ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಗಳು ಸ್ವರ್ಗದಲ್ಲಿ ನಡೆದರೂ ಬದುಕು ಮಾತ್ರ ನರಕ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅದ್ಯಾಕೋ ಗೊತ್ತಿಲ್ಲ, ಮಕ್ಕಳೆಂಬ ಸ್ವಾರ್ಥ, ಹೆತ್ತವರನ್ನು ಕಟ್ಟಿಹಾಕುತ್ತಿದೆ. ಪಾಲಕರ-ಮಕ್ಕಳ ಇಷ್ಟಾನಿಷ್ಟಗಳ ಹಗ್ಗ ಜಗ್ಗಾಟದಲ್ಲಿ ಸಂಬಂಧಗಳು ಹಳಸುತ್ತಿವೆ. `ಮದುವೆ~ ಇವರಿಬ್ಬರ ಮಧ್ಯೆ ಸಿಕ್ಕು ನಲುಗಿ ಅಪಸ್ವರವಾಗುತ್ತಿದೆ.
 
ಒಲ್ಲದ ಮದುವೆಗಳು, ಅಷ್ಟೇ ತೀವ್ರವಾಗಿರುವ ವಿಚ್ಛೇದನಗಳು ಇಂದಿನ ನಾಗಾಲೋಟದ ಬದುಕಿನ ಮಗ್ಗಲು ಮುಳ್ಳಾಗಿ ಕಾಡಿವೆ. ಈ ಮಾತಿಗೆ ಕಾರಣ ಒಂದೆರಡು ಸತ್ಯ ಘಟನೆಗಳು. `ವಂಶದ ಕುಡಿ ಬೆಳೆಯಲಿಕ್ಕೆ ಅವಕಾಶ ಮಾಡಿ ಕೊಡಿ~- ಇದು ಅವನ ಪರಿ ಪರಿಯಾದ ಬೇಡಿಕೆ. ಯಾರೊಂದಿಗೆ ಹೇಳಿಕೊಳ್ಳಲೂ ಆಗದ ಒಬ್ಬನೇ ಅನುಭವಿಸಲು ಆಗದ ದ್ವಂದ್ವ ಸ್ಥಿತಿ.

ಆತನದು ಸೌಜನ್ಯದ ನಡವಳಿಕೆ, ವಿನಯವಂತಿಕೆ. ಸರ್ಕಾರಿ ಉದ್ಯೋಗದಲ್ಲಿರುವ ಆತ ಎಲ್ಲರಂತೆ ಮದುವೆಯ ಕನಸು ಕಂಡವ. ಆದರೆ ನನಸಾಗಿಸುವಲ್ಲಿ ಮುಗ್ಗರಿಸಿದ್ದ. ಪ್ರಾಣ ಸ್ನೇಹಿತನ ನಾಟಕದ ಮಾತಿಗೆ ಮರುಳಾಗಿ ಆತನ ತಂಗಿಯನ್ನು ವರಿಸಿದ್ದ.
 
ಆಕೆ ಮಾನಸಿಕ ರೋಗಿ ಎಂದು ತಿಳಿಯುವಷ್ಟರಲ್ಲಿ ಮದುವೆ ಮುಗಿದು ಹೋಗಿತ್ತು. `ಸ್ನೇಹದಲ್ಲಿ ಮುಂದೆ ಎಲ್ಲವೂ ಸರಿಯಾಗುವುದು~ ಎಂದು ಮದುವೆಯಾಗಿ ಮೋಸ ಹೋಗಿದ್ದ. ಗಂಡನ ಮನೆಗೆ ಬಂದ ಆಕೆ `ನಾವಿಬ್ಬರು ಅಣ್ಣ ತಂಗಿಯಂತೆ ಇರೋಣ~ ಎಂದು ನಿರ್ಭಯವಾಗಿ ಹೇಳಿದ್ದಳು.
 
`ಯಾಕೋ ನಿನ್ನ ತಂಗಿ ಹೀಂಗ ಮಾಡತಾಳ~ ಅಂದಾಗ `ನಾನೇನು ಮಾಡಲಿ? ನಿನಗೆ ಮದುವೆ ಮಾಡುವಾಗ ಸರಿಯಾಗಿದ್ದಳಲ್ಲ~ ಎಂದು ತಿರುಗು ಉತ್ತರ ಬೇರೆ. ಇರುವ ಒಬ್ಬನೇ ಮಗನ ಜೀವನ ಹೀಗಾಯ್ತಲ್ಲ ಎಂದು ಹಿರಿಯ ಜೀವಗಳಿಗೂ ನೆಮ್ಮದಿಯಿಲ್ಲ.

ಮದುವೆಯಾಗದಿದ್ದರೆ ಮುಕ್ತಿಯಿಲ್ಲ, ಮೋಕ್ಷವಿಲ್ಲ ಎಂಬ ಬಲವಾದ ತತ್ವಕ್ಕೆ ಅಂಟಿಕೊಂಡ ಹೆತ್ತವರು ಮದುವೆ ಮಾಡಿದಷ್ಟೇ ವೇಗದಲ್ಲಿ ವಿಚ್ಛೇದನಕ್ಕೂ ಅಣಿಯಾಗುತ್ತಿರುವುದು ಈಗಿನ ತ್ವರಿತ ಯುಗದ ದುರಂತ.

ಕರ್ಮ ಸಿದ್ಧಾಂತವನ್ನು ಸ್ವಲ್ಪ ಹೆಚ್ಚೇ ನಂಬುವ ಭಾರತದಂತಹ ದೇಶದಲ್ಲಿ ಮದುವೆ ಬದುಕಿಗೊಂದು ತಿರುವು ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ತನ್ನ ಕೆಲವು ತತ್ವಗಳಲ್ಲಿ ಹಿಂದೂ ಧರ್ಮ ತುಂಬಾ ಜಟಿಲ. ಜನರ ಮನಸ್ಸಿನಲ್ಲಿ ಆಳವಾಗಿ ಬೇರು ಬಿಟ್ಟಿರುವ ಕರ್ಮ ಸಿದ್ಧಾಂತ ವಿಧಿ ವಾದದಲ್ಲಿ ಅನೇಕರಿಗೆ ಅಪಾರ ನಂಬಿಕೆ.

 ಇದನ್ನು ಜನತೆಯ ಮನಸ್ಸಿನಿಂದ ಕಿತ್ತೊಗೆದು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು. ಮನುಷ್ಯನೇ ತನ್ನ ವಿಧಿಯ ಯಜಮಾನ ಮತ್ತು ಭವಿಷ್ಯದ ರೂವಾರಿ ಎಂಬ ಅಂಶ ಹೆತ್ತವರಿಗೆ ತಿಳಿಯಬೇಕು.

ಆಳವಾಗಿ ಬೇರು ಬಿಟ್ಟಿರುವ ಧಾರ್ಮಿಕ ಅಭಿಪ್ರಾಯಗಳು, ಅವೈಚಾರಿಕ ಅಂಧ ಶ್ರದ್ಧೆಯ ಆಚರಣೆಗಳು- ಇವೆಲ್ಲವೂ ನಮ್ಮ ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿನ ಅಮೂಲಾಗ್ರ ಬದಲಾವಣೆಗೆ ಅಡೆತಡೆಯಾಗಿವೆ.

ಮದುವೆಯಾಗದ ಹೊರತು ಜೀವನಕ್ಕೆ ಅರ್ಥವಿಲ್ಲ ಎಂಬ  ಭಾವನೆಯಿಂದ ಮದುವೆ ಆದವರು ಮತ್ತು ಅದರಿಂದ ಭ್ರಮನಿರಸನ ಆದವರು ಅನೇಕರು. ಸಂತೋಷ ಎಂಬುದು ಮನಸ್ಸಿನ ವ್ಯಾಪಾರವೆಂಬುದನ್ನು ಇವರು ಮರೆತಂತಿದೆ. 

ಮಾನಸಿಕ ವಿಪರೀತಗಳು ಅದು ಯಾವ ವಯಸ್ಸಿನಲ್ಲಿಯಾದರೂ ಬರಬಹುದು. ರೋಗಿಗಳು ವಿಪರೀತವಾಗಿ ವರ್ತಿಸಬಹುದು. ಇಂಥವರಿಗೆ ಅನುಕಂಪದ ಅವಶ್ಯಕತೆ ಇದೆ.

ಸೌಜನ್ಯದಿಂದ ವರ್ತಿಸುವ ಅಗತ್ಯ ಇದೆ. ತಮ್ಮ ಮಗಳ ಜೀವನ ಹಾಳಾಗಬಾರದೆಂದು, ವೈವಾಹಿಕ ಬದುಕಿನಿಂದ ಆಕೆ ವಂಚಿತಳಾಗಬಾರದೆಂದು ಮದುವೆ ಮಾಡುತ್ತಾರೆ. ಆಮೇಲೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒಂದು ಜೀವಕ್ಕೆ ಬದಲಾಗಿ ಎರಡೂ ಜೀವಗಳಿಗೂ ದ್ರೋಹವೆಸಗುತ್ತಾರೆ.

ವಿಚಿತ್ರ ಕಳವಳ, ಧುತ್ತನೆ ಬಂದು ಬಿಡುವ ನಿರಾಶಾವಾದ, ಇನ್ನೇನು ಎಲ್ಲ ಸರಿಹೋಗುತ್ತದೆ ಎಂದುಕೊಂಡಾಗಲೆಲ್ಲ ಪರಿಸ್ಥಿತಿ ಕೈ ಮೀರಿ ಹೋಗುವ ಪ್ರಸಂಗ. ಮನುಷ್ಯನಿದ್ದೆಡೆ ಮನೋರೋಗಗಳಿವೆ. ಆದರೆ ಮನಃಸ್ಥಿತಿ ಸ್ಥಿಮಿತಕ್ಕೆ ಮರಳುವುದು ಮಾತ್ರ ಕೆಲವೊಂದು ಅಂಶಗಳನ್ನು ಅವಲಂಬಿಸಿರುತ್ತದೆ.

ಮಾನಸಿಕ ನೆಮ್ಮದಿ ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ. ಮಾನಸಿಕ ರೋಗಿಗಳಿಗೆ ಮದುವೆಯೇ ಬೇಡ ಎನ್ನುವಂತಿಲ್ಲ. ಆದರೆ ಅದರಿಂದ ಇನ್ನೊಂದು ಕುಟುಂಬಕ್ಕೂ ತೊಂದರೆಯಾಗದಿದ್ದರೆ ಸಾಕು.

ಇನ್ನೊಂದು ಘಟನೆಯೂ ಹೀಗೆ ವಿಚಿತ್ರವಾಗಿದೆ. ಆತನಿಗೊಂದು ಸಣ್ಣ ಸಂಶಯವಿತ್ತು. ತನ್ನ  ಬಾಳ ಸಂಗಾತಿಯಾಗಲಿರುವ ವೈದ್ಯಳಿಗೆ ಕರೆ ಮಾಡಿದಾಗಲೆಲ್ಲ `ನಾನು ಬ್ಯುಸಿಯಾಗಿದ್ದೆೀನೆ, ಆಮೇಲೆ ಮಾತಾಡಿ~ ಎಂದು ಆತನ ಕರೆಯನ್ನು ನಿರಾಕರಿಸುತ್ತಲೇ ಬಂದಳು.

ಬಹುಶಃ ನಾಚಿಕೆ ಇರಬಹುದು, ಮದುವೆಯಾದ ಮೇಲೆ ಸರಿಹೋದಾಳು ಎಂದು ವೈದ್ಯ ಹುಡುಗ ಕಾಯುತ್ತಲೇ ಬಂದ. ಮದುವೆಯಾದ ಮೇಲೆ `ಯಾಕೆ ಹೀಗೆ ವರ್ತಿಸುತ್ತಿ?~ ಎಂವ ಅವನ ಪ್ರಶ್ನೆಗೆ  `ನನಗೆ ಮತ್ತೊಬ್ಬನೊಂದಿಗೆ ಅಫೇರ್ ಇದೆ.  ಬಾಳುವುದಾದರೆ ಅವನೊಂದಿಗೆ~ ಎಂದಳು.
 
`ಮತ್ತೇಕೆ ಮದುವೆಯಾದೆ?~ ಎಂದು ಅಸಹನೆಯಿಂದ ಕೇಳಿದರೆ `ನನ್ನ ತಂದೆ ತಾಯಿಗಳು ಒತ್ತಡ ತಂದರು. ಹೆದರಿಸಿದರು. ಟಾರ್ಚರ್ ಕೊಟ್ಟರು. ಅದಕ್ಕಾಗಿ ಬೇರೆ ದಾರಿ ಕಾಣದೆ ನಿನ್ನನ್ನು ಮದುವೆಯಾದೆ. ಇನ್ನು ನಿನ್ನ ದಾರಿ ನಿನಗೆ~ ಎಂದು ಹೇಳಿ ಮಾಡಿಕೊಂಡ ಗಂಡನನ್ನು ಬಿಡಲು ತಯಾರಾದಳು.

ಈ ಘಟನೆಗಳು ನಡೆದದ್ದು ನಿರಕ್ಷರಿಗಳ ಮನೆಯಲ್ಲಿ ಅಲ್ಲ. ಸುಸಂಸ್ಕೃತ, ಸಾಕ್ಷರ ಕುಟುಂಬಗಳಲ್ಲಿ. ಮೋಸ ಹೋಗುವವವರು ಹಲವರಿರುವಾಗ ಮೋಸ ಮಾಡುವವರಿಗೇನೂ ಕೊರತೆಯಿರುವುದಿಲ್ಲ.

ಇಂದು ಇದು ಎಲ್ಲ ಕ್ಷೇತ್ರಗಳಲ್ಲಿ ಹಾಗೂ ಸಂಬಂಧಗಳಲ್ಲಿ ವ್ಯಾಪಿಸುತ್ತಲಿದೆ. ಇದರ ಪರಿಣಾಮ ಮಾತ್ರ ಆಘಾತಕಾರಿ. ಈ ಎರಡೂ ಘಟನೆಗಳು ಹೆಣ್ಣಿನ ತಂದೆ ತಾಯಿಗಳಿಗೆ ಗೊತ್ತಿದ್ದೂ ನಡೆದಂತಹವು.
 
ಮದುವೆಯಾದ ಮೇಲೆ ಮಗಳು ಸುಧಾರಿಸಿಯಾಳೆಂಬ ಭ್ರಾಮಕ ಕಲ್ಪನೆಯಲ್ಲಿ ಮದುವೆ ಮಾಡಿ ಬಿಟ್ಟಿದ್ದರು. ಭಾರತದಲ್ಲೂ ಮದುವೆಯ ಬಂಧ ಗಟ್ಟಿಯಾಗಿ ಉಳಿಯುತ್ತಿಲ್ಲ. ಪವಿತ್ರ ಎಂದು ಪರಿಗಣಿಸಲ್ಪಟ್ಟ ವಿವಾಹ ಸಂಸ್ಕಾರ ಹದಗೆಟ್ಟಿದೆ.

ಆದರೆ ವಿಚ್ಛೇದನ ಒಂದೇ ಪರಿಹಾರವಲ್ಲ. ತಂದೆ ತಾಯಿಗಳ ಆತುರದ ನಿರ್ಧಾರವೂ ಸರಿಯಲ್ಲ. ಅದು ಕುಟುಂಬಗಳ ಅಭಿವೃದ್ಧಿಯೂ ಅಲ್ಲ.  ಹೆತ್ತವರ ಸರಿಯಾದ ಸಮಯೋಚಿತ ನಿರ್ಧಾರದಿಂದ, ಮಕ್ಕಳ ಆಸೆ, ಅಭಿಪ್ರಾಯಗಳಿಗೆ ಬೆಲೆ ಕೊಟ್ಟಾಗ ಮಾತ್ರ ಅದೊಂದು ಮಾನಸಿಕ ನೆಮ್ಮದಿಯಿಂದ ಕೂಡಿದ ಸುಂದರ ಬದುಕಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT