ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರು ದೇವಾಲಯಕ್ಕೆ ಬೇಕಿದೆ ಕಾಯಕಲ್ಪ

Last Updated 23 ನವೆಂಬರ್ 2011, 8:05 IST
ಅಕ್ಷರ ಗಾತ್ರ

ಮೈಸೂರು: ತಾಲ್ಲೂಕಿನ ಜಯಪುರ ಹೋಬಳಿಯ ಮದ್ದೂರು ಗ್ರಾಮದಲ್ಲಿರುವ ಚೋಳರ ಕಾಲದ ದೇವಾಲಯ ಅವನತಿಯ ಅಂಚಿನಲ್ಲಿದೆ. ದೇವಾಲಯವು ಗ್ರಾಮದ ಪಶ್ಚಿಮ ದಿಕ್ಕಿಗೆ ಎಡಭಾಗದಲ್ಲಿ ಅರ್ಧ ಕಿಲೋ ಮೀಟರ್ ದೂರದಲ್ಲಿದ್ದು, ಗಿಡ, ಮರ ಬಳ್ಳಿಗಳಿಂದ ಸುತ್ತುವರೆದಿದ್ದು, ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದೆ. 

 ಈ ದೇವಾಲಯ ಮೈಸೂರಿನಿಂದ 35 ಕಿಲೋ ಮೀಟರ್ ದೂರದಲ್ಲಿದೆ. ಎಚ್.ಡಿ.ಕೋಟೆ ರಸ್ತೆಗೆ ಹೊಂದಿಕೊಂಡಂತಿರುವ ಈ ದೇವಾಲಯ ಚೋಳರ ಕಾಲದ್ದು ಎಂದು ಹೇಳಲಾಗಿದೆ. ಒಂದೇ ರಾತ್ರಿಯಲ್ಲಿ ಶುರು ಮಾಡಿ ಈ ದೇವಾಲಯವನ್ನು ಪೂರ್ಣಗೊಳಿಸಬೇಕು ಎಂದು ಆರಂಭಿಸಿ ಅದು ಸಾಧ್ಯವಾಗದೇ ಅರ್ಧಕ್ಕೆ ಬಿಟ್ಟು ಹೋಗಿದ್ದರಿಂದ ದೇವಾಲಯ ಅನಾಥವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ದೇವಾಲಯದಲ್ಲಿ ಗರ್ಭಗುಡಿ ಮತ್ತು ವರಾಂಡವಿದೆ. ಜೊತೆಗೆ ಲಿಂಗ, ಬೋಧಿಗೆ, ಭುವನೇಶ್ವರಿ, ಕಂಬಗಳು, ಪಾರ್ವತಿ ಶಿಲ್ಪ, ಬಸವಣ್ಣ ಇತರೆ ಶಿಲ್ಪಗಳಿಂದ ದೇವಾಲಯ ನಿರ್ಮಾಣಗೊಂಡಿದೆ.

ದೇವಾಲಯವು 14.6 ಅಡಿ ಅಗಲ, 7.2 ಅಡಿ ಎತ್ತರ 7 ಅಡಿ ಇದೆ. ದೇವಾಲಯವು ಪೂರ್ವಾಭಿಮುಖವಾಗಿದ್ದು, ಮೂರ್ತಿ ಶಿಲ್ಪವಿಲ್ಲದ ಗರ್ಭಗುಡಿ ಇದೆ. ಗರ್ಭಗುಡಿಯು ಸರಳವಾಗಿದ್ದು, ಮೇಲ್ಛಾವಣಿಯಲ್ಲಿ ಭುವನೇಶ್ವರಿ ಇದೆ.
ಗ್ರಾನೈಟ್ ಕಲ್ಲಿನಲ್ಲಿ ಪಾರ್ವತಿ ಶಿಲ್ಪ ನಿರ್ಮಾಣವಾಗಿದ್ದು, ಶಿಲ್ಪದಲ್ಲಿ ನಾಲ್ಕು ಕೈಗಳಿದ್ದು, ಎಡಗೈಯಲ್ಲಿ ದೊಡ್ಡ ಡಮರುಗ, ಇನ್ನೊಂದು ಕೈಯಲ್ಲಿ ಫಲ ಇದೆ. ಬಲಗೈಯಲ್ಲಿ ತ್ರಿಶೂಲ ಹಾಗೂ ಮುಂದಿನ ಕೈಯಲ್ಲಿ ದಂಡ ಹಿಡಿದಿದ್ದಾಳೆ.

ವಾಸ್ತುಶಿಲ್ಪದ ಆಧಾರದ ಮೇಲೆ ದೇವಾಲಯವನ್ನು 10-11ನೇ ಶತಮಾನದಲ್ಲಿ ನಿರ್ಮಾಣ ಮಾಡಿರಬಹುದು ಎಂದು ಹೇಳಲಾಗಿದೆ. ಪ್ರಮುಖವಾಗಿ ದೇವಾಲಯದ ಮುಂದಿರುವ ನಂದಿ ಶಿಲ್ಪವನ್ನು ಅಪೂರ್ಣಗೊಳಿಸಿರುವುದು. ಲಿಂಗವನ್ನು ಗರ್ಭಗುಡಿಗೆ ತೆಗೆದುಕೊಂಡು ಹೋಗದೇ ವರಾಂಡದಲ್ಲಿ ಪ್ರತಿಷ್ಠಾಪಿಸಿರುವುದು. ದೇವಾಲಯದಿಂದ 100 ಮೀಟರ್ ದೂರದಲ್ಲಿ ಪಾರ್ವತಿ ಶಿಲ್ಪ ಅನಾಥವಾಗಿ ಬಿದ್ದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಈ ಭೂಭಾಗವನ್ನು ಆಳುತ್ತಿರುವ ರಾಜ ರಣ ರಂಗ ದಲ್ಲಿ ಸೋತು ಸಾಮ್ರಾಜ್ಯವನ್ನು ತೊರೆದಿರಬೇಕು. ಇಲ್ಲವೇ ರಣರಂಗದಲ್ಲಿ ಹತನಾಗಿರಬೇಕು. ನಂತರ ಬಂದವರು ಈ ದೇವಾಲಯವನ್ನು ಪೂರ್ಣಗೊಳಿಸದೇ ಬಿಟ್ಟಿರಬಹುದು ಎಂಬ ಅನುಮಾನ ಕಾಡುತ್ತದೆ. ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ನಡೆಸುವ ಅಗತ್ಯ ಇದೆ.

ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ರಾಮದಾಸರೆಡ್ಡಿ ಸ್ವಯಂ ಸೇವಕರಾದ ಎಸ್.ಕುಮಾರಸ್ವಾಮಿ, ಎಂ.ಗುರುಸ್ವಾಮಿ, ಶಿವರುದ್ರ ಇತರರು ಈ ದೇವಾಲಯದ ಕ್ಷೇತ್ರಕಾರ್ಯ ಮಾಡಿ ಗ್ರಾಮಸ್ಥರಿಗೆ ಅರಿವು ಮೂಡಿಸುತ್ತಿದ್ದಾರೆ.

`ಅವನತಿಯ ಅಂಚಿನಲ್ಲಿರುವ ಈ ದೇವಾಲಯವನ್ನು ಸಂರಕ್ಷಿಸುವ ಅಗತ್ಯವಿದ್ದು, ಅಮೂಲ್ಯವಾದ ಪ್ರಾಚೀನ ದೇವಾಲಯಗಳು ಇರುವ ಗ್ರಾಮಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಸ ದೇವಾಲಯಗಳನ್ನು ನಿರ್ಮಿಸುವುದಕ್ಕಿಂತ ಸಾವಿರಾರು ವರ್ಷಗಳ ಇತಿಹಾಸ ಸಾರಿ ಹೇಳುವ ಪ್ರಾಚೀನ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಬೇಕು~ ಎಂಬುದು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ರಾಮದಾಸರೆಡ್ಡಿ ಅವರ    ಅಭಿಪ್ರಾಯ. ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಯವರು ಈ ದೇವಾಲಯವನ್ನು ಉಳಿಸುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT