ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದನಪಲ್ಲಿಗೆ ಶೀಘ್ರ ರೈಲು ಸಂಪರ್ಕ

Last Updated 30 ಅಕ್ಟೋಬರ್ 2011, 9:50 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಶ್ರೀನಿವಾಸಪುರದಿಂದ ಆಂಧ್ರಪ್ರದೇಶದ ಮದನಪಲ್ಲಿಗೆ 75 ಕಿ.ಮೀ ರೈಲು ಮಾರ್ಗವನ್ನು ರೂ. 300 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಮಾರ್ಗದ ನಿರ್ಮಾಣ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿ ರೂ. 1.60 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ರೈಲು ನಿಲ್ದಾಣವನ್ನು ಶನಿವಾರ ಅಧಿಕಾರಿಗಳೊಂದಿಗೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೊಲಾರ ಯಲಹಂಕ ರೈಲು ಮಾರ್ಗ ನಿರ್ಮಾಣ ಕಾಮಗಾರಿಯನ್ನು ಜೂನ್ ತಿಂಗಳ ಒಳಗೆ ಪೂರ್ಣಗೊಳಿಸಲಾಗುವುದು. ಅನಂತರ ರೈಲು ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮಾರ್ಗದಲ್ಲಿ ರೈಲು ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ. ಬಸ್ ಪ್ರಯಾಣ ದರದ ಶೇ. 20 ರಷ್ಟನ್ನು ಮಾತ್ರ ಪ್ರಯಾಣಿಕರು ಭರಿಸಬೇಕಾಗುತ್ತದೆ. ಸರಕು ಸಾಗಣೆಗೂ ಅಷ್ಟೆ ಲಾರಿ ಬಾಡಿಗೆಯ ಶೇ. 20 ರಷ್ಟನ್ನು ಮಾತ್ರ ಸೇವಾ ದರವನ್ನಾಗಿ ನಿಗದಿಪಡಿಸಲಾಗುವುದು.

ಇದರಿಂದ ತಾಲ್ಲೂಕಿನ ಮಾವು ಬೆಳೆಗಾರರು ದೇಶದ ಯಾವುದೇ ನಗರದ ಮಾರುಕಟ್ಟೆಗೆ ತಮ್ಮ ಉತ್ಪನ್ನವನ್ನು ಕಡಿಮೆ ಬಾಡಿಗೆಯಲ್ಲಿ ಸಾಗಿಸಬಹುದಾಗಿದೆ. ತರಕಾರಿ ಮತ್ತಿತರ ಉತ್ಪನ್ನಗಳ ಸಾಗಾಣಿಕೆಗೂ ಇದು ಅನ್ವಯವಾಗುವುದು ಎಂದು ಹೇಳಿದರು.

ಮಾರ್ಗ ನಿರ್ಮಾಣ ಕಾಮಗಾರಿಯ ಗುಣಮಟ್ಟ ಮತ್ತು ಕಾಮಗಾರಿಯ ವಿವಿಧ ಹಂತಗಳನ್ನು ಪರಿಶೀಲಿಸುವ ದೃಷ್ಟಿಯಿಂದ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತಾವು ನಿರ್ಮಾಣ ಮಾರ್ಗದ ಉದ್ದಕ್ಕೂ ಪರಿಶೀಲನೆ ನಡೆಸಿದ್ದಾಗಿ ತಿಳಿಸಿದ ಅವರು, ಇಲ್ಲಿನ ರೈಲು ನಿಲ್ದಾಣವನ್ನು ನವೀನ ವಿನ್ಯಾಸದಿಂದ ನಿರ್ಮಿಸಲಾಗಿದೆ. ಪ್ರಯಾಣಿಕರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಗುಣಮಟ್ಟ ಕಾಪಾಡಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಅಕ್ಬರ್ ಷರೀಫ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ಕಾಂಗ್ರೆಸ್ ಮುಖಂಡರಾದ ಬಿ.ವೆಂಕಟರೆಡ್ಡಿ, ನರಸಿಂಹಯ್ಯ, ಸಿ.ಮುನಿವೆಂಕಟಪ್ಪ, ರಾಮಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳಾದ ಆದೇಶ್ ಶರ್ಮಾ, ಸಂದೀಪ್ ಮೆಹರಾ, ಮೌರ್ಯ, ಲಕ್ಷ್ಮಣ್ ಸಿಂಗ್, ಅಮರ್ ಗುಂಡಪ್ಪ ಮತ್ತಿತರರು ಸಚಿವರಿಗೆ ಅಗತ್ಯ ಮಾಹಿತಿ ಒದಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT