ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೇ ಇಲ್ಲದ ರೋಗಕ್ಕೆ ಭರವಸೆಯ ಆಶಾಕಿರಣ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮನುಕುಲಕ್ಕೆ ಕಂಟಕವಾಗಿರುವ ಎಚ್‌ಐವಿ ಸೋಂಕು ಹಾಗೂ ಏಡ್ಸ್ ರೋಗಕ್ಕೆ ಜಗತ್ತಿನಾದ್ಯಂತ ಪ್ರತಿ ವರ್ಷ ಲಕ್ಷಾಂತರ ಜನರು ಬಲಿಯಾಗುತ್ತಾರೆ. ಅಷ್ಟೇ ಸಂಖ್ಯೆಯ ಜನರು ಹೊಸದಾಗಿ ಸೋಂಕಿಗೆ ಒಳಗಾಗುತ್ತಾರೆ.

ಈ ಮಾರಕ ರೋಗಕ್ಕೆ ನಿಖರವಾದ ಔಷಧ ಇಲ್ಲ. ಜಗತ್ತಿನ ವಿವಿಧ ದೇಶಗಳು, ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ವಿಜ್ಞಾನಿಗಳಿಗೆ ಉತ್ತೇಜನ ನೀಡುತ್ತಿವೆ. ಭಾರೀ ಮೊತ್ತದ ಹಣ ಖರ್ಚು ಮಾಡುತ್ತಿವೆ. ಈ ಮಾರಕ ರೋಗಕ್ಕೆ ಕಡಿವಾಣ ಹಾಕುವ ಔಷಧ ತಯಾರಿಸುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ.

ಜಗತ್ತಿನಾದ್ಯಂತ ದೇಸಿ ವೈದ್ಯ ಪದ್ಧತಿಯ ಪರಿಣತರೂ ಕೈಕಟ್ಟಿ ಕುಳಿತಿಲ್ಲ. ಭಾರತ ಸರ್ಕಾರ ಏಡ್ಸ್ ಹಾಗೂ ಎಚ್‌ಐವಿ ಸೋಂಕಿನ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ.

ಮುಂದುವರಿದ ದೇಶಗಳಾದ ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಜಪಾನ್, ಚೀನಾ ದೇಶಗಳ ಜತೆಗೆ ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆಗಳೂ ಎಚ್‌ಐವಿ/ಏಡ್ಸ್ ನಿರೋಧಕ ಔಷಧ ಕಂಡು ಹಿಡಿಯಲು `ವಿಶ್ವ ನಿಧಿ~ ಮೂಲಕ ಕೋಟ್ಯಂತರ ಡಾಲರ್‌ಗಳನ್ನು ವೆಚ್ಚ ಮಾಡುತ್ತಿವೆ.

ಒಂದಲ್ಲ ಒಂದು ದಿನ ಈ ಸಂಶೋಧನೆಗಳು ಯಶಸ್ವಿಯಾಗಿ ರೋಗ ನಿರೋಧಕ ಲಸಿಕೆಯೋ, ಚುಚ್ಚುಮದ್ದೋ, ಮಾತ್ರೆಗಳೋ ಮಾರುಕಟ್ಟೆಗೆ ಬರುತ್ತವೆ ಎಂಬ ನಿರೀಕ್ಷೆ ರೋಗಿಗಳಲ್ಲಿ, ಮತ್ತವರ ಸಂಬಂಧಿಗಳಲ್ಲಿದೆ. ಇಂತಹ ನಿರೀಕ್ಷೆಯ ನಡುವೆ ಸ್ಪೇನ್ ದೇಶದ ವಿಜ್ಞಾನಿಗಳ ತಂಡ  ಎಚ್‌ಐವಿ/ಏಡ್ಸ್ ನಿಯಂತ್ರಿಸುವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಎಚ್‌ಐವಿ/ಏಡ್ಸ್ ಪೀಡಿತರಿಗೆ ಈ ಬೆಳವಣಿಗೆ ಆಶಾಕಿರಣವಾಗಿ ಗೋಚರಿಸಿದೆ.

ಸ್ಪೇನ್‌ನ ನ್ಯಾಷನಲ್ ಬಯೋಟೆಕ್ನಾಲಜಿ ಸೆಂಟರ್‌ನ ಸಂಶೋಧಕರಾದ ಪೆಲಿಫ್ ಗಾರ್ಸಿಯಾ, ಜುಹಾನ್ ಕಾರ್ಲೋಸ್ ಲೋಪೇಜ್ ಎಂಬುವರೇ ಎಚ್‌ಐವಿ ನಿಯಂತ್ರಣಕ್ಕಾಗಿಯೇ ಒಂದು ಲಸಿಕೆ ಕಂಡುಹಿಡಿದ ಮಹನೀಯರು. ಮಂಗಗಳ ಮೇಲೆ ಮಾಡಿದ ಪ್ರಯೋಗದಿಂದ ಅವರ ಸಂಶೋಧನೆ  ಸಕಾರಾತ್ಮಕ ಫಲಿತಾಂಶ ನೀಡಿದೆ.

ಲಸಿಕೆಯನ್ನು ಆಯ್ದ ಮೂವತ್ತು ಆರೋಗ್ಯವಂತ ಜನರ ಮೇಲೆ ಪ್ರಯೋಗ ಮಾಡಲಾಗಿದೆ. ಈ ಪ್ರಯೋಗದಿಂದ ವಿಜ್ಞಾನಿಗಳು ನಿರೀಕ್ಷಿಸಿದ್ದ ಫಲಿತಾಂಶ ಬಂದಿದೆ! ಲಸಿಕೆ ಪ್ರಯೋಗಕ್ಕೆ ಒಳಗಾದವರಲ್ಲಿ ಕೆಲವರಿಗೆ ತಲೆನೋವು, ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ತುರಿಕೆ, ನೋವು ಮತ್ತು ಅಸಹಜತೆಯಂತಹ ಚಿಕ್ಕಪುಟ್ಟ ಅಡ್ಡ ಪರಿಣಾಮಗಳು ಕಂಡು ಬಂದಿವೆ. ಇವಕ್ಕೆ ಪರಿಹಾರವಿದೆ ಎಂಬ ವಿಶ್ವಾಸದ ಮೇಲೆ ವಿಜ್ಞಾನಿಗಳು ಈ ಲಸಿಕೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿ ಮುಂದುವರಿದಿದ್ದಾರೆ.

ಮುಂದಿನ ಹಂತದಲ್ಲಿ ಲಸಿಕೆಯನ್ನು ಎಚ್‌ಐವಿ ಸೋಂಕು ಪೀಡಿತರ ಮೇಲೆ ಪ್ರಯೋಗಿಸಲು ಸಜ್ಜಾಗಿದ್ದಾರೆ. ಸ್ಪೇನ್ ಮಾತ್ರವಲ್ಲದೇ ಜರ್ಮನಿ, ಬೆಲ್ಜಿಯಂನ ಸಂಶೋಧಕರೂ ಎಚ್‌ಐವಿ/ಏಡ್ಸ್  ನಿಯಂತ್ರಣಕ್ಕೆ ಅಗತ್ಯ ಇರುವ ಔಷಧ ಕಂಡು ಹಿಡಿಯುವ ನಿಟ್ಟಿನಲ್ಲಿ ಕಾರ್ಯ ಮಗ್ನರಾಗಿದ್ದಾರೆ ಎಂಬ ವರದಿಗಳಿವೆ.

ಈ ನಿಟ್ಟಿನಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಮೊದಲಿಗೆ ಪುಣೆಯಲ್ಲಿ ಇಂತಹ ಪ್ರಯೋಗಗಳು ಆರಂಭವಾದವು. ಚೆನ್ನೈನಲ್ಲೂ ಸಂಶೋಧನೆ, ಪ್ರಯೋಗಗಳು ನಡೆಯುತ್ತಿವೆ. ಸ್ಪೇನ್ ಸಂಶೋಧಿಸಿರುವ ಲಸಿಕೆ ಎಚ್‌ಐವಿ ನಿಯಂತ್ರಣಕ್ಕೆ ರಾಮಬಾಣ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಜಗತ್ತಿನ ವಿಜ್ಞಾನಿಗಳ ಗಮನ ಸ್ಪೇನ್ ಸಂಶೋಧಕರು ನಡೆಸುತ್ತಿರುವ ಹೊಸ ಪ್ರಯೋಗದ ಕಡೆಗೆ ಹೊರಳಿದೆ.

ನಮ್ಮ ದೇಶದಲ್ಲಿ ಸಂಶೋಧನೆಗಳು ನಡೆಯುತ್ತಿದ್ದರೂ ಎಚ್‌ಐವಿ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಸೋಂಕು ಪೀಡಿತರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಲೋಪತಿ ಔಷಧಗಳನ್ನು ನೀಡಲಾಗುತ್ತಿದೆ. ಇದರ ಜತೆಗೆ ಹೋಮಿಯೋಪತಿ, ಆಯುರ್ವೇದ, ಯುನಾನಿ, ಸಿದ್ಧೌಷಧಗಳಲ್ಲದೆ ಅನೇಕ ನಾರು, ಬೇರು ಮೂಲದ ಔಷಧಗಳನ್ನು ನೀಡಿ ಅದರ ಪರಿಣಾಮ ಗುರುತಿಸುವ ಪ್ರಯತ್ನ ನಡೆಯುತ್ತಿದೆ. ಒಟ್ಟಾರೆ ಇದುವರೆಗಿನ ಎಲ್ಲ ಸಂಶೋಧನೆಗಳು ಹಾಗೂ ಪ್ರಯೋಗಗಳು ಔಷಧ ತಯಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳು.

ದುರದೃಷ್ಟದ ಸಂಗತಿ ಎಂದರೆ ಎಚ್‌ಐವಿ ಮತ್ತು ಏಡ್ಸ್ ನಡುವಿನ ವ್ಯತ್ಯಾಸ ಸಾಕಷ್ಟು ಜನರಿಗೆ ತಿಳಿದೇ ಇಲ್ಲ. ಮೊದಲಿಗೆ ಎಚ್‌ಐವಿ ಸೋಂಕು ತಗಲುತ್ತದೆ. ಇಂತಹ ವ್ಯಕ್ತಿಗಳು ಕೆಲವು ವರ್ಷಗಳ ಕಾಲ ಸಹಜ ಜೀವನ ನಡೆಸಬಹುದು.

ಎಚ್‌ಐವಿ ಸೋಂಕು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತಾ ಹೋಗುತ್ತದೆ. ಮುಂದಿನ ಹಂತವೇ ಏಡ್ಸ್. ಈ ಹಂತ ತಲುಪಿದ ವ್ಯಕ್ತಿ ರೋಗ ನಿರೋಧಕ ಶಕ್ತಿ ಸಂಪೂರ್ಣ ಕಳೆದುಕೊಳ್ಳುತ್ತಾನೆ. ಅಂತಹ ವ್ಯಕ್ತಿ ಹೆಚ್ಚು ವರ್ಷ ಬದುಕಲು ಸಾಧ್ಯವಿಲ್ಲ.

ಸೋಂಕು ಮತ್ತು ಏಡ್ಸ್‌ಗೆ ಔಷಧ ಇಲ್ಲವಾದ್ದರಿಂದ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವುದು ಬಹಳ ಮುಖ್ಯ. ಮುನ್ನೆಚ್ಚರಿಕೆಯೇ ಈಗ ಔಷಧಿ. ಹೀಗಾಗಿ ಎಚ್‌ಐವಿ ಸೋಂಕು ತಗುಲುವ ಸಾಧ್ಯತೆಗಳಿಂದ ದೂರ ಇರುವ ಬಗ್ಗೆ  ಜನರಿಗೆ ತಿಳುವಳಿಕೆ ಮೂಡಿಸುವ ಪ್ರಯತ್ನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

2010ರ ಅಂತ್ಯದ ವೇಳೆಗೆ ವಿಶ್ವದ ಬಡ ಮತ್ತು ಮಧ್ಯಮ ಆದಾಯದ ದೇಶಗಳ ಸುಮಾರು 50 ಲಕ್ಷ ಮಂದಿಯನ್ನು ಆಂಟಿರೆಟ್ರಾವೈರಲ್ ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಚಿಕಿತ್ಸೆಯಿಂದ ಎಚ್‌ಐವಿ ಸೋಂಕಿತರ ಆಯಸ್ಸನ್ನು ಇನ್ನಷ್ಟು ಕಾಲ ಮುಂದೂಡಲು ಸಾಧ್ಯವಾಗಿದೆ.

ಪ್ರಮುಖ ಕಾರಣ: ಸುರಕ್ಷಿತವಲ್ಲದ ಲೈಂಗಿಕ ಚಟುವಟಿಕೆ ಎಚ್‌ಐವಿ ಸೋಂಕು ಹರಡಲು ಪ್ರಮುಖ ಕಾರಣ. ಲೈಂಗಿಕ ಕಾರ್ಯಕರ್ತೆಯರು, ಸಲಿಂಗ ಕಾಮಿಗಳಲ್ಲಿ ಸೋಂಕು ಮೊದಲು ಕಾಣಿಸಿಕೊಳ್ಳುತ್ತದೆ. ಲೈಂಗಿಕ ಕಾರ್ಯಕರ್ತೆಯರ ಮೂಲಕ ಅದು ಇತರರಿಗೆ ಹರಡುತ್ತದೆ. ಹದಿ ವಯಸ್ಸಿನವರು ಹೆಚ್ಚಾಗಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಇದು ಆತಂಕದ ವಿಚಾರ.

ಕಳೆದ 27 ವರ್ಷಗಳಲ್ಲಿ ವಿಶ್ವದಲ್ಲಿ ಸುಮಾರು 3.30 ಕೋಟಿ ಜನರು ಏಡ್ಸ್‌ನಿಂದ ಸತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ. ಈ ಪೈಕಿ ಶೇ 95ರಷ್ಟು ಮಂದಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿದ್ದಾರೆ. ಎಚ್‌ಐವಿ ಸೋಂಕು ಪೀಡಿತರ ಸಂಖ್ಯೆಯೂ ಆಗಾಧ ಪ್ರಮಾಣದಲ್ಲಿ ಹೆಚ್ಚುತ್ತಿದೆ.

ಎಚ್‌ಐವಿ/ಏಡ್ಸ್ ವಿಷಯದಲ್ಲಿ ವಿಶ್ವದಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನ. ನಂತರದ  ಸ್ಥಾನ ಭಾರತದ್ದು. ಆದರೆ ಭಾರತದ ಅಗಾಧ ಜನಸಂಖ್ಯೆಯೊಂದಿಗೆ ಸೋಂಕು ಪೀಡಿತರನ್ನು ಹೋಲಿಸಿದರೆ ಈ ಪ್ರಮಾಣ ಅತಿಕಡಿಮೆ ಎನಿಸಬಹುದು. ಆದರೆ ಈ ಬೆಳವಣಿಗೆ ಆತಂಕಕಾರಿ. 

ಭಾರತದಲ್ಲಿ ಸುಮಾರು 24 ಲಕ್ಷ ಮಂದಿ ಎಚ್‌ಐವಿ/ಏಡ್ಸ್ ಪೀಡಿತರು ಇದ್ದಾರೆ. 1986ರ ವರೆಗೆ ವಿಶ್ವದಲ್ಲಿ ಸುಮಾರು 20 ಸಾವಿರ ಮಂದಿ ಏಡ್ಸ್ ಪೀಡಿತರಿದ್ದರು. ಆದರೆ ಈ ಅವಧಿಯಲ್ಲಿ ಭಾರತದಲ್ಲಿ ಒಂದೇ ಒಂದು ಎಚ್‌ಐವಿ/ಏಡ್ಸ್ ಕಂಡು ಬಂದಿರಲಿಲ್ಲ. ಚೆನ್ನೈನ ಲೈಂಗಿಕ ಕಾರ್ಯಕರ್ತೆಯೊಬ್ಬಳು ವಿದೇಶಿಯೊಬ್ಬನ ಜತೆ ನಡೆಸಿದ ಲೈಂಗಿಕ ಸಂಪರ್ಕದ ನಂತರ ಭಾರತದಲ್ಲಿ ಮೊದಲ ಬಾರಿಗೆ ಎಚ್‌ಐವಿ ಸೋಂಕು ಪತ್ತೆಯಾಯಿತು.

ಎಚ್‌ಐವಿ/ಏಡ್ಸ್‌ಗೆ ಈಗ ಆಂಟಿರೆಟ್ರಾವೈರಲ್ ಚಿಕಿತ್ಸೆ ನೀಡಲಾಗುತ್ತಿದೆ. ಮುಂದುವರಿದ ರಾಷ್ಟ್ರಗಳಲ್ಲಿ ರೋಗಿಗಳಿಗೆ ನೀಡುವ ಚಿಕಿತ್ಸೆಯೂ ಇದೇ. ಈ ಚಿಕಿತ್ಸೆಯ ಪ್ರಮಾಣ 2:1 ಅನುಪಾತದಲ್ಲಿದೆ. ಹೀಗಾಗಿ ರೋಗ ನಿಯಂತ್ರಣ ಸಾಧ್ಯವಾಗಿಲ್ಲ. ಎಚ್‌ಐವಿ/ಏಡ್ಸ್ ಪೀಡಿತ ಎಲ್ಲಾ ರೋಗಿಗಳಿಗೂ ಸುಲಭ ಹಾಗೂ ಕಡಿಮೆ ವೆಚ್ಚದಲ್ಲಿ ಈ ಚಿಕಿತ್ಸೆ ದೊರೆತರೆ ರೋಗ ನಿಯಂತ್ರಣ ಸಾಧ್ಯವಾದೀತು ಎಂಬ ಅಭಿಪ್ರಾಯವಿದೆ. ಇದರಿಂದ ರೋಗದಿಂದ ಸಾಯುವವವರ ಸಂಖ್ಯೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದು.

2010ರಲ್ಲಿ `ಯುಎನ್‌ಏಡ್ಸ್~ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿಗಳ ಪ್ರಕಾರ ಎಚ್‌ಐವಿ/ಏಡ್ಸ್ ಎರಡೂ  ಮೊದಲಿನಷ್ಟು ವೇಗವಾಗಿ ಹಬ್ಬುತ್ತಿಲ್ಲ. ಅಂದರೆ ಜನರಿಗೆ ಈ ಮಾರಕ ರೋಗದ ಬಗ್ಗೆ ತಿಳುವಳಿಕೆ ಮೂಡಿದೆ ಎಂದಾಯ್ತು. ಇದು ಆಶಾದಾಯಕ ಬೆಳವಣಿಗೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹೆಚ್ಚಿನ ದೇಶಗಳಲ್ಲಿ ಆಂಟಿರೆಟ್ರಾವೈರಲ್ ಚಿಕಿತ್ಸೆಯನ್ನು ಜನರು ಒಪ್ಪಿಕೊಳ್ಳುತ್ತಿಲ್ಲ. ಇದು ಆರೋಗ್ಯ ಇಲಾಖೆಯನ್ನು ಚಿಂತೆಗೀಡುಮಾಡಿದೆ. ಇಥಿಯೋಪಿಯಾದಲ್ಲಿ ಈಗ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಅಲ್ಲಿ ಈಗ ರೋಗದಿಂದ ಸಾಯುವವರ ಸಂಖ್ಯೆ ಕಡಿಮೆಯಾಗಿದೆ. ಅದಕ್ಕೆ ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆಗಳು ವಿಶ್ವನಿಧಿ ಮೂಲಕ ನೀಡುತ್ತಿರುವ ಆಂಟಿರೆಟ್ರಾವೈರಲ್ ಚಿಕಿತ್ಸೆಯೇ ಕಾರಣ. ಎಚ್‌ಐವಿ/ಏಡ್ಸ್ ರೋಗ ಪೀಡಿತರ ಜೀವಿತಾವಧಿಯನ್ನು ವಿಸ್ತರಿಸಬಹುದು ಎನ್ನುವುದೇ ಸದ್ಯದ ಮಟ್ಟಿಗೆ ಆಶಾದಾಯಕ.

ಚೆನ್ನೈನ ಲೈಂಗಿಕ ಕಾರ್ಯಕರ್ತೆಯ ಮೂಲಕ ಭಾರತಕ್ಕೆ ಬಂದ ಎಚ್‌ಐವಿ ಸೋಂಕು ನಿಧಾನವಾಗಿ ದೇಶದ ಇತರ ಭಾಗಗಳಿಗೂ ಹರಡಿತು. 1987ರಲ್ಲಿ ಸುಮಾರು 52,907 ಮಂದಿಯನ್ನು ತಪಾಸಣೆಗೆ ಒಳಪಡಿಲಾಯಿತು. ಆ ಪೈಕಿ 135 ಜನರಲ್ಲಿ ಎಚ್‌ಐವಿ ಸೋಂಕು ಹಾಗೂ 14 ಮಂದಿಯಲ್ಲಿ ಏಡ್ಸ್ ಇರುವುದು ಪತ್ತೆಯಾಗಿತ್ತು.

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಕರ್ನಾಟಕವೂ ಸೇರಿದಂತೆ ದೇಶದ ಎಂಟು ರಾಜ್ಯಗಳಲ್ಲಿ ಎಚ್‌ಐವಿ/ಏಡ್ಸ್ ವ್ಯಾಪಕವಾಗಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಗೋವಾ, ಮಹಾರಾಷ್ಟ್ರಗಳಲ್ಲದೆ ಈಶಾನ್ಯ ರಾಜ್ಯಗಳಾದ ಮಣಿಪುರ, ಮಿಜೋರಾಂ ಮತ್ತು ನಾಗಲ್ಯಾಂಡ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳಿದ್ದಾರೆ.

ಒಂದು ಅಧಿಕೃತ ಮೂಲದ ಪ್ರಕಾರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಸುಮಾರು ಹದಿನೇಳು ಸಾವಿರ ಮಂದಿ ಎಚ್‌ಐವಿ/ಏಡ್ಸ್ ಪೀಡಿತರಿದ್ದಾರೆ. ಬಾಗಲಕೋಟೆ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿರುವ ಜಿಲ್ಲೆ. ಕರ್ನಾಟಕದಲ್ಲಿ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಈ ರೋಗದ ಲಕ್ಷಣಗಳಿವೆ. ಉತ್ತರ ಕರ್ನಾಟಕ ಭಾಗದಲ್ಲಿ ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿರುವುದೂ ಇದಕ್ಕೆ ಒಂದು ಕಾರಣವಷ್ಟೇ.

ಮುಂಬೈ, ಪಣಜಿ, ಹೈದರಾಬಾದ್‌ನಂತಹ ಮಹಾನಗರಗಳಿಗೆ ಹೋಗಿ ಬರುವ ಜನರಿಂದಾಗಿ ಸೋಂಕು ರಾಜ್ಯಕ್ಕೆ ಕಾಲಿಟ್ಟಿತು ಎಂಬ ಅಭಿಪ್ರಾಯವಿದೆ.

ಎಚ್‌ಐವಿ/ಏಡ್ಸ್ ಬಲಿಯಾಗುವವರಲ್ಲಿ ಹದಿ ಹರೆಯದವರು ಹಾಗೂ ಶ್ರಮಜೀವಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯುವಜನರು ದೇಶದ ಭವಿಷ್ಯ. ಪ್ರತಿಯೊಬ್ಬ ಶ್ರಮಜೀವಿ ಅವನ ಕುಟುಂಬಕ್ಕೆ ಆಧಾರ. ಹದಿ ಹರೆಯದವರು ಲೈಂಗಿಕ ಆಕರ್ಷಣೆಗೆ ಬಲಿಯಾಗುವ ಸಾಧ್ಯತೆ ಹೆಚ್ಚು. ಅನಕ್ಷರಸ್ತ ಶ್ರಮಜೀವಿಗಳೂ ಹೀಗೇ ಲೈಂಗಿಕ ಕಾರ್ಯಕರ್ತೆಯರೊಂದಿಗೆ ಸಂಪರ್ಕ ಬೆಳೆಸಿ ಸೋಂಕು ಅಂಟಿಸಿಕೊಳ್ಳುತ್ತಾರೆ.
 
ಲೈಂಗಿಕ ಕ್ರಿಯೆಗೆ ಮುನ್ನ ಸುರಕ್ಷಿತ ಕ್ರಮಗಳ ಬಗ್ಗೆ ಯೋಚಿಸುವುದಿಲ್ಲ. ಕೆಲಸ ಹುಡುಕಿಕೊಂಡು ನೆರೆ ರಾಜ್ಯಗಳಿಗೆ ಗುಳೆ ಹೋಗುವವರು ಅಲ್ಲಿ ಸುಲಭವಾಗಿ ಸೋಂಕಿಗೆ ತುತ್ತಾಗುತ್ತಾರೆ. ಅಂಥವರು ತಮ್ಮ  ಪತ್ನಿಯರಿಗೂ ಸೋಂಕು ಅಂಟಿಸುತ್ತಾರೆ. ನಂತರ ಅವರ ಮಕ್ಕಳಿಗೂ ಅದು ಹರಡುತ್ತದೆ. ನವಜಾತ ಶಿಶುಗಳಿಗೆ ರೋಗ ಹರಡದಂತೆ ತಡೆಯಬಹುದು. ಇಂಥ ಚಿಕಿತ್ಸೆ ಈಗ ಭಾರತದ ಬಹುತೇಕ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಇದೊಂದೇ ನೆಮ್ಮದಿ ತರುವ ಸಂಗತಿ.

ಗಣನೀಯ ಇಳಿಮುಖ
ಕರ್ನಾಟಕ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಹಾಗೂ ಇತರ ಸಂಘ ಸಂಸ್ಥೆಗಳು ಕೈಗೊಂಡಿರುವ ಏಡ್ಸ್ ಜಾಗೃತಿ ಅರಿವು ಹಾಗೂ ಸೂಕ್ತ ಚಿಕಿತ್ಸೆಯಿಂದಾಗಿ ರಾಜ್ಯದಲ್ಲಿ ಎಚ್‌ಐವಿ ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ.

2003ರಲ್ಲಿ ಎಚ್‌ಐವಿ ಸೋಂಕಿತರ ಪ್ರಮಾಣ ಶೇ 1.6ರಷ್ಟಿತ್ತು. ಇದು 2008ರ ವೇಳೆಗೆ ಶೇ 0.8ಕ್ಕೆ ಇಳಿದಿದೆ. ರಾಜ್ಯದಲ್ಲಿ ಪ್ರಸ್ತುತ 2.5 ಲಕ್ಷ ಎಚ್‌ಐವಿ ಸೋಂಕು ಪೀಡಿತರಿದ್ದಾರೆ. ಬಾಗಲಕೋಟೆ, ವಿಜಾಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಿದೆ ಎಂದು ಕರ್ನಾಟಕ ಏಡ್ಸ್ ಪ್ರಿವೆನ್‌ಷನ್ ಸೊಸೈಟಿಯ ಯೋಜನಾ ನಿರ್ದೇಶಕಿ ಸಲ್ಮಾ ಕೆ.ಫಾಹಿಮ್ ಹೇಳುತ್ತಾರೆ.

`ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗನೈಜೇಷನ್~ ಮೂಲಕ ದೊಡ್ಡ ಮೊತ್ತದ ಹಣ ಹರಿದು ಬರುತ್ತಿದೆ. ಈ ವರ್ಷ 70 ಕೋಟಿ ರೂಪಾಯಿಗಳನ್ನು ಏಡ್ಸ್ ನಿಯಂತ್ರಣ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗಾಗಿ ಬಿಡುಗಡೆ ಆಗಿದೆ. ರಾಜ್ಯ ಸರ್ಕಾರ ಈ ವರ್ಷ ತನ್ನ ಪಾಲಿನ ಎರಡು ಕೋಟಿ ರೂ ಬಿಡುಗಡೆ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT