನಮ್ಮ ಅಭಿಪ್ರಾಯವಾಗಿದೆ.

ಸೌಲಭ್ಯಗಳು
ರೈತರು ಹಲವಾರು ವರ್ಷಗಳಿಂದ ಎದುರಿಸುತ್ತಿದ್ದ ವಿದ್ಯುತ್ ವಿತರಣೆ ಕೊರತೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಗ್ರಾಮದ ಹೊರವಲಯದಲ್ಲಿ 110ಕೆ.ವಿ. ವಿದ್ಯುತ್ ಮರುಪ್ರಸರಣ ಕೇಂದ್ರ ನಿರ್ಮಾಣಗೊಂಡಿರುವುದರಿಂದ ಗ್ರಾಮದ ಜನರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುವ ಭರವಸೆ ಹೊಂದಿದ್ದಾರೆ.ಗ್ರಾಮದಲ್ಲಿ ನಿರ್ಮಾಣಗೊಂಡಿರುವ ವಿದ್ಯುತ್ ವಿತರಣೆ ಕೇಂದ್ರದಿಂದಾಗಿ ಗ್ರಾಮದ ಹಲವರಿಗೆ ಉದ್ಯೋಗ ಸಿಗುವ ಭರವಸೆಯನ್ನೂ ಗ್ರಾಮಸ್ಥರು ಹೊಂದಿದ್ದಾರೆ.

ಹೈನುಗಾರಿಕೆಯೂ ಇಲ್ಲಿನ ಕೃಷಿಕರ ಉಪ ಆರ್ಥಿಕ ಚಟುವಟಿಕೆಯಾಗಿದೆ. ಇಲ್ಲಿನ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಸರ್ಕಾರಿ ಪಶು ಆರೋಗ್ಯ ಕೇಂದ್ರವಿದ್ದು ಸುತ್ತಲಿನ ಗ್ರಾಮಸ್ಥರೂ ಇದರ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ.

ಶ್ರಮಜೀವಿಗಳು
ಗ್ರಾಮದ ರೈತರು ಶ್ರಮಜೀವನಕ್ಕೆ ಅತ್ಯಂತ ಉತ್ತಮ ಮಾದರಿಯಾಗಿದ್ದಾರೆ. ಬೇಸಿಗೆಯಲ್ಲೂ ಉತ್ತಮ ಬೆಳೆ ತೆಗೆಯುವುದು ಇದಕ್ಕೆ ಸಾಕ್ಷಿಯಾಗಿದೆ. ರೈತ ಮಹಿಳೆಯರು ಬಿಡುವಿನ ವೇಳೆಯನ್ನು ಹಪ್ಪಳ ತಯಾರಿಕೆ, ಹುಣಸೇಹಣ್ಣು ಬಿಡುಸುವಿಕೆ, ಮನೆಯಂಗಳದ ಸ್ವಚ್ಚತೆಗಾಗಿ ಮೀಸಲಿಡುವುದು ಇಲ್ಲಿನ ಮಹಿಳೆಯರ ವಿಶೇಷ.ಕೆರೆಯಲ್ಲಿ ಬಟ್ಟೆ ತೊಳೆಯುವ, ಬೇಸಿಗೆಗೆ ಕೆರೆಯಲ್ಲಿ ಈಜಾಡುವ ಮೂಲಕ ತಮ್ಮ ಬಿಡುವಿನ ವೇಳೆಯನ್ನು ಕಳೆಯುವ ಬಾಲಕರು ನಿತ್ಯ ಇಲ್ಲಿ ಕಾಣಸಿಗುತ್ತಾರೆ.

ಸಾಮರಸ್ಯದ ಪ್ರತೀಕ
ಹಲವಾರು ಜಾತಿ ಮತಗಳು ಇಲ್ಲಿ ನೆಲೆಗೊಂಡಿದ್ದರೂ ಇಲ್ಲಿರುವ ಸಿದ್ದರೂಢ ಮಠ ಮಾತ್ರ ಎಲ್ಲ ಜಾತಿಗಳ ಜನರನ್ನು ಒಂದಾಗಿಸಿದೆ. ಹಲವು ದಶಕಗಳ ಹಿಂದೆ ಇಲ್ಲಿದ್ದ ಮಹಾದೇವ ಅವಧೂತರು ಇಲ್ಲಿನ ಜನರ ಕಷ್ಟ-ಕಾರ್ಪಣ್ಯಕ್ಕೆ ಸ್ಪಂದಿಸುತ್ತಾ, ಸಾಂತ್ವನ ನುಡಿಗಳ ಮೂಲಕ ಮನೆ ಮಾತಾಗಿದ್ದರಲ್ಲದೇ ಗ್ರಾಮದ ಸಾಮರಸ್ಯಕ್ಕೆ ಒತ್ತಾಸೆಯಾಗಿ ನಿಂತಿದ್ದರಿಂದಾಗಿ ಇಲ್ಲೊಂದು ಮಠ ಸ್ಥಾಪನೆಗೊಂಡಿದೆ. ಇದನ್ನು ಸಿದ್ದಾರೂಢರ ಮಠವೆಂದು ಕರೆಯುತ್ತಾರೆ.

ಮಠದಲ್ಲಿರುವ ಮಹಾದೇವ ಅವಧೂತರ ಗದ್ದುಗೆಗೆ ಪೂಜೆ ನಡೆಯುತ್ತದೆ. ನಿತ್ಯ ಭಕ್ತರು ಇಲ್ಲಿಗೆ ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ವಿಶೇಷ ದಿನಗಳಲ್ಲಿ ನೂರಾರು ಭಕ್ತರು ಒಂದೆಡೆ ಸೇರಿ, ಭಜನೆ, ಹರಿಕಥೆ ನಡೆಸುವ ಮೂಲಕ ಗ್ರಾಮದ ಸಾಮರಸ್ಯಕ್ಕೆ ಸಾಕ್ಷಿಯಾಗುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT