ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಕೊಟ್ಟ ಕಷ್ಟ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೊದಲೇ ಕೆಂಪಗಾಗಿದ್ದ ನಿರ್ಮಾಪಕ ರೆಹಮಾನ್ ಕಣ್ಣುಗಳಲ್ಲಿ ತೇವವಿತ್ತು. `ಯಜಮಾನ~ ಚಿತ್ರ ನಿರ್ಮಿಸಿ ಅದ್ಭುತ ಯಶಸ್ಸನ್ನು ಕಂಡ ನಂತರ ಅವರು ಕೈಹಾಕಿದ ಚಿತ್ರಗಳು ನೆಲಕಚ್ಚಿದ್ದೇ ಹೆಚ್ಚು. `ಜಿಲ್ಲಾಧಿಕಾರಿ~, `ಪ್ರೀತಿ ಮಾಡಬಾರದು~ ಚಿತ್ರಗಳು ಸಂಕಷ್ಟದಲ್ಲಿದ್ದಾಗ ಅವರ ನೆರವಿಗೆ ಧಾವಿಸಿದ್ದ ನಿರ್ಮಾಪಕ ಕೆ.ಮಂಜು ಈ ಸಲವೂ ಸಹಾಯಹಸ್ತ ಚಾಚಿದ್ದಾರೆ.

ನಟ ಗಣೇಶ್ ವೃತ್ತಿಬದುಕಿನ ಉಯ್ಯಾಲೆ ಅತ್ತಿತ್ತ ಆಡುತ್ತಿರುವುದಕ್ಕೆ ಹಲವು ತಿಂಗಳಿಂದ ಸಾಕ್ಷಿಯಾಗಿ ಡಬ್ಬದಲ್ಲೇ ಉಳಿದಿರುವ `ಮದುವೆ ಮನೆ~ ಮುಂದಿನ ತಿಂಗಳ ಮೊದಲ ವಾರ ಬಿಡುಗಡೆಯಾಗಲಿದೆ ಎನ್ನುವುದು ಸುದ್ದಿ. ರೆಹಮಾನ್‌ಗೆ ಈ ಸಲವೂ ಹಣಕಾಸಿನ ಮುಗ್ಗಟ್ಟು ಒದಗಿತ್ತು. ಅವರಿಗೆ ಕೆ.ಮಂಜು ಸುಮಾರು 75 ಲಕ್ಷ ರೂಪಾಯಿಯಷ್ಟು ಹಣಕಾಸು ಒದಗಿಸಿದ್ದಾರೆ.

ವ್ಯಾವಹಾರಿಕ ಚೌಕಟ್ಟು ಇದ್ದರೂ ಕಷ್ಟದಲ್ಲಿ ಅವರು ನೆರವು ನೀಡಿದರು ಎಂಬುದು ರೆಹಮಾನ್ ಅವರಿಗೆ ಸಮಾಧಾನದ ಸಂಗತಿಯಾಗಿದೆ. `ಈ ಚಿತ್ರ ಚೆನ್ನಾಗಿ ಓಡಲಿ. ರೆಹಮಾನ್ ಹಣ ಮಾಡಿಕೊಳ್ಳಲಿ. ಆಮೇಲೆ ಚಿತ್ರನಿರ್ಮಾಣ ನಿಲ್ಲಿಸಲಿ~ ಎಂದು ಮಂಜು ಕಿವಿಮಾತು ಹೇಳಿದರು.

ಚಿತ್ರದ ಐದು ಹಾಡುಗಳನ್ನು ತೋರಿಸಿದ ನಂತರ ಮಾತನಾಡಿದ ನಿರ್ದೇಶಕ ಸುನಿಲ್‌ಕುಮಾರ್ ಸಿಂಗ್ ಇದುವರೆಗೆ ಆರು ಮೆಗಾ ಧಾರಾವಾಹಿಗಳನ್ನು ನಿರ್ದೇಶಿಸಿದ ಅನುಭವವನ್ನು ಬೆನ್ನಿಗಿಟ್ಟುಕೊಂಡಿದ್ದಾರೆ.

ಒಳ್ಳೆಯ ಚಿತ್ರದ ಬಜೆಟ್ ಕೂಡ ಹೆಚ್ಚಾಗಿಯೇ ಇರುತ್ತದೆ. ಅದು ಅನಿವಾರ್ಯ. ಈ ಚಿತ್ರದ ಮೇಲೂ ಸಾಕಷ್ಟು ಹಣ ಹರಿಸಿದ್ದೇವೆ. ಚಿತ್ರದ ಕುರಿತು ಉದ್ಯಮದವರು ಒಳ್ಳೆಯ ಮಾತುಗಳನ್ನಾಡುತ್ತಿರುವುದು ಭರವಸೆ ಮೂಡಿಸಿದೆ ಎಂದು ನಿರ್ಮಾಪಕ ರೆಹಮಾನ್ ಭಾವುಕರಾದರು. ಕಷ್ಟಕಾಲದಲ್ಲಿ ನೆರವಾಗಿರುವ ಕೆ.ಮಂಜು ತಮ್ಮ ಪ್ರಾಣ ಸ್ನೇಹಿತ ಎಂದು ಕೂಡ ಅವರು ಮಾತು ಸೇರಿಸಿದರು.

`ಕೂಲ್~ ಸೋಲಿನ ನಂತರ ನಟ ಗಣೇಶ್ ಕೂಡ ಒಂದು ಗೆಲುವಿಗಾಗಿ ಹಾತೊರೆವಂತಾಗಿದೆ. `ಮದುವೆ ಮನೆ~ ಆ ಚಿತ್ರ ಆದೀತೆ ಎಂಬ ನಿರೀಕ್ಷೆ ಬೆರೆತ ಪ್ರಶ್ನೆ ಅವರದ್ದು. ಚಿತ್ರದಲ್ಲಿ ತಮ್ಮದು ಭಿನ್ನ ಪಾತ್ರ ಎಂದು ಎದೆಮುಟ್ಟಿಕೊಂಡು ಹೇಳಿದ ಅವರು ಮನರಂಜನೆಗೆ ಕೊರತೆಯಿಲ್ಲವೆಂಬ ಖಾತರಿಯನ್ನೂ ನೀಡಿದರು.

ಔಪಚಾರಿಕವಾಗಿಯಷ್ಟೇ ನಡೆದ ಗೋಷ್ಠಿಯಲ್ಲಿ ನಾಯಕಿ ಶ್ರದ್ಧಾ ದಾಸ್ ಕೂಡ ಇರಲಿಲ್ಲ. ಗಣೇಶ್ ಸೂಚಿಸಿದ ಕಾರಣಕ್ಕೆ ಮಂಜು ಚಿತ್ರದ ವಿತರಣೆಯ ಹಕ್ಕನ್ನು ಪಡೆದಿದ್ದಾರೆ. ಸಿನಿಮಾ ಚೆನ್ನಾಗಿ ಬಂದಿದೆ ಎಂಬ ಸರ್ಟಿಫಿಕೇಟನ್ನು ಅವರು ಕೊಟ್ಟರು.

ಗಣೇಶ್, ರೆಹಮಾನ್, ನಿರ್ದೇಶಕ ಸುನಿಲ್‌ಕುಮಾರ್ ಸಿಂಗ್- ಈ ಮೂವರಿಗೂ `ಮದುವೆ ಮನೆ~ ಬೇರೆಬೇರೆ ಕಾರಣಗಳಿಗಾಗಿ ತುಂಬಾ ಮುಖ್ಯವಾದ ಚಿತ್ರವಂತೂ ಹೌದು. ಪ್ರೇಕ್ಷಕ ಅದಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾನೆಂಬುದು ಉಳಿದಿರುವ ಪ್ರಶ್ನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT